Site icon Vistara News

Turmeric Milk: ಅರಿಶಿನ ಹಾಲು ಎಂಬ ಮನೆಮದ್ದನ್ನು ನಿತ್ಯವೂ ಬೇಸಿಗೆಯಲ್ಲಿ ಕುಡಿಯಬಹುದೇ?

Turmeric Milk

ಮನೆಮದ್ದುಗಳ ಪಟ್ಟಿಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲುವುದು ಅರಿಶಿನ. ಸಾಂಬಾರ ಪೆಟ್ಟಿಗೆಯಲ್ಲಿನ ಅರಿಶಿನ ಎಂಬ ಮಸಾಲೆ ನಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗುವ ಯೋಗ್ಯತೆ ಇರುವುದು ಗೊತ್ತೇ ಇದೆ. ಶೀತ ನೆಗಡಿಯಿಂದ ಹಿಡಿದು ಗಾಯವಾದ ಕಾಲಿನವರೆಗೆ ನಮಗೆ ಮೊದಲು ನೆನಪಿಗೆ ಬರುವುದು ಅರಿಶಿನ. ಅದಕ್ಕಾಗಿಯೇ ಬಹುತೇಕರು, ಕುಡಿಯುವ ಹಾಲಿಗೆ ಚಿಟಿಕೆ ಅರಿಶಿನ ಹಾಕಿ ಕುಡಿಯುವ ಅಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು, ಹಲವು ಸಮಸ್ಯೆಗಳಿಂದ ನಮ್ಮನ್ನು ಪಾರು ಮಾಡಲು ಈ ಉಪಾಯ (Health tips) ಒಳ್ಳೆಯದೇ. ಅನೇಕರು ಇದರಿಂದ ಸಾಕಷ್ಟು ಫಲವನ್ನೂ ಕಂಡುಕೊಂಡಿದ್ದಾರೆ. ಆದರೆ, ಬೇಸಿಗೆ ಬಂದೊಡನೆ ಒಂದು ಸಂಶಯ ನಮ್ಮನ್ನು ಸಣ್ಣಗೆ ಕೊರೆಯಲಾರಂಭಿಸುತ್ತದೆ. ಬೇಸಿಗೆಯ ಸಮಯದಲ್ಲಿ ಅರಿಶಿನ ಹಾಲು (Turmeric Milk) ಕುಡಿಯಬಹುದೇ ಬೇಡವೇ ಎಂಬುದೇ ಬಹುತೇಕರ ಸಂಶಯ.

ಈ ಸಂಶಯ ನಿಜ ಕೂಡಾ. ಯಾಕೆಂದರೆ ಆಯುರ್ವೇದದ ಪ್ರಕಾರ ಅರಿಶಿನ ಉಷ್ಣ ಪ್ರಕೃತಿಯನ್ನು ಹೊಂದಿದೆ. ಹೇಳಿ ಕೇಳಿ, ಬೇಸಿಗೆಯ ಉಷ್ಣಕ್ಕೆ ಉಷ್ಣಕಾರಕ ಅರಿಶಿನ ಹೇಗೆ ಸರಿಹೊಂದೀತು ಎಂಬ ಅನುಮಾನ ಸಹಜ ಕೂಡಾ. ಹಾಗಾದರೆ ಬನ್ನಿ, ಬೇಸಿಗೆಯಲ್ಲಿ ಅರಿಶಿನ ಮಾಡುವ ಒಳಿತು ಕೆಡುಕುಗಳನ್ನು ನೋಡೋಣ.

1. ಅರಿಶಿನದ ಹಾಲನ್ನು ನಿತ್ಯವೂ ಕುಡಿಯುವುದರಿಂದ ನಮ್ಮ ಮೆದೋಜೀರಕಾಂಗ ಹೆಚ್ಚು ಮೆದೋರಸ ಉತ್ಪತ್ತಿ ಮಾಡುವಂತೆ ಇದು ಪ್ರೇರೇಪಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

2. ಅರಿಶಿನದಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳಿರುವುದರಿಂದ ಇದನ್ನು ಹಾಲಿನ ಜೊತೆ ಕುಡಿಯುವುದರಿಂದ ದೇಹದ ಒಳಗಿನಿಂದ ಗಾಯ ಬೇಗ ಗುಣವಾಗಲು ಇದು ಪೂರಕ ವಾಥಾವರಣ ನಿರ್ಮಿಸುತ್ತದೆ.

3. ರೋಗ ನಿರೋಧಕತೆ ಹೆಚ್ಚಿಸುತ್ತದೆ. ಹಾಲು ಹಾಗೂ ಅರಿಶಿನ ಎರಡೂ ಆಹಾರಗಳು ಜೊತೆಯಲ್ಲಿ ಬೆರೆತು ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳನ್ನು ನೀಡುತ್ತದೆ. ಇವೆಲ್ಲವೂ ದೇಹ ರೋಗ ನಿರೋಧಕತೆ ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತವೆ.

4. ದೇಹದಲ್ಲಿ ಅಲ್ಲಲ್ಲಿ ಸಂದುಗಳಲ್ಲಿ ನೋವು, ಸೆಳೆತಗಳು ಇದ್ದಲ್ಲಿ ಅರಿಶಿನದ ಹಾಲು ಅವುಗಳ ನೋವಿನ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಹಾಲಿನಲ್ಲಿರುವ ಕ್ಯಾಲ್ಶಿಯಂ ಕೂಡಾ ಮೂಳೆಗಳಿಗೆ ಗಟ್ಟಿತನ ನೀಡುತ್ತದೆ. ಅದಕ್ಕಾಗಿಯೇ, ಹೆಚ್ಚು ಶ್ರಮದಾಯಕ ಕೆಲಸ ಮಾಡಿದಾಗ, ಕಠಿಣ ವ್ಯಾಯಾಮ ಮಾಡಿದಾಗ ಅರಿಶಿನ ಹಾಲನ್ನು ಕುಡಿಯಲು ಹೇಳುತ್ತಾರೆ.

ಇದನ್ನೂ ಓದಿ: Health Tips: ಅತಿಯಾಗಿ ಉಂಡು ಹೊಟ್ಟೆಯುಬ್ಬರವೇ? ಹೊಟ್ಟೆ ಹಗುರಾಗಲು ಹೀಗೆ ಮಾಡಿ!

5. ಎಲ್ಲರಿಗೂ ಗೊತ್ತಿರುವ ಹಾಗೆ ಶೀತ, ನೆಗಡಿಗೆ ಅರಿಶಿನ ಒಳ್ಳೆಯ ಮನೆಮದ್ದು. ಇದು ನಮ್ಮ ದೇಹ ಋತುಗಳಿಗೆ ಅನುಸಾರವಾಗಿ ಅಥವಾ ಋತು ಬದಲಾವಣೆಯ ಸಮಯದಲ್ಲಿ ತುತ್ತಾಗುವ ಶೀತ ನೆಗಡಿಯಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿ ವರ್ತಿಸುತ್ತದೆ.

ಹಾಗಾದರೆ, ಇಷ್ಟೆಲ್ಲ ಒಳ್ಳೆಯ ಗುಣಗಳನ್ನು ಹೊತ್ತು ತರುವ ಅರಿಶಿನದ ಬಗೆಗೆ ಬೇಸಿಗೆಯಲ್ಲಿ ಭಯ ಏಕೆ ಏನ್ನುತ್ತೀರಾ? ಕಾರಣ ಇಷ್ಟೇ. ಆಯುರ್ವೇದದಲ್ಲಿ ಅರಿಶಿನ ಉಷ್ಣ ಪ್ರಕೃತಿಯದೆಂದು ಹೇಳಲಾಗುವುದರಿಂದ ಬೇಸಿಗೆಯ ಸಮಯದಲ್ಲಿ ದೇಹವನ್ನು ಮತ್ತಷ್ಟು ಉಷ್ಣಕಾರಕವಾಗಿಸುವುದು ಬೇಡ ಎಂಬ ಮುಂಜಾಗರೂಕತೆಯಿಂದ ಹಿರಿಯರು ಬೇಸಿಗೆಯಲ್ಲಿ ಅರಿಶಿನದ ಹಾಲು ಕುಡಿಯದಿರಿ ಎಂದು ಹೇಳುತ್ತಿದ್ದರು. ಆದರೆ, ಆಯುರ್ವೇದವು ಅರಿಶಿನವನ್ನು ತ್ರಿದೋಷ ಗುಣವುಳ್ಳದ್ದು ಎಂದೂ ಹೇಳುವುದರಿಂದ, ಅಂದರೆ ವಾತ, ಪಿತ್ತ ಹಾಗೂ ಕಫ ಈ ಮೂರೂ ದೋಷಗಳ ನಡುವೆ ಒಳ್ಳೆಯ ಸಮತೋಲನ ಕಾಯ್ದುಕೊಳ್ಳಲು ಶಕ್ತವಾಗುವ ಆಹಾರ ಎಂದೂ ವಿವರಣೆ ನೀಡುತ್ತದೆ. ಹಾಗಾಗಿ ಅರಿಶಿನದ ಹಾಲು ಬೇಸಿಗೆಯಲ್ಲಿ ಕುಡಿಯಲೇನೂ ಅಡ್ಡಿಯಿಲ್ಲ. ಆದರೆ, ಹಿತಮಿತವಾಗಿದ್ದರೆ ಚೆನ್ನ. ಅತಿಯಾದಲ್ಲಿ ಈ ತ್ರಿದೋಷದ ಸಮತೋಲನ ಏರುಪೇರಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಎಚ್ಚರ ಇದ್ದರೆ ಒಳ್ಳೆಯದು.

ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ

Exit mobile version