ಬಹಳ ಸಾರಿ ನೀರು ಕುಡಿಯುವ ಬಹಳ ಸಿಂಪಲ್ ವಿಚಾರವೇ ನಮ್ಮ ದೇಹದ ಹಲವು ಸಮಸ್ಯೆಗಳನ್ನು ನಿಯಂತ್ರಿಸುತ್ತಿರುತ್ತದೆ. ದೇಹಕ್ಕೆ ಪ್ರತಿದಿನಕ್ಕೆ ಬೇಕಾಗುವ ಕನಿಷ್ಟ ಪ್ರಮಾಣವನ್ನೂ ನಾವು ಪೂರೈಕೆ ಮಾಡದಿರುವುದು ಕೆಲವೊಮ್ಮೆ ಹಲವು ತೊಂದರೆಗಳನ್ನು ಆಹ್ವಾನಿಸುತ್ತದೆ. ಹಾಗಾದರೆ ನಾವು ಸರಿಯಾಗಿ ನೀರು ಕುಡಿಯುತ್ತಿಲ್ಲ ಎಂದು ತಿಳಿಯುವುದು ಹೇಗೆ? ಈ ಕೆಳಗಿನ ಸಮಸ್ಯೆಗಳು ನಿಮಗೆ ತಲೆದೋರುತ್ತಿದ್ದಲ್ಲಿ ನೀವು ಸರಿಯಾಗಿ ನೀರು ಕುಡಿಯುತ್ತಿಲ್ಲ ಎಂದೇ ಅರ್ಥ.
1. ಯಾವಾಗಲೂ ಬಾಯಾರಿಕೆಯಾಗುತ್ತಿರುತ್ತದೆ: ಬಾಯಾರಿದಂತಾಗುತ್ತದೆ ಎಂದು ನೀರು ಕುಡಿಯುತ್ತೇವೆ. ಆದರೆ, ಬಹಳಷ್ಟು ಸಾರಿ ಹೀಗೆ ಬಾಯಾರಲು ಕಾರಣ ಬೇರೆಯೇ ಇರುತ್ತದೆ. ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀವು ನೀರು ಒದಗಿಸುತ್ತಿಲ್ಲ ಎಂದೇ ಅರ್ಥ. ಹಾಗಾದರೆ ನೀವು ನಿಮ್ಮ ದೇಹಕ್ಕೆ ಬೇಕಾದಷ್ಟು ನೀರು ಕೊಡುತ್ತಿಲ್ಲ ಎಂದು ಸುಲಭವಾಗಿ ಕಂಡುಹಿಡಿಯಲು ವಿಧಾನಗಳಿವೆ. ಸಾಮಾನ್ಯ ಆರೋಗ್ಯವಂತ ಮನುಷ್ಯ ಒಂದು ದಿನಕ್ಕೆ ನಾಲ್ಕರಿಂದ ೧೦ ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತಾನೆ. ನೀವು ಇದಕ್ಕಿಂತ ಕಡಿಮೆ ಹೋಗುತ್ತೀರೆಂದಾದಲ್ಲಿ, ಇಡೀ ದಿನ ಕಚೇರಿಯಲ್ಲಿ ಒಮ್ಮೆಯೂ ನೀವು ಬಾತ್‌ರೂಂಗೆ ಹೋಗಿಲ್ಲ ಎಂದಾದಲ್ಲಿ ಖಂಡಿತವಾಗಿಯೂ ಇದು ಆರೋಗ್ಯಕರವಲ್ಲ.
2. ಆಗಾಗ ತಲೆನೋಯುವುದು: ಆಗಾಗ ಕಾಡುವ ತಲೆನೋವಿಗೆ ಏನೇನೋ ಕಾರಣಗಳನ್ನು ಹುಡುಕುತ್ತೇವೆ. ಆದರೆ, ಸಮಸ್ಯೆಯ ಮೂಲ ಹುಡುಕುವಲ್ಲಿ ಸೋಲುತ್ತೇವೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ದೊರೆಯದೆ ಇರುವುದು ಕೂಡಾ ತಲೆನೋವಿನ ಪ್ರಮುಖ ಕಾರಣಗಳಲ್ಲಿ ಒಂದು. ಹಾಗಾಗಿ, ಯಾವುದೇ ಋತುವಿದ್ದರೂ ದೇಹಕ್ಕೆ ಸಿಗಬೇಕಾದ ಪ್ರಮಾಣದಲ್ಲಿ ನೀರು ಕುಡಿಯುದು ಅತೀ ಅವಶ್ಯಕ.
3. ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುವುದು: ಬೆಳ್ಳುಳ್ಳಿ ಹಾಕಿದ ಯಾವುದೋ ಊಟ ಮಾಡಿ ಬಂದು ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಮೂರ್ನಾಲ್ಕು ಬಾರಿ ನೀರು ಕುಡಿದರೆ ಕ್ರಮೇಣ ಸರಿಯಾಗುತದತೆ. ಬಾಯಿ ಮತ್ತೂ ಹೆಚ್ಚಿನ ಲಾಲಾರಸ ಉತ್ಪತ್ತಿಮಾಡಿ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ. ಆದರೆ ದೇಹಕ್ಕೆ ನೀರು ಕಡಿಮೆಯಾದಾಗ ಆಹಾರದ ನಡುವೆ ಬಾಯಿ ಒಣಗಿದಂತಾಗಿ ನಾವು ಸರಿಯಾಗಿ ನೀರು ಕುಡಿಯದಿದ್ದರೆ ಅದು ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ಆಗಾಗ ನೀರು ಕುಡಿಯುವುದು ಉತ್ತಮ.
4. ಯಾವಾಗಲೂ ಸಿಹಿ ತಿನ್ನಬೇಕೆನಿಸುವುದು: ನಿಜವಾಗಿಯೂ ಬಾಯಾರಿಕೆಯಾಗುವುದನ್ನು ಹಸಿವು ಎಂದು ತಿಳಿದುಕೊಳ್ಳುವುದು ಹಾಗೂ ನೀರು ಕುಡಿಯುವ ಅಗತ್ಯವಿದ್ದಲ್ಲಿ ಅನಗತ್ಯ ಆಹಾರ ಪೂರೈಕೆ ಮಾಡುವುದು. ಮುಖ್ಯವಾಗಿ ಸಿಹಿತಿಂಡಿ ತಿನ್ನಬೇಕೆನಿಸುವುದು. ಇಂಥ ಸಂದರ್ಭಗಳಲ್ಲಿ ಸ್ವಲ್ಪ ಕಾಲ ಯೋಚನೆ ಮಾಡಿ, ಸಿಹಿ ಅಥವಾ ಇನ್ನೇನಾದರೂ ತಿನ್ನುವ ಮೊದಲು ನೀರು ಕುಡಿದು ಹಸಿವಿನಂಥ ಫೀಲ್ ಕಡಿಮೆಯಾಗುತ್ತದೋ ನೋಡಿ. ಬಹಳಷ್ಟು ಸಾರಿ ಒಂದು ಲೋಟ ನೀರೇ ಇಂಥ ಫೀಲ್ ಕಡಿಮೆ ಮಾಡುತ್ತದೆ. ಅನಗತ್ಯ ಕ್ಯಾಲೊರಿ ನಿಮ್ಮ ಹೊಟ್ಟೆ ಸೇರುವುದು ತಪ್ಪುತ್ತದೆ.
5. ಏಕಾಗ್ರತೆ ಕಡಿಮೆಯಾಗುವುದು: ಆಗಾಗ ಕೆಲಸದಲ್ಲಿ, ಓದಿನಲ್ಲಿ ಏಕಾಗ್ರತೆ ಸಾಧಿಸಲಾಗದೆ ಕಷ್ಟ ಪಡುವುದು ಎಲ್ಲರೂ ಅನುಭವಿಸುವ ಸಾಮಾನ್ಯ ವಿಚಾರ. ಇದಕ್ಕೆ ದೈಹಿಕ ಕಾರಣಗಳೂ ಇರುತ್ತವೆ ಎಂದರೆ ನಂಬುತ್ತೀರಾ? ಹೌದು. ನೀವು ನೀರು ಸರಿಯಾಗಿ ಕುಡಿಯುತ್ತಿಲ್ಲವಾದರೆ, ಸಹಜವಾಗಿ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಕುಂಠಿತವಾಗಿ ದೇಹಕ್ಕೆ ಸರಿಯಾಗಿ ಆಮ್ಲಜನಕ, ಪೋಷಕಾಂಶ ಸಿಗದೆ ಇಂತಹ ಪರಿಣಾಮಗಳೂ ಎದುರಾಗುತ್ತವೆ.
6. ನಿಮ್ಮ ಶಕ್ತಿ ಸಾಮರ್ಥ್ಯ ಕುಂದುತ್ತದೆ: ಇದ್ದಕ್ಕಿದ್ದಂತೆ ಶಕ್ತಿ ಕಡಿಮೆಯಾದಂತೆ ಆಗಾಗ ಆಯಾಸಗೊಂಡಂತೆ ಅಥವಾ, ಸಮಯ ಸಿಕ್ಕಾಗಲೆಲ್ಲ, ಒಂದು ನಿದ್ದೆ ಮಾಡಿಬಿಡುವ ಅಂತ ಅನಿಸುತ್ತಿದ್ದರೆ, ಕಚೇರಿಯ ಕೆಲಸಗಳ ನಡುನಡುವೆ ನಿದ್ದೆ ಎಳೆದರೆ, ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆಯಾಗದಿರುವುದೂ ಕಾರಣವಾಗಿರಬಹುದು. ಕಡಿಮೆ ನೀರು ಕುಡಿದರೆ ರಕ್ತಪರಿಚಲನೆ ಕುಂಠಿತವಾಗಿ ಸಹಜವಾಗಿಯೇ ಶಕ್ತಿ ತಗ್ಗಿ ಆಯಾಸವಾಗುತ್ತದೆ.
7. ಮಲಬದ್ಧತೆ: ಕಡಿಮೆ ನೀರು ಕುಡಿವ ಮಂದಿ ಎದುರಿಸುವ ಸಮಸ್ಯೆಗಳಲ್ಲಿ ಇದು ಅತೀ ಮುಖ್ಯವಾಗಿರುವುದು. ನೀರು ಹೆಚ್ಚು ಕುಡಿದಲ್ಲಿ ಮಲವಿಸರ್ಜನೆ ಸುಲಭವಾಗಿ ಆಗುತ್ತದೆ. ಕಡಿಮೆಯಾದಲ್ಲಿ ಸಹಜವಾಗಿಯೇ ಕಷ್ಟ ಪಡಬೇಕಾಗುತ್ತದೆ. ನೀವು ಆಗಾಗ ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದೀರಿ ಎಂದಾದಲ್ಲಿ, ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ.