Site icon Vistara News

Sodium Level: ನೀವು ಉಪ್ಪು ಹೆಚ್ಚಾಗಿ ಸೇವಿಸ್ತಾ ಇದೀರಿ ಅನ್ನುವುದಕ್ಕೆ ಈ 6 ಲಕ್ಷಣಗಳೇ ಸಾಕ್ಷಿ

salt uses

ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತು ನಮ್ಮ ನಾಲಿಗೆ ತುದಿಯಲ್ಲಿದೆ. ಆದರೆ ನಾವು ಪ್ರತಿನಿತ್ಯ ಎಷ್ಟು ಉಪ್ಪು ಸೇವಿಸುತ್ತೇವೆ (sodium intake) ಎಂದು ನೋಡಿಕೊಂಡಿದ್ದೇವಾ? ಇಂದು ಉಪ್ಪು ಎಲ್ಲ ಆಹಾರಗಳಲ್ಲಿಯೂ (Salted food) ಎಷ್ಟಿದೆ ಎಂದರೆ, ಉಪ್ಪಿಲ್ಲದ ಆಹಾರ ಹುಡುಕುವುದೇ ಕಷ್ಟ. ಹೆಚ್ಚು ಉಪ್ಪನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ. ಇದನ್ನು ನೀವು ಎಷ್ಟು ಸೇವಿಸುತ್ತೀರಿ ಎಂಬುದನ್ನು ಪರಿಶೀಲಿಸುವುದು ಅವಶ್ಯಕ. ನೀವು ಆಗಾಗ ನಿಮ್ಮ ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸುವ ಅಭ್ಯಾಸ ಹೊಂದಿದ್ದರೆ (sodium craving) ಈಗಲೇ ಎಚ್ಚೆತ್ತುಕೊಳ್ಳಿ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ಪ್ರಕಾರ ಆಹಾರದ ಮೂಲಕ ಹೆಚ್ಚು ಉಪ್ಪನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ. ನಿಮ್ಮ ಆಹಾರದಲ್ಲಿ ಉಪ್ಪೆಷ್ಟಿದೆ (Sodium Level) ಎಂದು ಅಳೆಯುವ ತಂತ್ರಗಳು ಇನ್ನೂ ಇಲ್ಲ. ಹೀಗಾಗಿ ಸೋಡಿಯಂ ಆಹಾರದ ಒಂದು ಗುಪ್ತ ಅಂಶ. ಅದನ್ನು ಅಳೆಯುವುದು ಕಷ್ಟ. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಸೋಡಿಯಂ ಸೇವಿಸುತ್ತಾನೆ ಎಂದು ಅಂದಾಜು ಮಾಡುವುದು ಕಷ್ಟ. ಆದರೆ ವಿಸರ್ಜನೆಯ ಮೂಲಕ, ಸ್ಪಾಟ್ ಟೆಸ್ಟ್‌ನ ಸಹಾಯದಿಂದ ಸೋಡಿಯಂ ಸೇವನೆಯನ್ನು ಅಂದಾಜು ಮಾಡಬಹುದು. ಈ ಪರೀಕ್ಷೆಯು ವ್ಯಕ್ತಿಯ ಮೂತ್ರದ ಮಾದರಿಯಲ್ಲಿ ಉಪ್ಪಿನ ಅಂಶವನ್ನು ಪರಿಶೀಲಿಸುತ್ತದೆ.

ಉಪ್ಪಿಲ್ಲದೆ ನಿಮ್ಮ ಆಹಾರ ಸೇವಿಸಲು ಸಾಧ್ಯವಿಲ್ಲದ ವಿಷಯ. ಆದರೆ ನಿತ್ಯ ನೀವು ಎಷ್ಟು ಉಪ್ಪನ್ನು ಸೇವಿಸುತ್ತೀರಿ ಎಂಬುದನ್ನು ಪರಿಶೀಲಿಸುವುದು ಅವಶ್ಯಕ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಋಣಾತ್ಮಕ ಪರಿಣಾಮಗಳಾಗಬಹುದು. ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೆನಪಿನ ಕೊರತೆಯೂ ಆಗಬಹುದು. ನಮ್ಮ ದೈನಂದಿನ ಉಪ್ಪು ಸೇವನೆ ಸರಾಸರಿ 6 ಗ್ರಾಂ ಮೀರಬಾರದು. ಆದರೆ ಹೆಚ್ಚಿನ ಜನ ಪ್ರತಿದಿನ ಕನಿಷ್ಠ 7.2 ಗ್ರಾಂ ಉಪ್ಪನ್ನು ಸೇವಿಸುತ್ತಾರೆ. ಹಾಗಿದ್ದರೆ ಉಪ್ಪು ನಿಮಗೆ ಜಾಸ್ತಿಯಾಗಿದೆ ಎಂಬುದರ ಲಕ್ಷಣಗಳೇನು? ಇಲ್ಲಿ ನೋಡೋಣ.

  1. ಪದೇ ಪದೆ ಮೂತ್ರ ವಿಸರ್ಜನೆ: ಆಗಾಗ್ಗೆ ಮೂತ್ರ ವಿಸರ್ಜನೆಯು ನೀವು ಹೆಚ್ಚು ಉಪ್ಪನ್ನು ಸೇವಿಸುತ್ತಿರುವಿರಿ ಎಂಬುದರ ಒಂದು ಸೂಚನೆ.ಮೂತ್ರ ವಿಸರ್ಜನೆಗಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳಬೇಕಾದೀತು. ಆದರೂ ಇದು ಟೈಪ್ 2 ಮಧುಮೇಹ ಮತ್ತು ಮೂತ್ರಕೋಶ ಸಮಸ್ಯೆಯ ಲಕ್ಷಣವೂ ಹೌದು. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಮೂಲ ಕಾರಣ ಏನು ಎಂದು ಖಚಿತಪಡಿಸಿಕೊಳ್ಳಿ.
  2. ನಿರಂತರ ಬಾಯಾರಿಕೆ: ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಆಗಾಗ ಬಾಯಾರಿಕೆಯಾಗಬಹುದು. ಏಕೆಂದರೆ ಹೆಚ್ಚಿನ ಸೋಡಿಯಂ ಅಂಶವಿರುವ ಆಹಾರಗಳು ನಿಮ್ಮ ದೇಹದ ದ್ರವ ಸಮತೋಲನ ಏರುಪೇರು ಮಾಡುತ್ತವೆ. ಇದನ್ನು ಸರಿದೂಗಿಸಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ನಿಮ್ಮ ದೇಹವು ನಿಮ್ಮ ದೇಹದಲ್ಲಿ ಉಪ್ಪು ಸಮತೋಲನವನ್ನು ಪುನಃಸ್ಥಾಪಿಸಲು ಹೆಚ್ಚು ನೀರಿನ ಅಗತ್ಯವಿದೆ ಎಂಬ ಸಂಕೇತ ನೀಡುತ್ತದೆ.
  3. ದೇಹದಲ್ಲಿ ಊತ: ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದ ವಿವಿಧ ಭಾಗಗಳಲ್ಲಿ ಊತ ಉಂಟಾಗುತ್ತದೆ. ಬೆಳಿಗ್ಗೆ ಈ ಊತ ಕಂಡುಬರಬಹುದು. ಬೆರಳುಗಳ ಮೇಲೆ ಮತ್ತು ಕಣಕಾಲುಗಳ ಸುತ್ತಲೂ ಕಂಡುಬರಬಹುದು. ಈ ಊತವು ದೇಹದ ಅಂಗಾಂಶಗಳಲ್ಲಿ ಅತಿಯಾದ ದ್ರವದಿಂದ ಉಂಟಾಗುತ್ತದೆ. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಎಡಿಮಾ ಇದ್ದರೆ ಬೇರೆ ಆರೋಗ್ಯ ಸಮಸ್ಯೆಯೂ ಇರಬಹುದು. ಅಥವಾ ನೀವು ಹೆಚ್ಚು ಉಪ್ಪನ್ನು ಸೇವಿಸುವುದರಿಂದಲೂ ಇರಬಹುದು.
  4. ಆಹಾರ ಸಪ್ಪೆ ಎನಿಸುತ್ತದೆ: ನಿಮ್ಮ ಆಹಾರಕ್ಕೆ ಆಗಾಗ ಹೆಚ್ಚು ಉಪ್ಪನ್ನು ಸೇರಿಸಬೇಕು ಅನಿಸುತ್ತದೆಯಾ? ನಿಮ್ಮ ಆಹಾರ ಪದೇ ಪದೆ ಸಪ್ಪೆ ಮತ್ತು ನೀರಸ ಅನಿಸುತ್ತದೆಯಾ? ಬಹುಶಃ ನೀವು ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ಹೊಂದಿರಬಹುದು. ಕಾಲಾನಂತರದಲ್ಲಿ, ನಿಮ್ಮ ರುಚಿ ಮೊಗ್ಗುಗಳು ಆ ಉಪ್ಪಿನ ಪ್ರಮಾಣಕ್ಕೆ ಹೊಂದಿಕೊಳ್ಳುತ್ತವೆ ಮತ್ತು ಹೆಚ್ಚು ಉಪ್ಪನ್ನು ಸೇರಿಸುವ ಅವಶ್ಯಕತೆ ಬೀಳುತ್ತದೆ.
  5. ಆಗಾಗ್ಗೆ ಸೌಮ್ಯವಾದ ತಲೆನೋವು: ನೀವು ಆಗೊಮ್ಮೆ ಈಗೊಮ್ಮೆ ಸೌಮ್ಯವಾದ ತಲೆನೋವು ಅನುಭವಿಸುತ್ತಿದ್ದೀರಾ? ಈ ತಲೆನೋವು ನಿರ್ಜಲೀಕರಣದಿಂದ ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗಿ, ಆ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ತಲೆನೋವು ಬರುವ ಸಾಧ್ಯತೆಯಿದೆ. ಈ ತಲೆನೋವನ್ನು ಹೋಗಲಾಡಿಸಲು ಸಾಕಷ್ಟು ನೀರು ಕುಡಿಯಿರಿ.
  6. ಉಪ್ಪಿನ ಆಹಾರಕ್ಕಾಗಿ ಹಂಬಲಿಕೆ: ನಿಮ್ಮ ರುಚಿ ಮೊಗ್ಗುಗಳು ಉಪ್ಪಿನ ರುಚಿ ಮತ್ತು ಪರಿಮಳಕ್ಕೆ ಹೊಂದಿಕೊಂಡಾಗ, ಅದು ಮತ್ತೆ ಮತ್ತೆ ಅದನ್ನೇ ಹಂಬಲಿಸುತ್ತದೆ. ಉಪ್ಪುಸಹಿತ ಕಡಲೆಕಾಯಿ, ಚಿಪ್ಸ್ ಮತ್ತು ಇತರ ಉಪ್ಪಿನ ಐಟಂಗಳನ್ನು ತಿನ್ನುವ ಅಗತ್ಯವನ್ನು ನೀವು ಇದ್ದಕ್ಕಿದ್ದಂತೆ ಅನುಭವಿಸುತ್ತೀರಿ.

ಇದನ್ನೂ ಓದಿ: Low Sodium Levels: ಸೋಡಿಯಂ ಹೆಚ್ಚಾದರೆ ಮಾತ್ರವಲ್ಲ, ಕಡಿಮೆಯಾದರೂ ಆಪತ್ತು!

Exit mobile version