Site icon Vistara News

Sweet Potatoes: ಗೆಣಸಿಗೆ ಮಧುಮೇಹ ನಿಯಂತ್ರಿಸುವ, ಕ್ಯಾನ್ಸರ್ ತಡೆಯುವ ಸಾಮರ್ಥ್ಯವಿದೆ!

Sweet potatoes have the ability to control diabetes and prevent cancer

ಬೆಂಗಳೂರು: ಬಾಯಿಗೆ ರುಚಿ ಹತ್ತಿಸುವ ಸಿಹಿಯಾದ ಗೆಣಸಿನ (Sweet Potatoes) ಕಾಲವಿದು. ಕಾಲಕ್ಕೆ ತಕ್ಕ ಆಹಾರವನ್ನು ಸೇವಿಸಬೇಕು ಎನ್ನುವುದು ಭಾರತೀಯರಲ್ಲಿ ಪ್ರಾಚೀನ ದಿನಗಳಿಂದಲೂ ಚಾಲ್ತಿಯಲ್ಲಿರುವ ತತ್ವ. ಇತ್ತೀಚಿನ ವರ್ಷಗಳಲ್ಲಿ ಹೊತ್ತುಗೊತ್ತಿಲ್ಲದೆ ಸಿಕ್ಕಿದ್ದೆಲ್ಲಾ ತಿನ್ನುವ ರೂಢಿ ಬೆಳೆದು ಬಂದಿದೆ. ಆದರೆ ಚಳಿಗಾಲದಲ್ಲಿ ಬೆಳೆಯುವ ಬೆಳೆಗಳೇ ಆ ಕಾಲಕ್ಕೆ ದೇಹವನ್ನು ಆರೋಗ್ಯಪೂರ್ಣವಾಗಿ ಇಡಬಲ್ಲವು ಎನ್ನುವುದು ನೂರು ಪ್ರತಿಶತ ಸತ್ಯ.
ಗೆಣಸನ್ನು (Sweet Potatoes) ವೈವಿಧ್ಯಮಯ ಅಡುಗೆಗಳಲ್ಲಿ ಉಪಯೋಗಿಸಬಹುದು. ಸುಮ್ಮನೆ ಬೇಯಿಸಿ, ಸುಲಿದು ತಿನ್ನುವುದರಿಂದ ಹಿಡಿದು, ಹೋಳಿಗೆ, ಪಾಯಸ, ಸಾಂಬಾರ್‌, ಪಲ್ಯ, ಅವಿಯಲ್‌, ಬಾಜಿ, ಕೂಟು, ರಾಯ್ತ, ಚಿಪ್ಸ್‌, ಕಟ್ಲೆಟ್‌, ಹಪ್ಪಳ ಮುಂತಾದ ಯಾವುದೇ ಬಗೆಯ ಅಡುಗೆಗೆ ಇದು ಸೈ. ಕೊಂಚ ಸಿಹಿ ರುಚಿ ಇದ್ದರೂ, ಖಾರ ರುಚಿಯ ಅಡುಗೆಗೆ ಸಹ ಇದು ಯೋಗ್ಯವೆನಿಸಿದೆ. ಇವೆಲ್ಲ ಬಾಯಿ ರುಚಿಯ ಮಾತಾಯಿತು. ಆರೋಗ್ಯಕ್ಕೇನು ಲಾಭ ಇದನ್ನು ತಿನ್ನುವುದರಿಂದ ಎನ್ನುವುದನ್ನು ನೋಡೋಣ.

ಮಧುಮೇಹ ನಿಯಂತ್ರಣ

ಇದರ ರುಚಿ ಸಿಹಿಯೇ ಆದರೂ ರಕ್ತದಲ್ಲಿ ಸಕ್ಕರೆಯಂಶವನ್ನು ಏರಿಳಿತ ಮಾಡಿಸುವುದಿಲ್ಲ. ಇದರ ಗ್ಲೈಸೆಮಿಕ್‌ ಸೂಚಿ ಕಡಿಮೆ ಇದ್ದು, ಮಧುಮೇಹಿಗಳಿಗೆ ಇದು ಸೇವಿಸಬಹುದಾದ ಆಹಾರವೆನಿಸಿದೆ. ಇದರಲ್ಲಿ ನಾರಿನಂಶ ಹೇರಳವಾಗಿದ್ದು, ನಿಧಾನವಾಗಿ ಜೀರ್ಣವಾಗಿ ರಕ್ತವನ್ನು ಸೇರುತ್ತದೆ. ಹಾಗಾಗಿ ಇದನ್ನು ತಿಂದಾಕ್ಷಣ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಕೆ ಆಗುವುದಿಲ್ಲ.

ಕ್ಯಾನ್ಸರ್‌ ತಡೆಯುವ ಸಾಮರ್ಥ್ಯ

ಇದರಲ್ಲಿರುವ ಬೀಟಾ ಕ್ಯಾರೊಟಿನ್‌ ಮತ್ತು ಆಂಥೋಸಯನಿನ್‌ಗಳು ದೇಹಕ್ಕೆ ಮಹತ್ವದ ಸತ್ವಗಳನ್ನು ನೀಡುತ್ತವೆ. ದೇಹದಲ್ಲಿ ತೇಲಾಡುವ ಮುಕ್ತ ಕಣಗಳನ್ನು ನಿರ್ಬಂಧಿಸುವ ಸಾಮರ್ಥ್ಯ ಈ ಪೋಷಕಾಂಶಗಳಿಗಿದ್ದು, ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿಯನ್ನು ದೂರ ಮಾಡುತ್ತವೆ. ಅದಲ್ಲದೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವಾದ ಇಂಥ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ ಆಹಾರಗಳ ಸೇವನೆ ಅತಿ ಮುಖ್ಯ.

ಇದನ್ನೂ ಓದಿ: Navya Naveli Nanda: ಆರಾಧ್ಯ ಬಚ್ಚನ್‌ ನನಗಿಂತ ಹೆಚ್ಚು ಬುದ್ಧಿವಂತೆ ಎಂದ ಶ್ವೇತಾ ಬಚ್ಚನ್ ಮಗಳು!

ಪೋಷಕಾಂಶಗಳು ಹೇರಳ

ಇದರಲ್ಲಿ ದೇಹಕ್ಕೆ ಅಗತ್ಯವಾದ ನಾರಿನಂಶ ಭರಪೂರ ಇದೆ. ಇದರಿಂದ ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗಿ, ಕಳ್ಳ ಹಸಿವೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ವಿಟಮಿನ್‌ ಸಿ, ಎ ಮತ್ತು ಹಲವು ರೀತಿಯ ಬಿ ಜೀವಸತ್ವಗಳು ಇದರಲ್ಲಿವೆ. ಪೊಟಾಶಿಯಂ, ಕಬ್ಬಿಣ, ಮೆಗ್ನೀಶಿಯಂನಂಥ ಖನಿಜಗಳು ಸಾಕಷ್ಟಿದ್ದು, ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಇದು ನೀಡುತ್ತದೆ. ಶರೀರದಲ್ಲಿ ಎಲೆಕ್ಟ್ರೊಲೈಟ್‌ ಸಮತೋಲನಕ್ಕೂ ಇದು ನೆರವಾಗುತ್ತದೆ

ತ್ವಚೆ, ಚರ್ಮಕ್ಕೆ ಲಾಭ

ಇದರಲ್ಲಿರುವ ವಿಟಮಿನ್‌ ಅಂಶಗಳಿಂದ ದೃಷ್ಟಿಯನ್ನು ಚುರುಕಾಗಿಸಬಹುದು ಮತ್ತು ತ್ವಚೆಯನ್ನು ಕಾಂತಿಯುಕ್ತಗೊಳಿಸಬಹುದು. ಇದರಲ್ಲಿರುವ ಕೊಲಿನ್‌ ಅಂಶವು ಕಣ್ಣಿಗೆ ಅಗತ್ಯವಾದ ಸತ್ವಗಳನ್ನು ನೀಡಿ, ದೃಷ್ಟಿಯನ್ನು ಕಾಪಾಡುತ್ತದೆ.

ಪಚನಕಾರಿ

ನಾರಿನಂಶ ಹೆಚ್ಚಿರುವುದರಿಂದ ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಿ, ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಾಂಗಗಳು ಚುರುಕಾದರೆ ಶರೀರದಲ್ಲಿ ಅನಗತ್ಯ ಕೊಬ್ಬು ಜಮೆಯಾಗದಂತೆ ತಡೆಯುವುದು ಸುಲಭ. ಈ ಎಲ್ಲಾ ಕಾರಣಗಳಿಂದ ಇದು ತೂಕ ಇಳಿಸುವವರಿಗೂ ಉಪಯುಕ್ತ ತಿನಿಸು.

ರುಚಿಕರ ಖಾದ್ಯ

ಇದು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ ಗಡ್ಡೆ. ಐರೋಪ್ಯ ಸೂಪ ಶಾಸ್ತ್ರಗಳಲ್ಲಿ, ಪೂರ್ವ ದೇಶಗಳ ಅಡುಗೆಗಳಲ್ಲಿ ಸಹ ಇದರ ಬಳಕೆಯಿದೆ. ಕೊರೆಯುವ ಚಳಿಯಿರುವ ದೇಶಗಳಲ್ಲಿ ಹಾಗೂ ದ್ವೀಪ ರಾಷ್ಟ್ರಗಳಲ್ಲಿ ಗಡ್ಡೆ-ಗೆಣಸುಗಳ ಬಳಕೆ ವ್ಯಾಪಕವಾಗಿರುವುದರಿಂದ ರಷ್ಯಾದಿಂದ ಹಿಡಿದು ಹವಾಯ್‌ ದ್ವೀಪಗಳವರೆಗೆ ಇದು ಸರ್ವವ್ಯಾಪಿ. ಇನ್ನು ಭಾರತದ ಎಲ್ಲಾ ಭಾಗಗಳಲ್ಲೂ ಗೆಣಸಿನ ಖಾದ್ಯಗಳು ಜನಪ್ರಿಯ. ಬೇಯಿಸಿ, ಕರಿದು, ಸುಟ್ಟು, ಬೇಕ್‌ ಮಾಡಿ, ಹೆಚ್ಚಿ ಒಗ್ಗರಣೆ ಹಾಕಿ, ರುಬ್ಬಿ ಸ್ಮೂದಿ ಮಾಡಿ- ಹೀಗೆ ನಮ್ಮ ಕಲ್ಪನೆಯ ಯಾವುದೇ ರೀತಿಯಲ್ಲಿ ಇವುಗಳನ್ನು ಅಡುಗೆಯಲ್ಲಿ ಬಳಸಬಹುದು. ಚಳಿಗಾಲದಲ್ಲಿ ಇದರ ಬಳಕೆ ಹೆಚ್ಚು. ಋತುಮಾನಕ್ಕೆ ಸರಿಯಾದ ಆಹಾರವೂ ಹೌದಾಗಿರುವ ಈ ಸತ್ವಶಾಲಿ ಗಡ್ಡೆಯನ್ನು ನಿಯಮಿತವಾಗಿ ತಿನ್ನಿ, ಆರೋಗ್ಯ ವೃದ್ಧಿಸಿಕೊಳ್ಳಿ.

Exit mobile version