Site icon Vistara News

Teeth Care: ಹಳದಿಗಟ್ಟಿದ ಹಲ್ಲನ್ನು ಬಿಳಿಯಾಗಿಸಿ ಫಳಪಳಿಸಲು ಐದೇ ಐದು ಟಿಪ್ಸ್!

tooth and apple

ಪಳಪಳ ಹೊಳೆಯುವ ಬಿಳಿಯಾದ ಹಲ್ಲುಗಳು ಬೇಕು ಎಂಬ ಕನಸು ಯಾರಿಗೆ ಯಾನೇ ಇರಲಿಕ್ಕಿಲ್ಲ ಹೇಳಿ! ಮುಖದ ಸೌಂದರ್ಯ ಇಮ್ಮಡಿಯಾಗುವುದೇ ಚಂದದ ನಗುವಿನಿಂದ. ಚಂದದ ನಗುವಿಗೆ ಭೂಷಣ ಚಂದದ ಹಲ್ಲುಗಳು. ಆದರೆ, ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಹಲ್ಲು ಹಳದಿಗಟ್ಟಿರುವುದು. ಮುಂದಿನ ಸಾಲಿನ ಹಲ್ಲೇ ಹಳದಿಯಾಗಿ, ತಿಂದ ಆಹಾರವೂ ಕೂಡಾ ಮೆತ್ತಿಕೊಂಡು ನಕ್ಕರೆ, ಎದುರಿಗಿದ್ದವರಿಗೆ ಆ ನಗು ಕಿರಿಕಿರಿಯಾಗಲೂ ಬಹುದು. ಇನ್ನೂ ಕೆಲವರಿಗೆ ಅಸಹ್ಯವನ್ನೂ ತರಿಸಬಹುದು. ಹಾಗಾಗಿ ಮುಖದ ಸೌಂದರ್ಯದ ಕಾಳಜಿಯ ಜೊತೆಗೆ ಬಾಯಿಯ ಆರೋಗ್ಯದ (mouth health) ಕಾಳಜಿಯೂ ಅತ್ಯಗತ್ಯ.

ಮುಖ ಎಷ್ಟೇ ಚೆನ್ನಾಗಿದ್ದರೂ, ಬಾಯಿ ಬಿಟ್ಟಾಗ ಅಸಲಿ ಸತ್ಯ ಕಣ್ಣೆದುರು ರಾಚಿ ಎದುರಿಗಿದ್ದವರ ಚೆಹೆರೆಯೇ ಬದಲಾಗಿಬಿಡಬಹುದು. ಹಾಗಾಗಿ, ಆದಷ್ಟೂ ಬಾಯಿಯ ಶುಚಿತ್ವದ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸುವುದು ಮುಖ್ಯವಾಗುತ್ತದೆ. ಮುಖ್ಯವಾಗಿ ಹಲ್ಲು ಹಳದಿಗಟ್ಟಲು 2 ಕಾರಣಗಳಿವೆ. ಹಲ್ಲಿನ ಎನಾಮೆಲ್‌ ದುರ್ಬಲವಾಗುತ್ತಾ ಬರುವುದು ಹಾಗೂ ಕೆಲವು ಆಹಾರಗಳ ಸೇವನೆ. ಹಲ್ಲು ಬಿಳಿಯಾಗುವ ಸಿಕ್ಕಸಿಕ್ಕ ಟೂತ್‌ಪೇಸ್ಟ್‌ಗಳ ಮೊರೆಹೋಗುವ ಬದಲು, ನೈಸರ್ಗಿಕವಾಗಿ ಹಲ್ಲನ್ನು ಸ್ವಚ್ಛ ಹಾಗೂ ಬಿಳಿಯಾಗಿಸಲು (Teeth care, tooth care, dental care) ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ನೋಡೋಣ.

1. ಆಹಾರದಲ್ಲಿ ಬದಲಾವಣೆ: ಹೌದು, ಹೀಗೆ ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಆಹಾರದಲ್ಲಿ ಬದಲಾವಣೆ ಖಂಡಿತವಾಗಿಯೂ ನಿಮ್ಮ ಹಲ್ಲಿನ ಬಿಳುಪಿನ ಮೇಲೆ ಪರಿಣಾಮ ಬೀರುತ್ತದೆ. ಟ್ಯಾನಿನ್‌ ಇರುವ ಆಹಾರಗಳು ಹಾಗೂ ಪೇಯಗಳಾ ವೈನ್‌, ಚಹಾ ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು. ಕಾಫಿ, ಡಾರ್ಕ್‌ ಸೋಡಾಗಳು ಹಾಗೂ ಜ್ಯೂಸ್‌ಗಳೂ ಕೂಡಾ ಹಲ್ಲನ್ನು ಹಳದಿಯಾಗಿಸುತ್ತವೆ. ನಿರಂತರವಾಗಿ ಸಿಗರೇಟು ಸೇವನೆ, ಹೊಗೆಸೊಪ್ಪು ಹಾಗೂ ಕವಳ ಹಾಕುವ ಅಭ್ಯಾಸ ಕೂಡಾ ಹಲ್ಲಿನ ಬಣ್ಣದ ಮೇಲೆ ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ, ಅಸಿಡಿಕ್‌ ಅಂಶವಿರುವ ಆಹಾರಗಳ ಸೇವನೆ ಕೂಡಾ ಹಲ್ಲನ್ನು ಹಳದಿಗಟ್ಟಿಸುತ್ತದೆ. ಹಾಗಾಗಿ ಡಾಕ್ಟರುಗಳೂ ಕೂಡಾ, ಊಟವಾದ ತಕ್ಷಣ ಹಲ್ಲುಜ್ಜುವ ಬದಲು ಊಟದ ನಂತರ ಅರ್ಧ ಗಂಟೆ ಬಿಟ್ಟು ಹಲ್ಲುಜ್ಜುವುದು ಒಳ್ಳೆಯದು ಅನ್ನುತ್ತಾರೆ. ಯಾಕೆಂದರೆ ಊಟದಲ್ಲಿರುವ ಆಸಿಡ್‌ ಅಂಶವು ಹಲ್ಲಿನ ಎನಾಮೆಲ್‌ಗೆ ಹಾನಿ ಮಾಡುವ ಸಂಭವವಿರುವುದರಿಂದ, ಬ್ರಷ್‌ ಮಾಡುವುದರಿಂದ ಮತ್ತೆ ಹಾನಿಯಾಗುವ ಸಂಭವವಿರುತ್ತದೆ.

2. ಆಯಿಲ್‌ ಪುಲ್ಲಿಂಗ್:‌ ಆಯಿಲ್‌ ಪುಲ್ಲಿಂಗ್‌ ಕೂಡಾ ಹಲ್ಲಿನ ಆರೋಗ್ಯ ಹೆಚ್ಚಿಸುತ್ತದೆ. ಇದು ಹಲ್ಲು ಹಾಗೂ ಬಾಯಲ್ಲಿರುವ ಕೊಳೆಯನ್ನೆಲ್ಲ ತೆಗೆಯುತ್ತದೆ. ಬೆಳಗ್ಗೆ ಎದ್ದ ಕೂಡಲೇ ಬ್ರಷ್‌ ಮಾಡಿದ ನಂತರ ಸುಮಾರು ೨೦ ನಿಮಿಷಗಳ ಕಾಲ ಬಾಯಲ್ಲಿ ತೆಂಗಿನೆಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿ ಉಗುಳಿದರೆ ಖಂಡಿತವಾಗಿಯೂ ಹಲ್ಲುಗಳು ಬಿಳಿಯಾಗುತ್ತವೆ. ಹಲ್ಲುಗಳು ಆರೋಗ್ಯಕರವಾಗಿರುತ್ತವೆ.

3. ಬೇಕಿಂಗ್‌ ಸೋಡಾ: ಬೇಕಿಂಗ್‌ ಸೋಡಾದಿಂದ ಹಲ್ಲುಜ್ಜುವ ಮೂಲಕವೂ ಹಲ್ಲನ್ನು ಬಿಳುಪಾಗಿಸಬಹುದು. ಕೆಲವರು ಬೇಕಿಂಗ್‌ ಸೋಡಾ ವನ್ನು ಬಳಸುವುದರಿಂದ ಹಲ್ಲಿನ ವಸಡು ಹಾಗೂ ಎನಾಮೆಲ್‌ಗೆ ತೊಂದರೆಯಾಗಬಹುದು ಎಂದು ಅಭಿಪ್ರಾಯಪಟ್ಟರು, ಹಲವು ಸಂಶೋಧನೆಗಳು ಬೇಕಿಂಗ್‌ ಸೋಡಾವನ್ನು ಬಳಸಬಹುದು ಎಂದಿವೆ. ಆದರೆ ನಿತ್ಯವೂ ಬಳಸುವ ವಸ್ತು ಇದಲ್ಲ.

4. ಹಣ್ಣುಗಳು: ಪಪೈನ್‌ ಹಾಗೂ ಬ್ರೊಮೆಲೈನ್‌ ಎಂಬ ಎರಡು ಬಗೆಯ ಕಿಣ್ವಗಳಿಗೆ ಹಲ್ಲನ್ನು ಬಿಳಿಯಾಗಿಸುವ ತಾಕತ್ತಿದೆ. ಈ ಕಿಣ್ವಗಳು ಪಪ್ಪಾಯಿ ಹಾಗೂ ಅನನಾಸಿನಲ್ಲಿದೆ.

5. ನಾರಿನಂಶವಿರುವ ಆಹಾರವನ್ನು ಜಗಿಯುವುದು: ಹೆಚ್ಚು ನಾರಿನಂಶವಿರುವ ತರಕಾರಿಗಳು ಹಾಗೂ ದ್ವಿದಳ ಧಾನ್ಯಗಳ ಸೇವನೆ ಹಾಗೂ ಜಗಿಯುವ ಮೂಲಕವೂ ಹಲ್ಲು ಬಿಳಿಯಾಗುತ್ತದಂತೆ. ಬೀನ್ಸ್‌, ಬಸಳೆ ಮತ್ತಿತರ ತರಕಾರಿಗಳನ್ನು ಜಗಿಯುವಾಗ ಬಾಯಲ್ಲಿ ಲಾಲಾರಸ ಹೆಚ್ಚು ಉತ್ಪತ್ತಿಯಾಗಿ ಹಲ್ಲಿನ ಸುತ್ತಮುತ್ತ ಇರುವ ಕೊಳೆಯೆಲ್ಲ ಹೊರಟು ಹೋಗುತ್ತದೆ.

ಇದನ್ನೂ ಓದಿ: Health Tips For Menstrual Days: ಆ ದಿನಗಳಲ್ಲಿ ಕಾಡುವ ಹೊಟ್ಟೆ ನೋವಿನಿಂದ ಮಹಿಳೆಯರು ಪಾರಾಗುವುದು ಹೇಗೆ?

Exit mobile version