ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದ ಜನರು ಹೈರಾಣಾಗಿದ್ದಾರೆ. ಸಾಂಕ್ರಾಮಿಕ ಜ್ವರದಿಂದ (Viral fever) ತತ್ತರಿಸಿರುವ ಗ್ರಾಮಸ್ಥರಿಗೆ, ಗ್ರಾಮದ ದೇವಸ್ಥಾನ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಡೀ ಗ್ರಾಮದಲ್ಲಿ ಎಲ್ಲರಿಗೂ ಜ್ವರ ಕಾಣಿಸಿಕೊಂಡಿದ್ದು, ಮೈ ಕೈ ನೋವಿನಿಂದ ಹಾಸಿಗೆ ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರಬೆಂಚಿ ಗ್ರಾಮದಲ್ಲಿ ಸುಮಾರು 1732 ಜನಸಂಖ್ಯೆ ಇದೆ. 15 ದಿನಗಳಿಂದ ಜನರು ಜ್ವರದಿಂದ ಬಳಲುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮಕ್ಕೆ ಕುಷ್ಟಗಿ ತಹಸೀಲ್ದಾರ್ ರವಿ ಅಂಗಡಿ ಭೇಟಿ ನೀಡಿದ್ದಾರೆ. ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಪರಿಶೀಲಿಸಿದರು.
ಗ್ರಾಮದಲ್ಲಿ ಹೆಚ್ಚಾಗಿರುವ ವೈರಲ್ ಫೀವರ್ ಕುರಿತು ಟಿಎಚ್ಓ ಅವರಿಂದ ಮಾಹಿತಿ ಪಡೆದರು. ಇದೇ ವೇಳೆ ತಹಸೀಲ್ದಾರ್ ರವಿ ಅಂಗಡಿ ಎದುರು ಗ್ರಾಮಸ್ಥರು ಗ್ರಾಮದ ನೈರ್ಮಲ್ಯ, ನೀರಿನ ಸಮಸ್ಯೆ ಕುರಿತು ಅಳಲು ತೋಡಿಕೊಂಡರು. ನಂತರ ಗ್ರಾಮದಲ್ಲಿರುವ ರೋಗಿಗಳನ್ನು ತಾಲೂಕಾಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದರು.
ನೆರೆಬೆಂಚಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗರಾಜು ಭೇಟಿ ನೀಡಿ ಪರಿಶೀಲಿಸಿದ್ದು, ಜ್ವರ ಪೀಡಿತರಲ್ಲಿ ಕೆಲವರನ್ನು ಕುಷ್ಟಗಿ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಇಲ್ಲಿಯವರೆಗೂ 112 ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಜ್ವರ ಪೀಡಿತರ ರಕ್ತಪರೀಕ್ಷೆಯಲ್ಲಿ ಒಬ್ಬರಿಗೆ ಚಿಕ್ಯೂನ್ ಗುನ್ಯಾ ಇರುವುದು ದೃಢವಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ