Site icon Vistara News

Use of ORS: ಡಿಹೈಡ್ರೇಶನ್‌ ಆದಾಗ ಬಳಸುವ ಒಆರ್‌ಎಸ್‌ ಮನೆಯಲ್ಲೇ ಸಿದ್ಧಪಡಿಸಿಕೊಳ್ಳಬಹುದಾ?

Use of ORS be prepared at home for dehydration

ಬೆಂಗಳೂರು: ನಮ್ಮ ದೇಹಕ್ಕೆ (Use of ORS) ಸದಾ ಸೋಡಿಯಂ, ಪೊಟಾಶಿಯಂ, ಕ್ಯಾಲ್ಶಿಯಂ ಸೇರಿದಂತೆ ಹಲವು ಬಗೆಯ ಎಲೆಕ್ಟರೋಲೈಟ್‌ಗಳು ನಿತ್ಯದ ಆರೋಗ್ಯಕ್ಕೆ ಬೇಕೇಬೇಕು. ಅವು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಸದಾ ಸಮತೋಲನದಲ್ಲಿಟ್ಟಿರುವ ಕೆಲಸವನ್ನು ಮಾಡುತ್ತವೆ. ಜೊತೆಗೆ ಹಲವು ಕೆಲಸಗಳನ್ನೂ ನಿರ್ವಹಿಸುತ್ತವೆ. ಆದರೂ ಕೆಲವೊಮ್ಮೆ ಈ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ. ದೇಹ ನೀರಿನಂಶವನ್ನು ಕಳೆದುಕೊಳ್ಳುತ್ತದೆ. ನಿರ್ಜಲೀಕರಣದ ಸ್ಥಿತಿಯುಂಟಾಗಿ ದೇಹ ವಿಪರೀತ ಬಳಲುತ್ತದೆ. ಆಯಾಸವಾಗುತ್ತದೆ. ವಾಂತಿ, ಬೇದಿಯಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೆ, ನಿತ್ರಾಣವಾಗಿ ಮಲಗಿಬಿಡುತ್ತೇವೆ. ದೇಹದಲ್ಲಿ ಮತ್ತೆ ಚೈತನ್ಯ ತರಲು, ನೀರಿನಂಶವನ್ನು, ಎಲೆಕ್ಟ್ರೋಲೈಟ್‌ ಅನ್ನು ಮರಳಿಸಲು ನಾವು ಬಹುತೇಕರು ಒಆರ್‌ಎಸ್‌ ಸೇವಿಸುತ್ತೇವೆ.

ಓರಲ್‌ ರಿಹೈಡ್ರೇಶನ್‌ ಸಾಲ್ಟ್ಸ್‌ (ಒಆರ್‌ಎಸ್‌) ಹಲವು ಖನಿಜಾಂಶಗಳನ್ನು ಸೇರಿಸಿ ಮಾಡಿದ ಒಂದು ಫಾರ್ಮುಲಾ. ಮೆಡಿಕಲ್‌ ಶಾಪ್‌ಗಳಲ್ಲಿ ಸಿಗುವ ಇದನ್ನು ನಾವು ನೀರಿನ ಜೊತೆ ಸೇರಿಸಿ ಕುಡಿದರೆ, ಡಿಹೈಡ್ರೇಶನ್‌ ಸಮಯದಲ್ಲಿ ಸಮಾಧಾನ ಸಿಗುತ್ತದೆ. ದೇಹಕ್ಕೆ ಮತ್ತೆ ಖನಿಜಾಂಶಗಳು ದೊರೆತು, ಸಮತೋಲನ ಸಾಧ್ಯವಾಗಿ ದೇಹದಲ್ಲಿ ಮತ್ತೆ ಶಕ್ತಿ ಚಿಗಿತುಕೊಳ್ಳುತ್ತದೆ. ಹಾಗಾಗಿಯೇ ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಅವಶ್ಯಕ ಔಷಧಿಗಳ ಪಟ್ಟಿಯಲ್ಲಿ ಸೇರಿಸಿದೆ.
ಆದರೆ ಈ ಒಆರ್‌ಎಸ್‌ ಬಗೆಗೆ ಇಂದಿಗೂ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಬನ್ನಿ, ತಪ್ಪು ತಿಳಿವಳಿಕೆಗಳನ್ನು ಅರಿತುಕೊಂಡು ಸತ್ಯವನ್ನು ತಿಳಿಯೋಣ.

ಇದನ್ನೂ ಓದಿ: Healthcare Workers : ಆರೋಗ್ಯ ಸೇವಕರ ಮೇಲೆ ದಾಳಿಯಾದರೆ 6 ಗಂಟೆಯೊಳಗೆ ಎಫ್​ಐಆರ್​ ದಾಖಲಿಸಿ; ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನ

ಯಾವ ಬ್ರಾಂಡ್‌ ಸೂಕ್ತ?

ಯಾವ ಬ್ರ್ಯಾಂಡ್‌ನ ಒಆರ್‌ಎಸ್‌ ಕುಡಿದರೂ ಸಮಸ್ಯೆ ಪರಿಹಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಹಲವರಲ್ಲಿದೆ. ಆದರೆ ಸತ್ಯ ಬೇರೆಯೇ ಇದೆ. ಎಲ್ಲ ಬಗೆಯ ಓಆರ್‌ಎಸ್‌ನಿಂದಲೂ ಡಿಹೈಡ್ರೇಶನ್‌ ಸಮಸ್ಯೆ ಪರಿಹಾರವಾಗದು. ಕೆಲವು ಬ್ರ್ಯಾಂಡ್‌ಗಳಲ್ಲಿರುವ ಸೊಲ್ಯೂಷನ್‌ಗಳಲ್ಲಿ ಎಲ್ಲ ಬಗೆಯ ಖನಿಜಾಂಶಗಳೂ ಇಲ್ಲ. ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ ಸೇವನೆ ಒಳ್ಳೆಯದು. ಇದರಲ್ಲಿ, ಗ್ಲುಕೋಸ್‌, ಕಾರ್ಬೋಹೈಡ್ರೇಟ್‌, ಸೋಡಿಯಂ, ಪೊಟಾಶಿಯಂ, ಕ್ಲೋರೈಡ್‌ಗಳನ್ನು ಒಂದು ಪರಿಮಾಣದಲ್ಲಿ ಮಿಶ್ರಗೊಳಿಸಲಾಗಿದೆ.

ಮನೆಯಲ್ಲೇ ಮಾಡಬಹುದಾ?

ಎಲೆಕ್ಟ್ರೋಲೈಟ್‌ ಅನ್ನು ಮನೆಯಲ್ಲೇ ನಾವು ಮಾಡಿಕೊಳ್ಳಬಹುದಾದ್ದರಿಂದ ಮೆಡಿಕಲ್‌ ಶಾಪ್‌ನಲ್ಲಿ ಖರೀದಿಸುವ ಅಗತ್ಯವಿಲ್ಲ ಎಂಬ ನಂಬಿಕೆಯಿದೆ. ಆದರೆ ಇದು ತಪ್ಪು ತಿಳುವಳಿಕೆ. ಸಕ್ಕರೆ ಹಾಗೂ ಉಪ್ಪನ್ನು ಸೇರಿಸಿ ಎಲೆಕ್ಟ್ರೋಲೈಟ್‌ ಮಾಡುವುದು ಬಹಳ ಪ್ರಸಿದ್ಧವಾದ ಮನೆಮದ್ದು. ಆದರೆ, ಇದು ಮೆಟಿಕಲ್‌ ಶಾಪ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ನಷ್ಟು ಪರಿಣಾಮಕಾರಿಯಾಗಿ ವರ್ತಿಸದು. ಒಆರ್‌ಎಸ್‌ನಲ್ಲಿ ವೈಜ್ಞಾನಿಕವಾಗಿ ದೇಹಕ್ಕೆ ಅಗತ್ಯವಾಗುವ ಖನಿಜ ಲವಣಗಳನ್ನು ಬೆರೆಸಿ, ನಿರ್ಜಲೀಕರಣ ಸ್ಥಿತಿಗೆ ಅಗತ್ಯವಿರುವಂತೆ ಮಾಡಲಾದ್ದರಿಂದ ಮನೆಯಲ್ಲೇ ತಯಾರು ಮಾಡಿದ ಉಪ್ಪು-ಸಕ್ಕರೆಯ ಎಲೆಕ್ಟ್ರೋಲೈಟ್‌ಗಿಂತ ಖಂಡಿತವಾಗಿಯೂ ಹೆಚ್ಚು ಪರಿಣಾಮಕಾರಿ.

ಒಆರ್‌ಎಸ್‌ ಮಕ್ಕಳಿಗೆ, ಎನರ್ಜಿ/ಸ್ಪೋರ್ಟ್ಸ್‌ ಡ್ರಿಂಕ್‌ಗಳು ದೊಡ್ಡವರಿಗೆ ಎಂಬ ತಪ್ಪು ಅಭಿಪ್ರಾಯವೂ ಬಹಳ ಮಂದಿಯಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ಎನರ್ಜಿ ಪೇಯಗಳಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಅನಾರೋಗ್ಯಕರ. ಇದು ಯಾವುದೇ ಬಗೆಯಲ್ಲಿ ನಿರ್ಜಲೀಕರಣ ಅಂದರೆ ಡಿಹೈಡ್ರೇಶನ್‌ಗೆ ಪರಿಣಾಮಕಾರಿಯಾಗಿ ವರ್ತಿಸದು. ಬೇದಿಗೂ ಇದು ಸೂಕ್ತವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಒಆರ್‌ಎಸ್‌ಗಿಂದ ಸೂಕ್ತವಾದ ಪೇಯ ಬೇರೆ ಯಾವುದೂ ಇಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ ನಿರ್ಜಲೀಕರಣ ಸಮಸ್ಯೆ ಬಂದಾಗ ಒಆರ್‌ಎಸ್‌ ಕುಡಿಯುವುದು ಅತ್ಯಂತ ಒಳ್ಳೆಯದು.

ಪ್ರವಾಸದ ಸಂದರ್ಭವೂ ಸೇರಿದಂತೆ, ಎಲ್ಲ ಸಮಯದಲ್ಲೂ ಇದನ್ನು ನಿಮ್ಮ ಜೊತೆ ತುರ್ತು ಚಿಕಿತ್ಸೆಯ ಔಷಧಿಯ ಡಬ್ಬದಲ್ಲಿ ನೀವು ಸದಾ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯದು. ಪ್ರವಾಸದ ಸಂದರ್ಭ ಇದು ಅತ್ಯಂತ ಅಗತ್ಯವಾಗಿ ಬೇಕಾಗುವ ಔಷಧಿಗಳಲ್ಲಿ ಒಂದು ಎಂಬುದನ್ನು ಸದಾ ನೆನಪಿಡಿ.

Exit mobile version