ಕೆಲವು ಹಳೆಯ ಕಾಲದ ಅಭ್ಯಾಸಗಳು ಎಂದಿಗೂ ಬದಲಾಗುವುದಿಲ್ಲ. ಹೊಸತು ಎಂಥದ್ದೇ ಬಂದರೂ, ಹಳೆಯದ ತೂಕ ಕಡಿಮೆಯಾಗುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಮುಖದ ಕಾಂತಿಗಾಗಿ ಕಡಲೆಹಿಟ್ಟನ್ನು ಬಳಸುವ ಅಭ್ಯಾಸ. ಎಷ್ಟೊ ತಲೆಮಾರುಗಳಿಂದ ಈ ಅಭ್ಯಾಸ ಚಾಲ್ತಿಯಲ್ಲಿದೆ, ಮುಂದೆಯೂ ಇರಲಿದೆ. ಕಾರಣ, ಕಡಲೆಹಿಟ್ಟಿನ ಸಾಮರ್ಥ್ಯವೇ ಅಂಥದ್ದು. ಯಾವುದೇ ರಾಸಾಯನಿಕಗಳಿಲ್ಲ, ಮನೆಯಲ್ಲಿ ತ್ವರಿತವಾಗಿ ಮಾಡಿಕೊಳ್ಳಬಹುದಾದ ಈ ಸೌಂದರ್ಯವರ್ಧಕಕ್ಕೆ ಸಮನಾಗಿ ಬೇರೊಂದಿಲ್ಲ. ಏನಿದೆ ಅಂಥದ್ದು (Tips For Healthy Skin) ಕಡಲೆಹಿಟ್ಟಿನಲ್ಲಿ?
ಕಡಲೆಹಿಟ್ಟು ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ಚರ್ಮದ ಮೇಲಿನ ಮೃತ ಕೋಶಗಳನ್ನು ತೆಗೆದುಹಾಕಿ, ಹೆಚ್ಚಿನ ಎಣ್ಣೆಯಂಶವನ್ನು ತೆಗೆದು, ಹೊಸ ಕೋಶಗಳ ಬೆವಳಣಿಗೆಗೆ ಅಗತ್ಯವಾದ ಕೆಲಸ ಮಾಡುತ್ತದೆ. ಹಾಗಾಗಿ ಕಡಲೆ ಹಿಟ್ಟನ್ನು ನಿಯಮಿತವಾಗಿ ಬಳಸಿದಾಗ ಚರ್ಮ ನಯವಾದಂತಾಗಿ, ಕಾಂತಿ ಹೆಚ್ಚುತ್ತದೆ. ಇದಿಷ್ಟನ್ನೂ ಯಾವುದೇ ರಾಸಾಯನಿಕಗಳಿಲ್ಲದಂತೆ, ನೈಸರ್ಗಿಕವಾದ, ಆರೋಗ್ಯಕರ ವಸ್ತುವಿನಿಂದ ನಾವು ಪಡೆಯಬಹುದಾದ್ದು. ಕ್ಲೆನ್ಸರ್, ಎಕ್ಸ್‌ಫಾಲಿಯೇಟರ್ ಮತ್ತು ಬ್ರೈಟ್ನರ್- ಎಲ್ಲವೂ ಕಡಲೆಹಿಟ್ಟೊಂದರಿಂದಲೇ ಸಾಧಿಸಬಹುದು ನಾವು.
ಇದು ಭಾರತದಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಏಷ್ಯಾ ದೇಶಗಳಲ್ಲಿ ಶತಮಾನಗಳಿಂದ ಬಳಕೆಯಲ್ಲಿ ಇರುವಂಥದ್ದು. ಇದರ ಉರಿಯೂತ ಶಾಮಕ ಗುಣದಿಂದಾಗಿಯೇ ಇದು ಮೊಡವೆಯನ್ನೂ ನಿಯಂತ್ರಿಸಬಲ್ಲದು. ವಾತಾವರಣದ ಧೂಳು, ಹೊಗೆ, ಮಾಲಿನ್ಯಗಳಿಂದ ಮಂಕಾಗುವ ಚರ್ಮಕ್ಕೆ ಕಾಂತಿ ನೀಡುವುದಕ್ಕೆ ಇದು ಒಳ್ಳೆಯ ಮತ್ತು ಸರಳ ಉಪಾಯ. ಇದರಿಂದ ಮಾಡುವ ಫೇಸ್‌ಮಾಸ್ಕ್‌ಗಳು ಸಾಮಾನ್ಯವಾಗಿ ಎಲ್ಲರಿಗೂ ಒಗ್ಗುವಂಥವು. ಹಾಲು, ಮೊಸರು, ಹಣ್ಣಿನ ಪೇಸ್ಟ್‌ಗಳು, ತರಕಾರಿ ರಸಗಳು ಮುಂತಾದ ಯಾವುದನ್ನೇ ಆದರೂ ಕಡಲೆಹಿಟ್ಟಿನೊಂದಿಗೆ ಬಳಸಬಹುದು. ವಾರಕ್ಕೆ 2-3 ದಿನ ಇದನ್ನು ಬಳಸಿದರೆ ಸಾಕಾಗುತ್ತದೆ. ಇದನ್ನು ಅತಿಯಾಗಿ ಬಳಕೆ ಮಾಡಿದರೆ ಚರ್ಮದ ಶುಷ್ಕತೆ ಹೆಚ್ಚಬಹುದು; ಸೂಕ್ಷ್ಮ ಚರ್ಮದವರಿಗೆ ತೊಂದರೆ ಆಗಬಹುದು.
ಫೇಸ್‌ಮಾಸ್ಕ್
ಮೊದಲಿಗೆ ಕಡಲೆಹಿಟ್ಟನ್ನು ಸರಿಯಾದ ವಸ್ತುಗಳೊಂದಿಗೆ ಮಿಶ್ರ ಮಾಡಿ ಪೇಸ್ಟ್ ಸಿದ್ಧ ಮಾಡಿ. ಹಾಲು, ಮೊಸರು, ಗುಲಾಬಿ ಜಲ ಮುಂತಾದ ಯಾವುದೂ ಆಗಬಹುದು. ಇದರಿಂದ ಹದವಾದ ಪೇಸ್ಟ್ ಸಿದ್ಧವಾದ ಮೇಲೆ, ಮುಖಕ್ಕೆ ವೃತ್ತಾಕಾರದಲ್ಲಿ ಹಚ್ಚಿ. ಆದರೆ ತೀರಾ ಉಜ್ಜಬೇಡಿ; ಇದರಿಂದ ಕೆಂಪಾಗಿ ಚರ್ಮಕ್ಕೆ ಕಿರಿಕಿರಿ ಉಂಟಾಗಬಹುದು. ೨೦ ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ನಂತರ ಮುಖ ಒರೆಸದೆ ಗಾಳಿಗೆ ಆರುವುದಕ್ಕೆ ಬಿಡಿ. ನಂತರ ಹಗುರವಾದ ಮಾಯಿಶ್ಚರೈಸರ್ ಹಚ್ಚಿ. ಇದನ್ನು ವಾರದಲ್ಲಿ 2-3 ದಿನ ಮಾಡಿದರೆ ಸಾಕಾಗುತ್ತದೆ.
ಅರಿಶಿನದೊಂದಿಗೆ
ಹರಿದ್ರಾ ಸಹ ಸೌಂದರ್ಯವರ್ಧನೆಗಾಗಿ ಬಳಕೆಯಲ್ಲಿದೆ. 1 ಚಮಚ ಕಡಲೆ ಹಿಟ್ಟಿಗೆ ಚಿಟಿಕೆ ಅರಿಶಿನ, ಅರ್ಧ ಚಮಚ ಜೇನುತುಪ್ಪ ಮತ್ತು ಪೇಸ್ಟ್ ಮಾಡುವುದಕ್ಕೆ ಸಾಕಾಗುವಷ್ಟು ಗುಲಾಬಿ ಜಲ ಹಾಕಿ. ಇದನ್ನು ಮುಖಕ್ಕೆ ಸಮನಾಗಿ ಹಚ್ಚಿ. 20 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಮುಖ ಆರಿದ ನಂತರ ನಿತ್ಯ ಬಳಸುವ ಮಾಯಿಶ್ಚರೈಸರ್ ಹಚ್ಚಿ.
ನಿಂಬೆಯ ಸ್ಕ್ರಬ್
ಒಂದು ಚಮಚ ಕಡಲೆಹಿಟ್ಟನ್ನು 1 ಚಮಚ ಮೊಸರಿನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು ಆರೆಂಟು ಹನಿ ನಿಂಬೆ ರಸ ಹಾಕಿ. ಇದನ್ನು ಒದ್ದೆ ಮುಖಕ್ಕೆ ಹಾಕಿ, ಲಘುವಾಗಿ ಉಜ್ಜಿ. ಇದನ್ನು ಅತಿಯಾಗಿ ಮಾಡಿದರೆ ಚರ್ಮ ಕೆಂಪಾಗುತ್ತದೆ, ಜಾಗ್ರತೆ. ಒಂದೆರಡು ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು.
ಕ್ಲೆನ್ಸರ್
ಒಂದು ಚಮಚ ಕಡಲೆ ಹಿಟ್ಟಿಗೆ ಅರ್ಧ ಚಮಚ ಹಾಲು, ಅರ್ಧ ಚಮಚ ಗುಲಾಬಿಜಲ ಬೆರೆಸಿ ಪೇಸ್ಟ್ ಮಾಡಿ. ಇದನ್ನು ವೃತ್ತಾಕಾರದಲ್ಲಿ ಮುಖಕ್ಕೆ ಹಾಕಿ. ಆದರೆ ಜೋರಾಗಿ ಉಜ್ಜಬಾರದು. ಒಂದೆರಡು ನಿಮಿಷಗಳ ನಂತರ ತೊಳೆಯಿರಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಬಹುದು.
ತರಕಾರಿ-ಹಣ್ಣುಗಳ ಮಾಸ್ಕ್
ಪಪ್ಪಾಯ, ಬಾಳೆಯಣ್ಣು, ಮೆಲನ್‌ಗಳು ಮುಂತಾದ ಯಾವುದೇ ಹಣ್ಣುಗಳನ್ನು ಕಡಲೆಹಿಟ್ಟಿನೊಂದಿಗೆ ಬೆರೆಸಿ ಫೇಸ್‌ಮಾಸ್ಕ್ ತಯಾರಿಸಬಹುದು. ಸೌತೇಕಾಯಿ, ಕ್ಯಾರೆಟ್ ಮುಂತಾದ ತರಕಾರಿಗಳ ರಸವನ್ನು ಕಡಲೆಹಿಟ್ಟಿನೊಂದಿಗೆ ಸೇರಿಸಿ ಮುಖಕ್ಕೆ ಮಾಸ್ಕ್ ಮಾಡಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಇಂಥ ಯಾವುದನ್ನು ಬಳಸುವಾಗಲೂ ನಿಮ್ಮ ಚರ್ಮಕ್ಕೆ ಒಗ್ಗುತ್ತದೆಯೋ ಇಲ್ಲವೊ ಎಂಬ ಅನುಮಾನವಿದ್ದರೆ, ಕೈಮೇಲೆ ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ.
ಇದನ್ನೂ ಓದಿ: Health Tips Kannada: ಕೊಲೆಸ್ಟ್ರಾಲ್ ತಗ್ಗಿಸಲು ಈ ಬೆಳಗಿನ ಪೇಯಗಳಿಂದ ಸಾಧ್ಯ! ಪ್ರಯತ್ನಿಸಿ