ಬಹುತೇಕರಿಗೆ ನಿತ್ಯವೂ ನೀರನ್ನು ಫ್ರಿಡ್ಜ್‌ನಲ್ಲಿಟ್ಟೇ ಕುಡಿಯಬೇಕು. ಬೇಸಿಗೆ ಬಂತೆಂದರೆ ಬೇರೆ ಮಾತೇ ಬೇಡ. ಬಾಟಲಿಗಳಲ್ಲಿ ತುಂಬಿಸಿ ಫ್ರಿಡ್ಜ್‌ನಲ್ಲಿಡಲೇಬೇಕು. ನೀರು ಫ್ರಿಡ್ಜ್‌ನಲ್ಲಿಲ್ಲದಿದ್ದರೆ, ಅಯ್ಯೋ, ಈಗೆಲ್ಲಿಂದ ನೀರು ಕುಡಿಯುವುದು ಎಂಬಷ್ಟು ತಲೆಬಿಸಿ ಮಾಡಿಕೊಳ್ಳುವವರೂ ಇದ್ದಾರೆ. ತಂಪುತಂಪಾದ ನೀರು ಗಂಟಲೊಳಗೆ ಇಳಿದರಷ್ಟೇ ನೆಮ್ಮದಿ ಅನಿಸುವುದು. ಇದು ಬೇಸಿಗೆಯಲ್ಲಿ ಸಹಜವಾದರೂ, ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾಗುವಾಗ ಇದ್ದಕ್ಕಿದ್ದಂತೆ ಅತೀ ತಂಪು ನೀರು ಕುಡಿಯುವುದರಿಂದ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಅದಕ್ಕಾಗಿ ನಿಸರ್ಗ ಸಹಜ ತಂಪಿನಲ್ಲಿರುವ ನಮ್ಮ ಪುರಾತನ ಪದ್ಧತಿಯ ಮಣ್ಣಿನ ಮಡಕೆಗಳನ್ನೇ ನಾವು ಮರೆತರೆ ಹೇಗೆ? ಹಾಗಾದರೆ ಬನ್ನಿ, ಮಣ್ಣಿನ ಮಡಕೆಗಳಲ್ಲಿ ನೀರು ತಂಪಾಗುವುದಷ್ಟೇ ಅಲ್ಲ, ಅದರಿಂದಾಗುವ ಆರೋಗ್ಯಕರ ಲಾಭಗಳನ್ನೂ ತಿಳಿಯೋಣ ಬನ್ನಿ.
1. ನೈಸರ್ಗಿಕವಾಗಿ ತಂಪಾಗಿರಿಸುವ ಗುಣ: ಮಣ್ಣಿನ ಮಡಕೆಗಳಲ್ಲಿ ನೀರು ತುಂಬಿಸಿಡುವುದರಿಂದ ನಿಸರ್ಗ ಸಹಜವಾಗಿ ನೀರು ತಂಪಾಗಿ ಇಡಲ್ಪಡುತ್ತದೆ. ಮಣ್ಣಿನ ಮಡಕೆಗಳಲ್ಲಿ ಸಣ್ಣ ಸಣ್ಣ ತೂತುಗಳಿರುವುದರಿಂದ ಇದರ ಮೂಲಕ ನೀರು ಹಾಗೆಯೇ ಮೆಲ್ಲಗೆ ಆವಿಯಾಗುತ್ತಿರುತ್ತದೆ. ಈ ಆವಿಯಾಗುವ ಕ್ರಿಯೆಯಿಂದ ಮಡಕೆಯೊಳಗಿನ ನೀರಿನ ಬಿಸಿ ತನ್ನ ಉಷ್ಣತೆಯನ್ನು ಕಳೆದುಕೊಂಡು ತಣ್ಣಗಾಗಲು ಶುರುವಾಗುತ್ತದೆ.
2. ಇದು ಪ್ರಾಕೃತಿಕವಾಗಿಯೇ ಆಲ್ಕಲೈನ್ ಗುಣವನ್ನು ಹೊಂದಿದೆ: ಬಹಳಷ್ಟು ಮಂದಿ ನಾವು ತಿನ್ನುವ ಆಹಾರ ಅಸಿಡಿಕ್ ಆಗಿರುಗುದರಿಂದ ದೇಹ ಸಾಕಷ್ಟು ವಿಷಕಾರಕಗಳನ್ನು ಉತ್ಪಾದಿಸಲು ಪ್ರಚೋದನೆ ನೀಡುತ್ತವೆ. ಆದರೆ ಮಣ್ಣಿನಲ್ಲಿ ಆಲ್ಕಲೈನ್ ಗುಣವಿರುವುದರಿಂದ ಇದು ಅಸಿಡಿಕ್ ಗುಣದ ಆಹಾರವನ್ನು ನಾವು ತಿಂದಿದ್ದರೆ ದೇಹದಲ್ಲಿ ಪಿಎಚ್ ಮಟ್ಟವನ್ನು ಸಮತೋಲನಗೊಳಿಸಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಅಸಿಡಿಟಿ ಸಮತೋಲನಕ್ಕೆ ಬರುತ್ತದೆ.
3. ಪಚನಕ್ರಿಯೆಯನ್ನು ಚುರುಕುಗೊಳಿಸುತ್ತದೆ: ಮಣ್ಣಿನ ಮಡಕೆಯಲ್ಲಿ ನೀರನ್ನಿಟ್ಟು ಕುಡಿಯುವುದರಿಂದ ಇದರಲ್ಲಿ ಯಾವುದೇ ರಾಸಾಯನಿಕಗಳ ಪ್ರವೇಶಕ್ಕೆ ಆಸ್ಪದ ನೀಡುವುದಿಲ್ಲ. ಇದರಲ್ಲಿರುವ ಖನಿಜಾಂಶಗಳಿಂದ ಇದು ಪಚನಕ್ರಿಯೆಗೆ ವೇಗವನ್ನು ನೀಡಿ, ಜೀರ್ಣಕ್ರಿಯೆ ಸಂಬಂಧೀ ತೊಂದರೆಗಳನ್ನು ನಿವಾರಿಸುತ್ತದೆ.
4. ಸೂರ್ಯಾಘಾತದಿಂದ ತಪ್ಪಿಸುತ್ತದೆ: ಬೇಸಿಗೆಯ ಬಹುದೊಡ್ಡ ಸಮಸ್ಯೆ ಎಂದರೆ ಸನ್ ಸ್ಟ್ರೋಕ್. ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ದೇಹಕ್ಕೆ ಸೂರ್ಯನ ಝಳ ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ದೇಹದಿಂದ ಹೆಚ್ಚು ನೀರು ಹೊರಹೋಗಲ್ಪಟ್ಟು ನಿರ್ಜಲೀಕರಣ ಮತ್ತಿತರ ಸಮಸ್ಯೆಗಳು ಕಾಡುತ್ತವೆ. ತಲೆಸುತ್ತು ವಾಂತಿ, ಬೇದಿಯಂತಹ ಸಮಸ್ಯೆಗಳು ಆರಂಭವಾಗುತ್ತದೆ. ಮಣ್ಣಿನ ಮಡಕೆಗಳ ನೀರಿನಲ್ಲಿ ಸಾಕಷ್ಟು ಖನಿಜಾಂಶಗಳು ಇರುವುದರಿಂದ ಇಂತಹ ಸಮಸ್ಯೆಗಳು ಮಣ್ಣಿನ ಮಡಕೆಯ ನೀರು ಕುಡಿಯುವುದರಿಂದ ಬರುವುದಿಲ್ಲ. ಬಂದರೂ ಬಹುಬೇಗನೆ ಮತ್ತೆ ದೇಹ ಸರಿಯಾದ ಪ್ರಮಾಣದ ನೀರನ್ನು ಪಡೆದುಕೊಂಡು ಸಹಜ ಸ್ಥಿತಿಗೆ ಬರುತ್ತದೆ.
ಇದನ್ನೂ ಓದಿ: Travel Tips: ಮಕ್ಕಳಲ್ಲಿ ಕಾಡಿನ ಬಗ್ಗೆ ಪ್ರೀತಿ ಬೆಳೆಸಲು ಈ ಬೇಸಿಗೆಯಲ್ಲಿ ಕಾಡಿಗೆ ಕರೆದೊಯ್ಯದಿದ್ದರೆ ಹೇಗೆ?!
5. ಗಂಟಲಿಗೆ ಕಾಟ ಕೊಡಲಾರದು: ಮಣ್ಣಿನ ಮಡಕೆಯ ನೀರು ಒಂದು ಹದವಾದ ತಂಪಿನಲ್ಲಿ ಸಮತೋಲಿತ ಸ್ಥಿತಿಯಲ್ಲಿರುವುದರಿಂದ ನೈಸರ್ಗಿಕವಾಗಿ ಮಣ್ಣಿನಡಿಯಲ್ಲಿ ಸಿಗುವ ನೀರಿನಷ್ಟೇ ತಂಪಾಗಿರುವುದರಿಂದ ದೇಹಕ್ಕೆ ಯಾವುದೇ ಬಾಧೆ ಕೊಡಲಾರದು. ಫ್ರಿಡ್ಜ್‌ನಲ್ಲಿಟ್ಟು ನೀರು ಕುಡಿಯುವುದರಿಂದ ದೇಹ ಆಗಾಗ ಶೀತ, ನೆಗಡಿಯಂತಹ ಸಮಸ್ಯೆಗಳು ಬರುವ ಮಂದಿಗೆ ಮಡಕೆಯ ನೀರು ಯಾವ ಸಮಸ್ಯೆಯನ್ನೂ ತರದು. ಗಂಟಲಿಗೆ ಹಿತವಾದ ಅನುಭವ ನೀಡುವಷ್ಟೇ ಸಾಮಾನ್ಯ ತಂಪಿನಲ್ಲಿರುವ ಮಡಕೆಯ ನೀರು ಬಾಯಾರಿಕೆ ಇಂಗಿಸಲು ಪರ್ಫೆಕ್ಟ್ ಉಷ್ಣತೆಯಲ್ಲಿರುತ್ತದೆ.
6. ಇದು ನೈಸರ್ಗಿಕ ಶುದ್ಧಿಕಾರಕ: ಮಣ್ಣಿನ ಮಡಕೆ ಕೇವಲ ನೈಸರ್ಗಿಕ ತಂಪುಕಾರಕವಷ್ಟೇ ಅಲ್ಲ, ಶುದ್ಧಿಕಾರಕವೂ ಹೌದು. ಇದರಲ್ಲಿ ನೀರು ಸಂಗ್ರಹಿಸಿ ಕುಡಿಯುವುದರಿಂದ ನೀರು ನಿಸರ್ಗ ಸಹಜವಾಗಿ ಶುದ್ಧವಾಗಿ, ಆರೋಗ್ಯಕ್ಕೆ ಹಲವು ಲಾಭವೂ ಇದೆ.
ಇದನ್ನೂ ಓದಿ: Travel Tips: ಬೇಸಿಗೆಯಲ್ಲಿ ಹಿಮಬೆಟ್ಟ: ಕಣ್ಣಿಗೂ ಮನಸ್ಸಿಗೂ ತಂಪು ತಂಪು ಕೂಲ್ ಕೂಲ್!