Site icon Vistara News

Caffeine effects | ನಿಮ್ಮ ಕಳಾಹೀನ ಚರ್ಮದ ರಹಸ್ಯ ಅತಿಯಾದ ಕಾಫಿ ಸೇವನೆಯೂ ಆಗಿರಬಹುದು!

coffee drinking

ನೀವು ಕಾಫಿ ಪ್ರಿಯರೇ? ಒಂದು ಬಿಸಿಬಿಸಿ ಕಾಫಿ ಇಲ್ಲದಿದ್ದರೆ ನಿಮ್ಮ ಬೆಳಗು ಆರಂಭವಾಗುವುದೇ ಇಲ್ಲವೇ? ಕಾಫಿ ಕುಡಿಯದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆಯೋ? ಕಾಫಿಯಿಲ್ಲದ ಬೆಳಗಿನಲ್ಲಿ ಒಂದು ಎನರ್ಜಿಯೇ ಇಲ್ಲದಂತೆ ಭಾಸವಾಗುತ್ತಿದೆಯಾ? ಹಾಗಾದರೆ, ಕಾಫಿ ಎಂಬ ಚಟಕ್ಕೆ ಅಂಟಿದವರೊಮ್ಮೆ ಇಲ್ಲಿ ಗಮನವಿಟ್ಟು ಕೇಳಿ!

ನಿಮಗೆ ನಿಮ್ಮ ಚರ್ಮ ನುಣುಪಾಗಿ, ಲಕಲಕ ಚಿರ ಯೌವನದಿಂದ ಹೊಳೆಯುತ್ತಲೇ ಇರಬೇಕು ಅನಿಸುತ್ತಿದೆಯಾ? ಆಗಾಗ ಮೊಡವೆಗಳೇಳುವುದರಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ಕನ್ನಡಿಯಲ್ಲಿ ನೋಡಿಕೊಂಡಾಗ ಮುಖ ಕಳಾಹೀನವಾಗಿದೆ ಅನಿಸಿದೆಯೇ? ಆದರೂ ಸಮಸ್ಯೆಯ ಮೂಲ ಏನೆಂದು ನಿಮಗೆ ಅರ್ಥವಾಗುತ್ತಿಲ್ಲವೇ? ಹಾಗಾದರೆ ಅದಕ್ಕೆ ಉತ್ತರ ಇದೂ ಆಗಿರಬಹುದು ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ಹೌದು. ಕಾಫಿ ಕುಡಿಯುವುದು ಚರ್ಮಕ್ಕೂ ಒಳ್ಳೆಯದಲ್ಲ. ಹೆಚ್ಚು ಕೆಫೀನ್‌ಯುಕ್ತ ಆಹಾರಗಳು ಚರ್ಮದ ಸೌಂದರ್ಯವನ್ನು ಹಾಳು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದಂತೆ. ಹಾಗಾದರೆ, ಹೆಚ್ಚು ಕಾಫಿ ಸೇವನೆಯಿಂದ ನಿಮ್ಮ ಚರ್ಮದ ಮೇಲಾಗುವ ಐದು ಕೆಟ್ಟ ಪರಿಣಾಮಗಳೇನು ಎಂಬುದನ್ನು ನೋಡೋಣ.

೧. ಒಣ ಚರ್ಮ: ಕೆಫಿನ್‌ ಯಾವಾಗಲೂ ನೀರು ಆರಿಸುವ ಗುಣವನ್ನು ಹೊಂದಿದ್ದು, ಇದರಿಂದಾಗಿ ಚರ್ಮ ಒಣಗುತ್ತದೆ. ಚರ್ಮದಲ್ಲಿ ನೀರಿನಂಶ ಕಡಿಮೆಯಾಗಿ ಶುಷ್ಕವಾಗುತ್ತದೆ. ಚಳಿಗಾಲದಲ್ಲಿ ಬಿಸಿ ಬಿಸಿ ಕಾಫಿ ಹೆಚ್ಚು ಹೊಟ್ಟೆ ಸೇರುವುದರಿಂದ ಜೊತೆಗೆ ಮೊದಲೇ ಒಣ ಹವಾಮಾನ ಇರುವುದರಿಂದ ಇದು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಚರ್ಮ ಪರೆಪರೆಯಾಗಿ ಕಳಚಿಕೊಳ್ಳುತ್ತದೆ. ಚರ್ಮಕ್ಕೆ ವಯಸ್ಸಾದಂತೆ ಕಾಣಲಾರಂಭಿಸುತ್ತದೆ.

೨. ಮೊಡವೆ: ರೋಸ್ಟೆಡ್‌ ಕಾಫೀ ಬೀನ್‌ಗಳಲ್ಲಿ ಪಾಲಿಫಿನಾಲ್‌ ಎಂಬ ಆಂಟಿ ಆಕ್ಸಿಡೆಂಟ್‌ಗಳು ಇದೆ. ಆದರೂ ಕಾಫಿಯ ಸೈಡ್‌ ಎಫೆಕ್ಟ್‌ಗಳು ಇದರಲ್ಲಿರುವ ಪೋಷಕ ಅಂಶಗಳಿಗಿಂತ ಹೆಚ್ಚು ಎಂಬುದೂ ಸತ್ಯ. ಇದರ ಹೈ ಅಸಿಡಿಟಿ ಗುಣದಿಂದಾಗಿ ರಕ್ತ ಪರಿಚಲನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೆ, ಇದು ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ಅದಕ್ಕೆ ಒದಗಿಸುವಲ್ಲಿ ಹಿಂದೆ ಬೀಳುವುದರಿಂದ ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಇದು ಒತ್ತಡ ಹೆಚ್ಚು ಮಾಡುವ ಹಾರ್ಮೋನಿನ ಪರವಾಗಿ ನಿಲ್ಲುವ ಮೂಲಕ ಒತ್ತಡ ಹೆಚ್ಚು ಮಾಡುತ್ತದೆ. ಮುಖ್ಯವಾಗಿ ಇದು ಮುಖದ ಚರ್ಮದಲ್ಲಿ ಪ್ರತಿಫಲನವಾಗುವುದರಿಂದ, ಸೆಬಮ್‌ ಉತ್ಪಾದನೆಯನ್ನು ಪ್ರಚೋದಿಸುವುದರಿಂದ ಮೊಡವೆಯೂ ಹೆಚ್ಚಾಗುತ್ತದೆ.

೩. ಸುಕ್ಕು: ಕೆಫೀನ್‌ ನಮ್ಮನ್ನು ಅಲರ್ಟ್‌ ಆಗಿರಿಸುವಲ್ಲಿ ಹಾಗೂ ನಮ್ಮ ಎನರ್ಜಿ ಲೆವೆಲ್‌ ಏರಿಸುವಲ್ಲಿ ಸಹಾಯ ಮಾಡುತ್ತದೆಯೇನೋ ನಿಜ. ಆದರೆ, ಇದರಿಂದ ನಮ್ಮ ಹಾರ್ಮೋನಿನ ಸಹಜ ಸಮತೋಲನವೂ ಹದಗೆಡುತ್ತದೆ. ಥೈರಾಯ್ಡ್‌ ಹಾಗೂ ಲಿವರ್‌ ಸಂಬಂಧೀ ಏರುಪೇರುಗಳಾಗುತ್ತವೆ. ಇಡೀ ದೇಹದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಇವೆಲ್ಲವೂ ಮುಖದ ಚರ್ಮದ ಮೇಲೆ ಪ್ರತಿಫಲಿತವಾಗುತ್ತದೆ. ಚರ್ಮದ ಸುಕ್ಕು ಹೆಚ್ಚಾಗುತ್ತದೆ. ಬೇಗ ವಯಸ್ಸಾದಂತೆ ಕಾಣಬಹುದು.

ಇದನ್ನೂ ಓದಿ | Winter Health Care | ಚಳಿಗಾಲದಲ್ಲಿ ತಣ್ಣೀರು ಸ್ನಾನ ಹೃದಯಾಘಾತಕ್ಕೆ ಕಾರಣ ಆಗಬಹುದು; ಹೇಗೆ?

೪. ತುರಿಕೆ: ಸಕ್ಕರೆ, ಹಾಲು ಹಾಕಿದ ಕಾಫಿಯನ್ನೇ ಪದೇ ಪದೇ ಕುಡಿಯುತ್ತಿದ್ದರೆ ಬರುವ ಸಮಸ್ಯೆ ಇದು. ಹೊಟ್ಟೆ ಹಾಳಾಗಿದ್ದರೆ, ಮೊದಲೇ ಚರ್ಮದ ಮೇಲೆ ತುರಿಕೆ ಕಜ್ಜಿಗಳಾಗಿದ್ದರೆ, ಚರ್ಮದಿಂದ ಪರೆಗಳೆದ್ದಂತೆ ಏಳುತ್ತಿದ್ದರೆ, ಮತ್ತೆ ಕೆಫೀನ್‌ಯುಕ್ತ ಕಾಫಿಯನ್ನು ಸೇವಿಸುತ್ತಲೇ ಇರುವುದರಿಂದ ಇದು ಉಲ್ಬಣವಾಗಬಹುದು. ಯಾಕೆಂದರೆ, ಕೆಫೀನ್‌ನಲ್ಲಿ ಇವನ್ನು ಉದ್ರೇಕಗೊಳಿಸಬಲ್ಲ ಅಂಶಗಳಿವೆ.

೫. ಕಪ್ಪು ವರ್ತುಲ: ಕೆಫೀನ್‌ ದೇಹದಲ್ಲಿರುವ ನೀರಿನಂಶವನ್ನು ಆರುವಂತೆ ಮಾಡುವುದರಿಂದ ಚರ್ಮ ಶುಷ್ಕವಾಗುತ್ತದೆ. ಸೂಕ್ಷ್ಮ ಚರ್ಮದ ಭಾಗವಾಗಿರುವ ಕಣ್ಣ ಸುತ್ತಲಿನ ಪ್ರದೇಶದಲ್ಲಿ ಎಲ್ಲಕ್ಕಿಂತ ಮೊದಲು ಇದರ ಸೈಡ್‌ ಎಫೆಕ್ಟ್‌ ಕಾಣಬಹುದು. ಅಂದರೆ, ಕಣ್ಣಿನ ಸುತ್ತ ಕಪ್ಪು ವರ್ತುಲಗಳುಂಟಾಗಬಹುದು. ಮೈಗ್ರೇನ್‌ನಿಂದ ಹಿಡಿದು, ತೂಕ ಹೆಚ್ಚಾಗುವುದು, ಕಿಡ್ನಿ ತೊಂದರೆಗಳು ಮತ್ತಿತರ ಸಮಸ್ಯೆಗಳೂ ಹೆಚ್ಚಾಗಬಹುದು.

ಹಾಗಾದರೆ, ಕಾಫಿ ಕಡಿಮೆ ಮಾಡಬೇಕು ಎಂಬ ಯೋಚನೆ ಇದ್ದರೆ ಕೆಲವು ಪರ್ಯಾಯ ಮಾರ್ಗಗಳ ಕುರಿತು ಮನಸಾರೆ ಪ್ರಯತ್ನಿಸಿದರೆ ಸಾಧ್ಯವಿದೆ. ಕಾಫಿಗೆ ಪರ್ಯಾಯವಾಗಿ ಹರ್ಬಲ್‌ ಚಹಾ ಪ್ರಯತ್ನಿಸಬಹುದು. ಅಥವಾ ಕಷಾಯವೂ ಸರಿಯೇ. ದಿನದಲ್ಲಿ ಇಷ್ಟೇ ಕುಡಿಯುವುದು ಎಂಬ ಮಿತಿಯನ್ನು ಇಡಬಹುದು. ಮನಸ್ಸನ್ನು ಹತೋಟಿಗೆ ತಂದು ಕಾಫಿ ಕಡಿಮೆ ಮಾಡುತ್ತಾ ಬಂದು ನಿಲ್ಲಿಸಬಹುದು. ದಿನನಿತ್ಯ ಕುಡಿವ ದೊಡ್ಡ ಕಪ್‌ ಬದಲಾಗಿ ಸಣ್ಣ ಕಪ್‌ ಬಳಸಿ ಪ್ರಮಾಣ ಕಡಿಮೆ ಮಾಡಬಹುದು. ಮನಸ್ಸಿಟ್ಟು ಪ್ರಯತ್ನಿಸಿದರೆ, ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂಬುದನ್ನು ನೆನಪಿಡಿ!

ಇದನ್ನೂ ಓದಿ | Call Kappi wala | ಒಂದೇ ಕಾಫಿ ಫ್ಲೇವರ್‌ ಕುಡಿದು ಬೋರ್‌ ಆಗಿದ್ಯಾ? ಮಾರುಕಟ್ಟೆಗೆ ಬಂದಿವೆ ಹಲವು ಫ್ಲೇವರ್ಡ್‌ ಕಾಫಿ!

Exit mobile version