ಕೂದಲು ಎನ್ನುವುದು ಬಹುತೇಕ ಮಹಿಳೆ ಪುರುಷರೆಂಬ ಭೇದವಿಲ್ಲದೆ ಪ್ರತಿಯಬ್ಬರೂ ಕಾಳಜಿ ವಹಿಸುವ ನಮ್ಮ ದೇಹದ ಅವಿಭಾಜ್ಯ ಅಂಗ. ಹೆಂಗಸರಷ್ಟೇ ಗಂಡಸರೂ ತಲೆಬಿಸಿ ಮಾಡಿಕೊಳ್ಳುವ ಸೌಂದರ್ಯ ಸಮಸ್ಯೆ ಎಂದರೆ ಅದು ಕೂದಲು ಉದುರುವುದು. ಕೂದಲುದುರುವುದಕ್ಕೆ ಕಾರಣಗಳನ್ನೆಲ್ಲ ಹುಡುಕಿ, ಥರಹೇವಾರಿ ಎಣ್ಣೆಗಳನ್ನು, ಶಾಂಪುಗಳನ್ನು ಪ್ರಯೋಗ ಮಾಡಿ, ಕೂದಲು ಯಾಕೆ ಬರುವುದಿಲ್ಲ, ಮೊದಲಿನಂತಾಗುವುದಿಲ್ಲ ಎಂದು ಚಿಂತೆ ಮಾಡುವ ಮಂದಿ ಅನೇಕ. ಅನೇಕ ಮಂದಿ ಸಾಕಷ್ಟು ಮನೆಮದ್ದುಗಳನ್ನೂ ಬಳಸಿ, ಹೇರ್‌ಪ್ಯಾಕ್‌ಗಳ ಮೂಲಕ, ಇನ್ನೂ ಕೆಲವರು ಪಾರ್ಲರುಗಳಿಗೆ ಎಡತಾಕಿ ಆಂಟಿ ಹೇರ್‌ಫಾಲ್ ಬ್ಯಾಕ್‌ಗಳೆಂದು ಸಾಕಷ್ಟು ದುಡ್ಡು, ಸಮಯ ಹಾಗೂ ಶ್ರಮವನ್ನೂ ಸುರಿಯುವುದುಂಟು. ಒಮ್ಮೊಮ್ಮೆ ಕೊಂಚ ಮಟ್ಟಿನ ರಿಲೀಫ್ ಸಿಕ್ಕರೂ ಶಾಶ್ವತ ಪರಿಹಾರ ಸಿಗುವುದು ಬಹಳ ಕಡಿಮೆಯೇ. ಆದರೆ, ಬಹುತೇಕ ಮಂದಿ ನಮ್ಮದೇ ಆಹಾರ ಕ್ರಮ, ಕೂದಲ ಬೆಳವಣಿಗೆಗೆ ಪೂರಕವೆನಿಸುವ ಆಹಾರ ಸೇವನೆ ಮಾಡುವ ಬಗ್ಗೆ ಯೋಚಿಸುವುದೇ ಇಲ್ಲ.
ಇತ್ತೀಚೆಗಿನ ಕೆಲವು ಸಂಶೋಧನೆಗಳ ಪ್ರಕಾರ ನಮ್ಮ ನಿತ್ಯದ ಆಹಾರ ಕ್ರಮ, ಕುಡಿಯುವ ಪೇಯಗಳೂ ಕೂಡಾ ನಮ್ಮ ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪುರುಷರ ಬೊಕ್ಕತಲೆಯ ಸಮಸ್ಯೆಗೆ ಅವರು ಕುಡಿಯುವ ಪೇಯಗಳೇ ಶೇಕಡಾ ೩೦ರಷ್ಟು ಕಾರಣವಾಗಿರುತ್ತದೆಯಂತೆ. ಕಾಫಿ, ಚಹಾ, ಕೋಲಾ, ಶಕ್ತಿವರ್ಧಕ ಪೇಯಗಳು ಕೂದಲುದುರಲು ಪ್ರಮುಖ ಕಾರಣಗಳು. ಬೀಜಿಂಗ್‌ನ ವಿಶವವಿದ್ಯಾನಿಲಯವೊಂದು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಪುರುಷರು ದಿನಕ್ಕೆ ಒಂದರಿಂದ ಮೂರು ಲೀಟರ್‌ವರೆಗೆ ಇಂತಹ ಪೇಯಗಳನ್ನು ತಮ್ಮ ಕೆಲಸದ ಮಧ್ಯದಲ್ಲಿ ಕುಡಿಯುವ ಅಭ್ಯಾಸ ಹೆಚ್ಚು ಮಾಡಿಕೊಂಡಿರುವುದರಿಂದಲೇ ಇಂದು ಬೊಕ್ಕತಲೆಯ ಸಮಸ್ಯೆ ಅವರನ್ನು ಹೆಚ್ಚು ಕಾಡುತ್ತಿದೆ ಎಂದಿದೆ. ಕೂದಲಿಗೂ ಕೂಡಾ, ಅರೋಗ್ಯಕರ ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನು, ವಿಟಮಿನ್ ಹಾಗೂ ಖನಿಜಾಂಶಗಳೂ ಬೆಳವಣಿಗೆಗೆ ಆರೋಗ್ಯಪೂರ್ಣ ಕೂದಲಿಗೆ ಅಗತ್ಯ ಅಂಶಗಳಾಗಿರುವುದರಿಂದ ಇಂದಿನ ಜೀವನಕ್ರಮ ಕೂದಲ ಸಮಸ್ಯೆಗಳಿಗೆ ಪ್ರಮುಖ ಕಾರಣವೇ ಆಗಿದೆ.
ಹಾಗಾದರೆ ಕೂದಲು ಸೊಂಪಾಗಿ ಬೆಳೆಯಲು, ಮಿರಮಿರ ಮಿಂಚುವ ಆರೋಗ್ಯಪೂರ್ಣ ಕೂದಲು ಹೊಂದಲು, ಅಥವಾ ಇರುವ ಕೂದಲನ್ನು ಹಾಗೆಯೇ ಉಳಿಸಿಕೊಳ್ಳಲು ನಾವು ನಿತ್ಯಜೀವನದಲ್ಲಿ ಕೆಲವು ಪೂರಕ ಪಾನೀಯಗಳನ್ನು ಸೇವಿಸಬಹುದು. ಅವುಗಳು ಯಾವುವು ಎಂಬುದನ್ನು ನೋಡೋಣ.
೧. ಬಸಳೆ/ಪಾಲಕ್ ಜ್ಯೂಸ್: ಬಸಳೆ/ ಪಾಲಕ್ ಸೊಪ್ಪು ಕಬ್ಬಿಣ ಸತ್ವ ಹಾಗೂ ಬಯೋಟಿನ್‌ನ ಪ್ರಮುಖ ಆಕರ. ಇವು ದೇಹದ ಪ್ರತಿಯೊಂದು ಅಂಗಾಂಶಗಳಿಗೂ ಆಮ್ಲಜನಕ ಸರಬರಾಜು ಸರಿಯಾಗಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದ ಕೂದಲ ಬುಡದವರೆಗೆ ಆಮ್ಲಜನಕ ಪೂರೈಕೆಯಾಗಿ ಕೂದಲ ಆರೋಗ್ಯಕ್ಕೆ ನೆರವಾಗುತ್ತದೆ. ಇದರಲ್ಲಿ ಫೆರಿಟಿನ್ ಎಂಬ ಅಂಶವೂ ಹೆಚ್ಚಾಗಿದ್ದು ಇದು ಕೂದಲ ಬೆಳವಣಿಗೆಗೆ ಪೂರಕವಾಗಿದೆ.
ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ
೨. ಸೌತೆಕಾಯಿ ಜ್ಯೂಸ್: ವಿಟಮಿನ್ ಎ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಸೌತೆಕಾಯಿಗೆ ಕಲ್ಮಶವನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಗ್ರಂಥಿಗಳು ಸೆಬಮ್ ಉತ್ಪಾದಿಸಲು ಪ್ರಚೋದಿಸುತ್ತದೆ.
೩. ನೆಲ್ಲಿಕಾಯಿ ಜ್ಯೂಸ್: ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಕೂದಲ ಬಹುತೇಕ ಸಮಸ್ಯೆಗಳಿಗೆ ನೆಲ್ಲಿಕಾಯಿ ರಾಮಬಾಣ.
೪. ಕ್ಯಾರೆಟ್ ಜ್ಯೂಸ್: ಕ್ಯಾರೆಟ್‌ನಲ್ಲಿ ವಿಟಮಿನ್ ಎ, ಇ ಹಾಗೂ ಬಿ ಹೇರಳವಾಗಿದ್ದು ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಸೂಪರ್ ಫುಡ್.
೫. ಆಲೊವೆರಾ ಜ್ಯೂಸ್: ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸುಲಭವಾಗಿ ಬೆಳೆಸಬಹುದಾದ ಮನೆಮದ್ದಿನ ಗಿಡವಿದು. ಇದರಲ್ಲಿರುವ ಎ, ಸಿ ಹಾಗೂ ಇ ಹೇರಳವಾಗಿದ್ದು ಇದನ್ನು ಹಚ್ಚುವ ಹಾಗೂ ಕುಡಿಯುವ ಮೂಲಕ ಹೊಳಪಿನ ಚರ್ಮ ಹಾಗೂ ಕೂದಲು ನಿಮ್ಮದಾಗುತ್ತದೆ.
ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ