Site icon Vistara News

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Exit mobile version