ಬೆಂಗಳೂರು: ನವೆಂಬರ್ ತಿಂಗಳು ಬಂದರೆ ಮೈ ನಡುಗಿಸುವ ಚಳಿಯು ಜನರ ಆರೋಗ್ಯದಲ್ಲಿ ಏರುಪೇರಾಗಿಸುತ್ತದೆ. ಎಷ್ಟೇ ಗಟ್ಟಿಮುಟ್ಟಾಗಿದ್ದವರಿಗೂ ಕೆಮ್ಮು, ನೆಗಡಿ, ಶೀತ ಕಾಡಲು ಆರಂಭವಾಗುತ್ತದೆ. ಒಂದೆರಡು ದಿನ ಮಾತ್ರೆ ನುಗ್ಗಿ, ಸಿರಪ್ ಕುಡಿದರೆ ಸರಿಹೋಗುತ್ತೆ ಎಂದು ಗೂಗಲ್ ಸರ್ಚ್ ಮಾಡಿ ಔಷಧ ತಗೊಂಡರೆ, ಎಡವಟ್ಟು ಆಗುವುದು ಗ್ಯಾರೆಂಟಿ. ಯಾಕಂದರೆ ನಗರದಲ್ಲಿ ಡೆಂಗ್ಯೂ ಜತೆ ಜತೆಯಲ್ಲೇ ಶೀತಜ್ವರದ (Influenza) ಮಾದರಿಯ ಕಾಯಿಲೆ (Viral fever) ಹೆಚ್ಚಾಗುತ್ತಿದೆ.
ಕಳೆದ 2 ವಾರದಿಂದ ಉಸಿರಾಟದ ಸಮಸ್ಯೆಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷಕ್ಕಿಂತ ತುಸು ಹೆಚ್ಚಿನ ಪ್ರಮಾಣದಲ್ಲೇ ಇನ್‌ಫ್ಲುಯೆನ್ಜಾ ಮಾದರಿಯ ಸೋಂಕು ನಗರದಲ್ಲಿ ಹೆಚ್ಚಾಗಿದೆ. ಒಂದು ಕಡೆ ಮನೆಯಲ್ಲಿರುವ ಹಿರಿಯರ ಆರೋಗ್ಯವು ವಾತಾವಾರಣ ಬದಲಾವಣೆಯಿಂದ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪುಟ್ಟ ಮಕ್ಕಳಲ್ಲೂ ಉಸಿರಾಟದ ಸಮಸ್ಯೆ ತೀವ್ರವಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಯಾದ ಕೆ.ಸಿ ಜನರಲ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಒಪಿಡಿಗಳಲ್ಲೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ದೂರದ ಚೀನಾದಿಂದ ಮತ್ತೆ ನಗರಕ್ಕೆ ವೈರಸ್ ಭೀತಿ?
ದೂರದ ಚೀನಾದಲ್ಲಿ ಮತ್ತೆ ಫ್ಲೂ ಖಾಯಿಲೆ ಆರಂಭವಾಗಿದೆ. ಕೋವಿಡ್ ವೇಳೆ ವಿಧಿಸಲಾಗಿದ್ದ ನಿಯಮಗಳನ್ನು ತೆರವು ಮಾಡಿರುವುದರಿಂದ ಜನರ ಓಡಾಟ ಏಕಾಏಕಿ ಹೆಚ್ಚಾಗಿದೆ. ಇದ್ದರಿಂದಾಗಿಯೇ ಸೋಂಕಿನ ಪ್ರಮಾಣ ಚೀನಾದಲ್ಲಿ ಹೆಚ್ಚಾಗಿರಬಹುದು ಎಂದು ವೈದ್ಯರ ವಿಮರ್ಶೆಯಾಗಿದೆ. 4 ವರ್ಷಗಳ ಹಿಂದೆ ಕೋವಿಡ್ ಪ್ರಪಂಚಕ್ಕೆ ಹರಡಿದಂತೆ ಈ ಬಾರಿಯೂ ಹರಡಿಬಿಟ್ಟರೆ ಎಂಬ ಆತಂಕ ಶುರುವಾಗಿದೆ. ಒಂದು ವೇಳೆ ಇಲ್ಲಿ ಹರಡಿದರೂ ಪರಿಸ್ಥಿತಿಯನ್ನು ಎದುರಿಸಲು ನಮ್ಮಲ್ಲಿ ಸಾಕಷ್ಟು ನುರಿತ ವೈದ್ಯರಿದ್ದಾರೆ ಎಂದು ವೈದ್ಯರು ಅಭಯ ನೀಡಿದ್ದಾರೆ.
ಉಸಿರಾಟದ ಸಮಸ್ಯೆ ಇದ್ದರೆ ನಿರ್ಲಕ್ಷ ಬೇಡ
ನವೆಂಬರ್ ಹಾಗು ಡಿಸೆಂಬರ್ ತಿಂಗಳಲ್ಲಿ ವೈರಾಣುಗಳು ರೂಪಾಂತರ ಆಗುವ ಕಾಲವಿದು. ಹೀಗಾಗಿ ಒಂದೆರಡು ದಿನಕ್ಕಿಂತ ಹೆಚ್ಚು ಕೆಮ್ಮು, ನೆಗಡಿ ಹಾಗು ಶೀತ ಇದ್ದಲ್ಲಿ ವೈದ್ಯರನ್ನೇ ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ. ನಗರದಲ್ಲಿ ಫ್ಲೂ ಪ್ರಕರಣಗಳು ಮಾತ್ರವಲ್ಲ ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚಾಗಿದೆ. ಯಾವ ಕಾರಣದಿಂದ ನಮ್ಮ ಆರೋಗ್ಯ ಹದಗೆಟ್ಟಿದೆ ಎಂಬುದನ್ನು ವೈದ್ಯರಿಂದ ಖಾತ್ರಿಪಡಿಸಿಕೊಳ್ಳಿ, ಅದು ಬಿಟ್ಟು ಗೂಗಲ್ ಮೊರೆ ಹೋಗಬೇಡಿ ಎಂದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.