Site icon Vistara News

Super Foods: ಅನಿಯಮಿತ ಋತುಚಕ್ರದ ಸಮಸ್ಯೆ ನಿವಾರಣೆಗೆ ಇಲ್ಲಿವೆ ಸೂಪರ್‌ ಫುಡ್‌!

super foods to cure irregular periods

ನಿಯಮಿತವಾಗಿಲ್ಲದ ಪೀರಿಯಡ್ಸ್‌ (irregular periods) ಅಥವಾ ಋತುಚಕ್ರ (menstruation) ಬಹಳಷ್ಟು ಮಹಿಳೆಯರಿಗೆ ದುಃಸ್ವಪ್ನ. ಹಾರ್ಮೋನ್‌ನ ತೊಂದರೆಗಳು (hormone imbalance), ತೂಕ ಹೆಚ್ಚಾಗಿರುವುದು (weight gain), ಅಥವಾ ಜೀವನಶೈಲಿಯಲ್ಲಿನ (lifestyle changes) ಬದಲಾವಣೆ, ಬದಲಾದ ಆಹಾರ ಪದ್ಧತಿ ಇತ್ಯಾದಿ ಇತ್ಯಾದಿ ನಾನಾ ಕಾರಣಗಳಿಂದ ಇಂದು ಅನೇಕ ಮಹಿಳೆಯರು ತಮ್ಮ ಮಾಸಿಕ ಋತುಚಕ್ರದಲ್ಲಿ ಏರುಪೇರುಗಳನ್ನು ಕಾಣುತ್ತಾರೆ. ಈ ಸಮಸ್ಯೆ ತೋರಿಕೆಗೆ ದೊಡ್ಡ ಸಮಸ್ಯೆಯಲ್ಲದಂತೆ ಕಂಡರೂ, ಸಮಾಜದಲ್ಲಿ ಈ ಬಗ್ಗೆ ಇಂದಿಗೂ ಬೇರೂರಿರುವ ಮೂಢನಂಬಿಕೆ ಹಾಗೂ ನಾಚಿಕೆ, ಸಂಕೋಚ ಪ್ರವೃತ್ತಿಗಳಿಂದ ಅನೇಕರು ಇದನ್ನೊಂದು ಸಮಸ್ಯೆಯೆಂದೇ ತೋರಗೊಡುವುದಿಲ್ಲ. ಒಳಗೊಳಗೇ ಸಮಸ್ಯೆಯನ್ನು ಎದುರಿಸುತ್ತಾ, ಎಲ್ಲರೆದುರು ಎಲ್ಲವೂ ಸರಿಯಾಗಿದೆ ಎಂಬಂತೆ ಬದುಕುತ್ತಿರುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಸಂಕೋಚರಹಿತ ಪ್ರವೃತ್ತಿ ಹಾಗೂ ಅರಿವು ಬಹಳ ಮುಖ್ಯ. ಅಷ್ಟೇ ಅಲ್ಲದೆ, ಇಂಥ ಸಮಸ್ಯೆಗಳಿಗೆ ಮನೆಯಲ್ಲೇ ಕಂಡುಕೊಳ್ಳಬಹುದಾದ ದಾರಿಗಳೂ ಅನೇಕ ಇವೆ. ವೈದ್ಯರ ಸಲಹೆಯ ಜೊತೆಗೆ, ಮನೆಯಲ್ಲಿ ಇಂತಹ ಆಹಾರಗಳ (super foods for Irregular Periods) ಬಳಕೆಯಿಂದಲೂ, ಆರೋಗ್ಯಕರ ಮಾಸಿಕ ಋತುಚಕ್ರದೆಡೆಗೆ ಪಯಣ ಬೆಳೆಸುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ.

ಅನಿಯಮಿತ ಮಾಸಿಕ ಋತುಚಕ್ರದಿಂದಾಗಿ, ಸಾಕಷ್ಟು ಸಮಸ್ಯೆಗಳೂ ಎದುರಾಗುತ್ತವೆ, ಮುಖದಲ್ಲಿ ಅನಗತ್ಯ ಕೂದಲು ಬೆಳೆಯುವುದು, ವಿಪರೀತ ಹೊಟ್ಟೆನೋವು, ಸೊಂಟನೋವು, ಎದೆಯ ಸುತ್ತಮುತ್ತಲ ನೋವು, ಹೊಟ್ಟೆಯುಬ್ಬರಂತಹ ಸಮಸ್ಯೆಗಳು ಇತ್ಯಾದಿ ಸಮಸ್ಯೆಗಳೆಲ್ಲವೂ ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಸಾಕಷ್ಟು ಸುಧಾರಿಸುತ್ತದೆ. ಕೆಲವು ಆಹಾರಗಳ ಸೇವನೆಯೂ ಕೂಡಾ ಈ ಸಮಸ್ಯೆಯಿಂದ ಪಾರು ಮಾಡುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಗೆ ನಮ್ಮಲ್ಲೇ ಇರುವ ಕೆಲವು ಆಹಾರ ಪದಾರ್ಥಗಳ ಬಳಕೆಯಿಂದಲೂ ಸರಿ ಪಡಿಸಿಕೊಳ್ಳಬಹುದು. ಬನ್ನಿ, ಯಾವೆಲ್ಲ ಆಹಾರಗಳು, ಮುಟ್ಟಿನ ಸಮಸ್ಯೆಗಳಿಗೆ ಸೂಪರ್‌ಫುಡ್‌ ಆಗಬಲ್ಲುದು ಎಂಬುದನ್ನು ನೋಡೋಣ.

1. ವಿಟಮಿನ್‌ ಸಿ ಯುಕ್ತ ಆಹಾರ: ವಿಟಮಿನ್‌ ಸಿ ಹೇರಳವಾಗಿರುವ ಆಹಾರ ಯಾವತ್ತಿಗೂ, ಮುಟ್ಟಿನ ಸಮಸ್ಯೆಗಳಿಗೆ ಒಳ್ಳೆಯದು. ನೆಲ್ಲಿಕಾಯಿ, ನಿಂಬೆ, ಕಿತ್ತಳೆ, ಮುಸಂಬಿ, ಪಪ್ಪಾಯಿ, ಕಿವಿ, ಅನನಾಸು, ಮಾವಿನಹಣ್ಣು ಇತ್ಯಾದಿ ಹಣ್ಣುಗಳು ಈ ಸಮಸ್ಯೆಗೆ ಒಳ್ಳೆಯದು. ಹಾಗಾಗಿ, ಇಂಥ ಹಣ್ಣುಗಳನ್ನು ನಿಯಮಿತವಾಗಿ ನಿತ್ಯ ಜೀವನದಲ್ಲಿ ಬಳಸುವುದುನ್ನು ಆರಂಭಿಸಿ. ಅನನಾಸು, ಪಪ್ಪಾಯಿಯಂತಹ ಹಣ್ಣುಗಳು ಮುಟ್ಟಿನ ತೊಂದರೆಗಳಿಗೆ ಅತ್ಯಂತ ಒಳ್ಳೆಯದು.

2. ಶುಂಠಿ: ಮುಟ್ಟಿನ ಸಮಸ್ಯೆಗಳಿಗೆ, ದಿನಗಳಾಗಿದ್ದರೂ ಮುಟ್ಟಾಗದಿದ್ದರೆ ಮುಟ್ಟು ಬರುವಂತೆ ಮಾಡುವಲ್ಲಿಯೂ ಶುಂಠಿ ಸಹಾಯ ಮಾಡುತ್ತದೆ. ಶುಂಠಿಯನ್ನು ತುರಿದು ಜೇನಿನಲ್ಲಿ ಕಲಸಿ ತಿನ್ನುವ ಮೂಲಕವೂ ಪ್ರಯತ್ನ ಮಾಡಬಹುದು. ಅಷ್ಟೇ ಅಲ್ಲ, ಮುಟ್ಟಿನ ಇತರ ಸಮಸ್ಯೆಗಳಾದ ಹೊಟ್ಟೆಯುಬ್ಬರ, ಸೊಂಟನೋವು, ಹೊಟ್ಟೆನೋವಿಗೂ ಇದು ಸಾಕಷ್ಟು ಸಹಾಯ ಮಾಡಬಲ್ಲುದು.

3. ಅರಿಶಿನ: ಅರಿಶಿನ ಹೇಳಿ ಕೇಳಿ, ಎಲ್ಲ ಭಾರತೀಯರ ಮನೆಗಳಲ್ಲೂ ಬಹುತೇಕ ಎಲ್ಲ ಸಮಸ್ಯೆಗಳಿಗೂ ಬಳಕೆಯಾಗುವ ಮನೆಮದ್ದು. ಮುಟ್ಟಿನ ಸಮಸ್ಯೆಯೂ ಇದರಿಂದ ಹೊರತಾಗಿಲ್ಲ. ಸಮಯಕ್ಕೆ ಸರಿಯಾಗಿ ಮುಟ್ಟಾಗದೆ ಇದ್ದರೆ, ಅಂಥ ಸಂದರ್ಭದಲ್ಲಿ ಅರಿಶಿನ ಸೇವಿಸಿದರೆ, ಇದು ಗರ್ಭಕೋಶವನ್ನು ಹಿಗ್ಗುವಂತೆ ಮಾಡಿ ಮುಟ್ಟಾಗುವಂತೆ ಮಾಡುತ್ತದೆ. ನಿತ್ಯವೂ ಅರಿಶಿನ ಹಾಕಿದ ಹಾಲನ್ನು ಸೇವನೆ ಮಾಡುವುದರಿಂದ ಮುಟ್ಟಿನ ಸಮಸ್ಯೆಗಳಿಂದ ದೂರವಿರಬಹುದು.

4. ಬೆಲ್ಲ: ಬೆಲ್ಲವೂ ಕೂಡಾ, ಮುಟ್ಟಾಗದಿದ್ದರೆ ನೆರವಿಗೆ ಬರುವ ಆಹಾರ. ಸಮಯಕ್ಕೆ ಸರಿಯಾಗಿ ಮುಟ್ಟಾಗದಿದ್ದರೆ, ಬೆಲ್ಲ, ಶುಂಠಿ, ಎಳ್ಳು, ಅರಿಶಿನ ಸೇರಿಸಿ ತಿಂದರೆ ಮುಟ್ಟಾಗುತ್ತದೆ. ಕೆಲವು ಅನಿವಾರ್ಯ ಸಂದರ್ಭಗಳಲ್ಲಿ, ಯಾವ ಮಾತ್ರೆಗಳ ಸಹಾಯವಿಲ್ಲದೆ, ಮುಟ್ಟನ್ನು ನಿಗದಿತ ಅವಧಿಗಿಂತ ಬೇಗ ಆಗುವಂತೆ ಮಾಡುವ ತಾಕತ್ತು ಕೂಡಾ ಇದಕ್ಕಿದೆ.

ಇದನ್ನೂ ಓದಿ: Menopause and Bone Loss: ಋತುಸ್ರಾವ ನಿಂತ ಬಳಿಕ ಮೂಳೆ ದುರ್ಬಲವಾಗುವುದು ಈ ಕಾರಣಕ್ಕೆ

5. ಬೀಟ್‌ರೂಟ್:‌ ಬೀಟ್‌ರೂಟ್‌ ಕಬ್ಬಿಣಾಂಶ ಹೆಚ್ಚಿರುವ ಕ್ಯಾಲ್ಶಿಯಂ ಹಾಗೂ ಫೋಲಿಕ್‌ ಆಸಿಡ್‌ ಹೇರಳವಾಗಿರುವ ಆಹಾರ. ಇದು ಕೆಲವರಲ್ಲಿ, ಬ್ಲೋಟಿಂಗ್‌ ಹಾಗೂ ನೀರು ತುಂಬಿಕೊಳ್ಳುವಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಬೇಗ ಮುಟ್ಟಾಗುವಂತೆ ನೋಡಿಕೊಳ್ಳುತ್ತದೆ.

ಅವಧಿಗೆ ಸರಿಯಾಗಿ ಮುಟ್ಟಾಗದಿರುವುದರಿಂದ ಅನೇಕರು ತಲೆಕೆಡಿಸಿಕೊಳ್ಳುವ ಸಂದರ್ಭಗಳಿಗೂ ಒಳಗಾಗುವುದುಂಟು. ಯಾವ ತೊಂದರೆಯೂ, ಅಡ್ಡ ಪರಿಣಾಮಗಳೂ ಇಲ್ಲದಂತೆ, ಆರೋಗ್ಯಕರವಾಗಿ, ಮುಂಚಿತವಾಗಿ ಅಥವಾ ಅವಧಿಗೆ ಸರಿಯಾಗಿ ಮುಟ್ಟಾದರೆ ಈ ತಲೆನೋವು ಮಾಯ. ಇಂಥ ಸಂದರ್ಭಗಳಲ್ಲಿಯೂ ಈ ಕೆಲವು ಆಹಾರಗಳು ನೆರವಿಗೆ ಬರುತ್ತವೆ. ಅಷ್ಟೇ ಅಲ್ಲ, ಆರೋಗ್ಯಕರ ಋತುಚಕ್ರದೆಡೆಗೂ ಇವು ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

Exit mobile version