ಯಾವಾಗ ನೋಡಿದರೂ ಶೀತ, ನೆಗಡಿ, ಕಫ, ಕೆಮ್ಮು (cold and cough). ಎಷ್ಟು ಔಷಧಿ, ಕಷಾಯ, ಮನೆಮದ್ದುಗಳೆಲ್ಲ ಮಾಡಿ ನೋಡಿಯಾಯಿತು. ಆದರೂ ಕೆಮ್ಮು ಮಾತ್ರ ಹತೋಟಿಗೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿರುವವರು ನಿಮ್ಮ ಸುತ್ತಮುತ್ತಲೇ ಇರಬಹುದು. ಅಥವಾ, ನೀವೇ ಈ ಪರಿಸ್ಥಿತಿಯಲ್ಲಿರಬಹುದು. ಅಥವಾ ನಿಮ್ಮ ಮಕ್ಕಳಿಗೆ ಆಗಾಗ ಹೀಗಾಗುತ್ತಿರಬಹುದು. ಏಷ್ಟು ಬಾರಿ ಕಷಾಯ ಕುಡಿಸಿದರೂ ಅದರ ಪರಿಣಾಮ ಕಾಣುತ್ತಿಲ್ಲವಲ್ಲ ಎಂದೂ ನಿಮಗೆ ಅನಿಸಿರಬಹುದು. ಅವರಿವರು ಹೇಳಿದ ಎಷ್ಟೋ ಮನೆಮದ್ದುಗಳನ್ನು ಪ್ರಯತ್ನಿಸಿರಲೂ ಬಹುದು. ಆದರೂ ಕೆಲವೊಮ್ಮೆ ಜಪ್ಪಯ್ಯ ಅಂದರೂ ಕೆಮ್ಮು, ಶೀತ, ನೆಗಡಿಗಳು ತೊಲಗುವುದೇ ಇಲ್ಲ ಎಂದನಿಸಿದೆಯಾ? ಕೆಮ್ಮಿನಿಂದ ರಾತ್ರಿ ನಿದ್ದೆ ಕಷ್ಟವಾಗುತ್ತಿದೆಯಾ? ಹಾಗಾದರೆ ನಿಮ್ಮ ಈ ಸಮಸ್ಯೆಯ ಮೂಲ ಬೇರೆಯೇ ಆಗಿರಬಹುದೆಂಬುದು ನಿಮಗೆ ಗೊತ್ತೇ?
ಹೌದು. ಕೆಲವೊಮ್ಮೆ ಇಂಥ ಸಮಸ್ಯೆಗಳು ಮೇಲ್ನೋಟಕ್ಕೆ ಬೇರೆಯೇ ಸಮಸ್ಯೆಯಂತೆ ಕಂಡರೂ, ಮೂಲ ಇನ್ನೆಲ್ಲೋ ಇರಬಹುದು. ಹಾಗಾಗಿ, ಇಂಥ ಕೆಮ್ಮು, ಶೀತ, ನೆಗಡಿಗಳು ಪದೇ ಪದೇ ನಿಮ್ಮನ್ನು ಕಾಡುತ್ತಿದೆ, ಕಡಿಮೆಯಾಗುತಿಲ್ಲ ಎಂದರೆ ನಿಮಗೆ ವಿಟಮಿನ್ ಬಿ12 ಕೊರತೆಯೂ (Vitamin B12 deficiency) ಕಾರಣವಾಗಿರಬಹುದು. ಯಾಕೆಂದರೆ, ವಿಟಮಿನ್ ಬಿ೧೨ ಅಂಶವು ಬೆವರು ಹಾಗೂ ಮೂತ್ರದ ಮೂಲಕ ಹೊರಗೆ ಹೋಗುವುದರಿಂದ ಆಗಾಗ ಇವುಗಳ ಕೊರತೆ ಮನುಷ್ಯನಲ್ಲಿ ಕಾಡುತ್ತದೆ. ಇಂಥ ಸಂದರ್ಭ ನಾವು ಬಿ12 ಇರುವ ಆಹಾರಗಳ (Vitamin B12 Foods) ಸೇವನೆ ಹೆಚ್ಚು ಮಾಡಬೇಕು. ಹಾಗಾದರೆ ಬನ್ನಿ, ವಿಟಮಿನ್ ಬಿ12 ಇರುವ ಆಹಾರಗಳು ಯಾವುವು ಎಂಬುದನ್ನು ನೋಡೋಣ.
1. ಮೊಸರು: ಉತ್ತಮ ಪ್ರೊಬಯಾಟಿಕ್ ಕೂಡಾ ಆಗಿರುವ ಮೊಸರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿ12 ಕೂಡಾ ಇದೆ. ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುವುದಷ್ಟೇ ಅಲ್ಲದೆ, ಅಂಗಾಂಶ ಹಾಗೂ ನರ ಬೆಳೆವಣಿಗೆಯಲ್ಲೂ ಸಹಾಯ ಮಾಡುತ್ತದೆ.
2. ಮೊಟ್ಟೆ: ಬೇಯಿಸಿದ ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿ12 ಇರುವುದರಿಂದ ಮೊಟ್ಟೆಯನ್ನು ಕೂಡಾ ಸೇವಿಸುವುದು ಬಹಳ ಉತ್ತಮ. ಮೊಟ್ಟೆ ಪ್ರೊಟೀನ್ ಹಾಗೂ ಕ್ಯಾಲ್ಶಿಯಂನ ಮೂಲವೂ ಹೌದು. ಇಡೀ ದಿನಕ್ಕೆ ಬೇಕಾಗುವ ಶಕ್ತಿಯನ್ನು ನೀಡಿ ರೋಗ ನಿರೋಧಕತೆ ಹೆಚ್ಚು ಮಾಡುವ ಸಾಮರ್ಥ್ಯ ಮೊಟ್ಟೆಯಲ್ಲಿದೆ.
3: ಬೇಳೆಕಾಳುಗಳು: ಒಂದು ಮುಷ್ಠಿ ಬೇಳೆಕಾಳುಗಳನ್ನು ನಿತ್ಯವೂ ತಿನ್ನುವುದು ಒಳ್ಳೆಯದು. ಸಸ್ಯಾಹಾರಿಗಳಿಗೆ ಪ್ರೊಟೀನ್‌ನ ಮುಖ್ಯ ಮೂಲ ಇದೂ ಹೌದು. ಅಷ್ಟೇ ಅಲ್ಲ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ೧೨ ಕೂಡಾ ಇದೆ. ಈಗಾಗಲೇ ನಡೆದಿರುವ ಸಂಶೋಧನೆಗಳ ಪ್ರಕಾರ ಕಡಲೆಕಾಳಿನಲ್ಲಿ ಅಂದರೆ ಚೆನ್ನಾದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ೧೨ ಇರುವುದರಿಂದ ಇದರ ಕೊರತೆಯಿರುವ ಮಂದಿ ಆಹಾರದಲ್ಲಿ ಇದನ್ನು ಸೇರಿಸಬಹುದು.
4. ಬೀಜಗಳು: ನೀವು ಸಸ್ಯೆಹಾರಿಗಳಾಗಿದ್ದಲ್ಲಿ ವಿಟಮಿನ್ ಬಿ12 ಪಡೆಯುವ ಮುಖ್ಯ ಮೂಲಗಳ ಪೈಕಿ ಬೀಜಗಳೂ ಕೂಡಾ ಬಹುಮುಖ್ಯ ಪಾತ್ರ ವಹಿಸುತ್ತವೆ. ಗೋಡಂಬಿ, ಬಾದಾಮಿ, ಸೂರ್ಯಕಾಂತಿ ಬೀಜ, ಎಳ್ಳು, ಅಗಸೆಬೀಜ ಮತ್ತಿತರ ಬೀಜಗಳಲ್ಲಿ ವಿಟಮಿನ್ ಬಿ12 ಹೆಚ್ಚಿನ ಪ್ರಮಾಣದಲ್ಲಿದೆ.
5. ಸಾಲ್ಮನ್: ಸಾಲ್ಮನ್‌ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಹಾಗೂ ವಿಟಮಿನ್ ಬಿ೧೨ ಹೇರಳವಾಗಿರುವುದರಿಂದ ಮಾಂಸಾಹಾರಿಗಳು ಇದನ್ನೂ ಕೂಡಾ ವಿಟಮಿನ್ ಬಿ12ನ ಪ್ರಮುಖ ಮೂಲವಾಗಿ ಸೇವಿಸಬಹುದು.
ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!