ಮಳೆ ಹೋಗಿ ಬಿಸಿಲು ಜೋರಾಗುತ್ತಿದೆ. ವಾತಾವರಣದ ದಿಡೀರ್ ಬದಲಾವಣೆಗೆ ನಮ್ಮ ದೇಹ ತುತ್ತಾಗುತ್ತಿದೆ. ಇಂಥ ಹೊತ್ತಿನಲ್ಲಿ ತಾಪ ನಿವಾರಣೆಗೆ ನಿಸರ್ಗದತ್ತವಾಗಿ ನಮಗೆ ಲಭ್ಯವಿರುವ ಅಮೃತವೆಂದರೆ ಅದು ಎಳನೀರು (tender coconut) ಎಂದು ನಾವು ನಿಸ್ಸಂಶಯವಾಗಿ ಹೇಳಬಹುದು. ಯಾಕೆಂದರೆ, ಎಳನೀರಿನಿಂದ ನಮ್ಮ ದೇಹಕ್ಕಾಗುವ ಉಪಯೋಗ (tender coconut benefits) ಒಂದೆರಡಲ್ಲ. ದಣಿದ, ಬಾಡಿದ ದೇಹಕ್ಕೆ ಉಲ್ಲಾಸ, ಚೈತನ್ಯ ನೀಡುವ ಶಕ್ತಿ ಎಳನೀರಿನಲ್ಲಿದೆ. ಎಳನೀರು ದೇಹಕ್ಕೆ ಬೇಕಾದ ನೀರಿನಂಶದ ಕೊರತೆಯನ್ನು ನೀಗಿಸಿ, ಸಾಕಷ್ಟು ಖನಿಜಾಂಶಗಳನ್ನೂ ಪೂರೈಸುವ ಮೂಲಕ ದಿಢೀರ್ ಶಕ್ತಿಯನ್ನು ನೀಡುವ ನೈಸರ್ಗಿಕ ಪೇಯಗಳ (natural drink) ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಅದಕ್ಕಾಗಿಯೇ ಎಳನೀರನ್ನು ಆಗಾಗ ನಮ್ಮ ಆಹಾರಕ್ರಮದಲ್ಲಿ ಸೇರಿಸುವ ಮೂಲಕ ಸಾಕಷ್ಟು ಆರೋಗ್ಯದ ಲಾಭಗಳನ್ನು (health tips) ಪಡೆಯಬಹುದು. ಹಾಗಾದರೆ ಬನ್ನಿ, ಎಳನೀರನ್ನು ಆಗಾಗ ಕುಡಿಯುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳಿವೆ (health guide) ಎಂಬುದನ್ನು ನೋಡೋಣ.
1. ಎಳನೀರಿನಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ (Anti oxidants) ಗಳಿದ್ದು, ಇದು ಫ್ರೀ ರ್ಯಾಡಿಕಲ್ಸ್ ನಿಂದ ದೇಹಕ್ಕೆ ಆಗುವ ಹಾನಿಯಿಂದ ರಕ್ಷಣೆ ನೀಡುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
2. ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್ ಗಳಿದ್ದು, ನೈಸರ್ಗಿಕವಾಗಿ ಲಭ್ಯವಿರುವ ಎನರ್ಜಿ ಡ್ರಿಂಕ್ ಗಳ ಪೈಕಿ ಎಳನೀರು ಅತ್ಯಂತ ಒಳ್ಳೆಯ ಪೇಯ. ಮಾರುಕಟ್ಟೆಯ ಎಲೆಕ್ಟ್ರೊಲೈಟ್ ಗಳಿಗೆ ನೈಸರ್ಗಿಕ ಪರ್ಯಾಯ ಇದಾಗಿದ್ದು, ಇದರಲ್ಲಿ ಬೇರೆ ಎಲ್ಲ ಎಲೆಕ್ಟ್ರೋಲೈಟ್ ಗಳ ಪೈಕಿ ಹೆಚ್ಚು ಪ್ರಮಾಣದಲ್ಲಿ ಪೊಟಾಶಿಯಂ ಇದೆ.
3. ಹೆಚ್ಚು ಕ್ಯಾಲರಿ ಇರುವ ಪೇಯಗಳಾದ, ಸೋಡಾ, ಜ್ಯೂಸ್, ಟೆಟ್ರಾಪ್ಯಾಕುಗಳು ಹಾಗೂ ಏರಿಯೇಟೆಡ್ ಡ್ರಿಂಕ್ ಇತ್ಯಾದಿಗಳಿಗಿಂತ ಇದರಲ್ಲಿ ಕಡಿಮೆ ಕ್ಯಾಲರಿ ಇರುವುದರಿಂದ ಇದನ್ನು ತೂಕ ಇಳಿಸಿಕೊಳ್ಳುವ ಮಂದಿಯೂ ಭಯವಿಲ್ಲದೆ ಕುಡಿಯಬಹುದು. ಇದು ಜೀರ್ಣಕ್ರಿಯೆಗೂ ಸಹಕಾರಿ.
4. ಎಳನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಮೆಗ್ನೀಷಿಯಂ ಹಾಗೂ ಕ್ಯಾಲ್ಶಿಯಂ ಇದೆ. ಕ್ಯಾಲ್ಶಿಯಂ ಮೂಳೆ ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ. ಮೆಗ್ನೀಷಿಯಂ ಮೂಳೆಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
5. ಹೃದಯದ ಸಮಸ್ಯೆ ಇರುವ ಮಂದಿಗೂ ಎಳನೀರು ಒಳ್ಳೆಯದು. ಇದು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡುವ ಮೂಲಕ ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ.
6. ಎಳನೀರಿನಲ್ಲಿ ಡೈಯುರೇಟಿಕ್ ಗುಣಗಳಿರುವುದರಿಂದ ಮೂತ್ರನಾಳದ ಸಮಸ್ಯೆಗಳಿರುವ ಮಂದಿಗೆ ಇದು ಒಳ್ಳೆಯ ಡಿಟಾಕ್ಸ್ ಡ್ರಿಂಕ್. ಇದು ಕಶ್ಮಲಗಳನ್ನು ಹೊರಕ್ಕೆ ಕಳಿಸಿ ಮೂತ್ರನಾಳವನ್ನು ಆರೋಗ್ಯವಾಗಿರಿಸುತ್ತದೆ.
7. ಇದು ಕಿಡ್ನಿಯ ಕಲ್ಲುಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಆದರೆ, ನೆನಪಿಡಿ, ಇದರಲ್ಲಿ ಪೊಟಾಶಿಯಂ ಪ್ರಮಾಣ ಹೆಚ್ಚಿರುವುದರಿಂದ ಕಿಡ್ನಿ ಫೈಲ್ಯೂರ್ ನಂತಹ ಸಮಸ್ಯೆ ಇರುವ ಮಂದಿಗೆ ಅಷ್ಟು ಒಳ್ಳೆಯದಲ್ಲ.
ಇದನ್ನೂ ಓದಿ: Coconut Porridge Benefits: ಎಳನೀರು ಗಂಜಿ ತಿನ್ನುವುದರ ಲಾಭಗಳೇನು?