Site icon Vistara News

B Vitamins : ಅತ್ಯಂತ ಅವಶ್ಯಕ ವಿಟಮಿನ್‌ ಬಿ ಕಾಂಪ್ಲೆಕ್ಸ್‌ ದೇಹದ ಮೇಲೆ ಮಾಡೋ ಮ್ಯಾಜಿಕ್‌ ಅಷ್ಟಿಷ್ಟಲ್ಲ!

b vitamins

ತುಟಿಯೊಡೆಯುವ ಸಮಸ್ಯೆ ಹೆಚ್ಚಾದಾಗ, ಬಾಯಿ ಹುಣ್ಣು ವಿಪರೀತ ಕಾಡುತ್ತಿದ್ದಾಗ ಬಿ ಕಾಂಪ್ಲೆಕ್ಸ್‌ ತೆಗೆದುಕೊಂಡರೆ ಸರಿಹೋಗುತ್ತದೆ ಎಂಬ ಸರಳ ಸಲಹೆ ಎಲ್ಲರಿಂದ ಕೇಳುತ್ತಿರುತ್ತೇವೆ. ಬಿ ಕಾಂಪ್ಲೆಕ್ಸ್‌ ಕಡಿಮೆಯಾಗಿರಬೇಕು ನೋಡು ಎಂದು ಹೇಳಲು ವೈದ್ಯನೇ ಬರಬೇಕಾಗುವುದಿಲ್ಲ. ಅಷ್ಟು ಸರಳ, ಸಹಜವಾಗಿ ನಿತ್ಯ ಜೀವನದ ಭಾಗವಾಗಿ ಹೋಗಿರುವ ಈ ಬಿ ಕಾಂಪ್ಲೆಕ್ಸ್‌ ಏನು, ಇದರಲ್ಲಿ ಏನೇನಿದೆ ಹಾಗೂ ಯಾಕಾಗಿ ಇದು ನಮ್ಮ ದೇಹಕ್ಕೆ ಅವಶ್ಯಕ ಎಂಬ ವಿವರಗಳನ್ನು ನಾವು ವಿಸ್ತೃತವಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅದರ ವಿವರಗಳು ಇಲ್ಲಿವೆ.

ವಿಟಮಿನ್‌ ಬಿ ನೀರಿನಲ್ಲಿ ಕರಗಬಲ್ಲ ವಿಟಮಿನ್‌ ಆದ್ದರಿಂದ ಹಾಗೂ ಇದು ದೇಹಕ್ಕೆ ಸೇರಿದಷ್ಟೇ ವೇಗವಾಗಿ ಹೊರಗೆ ಹೋಗುವ ಗುಣವಿದ್ದರೂ ಇದು ನಮ್ಮ ದೇಹಕ್ಕೆ ನಿತ್ಯವೂ ಅತ್ಯಂತ ಅವಶ್ಯಕವಾಗಿರುವ ವಿಟಮಿನ್‌ಗಳಲ್ಲಿ ಒಂದು. ಇದು ಒಂದು ಗುಂಪಾದ ವಿಟಮಿನ್‌ ಆಗಿರುವುದರಿಂದ, ಇದರಲ್ಲಿ ಪ್ರತ್ಯೇಕ ವಿಧಗಳಿರುವುದರಿಂದ ಹಾಗೂ ಪ್ರತಿ ವಿಧವೂ ಒಂದೊಂದು ಪ್ರತ್ಯೇಕ ಕಾರಣಗಳಿಗಾಗಿ ಅವಶ್ಯಕವಾಗಿರುವುದರಿಂದ ಈ ವಿಟಮಿನ್‌ ಸಮೂಹ ಬಿ ಕಾಂಪ್ಲೆಕ್ಸ್‌ ಎಂಬ ಹೆಸರಿನಿಂದಲೇ ಕರೆಯಲ್ಪಡುತ್ತದೆ.

೧. ವಿಟಮಿನ್‌ ಬಿ೧: ವಿಟಮಿನ್‌ ಬಿ೧ ಥೈಮೀನ್‌ ಎಂದೇ ಪ್ರಸಿದ್ಧ. ನಮ್ಮ ನರವ್ಯೂಹ ಚೆನ್ನಾಗಿ ಕಾರ್ಯ ನಿರ್ವಹಿಸಬೇಕೆಂದರೆ, ಈ ವಿಟಮಿನ್ನಿನ ಅವಶ್ಯಕತೆ ಇದೆ. ನಿತ್ಯವೂ ಆರೋಗ್ಯಕರ ಪುರುಷನೊಬ್ಬನ ದೇಹಕ್ಕೆ ಒಂದು ಮಿಲಿಗ್ರಾಂನಷ್ಟು ಹಾಗೂ ಮಹಿಳೆಗೆ ೦.೮ ಮಿಲಿಗ್ರಾಂನಷ್ಟು ವಿಟಮಿನ್‌ ಬಿ೧ ಅವಶ್ಯವಂತೆ. ಅತಿಯಾದ ಕುಡಿತದ ಚಟವಿದ್ದರೆ, ಈ ವಿಟಮಿನ್‌ ನಮ್ಮ ದೇಹಕ್ಕೆ ಸರಿಯಾಗಿ ಪೂರೈಕೆಯಾಗುವುದಿಲ್ಲ. ನಾವು ಪೂರೈಸಿದರೂ, ದೇಹ ಮಾತ್ರ ಅದನ್ನು ಹೀರಿಕೊಳ್ಳುವುದಿಲ್ಲ. ಬಾಯಿಹುಣ್ಣಿನಂಥ ಸಮಸ್ಯೆ ಆಗಾಗ ಕಾಣಿಸಿಕೊಳ್ಳುವುದು ಈ ವಿಟಮಿನ್‌ ಕೊರತೆಯಿಂದಲೇ. ನರಮಂಡಲದ ಸಮಸ್ಯೆಗಳು, ಹೃದಯದ ಸಮಸ್ಯೆಗಳೂ ಕೂಡಾ ಇದರ ಕೊರತೆಯಿಂದ ಬರಬಹುದು. ಬಟಾಣಿ, ಹಂದಿಮಾಂಸ, ಸೂರ್ಯಕಾಂತಿ ಬೀಜ, ಇತರ ಬೀಜಗಳು ಮತ್ತಿತರ ಆಹಾರದ ಮೂಲಕ ಬಿ೧ ವಿಟಮಿನ್‌ ದೇಹ ಸೇರುತ್ತದೆ.

೨. ವಿಟಮಿನ್‌ ಬಿ೨: ಇದನ್ನು ರೈಬೋಫ್ಲೇವಿನ್‌ ಎಂಬ ಹೆಸರಿನಿಂದ ಕರೆಲಾಗುತ್ತಿದ್ದು, ಇದು ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬಿನಿಂದ ಶಕ್ತಿ ಉತ್ಪಾದಿಸುವಲ್ಲಿ ನೆರವಾಗುತ್ತದೆ. ಈ ವಿಟಮಿನ್ನಿನ ಕೊರತೆಯಾದಲ್ಲಿ ಬಿಸಿಲಿನಲ್ಲಿ ತಿರುಗಾಡಲು ಕಷ್ಟವಾಗುವುದು, ತುಟಿ ಸಿಕ್ಕಾಪಟ್ಟೆ ಒಡೆಯುವುದು, ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಆರೋಗ್ಯಕರ ಪುರುಷನಿಗೆ ೧.೩ ಮಿಲಿಗ್ರಾಂ ಹಾಗೂ ಮಹಿಳೆಗೆ ೧.೧ ಮಿಲಿಗ್ರಾಂ ವಿಟಮಿನ್‌ ಬಿ೨ ಅವಶ್ಯಕತೆ ಇದೆ. ಹಾಲು, ಮೊಸರು ಮತ್ತಿತರ ಡೈರಿ ಉತ್ಪನ್ನಗಳಲ್ಲಿ, ಅಣಬೆ, ಮಾಂಸ, ಮೊಟ್ಟೆಗಳಲ್ಲಿ ವಿಟಮಿನ್‌ ಬಿ೨ ಇದೆ.

೩. ವಿಟಮಿನ್‌ ಬಿ೩: ನಿಯಾಸಿನ್‌ ಎಂಬ ಹೆಸರಿನ ಈ ವಿಟಮಿನ್‌ ದೇಹದಲ್ಲಿ ನಾವು ಸೇವಿಸಿದ ಆಹಾರ ಸರಿಯಾಗಿ ಪಚನಗೊಂಡು ಅದು ಶಕ್ತಿಯಾಗಿ ಪರಿವರ್ತನೆಗೊಳ್ಳಬೇಕಾದರೆ ಅತ್ಯವಶ್ಯಕ. ಆರೋಗ್ಯಕರ ಚರ್ಮ, ಆರೋಗ್ಯಕರ ನರಮಂಡಲಕ್ಕೂ ಇದು ಬೇಕು. ಆರೋಗ್ಯಪೂರ್ಣ ಪುರುಷನ ದೇಹಕ್ಕೆ ದಿನವೂ ೧೬.೫ ಮಿಲಿಗ್ರಾಂ ಹಾಗೂ ಮಹಿಳೆಗೆ ೧೩.೨ ಮಿಲಿಗ್ರಾಂ ವಿಟಮಿನ್‌ ಬಿ೩ ಬೇಕು. ಇದು ಅತಿಯಾದಲ್ಲಿ ಪಿತ್ತಕೋಶಕ್ಕೆ ಹಾನಿಯಾಗುವುದಲ್ಲದೆ, ರಕ್ತದಲ್ಲಿ ಸಕ್ಕರೆಯ ಅಂಶವೂ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಇದರ ಬಗ್ಗೆ ಜಾಗರೂಕತೆಯೂ ಅಷ್ಟೇ ಅವಶ್ಯಕ. ಕೋಳಿ, ಮೀನು, ಮೊಟ್ಟೆ, ಗೋಧಿ, ಹಾಗೂ ಇತರ ಧಾನ್ಯಗಳಲ್ಲಿ ಈ ವಿಟಮಿನ್ ಕಂಡುಬರುತ್ತದೆ.

೪. ವಿಟಮಿನ್‌ ಬಿ೫: ಪ್ಯಾಂಟೋಥೆನಿಕ್‌ ಆಸಿಡ್‌ ಎಂಬ ಹೆಸರಿನ ಈ ವಿಟಮಿನ್‌ ದೇಹಕ್ಕೆ ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬಿನಿಂದ ಶಕ್ತಿ ಉತ್ಪಾದಿಸಲು ಬೇಕಾಗುತ್ತದೆ. ದೇಹದಲ್ಲಿ ಪಿತ್ತಕೋಶ, ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಹಾಗೂ ಸೆಕ್ಸ್‌ ಹಾರ್ಮೋನಿನ ಉತ್ಪತ್ತಿ ಸರಿಯಾಗಿರಲು ಈ ವಿಟಮಿನ್‌ ಬೇಕೇ ಬೇಕು. ಕೋಳಿ, ಮೀನು, ಮೊಟ್ಟೆ ಮಾಂಸಗಳಲ್ಲಿ ಇದು ಹೇರಳವಾಗಿದೆ. ಸಸ್ಯಾಹಾರಿಗಳು ಅಣಬೆ, ಬೆಣ್ಣೆಹಣ್ಣು, ಮೊಸರಿನಿಂದಲೂ ಇದನ್ನು ಪಡೆಯಬಹುದು.

೫. ವಿಟಮಿನ್‌ ಬಿ೬: ಪೈರಿಡಾಕ್ಸಿನ್‌ ಎಂಬ ಹೆಸರಿನ ವಿಟಮಿನ್‌ ಬಿ೬ ದೇಹ ಪ್ರೊಟೀನ್‌ ಹಾಗೂ ಕಾರ್ಬೋಹೈಡ್ರೇಟನ್ನು ಸರಿಯಾಗಿ ಬಳಸಿಕೊಳ್ಳಲು ಬೇಕೇಬೇಕು. ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚು ಮಾಡಲು, ರೋಗ ನಿರೋಧಕ ಶಕ್ತಿ ಹೆಚ್ಚಾಗಲೂ ಇದರ ಅವಶ್ಯಕತೆ ಇದೆ. ಇದರ ಕೊರತೆಯಿಂದ ಅನೀಮಿಯಾ ಹಾಗೂ ಚರ್ಮದ ಸಮಸ್ಯೆಗಳು ಬರಬಹುದು. ಮೀನು, ಮೊಟ್ಟೆ, ಮಾಂಸ, ಸೋಯಾಬೀನ್‌, ಗೋಧಿ, ಓಟ್ಸ್‌, ಬಾಳೆಹಣ್ಣು, ಆಲೂಗಡ್ಡೆ ಹಾಗೂ ಸಿಟ್ರಸ್‌ ಹಣ್ಣುಗಳಲ್ಲಿ ಇದಿದೆ.

೬. ವಿಟಮಿನ್‌ ಬಿ೭: ಬಯೋಟಿನ್‌ ಹೆಸರಿನ ವಿಟಮಿನ್‌ ಬಿ೬ ದೇಹಕ್ಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ಇದು ದೇಹದಲ್ಲಿಯೇ ಉತ್ಪಾದನೆಯೂ ಆಗುತ್ತದೆ. ಇದರ ಕೊರತೆಯಿಂದ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಈಸ್ಟ್‌, ಮೊಟ್ಟೆ, ಚೀಸ್‌ನಲ್ಲಿಯೂ ಈ ವಿಟಮಿನ್‌ ಇದೆ.‌

ಇದನ್ನೂ ಓದಿ: Vitamin D | ನಮಗೇಕೆ ಅಗತ್ಯ ವಿಟಮಿನ್‌ ಡಿ?

೭. ವಿಟಮಿನ್‌ ಬಿ೯: ಫೋಲಿಕ್‌ ಆಸಿಡ್‌ ಹೆಸರಿನ ಇದು ದೇಹದಲ್ಲಿ ಕೆಂಪುರಕ್ತ ಕಣಗಳು ಉತ್ಪಾದನೆಯಾಗಲು ಅತ್ಯಂತ ಅವಶ್ಯಕವಾಗಿರುವ ವಿಟಮಿನ್.‌ ಇದರ ಕೊರತೆಯಿಂದ ರಕ್ತಹೀನತೆ, ಬಾಯಿಹುಣ್ಣು, ಉಸಿರಾಟಕ್ಕೆ ಕಷ್ಟವಾಗುವುದು, ಕೂದಲ ಸಮಸ್ಯೆ, ಚರ್ಮದ ಸಮಸ್ಯೆ, ದುರ್ಬಲ ಉಗುರು ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಗರ್ಭಿಣಿಯರು ಈ ವಿಟಮಿನ್‌ ಸೇವಿಸದಿದ್ದರೆ ಹುಟ್ಟುವ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗಬಹುದು. ಹಸಿರು ಸೊಪ್ಪು ತರಕಾರಿಗಳು, ಬ್ರೊಕೋಲಿ, ಮೊಳಕೆ ಕಾಳುಗಳು, ಕಿಡ್ನಿ ಬೀನ್ಸ್‌, ಬಟಾಣಿ, ಕಿತ್ತಳೆಗಳಲ್ಲಿ ಇದು ಹೇರಳವಾಗಿದೆ.

೮. ವಿಟಮಿನ್‌ ಬಿ೧೨: ಕೋಬಾಲಮಿನ್‌ ಹೆಸರಿನ ವಿಟಮಿನ್‌ ಬಿ೧೨, ವಿಟಮಿನ್‌ ಬಿ ಕಾಂಪ್ಲೆಕ್ಸ್‌ನಲ್ಲಿನ ಅತ್ಯಂತ ಪ್ರಮುಖವಾದ ವಿಟಮಿನ್‌ ಆಗಿದೆ. ಆರೋಗ್ಯಕರ ನರಮಂಡಲ, ರಕ್ತ ಪರಿಚಲನೆಗೆ ಇದು ಅತ್ಯವಶ್ಯಕ. ಇದರ ಕೊರತೆಯಿಂದ ತಲೆಸುತ್ತು, ರಕ್ತಹೀನತೆ, ತೂಕ ದಿಢೀರ್‌ ಕಡಿಮೆಯಾಗುವುದು, ಹಸಿವಾಗದಿರುವುದು ಹಾಗೂ ನರ ಸಂಬಂಧೀ ತೊಂದರೆಗಳು ಬರಬಹುದು. ಮೊಟ್ಟೆ, ಮಾಂಸ, ಡೈರಿ ಉತ್ಪನ್ನಗಳಲ್ಲಿ ಈ ವಿಟಮಿನ್‌ ಹೇರಳವಾಗಿದೆ.

ಅರೋಗ್ಯಕರ ದೇಹಕ್ಕೆ ಬಿ ಕಾಂಪ್ಲೆಕ್ಸ್‌ ಒಳಗಿರುವ ಅಷ್ಟೂ ಎಲ್ಲ ವಿಟಮಿನ್‌ಗಳೂ ಅತ್ಯಗತ್ಯ. ಆದರೆ ವೈದ್ಯರ ಸಲಹೆಯಿಲ್ಲದೆ, ನೇರವಾಗಿ ವಿಟಮಿನ್‌ ಬಿ ಕಾಂಪ್ಲೆಕ್ಸ್‌ ಸೇವಿಸುವುದು ಬೇರೆ ಸಮಸ್ಯೆಗಳಿಗೂ ಕಾರಣವಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ವಿಟಮಿನ್‌ ಬಿ ಹೆಚ್ಚಾಗಿರುವ ಆಹಾರವನ್ನು ಸೇವಿಸುತ್ತಾ ನೈಸರ್ಗಿಕವಾಗಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ.

ಇದನ್ನೂ ಓದಿ: Vitamin E foods: ಚರ್ಮ ಹಾಗೂ ಕೂದಲ ಆರೋಗ್ಯದ ಗುಟ್ಟು ʻವಿಟಮಿನ್‌ ಇʼ ಎಲ್ಲಿಂದ ಬರುತ್ತದೆ?

Exit mobile version