ಕೆಲವು ಆರೋಗ್ಯ ಸಮಸ್ಯೆಗಳು ವರ್ಷವಿಡೀ ಕಾಡಬಲ್ಲವು. ಇನ್ನು ಕೆಲವು ಸಮಸ್ಯೆಗಳು ಒಂದೊಂದು ಋತುಮಾನಗಳಲ್ಲಿ ಮಾತ್ರ ಕಾಡಬಲ್ಲವು. ಆದರೆ ಮಲಬದ್ಧತೆಯಂಥ ತೊಂದರೆಗಳು ಯಾವುದೇ ತರತಮವಿಲ್ಲದೆ ಯಾರನ್ನೂ, ಯಾವಾಗಲೂ ಸತಾಯಿಸಬಲ್ಲವು. ಅದರಲ್ಲೂ ಬೇಸಿಗೆಯಲ್ಲಿ (summer Tips) ನೀರು ಮತ್ತು ನಾರು ದೇಹಕ್ಕೆ ಸಾಕಾಗದಿದ್ದರೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಬಲ್ಲದು. ಈ ಸಮಸ್ಯೆಗೆ ಪರಿಹಾರವಿದೆ ಎಂಬುದೇ ಖುಷಿಯ ವಿಷಯ. ಆದರೆ ಈ ಪರಿಹಾರವು ಹೆಚ್ಚಾಗಿ ಜೀವನಶೈಲಿಗೆ ಸಂಬಂಧಿಸಿದ್ದು. ಕೆಲವು ಸರಳ ಮಾರ್ಪಾಡುಗಳನ್ನು ಮಾಡಿಕೊಂಡಲ್ಲಿ, ಮಲಬದ್ಧತೆಯ ಕಿರಿಕಿರಿ, ನೋವುಗಳಿಲ್ಲದೆ ಆರಾಮದಲ್ಲಿ ಬದುಕಬಹುದು. ಹಾಗಾದರೆ ಏನೆಲ್ಲಾ ಕಾರಣಗಳಿಗೆ ಮಲಬದ್ಧತೆ ಕಾಡಬಹುದು?
ಕಾರಣಗಳು ಹಲವು
ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ನೀರು ದೊರೆಯದಿರುವುದು, ನಾರಿನಂಶ ಆಹಾರದಲ್ಲಿ ಸಾಕಷ್ಟು ಇಲ್ಲದಿರುವುದು, ನಿದ್ದೆ- ಆಹಾರಗಳಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಮಾಡುವುದು, ಕೊಬ್ಬಿನಂಶ ಅತೀ ಕಡಿಮೆ ಸೇವಿಸುವುದು, ಕಬ್ಬಿಣ, ಪ್ರೊಟೀನ್, ಕ್ಯಾಲ್ಶಿಯಂ ಮುಂತಾದ ಪೂರಕಗಳ ಸೇವನೆ, ನಿಸರ್ಗದ ಕರೆ ಬಂದಾಗ ಹೋಗದಿರುವುದು, ವ್ಯಾಯಾಮವಿಲ್ಲದ ಜಡಜೀವನ- ಹೀಗೆ ಬಹಳಷ್ಟು ಕಾರಣಗಳಿಂದಾಗಿ ಮಲಬದ್ಧತೆ ಬೆನ್ನು ಬೀಳಬಹುದು.
ಪರಿಹಾರವಿದೆ!
ಹೌದು, ಒಮ್ಮೆ ಆರಂಭವಾದ ಈ ಸಮಸ್ಯೆಗೆ ಜೀವನವಿಡೀ ನರಳಬೇಕೆಂದಿಲ್ಲ. ಕೆಲವು ಕಟ್ಟುನಿಟ್ಟಾದ ಕ್ರಮಗಳಿಂದ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಖಂಡಿತಾ ಅಸಾಧ್ಯವಲ್ಲ.
ನೀರು
ಇದು ಅತ್ಯಂತ ಸರಳ ಪರಿಹಾರಗಳಲ್ಲಿ ಒಂದು. ದೇಹಕ್ಕೆ ನೀರು ಕಡಿಮೆಯಾದರೆ ಉಂಟಾಗುವ ಹಲವು ಅಡ್ಡಪರಿಣಾಮಗಳ ಪೈಕಿ ಮಲಬದ್ಧತೆ ಪ್ರಮುಖವಾಗಿದ್ದು. ದಿನಕ್ಕೆ ಎಂಟು ಗ್ಲಾಸ್ ನೀರು ಕಡ್ಡಾಯವಾಗಿ ಕುಡಿಯಿರಿ. ಇದರಿಂದ ಹಲವು ಸಮಸ್ಯೆಗಳು ಪರಿಹಾರವಾದರೆ ಅಚ್ಚರಿಯಿಲ್ಲ. ಇದರ ಜೊತೆಗೆ ಇನ್ನಷ್ಟು ಕ್ರಮಗಳೂ ಮಲಬದ್ಧತೆ ನಿವಾರಣೆಗೆ ಬೇಕಾಗಬಹುದು.
ನೆನೆಸಿದ ಅಂಜೂರ
ರಾತ್ರಿ ಮಲಗುವ ಮುನ್ನ 2 ಅಥವಾ 3 ಅಂಜೂರಗಳನ್ನು ಶುದ್ಧ ನೀರಿಗೆ ಹಾಕಿಡಿ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಆ ನೀರಿನ ಸಮೇತ ಅಂಜೂರವನ್ನು ಸೇವಿಸಿ. ಇದರಲ್ಲಿರುವ ಸಾರ್ಬಿಟಾಲ್ ಅಂಶವು ನೈಸರ್ಗಿಕ ವಿರೇಚಕದಂತೆ ಕೆಲಸ ಮಾಡುತ್ತದೆ.
ನೆನೆಸಿದ ಪ್ರೂನ್
ಪ್ಲಮ್ ಹಣ್ಣುಗಳನ್ನು ಒಣಗಿಸಿ ಪ್ರೂನ್ ಮಾಡಲಾಗುತ್ತದೆ. ಇವೂ ಸಹ ಉತ್ತಮ ವಿರೇಚಕಗಳಂತೆ ಕೆಲಸ ಮಾಡಿ, ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತವೆ.
ಒಣದ್ರಾಕ್ಷಿ
ರಾತ್ರಿಯಿಡೀ ನೆನೆಸಿದ ಕಪ್ಪು ದ್ರಾಕ್ಷಿಗಳು ದೇಹಕ್ಕೆ ಹೆಚ್ಚಿನ ಪ್ರಮಾಣದ ನಾರಿನಂಶವನ್ನು ನೀರಬಲ್ಲವು. ಇದರಿಂದಲೂ ಮಲಬದ್ಧತೆ ಶಮನವಾಗುತ್ತದೆ.
ಸೋಂಪು ನೀರು
ಸೋಂಪು, ಪೆಪ್ಪರ್ಮಿಂಟ್, ಬೆಸಿಲ್ ಮುಂತಾದವುಗಳನ್ನು ಪ್ರತ್ಯೇಕವಾಗಿ ಅಥವಾ ಸೇರಿಸಿಯಾದರೂ ನೀರಿನಲ್ಲಿ ನೆನೆಸಿಡಿ. ಆ ನೀರನ್ನು ದಿನದಲ್ಲಿ ಪದೇಪದೆ ಕುಡಿಯುತ್ತಿರಿ. ಇದರಿಂದ ಜೀರ್ಣಾಂಗದ ಊತವನ್ನು ಶಮನವಾಗಿ, ದೇಹಕ್ಕೆ ಅಗತ್ಯ ನೀರು ಸಹ ಪೂರೈಕೆಯಾಗಿ, ಮಲಬದ್ಧತೆ ನಿವಾರಣೆ ಆಗುತ್ತದೆ.
ವ್ಯಾಯಾಮ
ಇದು ಸಹ ಜೀರ್ಣಾಂಗಗಳ ಆರೋಗ್ಯ ಸುಧಾರಿಸುವಲ್ಲಿ ಅಗತ್ಯವಾದ ಅಂಶ. ಜಿಮ್, ಯೋಗ, ಪಿಲಾಟೆ, ಈಜು, ಸೈಕಲ್- ಯಾವುದೂ ಆದೀತು. ಇವೆಲ್ಲಾ ಸಾಧ್ಯವಿಲ್ಲ ಎಂದರೆ ದಿನಕ್ಕೊಂದು ತಾಸು ನಡಿಗೆಯೂ ಸೈ.
ಇವು ಬೇಡ
ಕರಿದ, ಸಂಸ್ಕರಿತ ತಿಂಡಿಗಳು, ಕಾಫಿ, ಅಲ್ಕೋಹಾಲ್, ಮೈದಾ ಆಹಾರಗಳು ಹೊಟ್ಟೆಯ ದಿಕ್ಕೆಡಿಸಬಲ್ಲವು. ಇವುಗಳ ಬದಲಿದೆ, ಇಡೀ ಧಾನ್ಯಗಳು, ಬಹಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಊಟದಲ್ಲಿ ಸೇರಿಸಿಕೊಳ್ಳಿ. ಸಾಕಷ್ಟು ಸೊಪ್ಪಿನ ಆಹಾರ ತಿನ್ನಿ. ಮಲಬದ್ಧತೆ ನಿವಾರಿಸುವಲ್ಲಿ ನೀರು-ನಾರು ಪ್ರಧಾನ ಪಾತ್ರ ವಹಿಸುತ್ತವೆ.
ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕಾಡುವ ಎದೆಯುರಿಗೆ ಈ ಮಸಾಲೆ ಪದಾರ್ಥಗಳೇ ಕಾರಣ!