ಭಾರತೀಯ ಅಡುಗೆಮನೆಯೆಂಬ ಖಜಾನೆಯ ತಾಕತ್ತೇ ಇದು. ಇಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲವೂ ಇದೆ. ಆಯಾ ಕಾಲಕ್ಕನುಗುಣವಾಗಿ ದೇಹವನ್ನು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಸರಿಯಾದ ಆರೋಗ್ಯ ಕಾಪಾಡಲು ಬೇಕಾದ ನಮ್ಮ ಒಂದೇ ಒಂದು ಮಸಾಲೆ ಡಬ್ಬಿಯಲ್ಲಿದೆ! ನಮ್ಮ ಹಿರಿಯರು ತೋರಿದ ಹಲವು ಪರಂಪರಾಗತ ಶೈಲಿ ನಿತ್ಯ ಬದುಕಿನಲ್ಲಿ ಆರೋಗ್ಯವನ್ನೇ ತರುತ್ತದೆ. ಇವುಗಳಲ್ಲಿ ಒಂದು ಕೇಸರಿ.
ಅಂದಹಾಗೆ, ಇಲ್ಲಿ ನಾವು ಯಾವುದೋ ಬಹುಚರ್ಚಿತ ಸಿನಿಮಾ ಹಾಡಿನ ಬಗ್ಗೆ ಮಾತಾಡುತ್ತಿಲ್ಲ. ನಾವು ಹೇಳಲು ಹೊರಟಿರುವುದು ತೆಳ್ಳನೆಯ ಎಳೆಗಳ, ಹೂವಿನಿಂದ ಹೊರತೆಗೆದ ಮೂರೇ ಮೂರು ಎಳೆಯೆಂಬ ಅತ್ಯಮೂಲ್ಯ ಸುಗಂಧವಿರುವ ಕೇಸರಿಯ ಬಗೆಗೆ. ಮೂರ್ನಾಲ್ಕು ಉದುರಿಸಿ ಅಡುಗೆ ಮಾಡಿದರೆ, ಆಹಾ ಎನ್ನುವ ದಿವ್ಯ ಅನುಭೂತಿಯ ಸ್ವಾದ ನೀಡುವ ಈ ಕೇಸರಿ, ಎಲ್ಲರ ಅಡುಗೆಮನೆಯಲ್ಲಿ ಸಿಗುವ ನಿಧಿ. ಭಾರತದ ಕಾಶ್ಮೀರದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ಕೇಸರಿಯೆಂಬ ಈ ಮಸಾಲೆ ಪದಾರ್ಥ, ಕೇವಲ ಅಡುಗೆಮನೆಯ ಸಾಥಿಯಷ್ಟೇ ಅಲ್ಲ. ನಮ್ಮ ಆರೋಗ್ಯದ ಸಾಥಿಯೂ ಕೂಡಾ. ಶ್ರೀಮಂತರು ಮಾತ್ರ ಬಳಸುವ ದುಬಾರಿ ಮಸಾಲೆಯೆಂಬ ಹೆಸರು ಹೊಂದಿದ, ದುಬಾರಿಯೂ ಆಗಿರುವ ಕೇವಲ ಪಾಯಸ, ಸಿಹಿತಿಂಡಿಗಳಲ್ಲಷ್ಟೇ ಸಾಮಾನ್ಯವಾಗಿ ಬಳಸುವ ಕೇಸರಿ ನಿತ್ಯೋಪಯೋಗಿಯೂ ಹೌದು. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ.
ತಲೆತಲಾಂತರಗಳಿಂದಲೂ ಬಳಸಲಾಗುತ್ತಿರುವ, ಕ್ರಿಸ್ತಪೂರ್ವದಲ್ಲೇ ಬಳಕೆಮಾಡಿದ ಉದಾಹರಣೆಯಿರುವ ಕೇಸರಿ, ಮೊಘಲ್ ದೊರೆಗಳ ಅತ್ಯಂತ ಪ್ರಿಯವಾದ ವಸ್ತು. ಇಂತಹ ಕೇಸರಿ, ಜ್ವರ, ಶೀತ, ಕೆಮ್ಮು, ಅಸ್ತಮಾ, ಹೃದಯದ ಕಾಯಿಲೆ, ಸ್ತ್ರೀಯರ ಮುಟ್ಟಿನ ತೊಂದರೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧಿಯೂ ಹೌದು. ಅಷ್ಟೇ ಅಲ್ಲ ಲೈಂಗಿಕ ಜೀವನ ಸಮೃದ್ಧವಾಗಿರಲೂ ಕೇಸರಿಯ ಪಾತ್ರ ದೊಡ್ಡದಂತೆ. ಕೇವಲ ಇಷ್ಟೇ ಅಲ್ಲ. ಕೇಸರಿ ಸೌಂದರ್ಯ ವರ್ಧಕವೂ ಹೌದು. ಇತಿಹಾಸಕಾರರೇ ಹೇಳಿದಂತೆ ತಲೆತಲಾಂತರದಿಂದಲೂ ರಾಣಿಯರು ಇದನ್ನು ತಮ್ಮ ನಿತ್ಯದ ಸೌಂದರ್ಯವರ್ಧಕವಾಗಿಯೂ ಬಳಸುತ್ತಿದ್ದರು. ಹಿಂದಿನ ಕಾಲದಲ್ಲಿ ಗರ್ಭಿಣಿ ಸ್ತ್ರೀಯರಿಗೆ ನಿತ್ಯ ಹಾಲಿನಂದಿಗೆ ಕೇಸರಿ ಹಾಕಿ ಕುಡುಸಿದರೆ ಹುಟ್ಟುವ ಮಗು ಆರೋಗ್ಯಯುತವಾಗಿ ಅಷ್ಟೇ ಸೌಂದರ್ಯದಿಂದ ಕೂಡಿರುತ್ತದೆ ಎಂಬ ನಂಬಿಕೆಯಿತ್ತು. ಇದಕ್ಕಾಗಿ ಹಿರಿಯರು ಇದನ್ನು ತಪ್ಪದೆ ಮಾಡುತ್ತಿದ್ದರು ಕೂಡಾ. ಇಷ್ಟೇ ಅಲ್ಲದೆ ಇದು ಮಾನಸಿಕ ಒತ್ತಡ ನಿವಾರಕವಾಗಿಯೂ, ಅತ್ಯುತ್ತಮ ಪರಿಮಳ ದ್ರವ್ಯಗಳಲ್ಲೂ ಬಳಕೆಯಾಗುತ್ತದೆ. ಕೇಸರಿಯಲ್ಲಿ ಸಾಕಷ್ಟು ಜೀವಸತ್ವಗಳೂ, ಆಂಟಿ ಆಕ್ಸಿಡೆಂಟ್‌ಗಳೂ, ಕಬ್ಬಿಣ ಸತ್ವ, ಪೊಟಾಶಿಯಂ ಹೇರಳವಾಗಿದೆ.
ಹಾಗಾದರೆ ಕೇಸರಿ ಒಳ್ಳೆಯದೆಂದು ಬೇಕಾಬಿಟ್ಟಿ ಬಳಸಬಹುದೇ? ದಿನಕ್ಕೆ ಎಷ್ಟು ಬಳಸಬಹುದು ಹಾಗೂ ಯಾಕೆ ಬಳಸಬೇಕು ಎಂಬೆಲ್ಲ ಸಂದೇಹಗಳು ಸಾಮಾನ್ಯ. ಕೇಸರಿಯ ಪ್ರಯೋಜನ ಪಡೆಯಲು ಸಾಮಾನ್ಯ ಆರೋಗ್ಯವಂತ ಮನುಷ್ಯ ದಿನಕ್ಕೆ ಮೂರರಿಂದ ಐದು ಎಳೆಗಳನ್ನು ಹಾಲಿನೊಂದಿಗೆ ತೆಗೆದುಕೊಳ್ಳಬಹುದಂತೆ. ಇದಕ್ಕಿಂತ ಹೆಚ್ಚು ಸೇವನೆ ಒಳ್ಳೆಯದಲ್ಲ.
ಕೇಸರಿ ನಿತ್ಯ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳು ಇಂತಿವೆ.
೧. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ರೈಬೋ ಫ್ಲೇವಿನ್ ಅತ್ಯಂತ ಶ್ರೀಮಂತವಾಗಿರುವ ಕೇಸರಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
೨. ಶೀತ, ಜ್ವರಕ್ಕೆ ರಾಮಬಾಣ: ಚಳಿಗಾಲ ಮಳೆಗಾಲದಲ್ಲಿ ದಿಡೀರ್ ವಕ್ಕರಿಸುವ ಶೀತ, ಜ್ವರ, ತಲೆನೋವು, ಕೆಮ್ಮುಗಳಂತಹ ತೊಂದರೆಗಳಿಗೆ ಕೇಸರಿ ರಾಮಬಾಣ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳಿಂದ ದೇಹವನ್ನು ರಕ್ಷಿಸುತ್ತವೆ.
೩. ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ: ಕೇಸರಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಪಚನಕ್ರಿಯೆಯನ್ನು ವೃದ್ಧಿಸಿ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.
೪. ನೆನಪಿನ ಶಕ್ತಿಗೆ ಒಳ್ಳೆಯದು: ಕೇಸರಿಯಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದಂತೆ. ಇದರಲ್ಲಿರುವ ಕ್ರೋಸಿನ್ ಹಾಗೂ ಕ್ರೋಸೆಟಿನ್ ಎಂಬ ಎರಡು ಬಗೆಯ ರಾಸಾಯನಿಕಗಳು ಜ್ಞಾಪಕ ಶಕ್ತಿಗೆ ಸಹಾಯ ಮಾಡುತ್ತವೆ.
೫. ಹೃದಯದ ಸಮಸ್ಯೆಗೆ ಪರಿಣಾಮಕಾರಿ: ಕೇಸರಿ ಹೃದಯಕ್ಕೆ ಒಳ್ಳೆಯದಂತೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ಕೊಲೆಸ್ಟೆರಾಲ್ ಸಮತೂಕದಲ್ಲಿರುವಂತೆ ನೋಡಿಕೊಂಡು ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತರುತ್ತದೆ.
ಕೇಸರಿ ಟೀ ಹೀಗೆ ಮಾಡಿ: ಒಂದು ಕಪ್ ನೀರು ಕುದಿಸಿ. ಈಗ ಒಲೆಯ ಉರಿಯನ್ನು ಸಿಮ್ ಮಾಡಿ ಎರಡೇ ಎರಡು ಕೇಸರಿ ಎಳೆಯನ್ನು ಇದಕ್ಕೆ ಹಾಕಿ. ಒಂದು ಅಥವಾ ಎರಡು ನಿಮಿಷ ಚೆನ್ನಾಗಿ ಕುದಿಸಿ. ಈಗ ಇದನ್ನು ಸೋಸಿ, ಇದಕ್ಕೊಂದು ಚಮಚ ಜೇನುತುಪ್ಪ ಸೇರಿಸಿ ಇದನ್ನು ಬಿಸಿಬಿಸಿಯಾಗಿಯೇ ಹೀರಿ!
ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ