Site icon Vistara News

Sugar Addiction: ಸಿಹಿ ಬಿಡುವ ʻಸತ್ವಪರೀಕ್ಷೆʼಯಲ್ಲಿ ಪಾಸಾಗಲು ಈ ಟಿಪ್ಸ್‌ ನೆನಪಿರಲಿ!

sugar addiction

ಬಹುತೇಕರು ಸಕ್ಕರೆಯನ್ನು ಬಿಡಿ ಎಂದು ಸಲಹೆ ಕೊಡುವುದನ್ನು (health tips) ನೀವು ಕೇಳಿರಬಹುದು. ಅಥವಾ ನಿಮಗೇ ಅನೇಕರು, ವೈದ್ಯರು ಸಲಹೆ (health guide) ಕೊಟ್ಟಿರಬಹುದು. ಆದರೆ, ಸಕ್ಕರೆಯನ್ನು ಬಿಡುವಷ್ಟು (stop eating sugar) ಕಷ್ಟದ ಕೆಲಸ ಇನ್ನೊಂದಿಲ್ಲ ಎಂದು ಸಿಹಿಪ್ರಿಯರಿಗೆ ಅನಿಸಬಹುದು. ಅಯ್ಯೋ, ಸಿಹಿ ತಿನ್ನದೇ ಇರುವುದಾ? ಇದು ಮಾತ್ರ ಅತ್ಯಂತ ಕಷ್ಟದ್ದು, ಜೀವ ಬೇಕಾದರೂ ಬಿಟ್ಟೇನು, ಆದರೆ, ಸಿಹಿತಿಂಡಿ ತಿನ್ನದೆ ಇರುವುದಾದರೂ ಹೇಗೆ (sugar addiction) ಅಂತ ಕೆಲವರಿಗೆ ಈ ಸಕ್ಕರೆಯಿಂದ ದೂರವಿರುವ ಟಾಸ್ಕ್ ಕರಿನೀರಿನ ಶಿಕ್ಷೆಯಂತೆ ಅನಿಸಬಹುದು. ಆದರೂ, ತನ್ನ ಆರೋಗ್ಯದ ದೃಷ್ಠಿಯಿಂದ (health advice) ಸಕ್ಕರೆಯಿಂದ ದೂರವಿರುವುದು ಬಿಟ್ಟು ಬೇರೆ ದಾರಿಯಿಲ್ಲ ಅನಿಸಿ ಆ ದಾರಿಯಲ್ಲಿ ಹೆಜ್ಜೆ ಹಾಕಲು ಹೊರಟಾಗ ಸವಾಲುಗಳು ಅನೇಕ. ಸಿಹಿತಿನಿಸು ತಿನ್ನಬೇಕು ಎಂಬ ಸೆಳೆತವನ್ನು, ಆಕರ್ಷಣೆಯನ್ನು (Sugar craving) ನಿಗ್ರಹಿಸುವುದಾದರೂ ಹೇಗೆ ಅಲ್ಲವೇ? ಸಿಹಿಪ್ರಿಯರಿಗಂತೂ (sugar habit) ಇದು ಬಹಳ ಕಷ್ಟದ ಕೆಲಸ. ವಿಚಿತ್ರವೆಂದರೆ, ಸಿಹಿಯೆಂದರೆ ಅಷ್ಟಾಗಿ ಪ್ರಿಯವಲ್ಲದ ಮಂದಿಗೂ, ಸಕ್ಕರೆಯಿಂದ ದೂರವಿರಿ ಎಂದಾಗ ಸೆಳೆತವೂ ಹೆಚ್ಚಾಗಿಬಿಡುತ್ತದೆ. ಎಂದೂ ಇಲ್ಲದ ಆಸೆಗಳೆಲ್ಲ ಗರಿಗೆದರಿ ನಿಂತುಬಿಡುತ್ತದೆ. ಮನುಷ್ಯ ಸಹಜ ಗುಣ ಇದು. ಬೇಡ ಎಂದಾಗ ಅದನ್ನೇ ಮಾಡಬೇಕು ಅನಿಸಿಬಿಡುತ್ತದೆ. ಇದೆಂಥಾ ಸತ್ವ ಪರೀಕ್ಷೆ ಎಂದು ಅನಿಸದೆ ಇರದು. ಅದಕ್ಕಾಗಿಯೇ, ಬನ್ನಿ, ಸಿಹಿತಿನಿಸನ್ನು ಕಂಡೂ ಸ್ವನಿಗ್ರಹ ಹೇಗೆ ಸಾಧ್ಯ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

1. ಸಿಹಿ ತಿನ್ನಲೇಬೇಕು ಅನಿಸಿದಾಗ, ತಡೆಯಲು ಸಾಧ್ಯವಿಲ್ಲ ಅನಿಸಿದಾಗ ಸಿಹಿತಿಂಡಿಯ ಬದಲಿಗೆ ಹಣ್ಣು ತಿನ್ನಿ. ಒಣಹಣ್ಣುಗಳನ್ನು ತಿನ್ನಿ. ಇದರಿಂದ ಸಾಕಷ್ಟು ಪೋಷಕಾಂಶಗಳೂ, ನಾರಿನಂಶವೂ ಹೊಟ್ಟೆ ಸೇರುತ್ತದೆ.

2. ಸಿಹಿ ತಿನ್ನಬೇಕೆಂದು ಅನಿಸಿದಾಗ ಸೀದಾ ಹಿಂದುಮುಂದೆ ನೋಡಿ ತಿನ್ನುವ ಬದಲು ಕೊಂಚ ಯೋಚನೆಗೆ ಸಮಯ ಕೊಡಿ. ನಮ್ಮ ಮನಸ್ಸು ಮಕ್ಕಳ ಹಾಗೆ. ಅದಕ್ಕೆ ಬೇಕೆನಿಸಿದ್ದೆಲ್ಲಾ ಮಾಡಲು ಬುದ್ಧಿಯನ್ನು ಕುಣಿಸುತ್ತದೆ. ಬುದ್ಧಿ ಬೇಡ ಎಂದರೂ ಮನಸ್ಸು ಬೇಕು ಎಂದು ಮಕ್ಕಳ ಹಾಗೆ ಹಠ ಮಾಡುತ್ತದೆ. ನಾವು ಮನಸ್ಸಿನ ಮಾತಿಗೆ ತಕ್ಕಂತೆ ಕುಣಿದುಬಿಡುತ್ತೇವೆ. ಹಾಗಾಗಿ, ಮನಸ್ಸು ಬೇಕೆಂದಾಗ ಬುದ್ಧಿಯಿಂದ ಯೋಚಿಸಿ. ಮಕ್ಕಳು ಹಠ ಮಾಡಿದಾಗ, ಅವರನ್ನು ಸಮಾಧಾನಪಡಿಸಲು ಏನಾದರೊಂದು ಬೇರೆ ಕೆಲಸ ಮಾಡಿ ಬೇರೆಡೆಗೆ ಮನಸ್ಸು ಹರಿವಂತೆ ಮಾಡುವುದಿಲ್ಲವೇ, ಹಾಗೆಯೇ ನಮ್ಮ ಮನಸ್ಸನ್ನು ಬುದ್ಧಿಯ ಸುಪರ್ದಿಗೆ ಬಿಡಬೇಕು. ಬುದ್ಧಿ ಹೇಳಿದಂತೆ ಮನಸ್ಸನ್ನು ಬೇರೆಡೆಗೆ ಗಮನ ಹರಿಸುವಂತೆ ಮಾಡಬೇಕು. ಅಂದರೆ, ಸಿಹಿ ಬೇಕೆನಿಸಿದಾಗ ಸೀದಾ ಎದ್ದು ಹೋಗಿ ತಿನ್ನುವ ಬದಲು, ಕಿವಿಗೆ ಹೆಡ್‌ಫೋನ್‌ ಸಿಕ್ಕಿಸಿ, ನಿಮ್ಮಿಷ್ಟದ ಹಾಡು ಕೇಳಿ. ಅಥವಾ ಸೀದಾ ಎದ್ದು, ಪ್ರಕೃತಿಯ ನಡುವಲ್ಲೊಂದು ವಾಕ್‌ ಹೋಗಿ ಬನ್ನಿ. ಅಥವಾ ನಿಮ್ಮಿಷ್ಟದ ಬೇರೆ ಯಾವುದಾದರೊಂದು ಕೆಲಸ ಮಾಡಿ. ತಾನೇ ತಾನಾಗಿ ಸಿಹಿ ತಿನ್ನುವ ಬಯಕೆ ಮರೆತು ಹೋಗಿರುತ್ತದೆ.

3. ನಿಮ್ಮ ನಿಗ್ರಹ ಶಕ್ತಿ ತೀರಾ ವೀಕಾಗಿದೆ ಎಂದರೆ ಕಷ್ಟಪಡಬೇಕಾಗಿಲ್ಲ. ಹಬ್ಬಗಳೆಲ್ಲ ಬರುತ್ತಿವೆ. ಮನೆಯಲ್ಲಿ ಸಿಹಿತಿಂಡಿಗಳ ಸಾಮ್ರಾಜ್ಯ ಸಹಜವೇ. ಹಾಗಾಗಿ ತಿನ್ನಬೇಕು ಅನಿಸಿದಾಗ ಇಡೀ ಡಬ್ಬವನ್ನೇನೂ ಬಾಯಿಗಿಡಲು ಹೋಗದೆ, ಒಂದು ಸಣ್ಣ ಪೀಸು ಬಾಯಿಗಿಡಿ. ಎಷ್ಟೋ ಸಮಾಧಾನವಾಗುತ್ತದೆ.

4. ಸಿಹಿಯನ್ನೇ ನೀವು ದೂರ ತಳ್ಳುವ ಬದಲು ಆಗಾಗ ಆರೋಗ್ಯಕರ ಆಯ್ಕೆಗಳನ್ನು ನೀವು ಮಾಡಿಕೊಳ್ಳಬಹುದು. ಉದಾಹರಣೆಗೆ ಚಾಕೋಲೇಟ್‌ನಲ್ಲಿ ಅದ್ದಿ ತೆಗೆದ ಫ್ರೋಜನ್‌ ಹಣ್ಣುಗಳು ಅಥವಾ ಬೀಜಗಳು, ಒಣ ಹಣ್ಣುಗಳ ಯಾವುದಾದರೂ ಡೆಸರ್ಟ್‌, ಖರ್ಜೂರದ ತಿನಿಸು ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಮನೆಯಲ್ಲೇ ಕೆಲವು ಇಂತಹ ಸಿಹಿಯನ್ನು ನೀವು ಮಾಡಿಕೊಳ್ಳಬಹುದು.

ಇದನ್ನೂ ಓದಿ: Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

5. ಎಲ್ಲಕ್ಕಿಂತ ಮುಖ್ಯವಾಗಿ ಸರಿಯಾಗಿ ಊಟ ಮಾಡಿ. ಸರಿಯಾಗಿ ಪೋಷಕಾಂಶಯುಕ್ತ ಊಟವನ್ನು ಹೊತ್ತಿಗೆ ಸರಿಯಾಗಿ ಮಾಡುತ್ತಿದ್ದರೆ, ಖಂಡಿತ ನಿಮಗೆ ಹೆಚ್ಚಿಗೆ ಸಿಹಿ ತಿನ್ನಬೇಕು ಎಂಬ ಬಯಕೆ ಆಗುವುದಿಲ್ಲ. ಹೊತ್ತಿಗೆ ಸರಿಯಾಗಿ, ನಿಮ್ಮ ಹೊಟ್ಟೆಗೆ ಸರಿಯಾಗಿ ಉಣ್ಣದಿದ್ದರೆ ಮಾತ್ರ ಇಂತಹ ಬಯಕೆಗಳು ಹೆಚ್ಚುತ್ತವೆ.

6. ಆದಷ್ಟೂ ಪರ್ಯಾಯವಾದ ಕೃತಕ ಸಿಹಿಗಳತ್ತ ಮುಖ ಮಾಡದಿರಿ. ಇದರಿಂದ ಆರೋಗ್ಯ ಇನ್ನೂ ಕೆಡುತ್ತದೆ. ಹೃದಯಕ್ಕೆ ಇವು ಮಾರಕ. ಬೇಕೆನಿಸದಾಗ ನೈಸರ್ಗಿಕ ಸಕ್ಕರೆಯನ್ನೇ ಬಳಸಿ.

7. ಅಂದುಕೊಂಡಷ್ಟು ದಿನಗಳ ಕಾಲ ಯಶಸ್ವಿಯಾಗಿ ಸಿಹಿ ತಿನ್ನದೆ ನಿಗ್ರಹ ಮಾಡಿಕೊಂಡದ್ದಕ್ಕೆ ನಿಮಗೆ ನೀವೇ ಶಹಬ್ಬಾಸ್‌ ಹೇಳುವ ಕಾರ್ಯ ನೀವು ಮಾಡಬೇಕು. ಇದು ನಿಮ್ಮಲ್ಲಿ ಈ ಹಾದಿಯ್ಲಿ ಪಯಣಿಸಲು ಮತ್ತಷ್ಟು ಉತ್ಸಾಹ ತುಂಬುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ನಿಮ್ಮಿಷ್ಟದ ಯಾವುದಾದರೊಂದು ಸಿಹಿತಿನಿಸೋ ಅಥವಾ ಇನ್ಯಾವುದೋ ತಿನಿಸನ್ನೋ ಚೀಟ್‌ ಮೀಲ್‌ನಂತೆ ಯಾವಾಗಲೋ ಅಪರೂಪಕ್ಕೆ ಒಮ್ಮೆ ತಿಂದರೆ ತಪ್ಪಲ್ಲ. ಆದರೆ, ಶಹಬ್ಬಾಸ್‌ ಹೇಳುವುದೂ ಕೂಡಾ ಅಭ್ಯಾಸವೇ ಆಗಿಬಿಡಬಾರದು ಅಷ್ಟೇ!

ಇದನ್ನೂ ಓದಿ: Health Tips: ಹಬ್ಬದ ಸಂದರ್ಭ ಅತಿಯಾಗಿ ತಿನ್ನದೆ ಆರೋಗ್ಯ ಕಾಪಾಡಲು ಈ ಟಿಪ್ಸ್‌ ನೆನಪಿಡಿ!

Exit mobile version