Site icon Vistara News

Thyroid Health Tips: ಥೈರಾಯ್ಡ್‌ ಸಮಸ್ಯೆ ಎಂಬ ಸಾಮಾನ್ಯ ತೊಂದರೆ: ಆಹಾರಕ್ರಮದಲ್ಲೇ ಪರಿಹಾರವಿದೆ!

thyroid health foods

ನಮ್ಮ ದೇಹದ ಬಹುಮುಖ್ಯವಾದ ಆದರೆ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಂಥಿ ಎಂದರೆ ಅದು ಥೈರಾಯ್ಡ್‌ (Thyroid). ಚಿಟ್ಟೆಯಾಕಾರದ ಈ ಪುಟ್ಟ ಗ್ರಂಥಿ ನಮ್ಮ ದೇಹದ ಹಲವು ಅಂಗಾಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಬೇಕಾದ ಹಾರ್ಮೋನನ್ನು ಸ್ರವಿಸುತ್ತದೆ. ಆಹಾರದ ಜೀರ್ಣಕ್ರಿಯೆ, ಸರಿಯಾದ ನಿದ್ದೆ, ತೂಕದಲ್ಲಿನ ಸಮತೋಲನ, ಭಾವನಾತ್ಮಕ ಏರುಪೇರುಗಳು, ಒತ್ತಡ ಹಾಗೂ ಉದ್ವೇಗದ ಸಮತೋಲನ ಇತ್ಯಾದಿಗಳನ್ನೆಲ್ಲ ಸ್ಥಿಮಿತದಲ್ಲಿ ಸರಿಯಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನೆಲ್ಲವನ್ನೂ ಇದೇ ಗ್ರಂಥಿ ಪರೋಕ್ಷವಾಗಿ ಹೊರುತ್ತದೆ. ಈ ಗ್ರಂಥಿಯ ಅಸಮರ್ಪಕ ಕಾರ್ಯನಿರ್ವಹಣೆಯಿಂದ ದೇಹಾರೋಗ್ಯದ (Thyroid Health guide) ಸಮತೋಲನವೂ ತಪ್ಪುತ್ತದೆ. ಬಹಳಷ್ಟು ಸಾರಿ ಈ ಥೈರಾಯ್ಡ್‌ ಗ್ರಂಥಿಯ ಕಾರ್ಯನಿರ್ವಹಣೆಯ ಪರೀಕ್ಷೆ ಒಂದು ರಕ್ತಪರೀಕ್ಷೆಯಿಂದ ನಾವುಗಳು ಪತ್ತೆಹಚ್ಚಿಕೊಂಡರೂ, ಸಮಸ್ಯೆಯ ಮೂಲವನ್ನು ಅರಿಯಲು ಪ್ರಯತ್ನಿಸುವುದಿಲ್ಲ.  ಥೈರಾಯ್ಡ್‌ ಸಮರ್ಪಕವಾಗಿರಲು, ಉತ್ತಮ ಪೂರಕ ಆಹಾರವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆಯೋ ಎಂಬ ಬಗ್ಗೆ ಯೋಚಿಸುವವರು ಕಡಿಮೆ. ಅದಕ್ಕಾಗಿಯೇ ಇಂದು ಎಲ್ಲರೂ ಅನುಭವಿಸುವ ಸಾಮಾನ್ಯ ಸಮಸ್ಯೆಗಳ ಪೈಕಿ ಥೈರಾಯ್ಡ್‌ ಗ್ರಂಥಿಯ ಸಮಸ್ಯೆಯೂ ಒಂದಾಗಿದೆ! ಹಾಗಾದರೆ ಬನ್ನಿ, ಥೈರಾಯ್ಡ್‌ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸುವ ಜೊತೆಜೊತೆಗೇ, ನಮ್ಮ ಆಹಾರಕ್ರಮದಲ್ಲಿ (Thyroid Health diet) ಕೊಂಚ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಯಾವೆಲ್ಲ ಆಹಾರವನ್ನು ಸೇವಿಸಿದರೆ ಥೈರಾಯ್ಡ್‌ ಆರೋಗ್ಯಕ್ಕೆ ಪೂರಕ (Thyroid Health Tips) ಎಂಬುದನ್ನು ನೋಡೋಣ.

1. ಥೈರಾಯ್ಡ್‌ ಗ್ರಂಥಿ (Thyroid gland) ಉತ್ಪತ್ತಿ ಮಾಡುವ ಥೈರಾಕ್ಸಿನ್‌ ಹಾರ್ಮೋನಿಗೆ ಅತ್ಯಂತ ಅಗತ್ಯವಾಗಿ ಬೇಕಾಗುವುದು ಅಯೋಡಿನ್.‌ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಸಮರ್ಪಕ ಪ್ರಮಾಣದ ಅಯೋಡಿನ್‌ ನಮ್ಮ ದೇಹ ಸೇರುತ್ತಿದೆಯೋ ಎಂಬುದನ್ನು ಗಮನಿಸಿ. ಅಯೋಡಿನ್‌ ಇರುವ ಉಪ್ಪು ಮಾತ್ರವೇ ಅಲ್ಲದೆ, ಸೀವೀಡ್‌ಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಅಯೋಡಿನ್‌ ಇದೆ. ಪೋಷಕಾಂಶಗಳ ಸಾಗರವೇ ಆಗಿರುವ ಸೀವೀಡ್‌ಗಳ ಪೈಕಿ ಕೆಲ್ಪ್‌, ನೊರಿ, ಕೊಂಬು ಮತ್ತಿತರ ಆಹಾರಗಳಲ್ಲಿ ಸಾಕಷ್ಟು ಅಯೋಡಿನ್‌ ಇವೆ.

2. ಥೈರಾಯ್ಡ್‌ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಥೈರಾಕ್ಸಿನ್‌ ಹಾರ್ಮೋನು ನಮ್ಮ ದೇಹದ ಇತರೆ ಭಾಗಗಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಸರಬರಾಜಾಗಬೇಕೆಂದರೆ ಅದಕ್ಕೆ ಪ್ರೊಟೀನ್‌ ಬೇಕು. ಹಾಗಾಗಿ, ಪ್ರೊಟೀನ್‌ಯುಕ್ತ ಆಹಾರ ಸೇವನೆ ಅತ್ಯಂತ ಅಗತ್ಯ. ಮೊಟ್ಟೆ, ಬೀಜಗಳು, ಮೀನು, ಬೇಳೆಕಾಳುಗಳು ಇತ್ಯಾದಿಗಳ ಸೇವನೆ ಒಳ್ಳೆಯದು. ಆದರೆ, ಸೋಯಾದಿಂದ ಮಾಡಿದ ಟೋಫು, ಸೋಯಾ ಹಾಲು, ಸೋಯಾ ಚಂಕ್ಸ್‌ ಹಾಗೂ ಗ್ರಾನ್ಯೂಲ್‌ಗಳ ಪ್ರೊಟೀನ್‌ ಥೈರಾಯ್ಡ್‌ ಸಮಸ್ಯೆಯಿರುವ ಮಂದಿಗೆ ಒಳ್ಳೆಯದಲ್ಲ.

3. ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು, ನವಿಲುಕೋಸು ಇತ್ಯಾದಿ ಕೋಸಿನ ಜಾತಿಗೆ ಸೇರಿದ ತರಕಾರಿಗಳು, ನೆಲಗಡಲೆ, ಮೂಲಂಗಿ, ಸೋಯಾಬೀನ್‌, ಬಸಳೆ ಜಾತಿಗೆ ಸೇರಿದ ಸೊಪ್ಪುಗಳನ್ನು ಆದಷ್ಟು ಕಡಿಮೆ ಸೇವಿಸಿ. ಮುಖ್ಯವಾಗಿ ಹಸಿಯಾಗಿ ಇವನ್ನು ಸೇರಿಸುವುದು ಥೈರಾಯ್ಡ್‌ ಸಮಸ್ಯೆಗೆ ಒಳ್ಳೆಯದಲ್ಲ. ಯಾಕೆಂದರೆ ಇವುಗಳಲ್ಲಿ ಗಾಯ್ಟ್ರೋಜೆನ್‌ ಎಂಬ ರಾಸಾಯನಿಕವಿದ್ದು ವು ದೇಹ ಅಯೋಡಿನ್‌ ಹೀರಿಕೊಳ್ಳುವ ಪ್ರಕ್ರಿಯೆ ತೊಂದರೆ ಉಂಟು ಮಾಡುತ್ತದೆ. ಬೇಯಿಸಿದಾಗ ಈ ರಾಸಾಯನಿಕದ ಸಾಮರ್ಥ್ಯ ಕುಂದುವುದರಿಂದ ಇವುಗಳನ್ನು ಬೇಯಿಸಿ ತಿನ್ನುವುದಕ್ಕೆ ಅಡ್ಡಿಯಿಲ್ಲ.

ಇದನ್ನೂ ಓದಿ: Health Tips: ಆರೋಗ್ಯ ಬೇಕೆ? ಹಾಗಿದ್ದರೆ ತಡಸಂಜೆಯ ಹೊಟ್ಟೆ ತುಂಬಿಸುವ ಸ್ನ್ಯಾಕ್‌ಗೆ ಕಡಿವಾಣ ಹಾಕಿ!

4. ಮುಖ್ಯವಾಗಿ ಮೊಸರು, ಮಜ್ಜಿಗೆ ಮತ್ತಿತರ ಪ್ರೊಬಯಾಟಿಕ್‌ಗಳ ಸೇವನೆ ಥೈರಾಯ್ಡ್‌ಗೆ ಒಳ್ಳೆಯದು. ಬೆಳ್ಳುಳ್ಳಿಯೂ ಕೂಡಾ ಅತ್ಯಂತ ಒಳ್ಳೆಯದು.

5. ಹಾರ್ಮೋನು ಸರಿಯಾಗಿ ಕೆಲಸ ಮಾಡಲು, ದೇಹದಲ್ಲಿ ಕೊಬ್ಬು ಇರುವುದೂ ಕೂಡಾ ಅಗತ್ಯ. ನಿಮ್ಮ ದೇಹದಲ್ಲಿ ಕೊಲೆಸ್ಟೆರಾಲ್‌ ಹಾಗೂ ಕೊಬ್ಬಿಗೆ ಕೊರತೆಯಾದರೆ, ಥೈರಾಯ್ಡ್‌ನ ಕೆಲಸಕ್ಕೂ ತೊಂದರೆಯಾಗುತ್ತದೆ. ಇದರಿಂದ ಹಾರ್ಮೋನಿನಲ್ಲಿ ಏರುಪೇರಾಗುತ್ತದೆ. ಹಾಗಾಗಿ ನೈಸರ್ಗಿಕವಾದ ಒಳ್ಳೆಯ ಕೊಬ್ಬಿರುವ ಆಹಾರ ಸೇವಿಸಿ. ದೇಸೀ ತುಪ್ಪ, ಒಣಬೀಜಗಳು, ಚೀಸ್‌, ಬೆಣ್ಣೆ, ತೆಂಗಿನೆಣ್ಣೆ, ಹಾಲು, ಫ್ಲ್ಯಾಕ್‌ಸೀಡ್‌ ಅಥವಾ ಅಗಸೆಬೀಜ, ಸಿಯಾ ಬೀಜಗಳು, ಮೀನು ಇತ್ಯಾದಿ ಹಿತಮಿತವಾಗಿ ಸೇವಿಸುವುದು ಒಳ್ಳೆಯದು.

6. ಸಕ್ಕರೆಯ ಸೇವನೆಯ ಬಗ್ಗೆ ಯೋಚಿಸಿ. ನೀವೀಗಾಗಲೇ ಮಧುಮೇಹಿಗಳಾಗಿದ್ದರೆ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುವುದು ಅತ್ಯಂತ ಅಗತ್ಯ. ಯಾಕೆಂದರೆ ಇದರ ಪರಿಣಾಮ ಥೈರಾಯ್ಡ್‌ನ ಮೇಲೂ ಆಗುತ್ತದೆ. ಆದಷ್ಟು ಸಕ್ಕರೆಯಿಂದ ದೂರವಿರಿ. ಅಷ್ಟೇ ಅಲ್ಲ, ಕರಿದ ತಿಂಡಿಗಳು, ಸಂಸ್ಕರಿಸಿದ ಆಹಾರಗಳು ಸೇರಿದಂತೆ ಜಂಕ್‌ನಿಂದ ದೂರವಿರಿ. 

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!

Exit mobile version