Site icon Vistara News

Vitamin D: ದೇಹಕ್ಕೆ ಬೇಕಾದ ವಿಟಮಿನ್‌ ಡಿ ಪಡೆಯುವುದು ಹೇಗೆ?

Vitamin D Food

ನಮ್ಮ ಮೂಳೆಗಳು ಗಟ್ಟಿಮುಟ್ಟಾಗಿರಬೇಕೆಂದರೆ ಕ್ಯಾಲ್ಶಿಯಂ ಜತೆಜತೆಗೆ ವಿಟಮಿನ್‌ ಡಿ (Vitamin D) ಸಹ ಬೇಕು. ದೇಹದ ಇನ್ಸುಲಿನ್‌ ಉತ್ಪತ್ತಿ ಮತ್ತು ರೋಗನಿರೋಧಕ ಶಕ್ತಿಯ ವೃದ್ಧಿಯಲ್ಲೂ ವಿಟಮಿನ್‌ ಡಿ ಕೈವಾಡವಿದೆ ಎಂಬಲ್ಲಿಗೆ ನಮ್ಮ ದೇಹಕ್ಕಿದು ಅಗತ್ಯವಾಗಿ ಬೇಕು ಎಂದಾಯಿತು. ಆದರೆ ತಜ್ಞರ ಪ್ರಕಾರ, ಭಾರತದಲ್ಲಿ ಶೇ. 70ಕ್ಕೂ ಹೆಚ್ಚು ಮಂದಿಗೆ ಡಿ ಜೀವಸತ್ವದ ಕೊರತೆಯಿದೆ. ಸೂರ್ಯನ ಬೆಳಕಿನಿಂದ ಬಿಟ್ಟಿಯಾಗಿ ದೊರೆಯುವ ಸತ್ವವೂ ಭಾರತದಂಥ ಉಷ್ಣವಲಯದ ದೇಶದಲ್ಲಿ ಕೊರತೆಯೇ? ಯಾಕೆ ಹೀಗೆ? ಹಾಗಾದರೆ ಡಿ ಜೀವಸತ್ವವನ್ನು ನಾವು ಯಾವುದರಿಂದ ಪಡೆಯಬಹುದು?

ಸೂರ್ಯನಿಂದ ನಿರಾಯಾಸವಾಗಿ ವಿಟಮಿನ್‌ ಡಿ (Vitamin D) ದೊರೆಯುವಾಗ, ಅದನ್ನು ನೀಡುವಂಥ ಆಹಾರ ಹುಡುಕಬೇಕೆ ಎಂಬುದು ಪ್ರಶ್ನೆ. ಆದರೆ ಸೂರ್ಯನ ಬಿಸಿಲಿಗೆ ನಾವೆಷ್ಟು ಬೀಳುತ್ತೇವೆ ಎಂಬುದಕ್ಕೆ ನಮ್ಮಲ್ಲಿ ಉತ್ತರ ಇದೆಯೇ? ಬಿಸಿಲು ತಾಗಿದರೆ ಚರ್ಮ ಸುಟ್ಟೇ ಹೋಗುತ್ತದೆ ಎಂಬಷ್ಟು ನಾಜೂಕಾಗಿದ್ದೇವೆ. ಬೇಕೊ ಬೇಡವೊ ಸನ್‌ಬ್ಲಾಕ್‌ ಮೆತ್ತಿಕೊಳ್ಳುತ್ತೇವೆ. ಮನೆಯಿಂದ ಹೊರಬಿದ್ದರೆ ಕಾರೊ, ಬಸ್ಸೊ, ಕ್ಯಾಬೊ ಮತ್ತೊಂದರಲ್ಲೊ ಪ್ರಯಾಣಿಸುತ್ತೇವೆ. ಶಾಲೆ, ಕಾಲೇಜು ಅಥವಾ ಕಚೇರಿಯೊಳಗೆ ಕೂತರೆ ಮತ್ತೆ ಹೊರಬೀಳುವುದು ಯಾವಾಗಾ? ಇನ್ನು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದಾದರೂ ಹೇಗೆ? ಇದಲ್ಲದೆ, ಬೊಜ್ಜು ಇರುವವರು, ಚರ್ಮದಲ್ಲಿ ಮೆಲನಿನ್‌ ಹೆಚ್ಚಿರುವವರು, ವಯಸ್ಸು 65ರ ಮೇಲಾದವರಲ್ಲಿ ಸೂರ್ಯನ ಬಿಸಿಲಿನಿಂದ ದೊರೆಯುವ ಡಿ ಜೀವಸತ್ವವನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯೇ ಇರುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಯಾವ ಆಹಾರದಿಂದ ನಮಗೆ ಡಿ ವಿಟಮಿನ್‌ ದೊರೆಯುತ್ತದೆ ಎಂಬುವನ್ನು ತಿಳಿದುಕೊಳ್ಳುವುದು ಅನಿವಾರ್ಯ.

ಎಷ್ಟು ಬೇಕು?

ಉಳಿದೆಲ್ಲಾ ಪೋಷಕಾಂಶಗಳು ಆರೋಗ್ಯವಂತ ವ್ಯಕ್ತಿಗೆ ಒಂದು ದಿನಕ್ಕೆ ಇಂತಿಷ್ಟು ಬೇಕು ಎಂದು ತಜ್ಞರು ನಿಖರವಾಗಿ ಹೇಳಿದ್ದಾರೆ. ಅದೇ ಲೆಕ್ಕದಲ್ಲಿ ಡಿ ವಿಟಮಿನ್‌ ಒಂದು ದಿನಕ್ಕೆ ಎಷ್ಟು ಬೇಕು- ಎಂಬ ಬಗ್ಗೆ ತಜ್ಞರಲ್ಲೂ ಏಕಾಭಿಪ್ರಾಯವಿಲ್ಲ. ಆದರೆ ಆರೋಗ್ಯವಂತ ವಯಸ್ಕನಿಗೆ ದಿನಂಪ್ರತಿ 20 ಮೈಕ್ರೊಗ್ರಾಂ ಡಿ ಜೀವಸತ್ವ ಸಾಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಆಹಾರಗಳಿಂದ ಇದು ದೊರೆಯುತ್ತದೆ?

ಇದನ್ನೂ ಓದಿ: Vitamin B12: ವಿಟಮಿನ್‌ ಬಿ12 ಬಗ್ಗೆ ಈ ಸಂಗತಿ ತಿಳಿದಿರಲಿ

Vitamin D

ಅಣಬೆಗಳು

ಅವುಗಳಲ್ಲಿ ಡಿ ವಿಟಮಿನ್‌ ದಾಸ್ತಾನೇನೂ ಇರದಿದ್ದರೂ, ಅತಿನೇರಳೆ ಬೆಳಕಿಗೆ ಅವು ಒಡ್ಡಿಕೊಳ್ಳುತ್ತಿದ್ದಂತೆ ಸಾಕಷ್ಟು ಡಿ ಜೀವಸತ್ವವನ್ನು ಅವು ತಯಾರಿಸುತ್ತವೆ. ಯಾವುದೇ ರೀತಿಯ ಅಣಬೆಗಳಲ್ಲೂ ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ಕಾಣಬಹುದು. ಇವು ವಿಟಮಿನ್‌ ಡಿಗಾಗಿ ಮಾತ್ರವಲ್ಲ, ವಿಧವಿಧದ ಖನಿಜಗಳು, ನಾರು ಮುಂತಾದ ಹತ್ತಾರು ರೀತಿಯ ಸೈಕ್ಷ್ಮ ಪೋಷಕಾಂಶಗಳ ಗುಡಾಣದಂತಿವೆ. ಹಾಗಾಗಿ ಅಣಬೆಗಳನ್ನು ಹೇರಳವಾಗಿ ಬಳಸಿ.

ಕೊಬ್ಬಿನ ಮೀನುಗಳು

ಸಾಲ್ಮನ್‌, ಮೆಕೆರಲ್‌ ಮತ್ತು ಟ್ಯೂನಾದಂಥ ಮೀನುಗಳಲ್ಲಿ ಮತ್ತು ಕೆಲವು ಚಿಕ್ಕ ಮೀನುಗಳಲ್ಲಿ ಡಿ ವಿಟಮಿನ್‌ ದಾಸ್ತಾನೇ ಇದೆ. ಒಂದೇ ಸರ್ವಿಂಗ್‌ನಲ್ಲಿ ಹಲವು ದಿನಗಳಿಗಾಗುವಷ್ಟು ಡಿ ಜೀವಸತ್ವವವನ್ನು ಈ ಆಹಾರಗಳು ನೀಡಬಲ್ಲವು. ನಾವು ತಿನ್ನುವ ಆಹಾರಗಳಲ್ಲಿ ಅತ್ಯಂತ ಹೆಚ್ಚಿನ ಸಾಂಧ್ರತೆಯಲ್ಲಿ ವಿಟಮಿನ್‌ ಡಿ ದೊರೆಯುವುದು ಮೀನುಗಳ ಮೂಲಕವೇ. ಉಳಿದೆಲ್ಲಾ ಆಹಾರಗಳಲ್ಲಿ ಇಷ್ಟೊಂದು ಅಧಿಕವಾಗಿ ವಿಟಮಿನ್‌ ಡಿ ದೊರೆಯುವುದಿಲ್ಲ.

ಮೀನೆಣ್ಣೆಯ ಮಾತ್ರೆಗಳು

ಕಾಡ್‌ಲಿವರ್‌ ಆಯಿಲ್‌ ಎಂದು ಜನಪ್ರಿಯವಾಗಿರುವ ಈ ಪೂರಕ ಮಾತ್ರೆಗಳು ಸಹ ವಿಟಮಿನ್‌ ಡಿ ಗಾಗಿ ಬಳಕೆಯಲ್ಲಿವೆ. ಇವುಗಳಿಂದ ಡಿ ಜೀವಸತ್ವ ಮಾತ್ರವಲ್ಲ, ಒಮೇಗಾ 3 ಕೊಬ್ಬಿನಾಮ್ಲ, ವಿಟಮಿನ್‌ ಎ ಸೇರಿದಂತೆ ಇನ್ನೂ ಕೆಲವು ಪೋಷಕಾಂಶಗಳು ದೊರೆಯುತ್ತವೆ. ಆದರೆ ಯಾವುದೇ ಪೂರಕ ಮಾತ್ರೆಗಳನ್ನು ಬಳಸುವಾಗ ಈ ಬಗ್ಗೆ ವೈದ್ಯರಲ್ಲಿ ಮಾತಾಡಿ. ನಿಜಕ್ಕೂ ವಿಟಮಿನ್‌ ಡಿ ಕೊರತೆ ಇದೆ ಎಂದಾದಲ್ಲಿ ಮಾತ್ರವೇ ಇಂಥವುಗಳನ್ನು ಅವರು ಶಿಫಾರಸು ಮಾಡುತ್ತಾರೆ.

ಮೊಟ್ಟೆ

ಮೊಟ್ಟೆಯ ಹಳದಿ ಭಾಗವನ್ನು ಬಿಸಾಡುವವರು ಹಲವರಿರಬಹುದು. ಆದರೆ ಹಳದಿ ಭಾಗವನ್ನು ಮಿತವಾಗಿ ತಿಂದರೆ ಅದರಲ್ಲಿ ಹೇರಳವಾಗಿ ಸತ್ವಗಳಿವೆ. ವಿಟಮಿನ್‌ ಡಿ ಸಹ ಹೌದು. ಸೂರ್ಯನ ಬಿಸಿಲಿಗೆ ಒಡ್ಡಿಕೊಂಡು ಬೆಳೆದ ಕೋಳಿಗಳಿಂದ ದೊರೆಯುವ ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್‌ ಡಿ ಸತ್ವಗಳಿರುವುದನ್ನು ಸಂಶೋಧನೆಗಳು ತಿಳಿಸುತ್ತವೆ.

ಇದನ್ನೂ ಓದಿ: Vitamin B12: ವಿಟಮಿನ್‌ ಬಿ12 ಬಗ್ಗೆ ಈ ಸಂಗತಿ ತಿಳಿದಿರಲಿ

Vitamin D

ಫಾರ್ಟಿಫೈಡ್‌ ಆಹಾರಗಳು

ಹಾಲು, ಕಿತ್ತಳೆ ಜ್ಯೂಸ್‌, ಸೋಯಾ ಹಾಲು, ಸೀರಿಯಲ್‌ಗಳು ಮುಂತಾದ ಹಲವು ಆಹಾರಗಳಲ್ಲಿ ವಿಟಮಿನ್‌ ಡಿ ಸತ್ವವನ್ನು ಮಿತ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಇವುಗಳನ್ನು ಬಳಸುವುದರಿಂದಲೂ ನಮಗೆ ಅಗತ್ಯವಾದ ಡಿ ಜೀವಸತ್ವವನ್ನು ಪಡೆಯಬಹುದು.

ವಿಟಮಿನ್‌ ಡಿ ಕೊರತೆಯ ಲಕ್ಷಣಗಳೇನು?

ಸುಸ್ತು, ನಿದ್ರಾಹೀನತೆ, ಮೂಳೆಗಳಲ್ಲಿ ನೋವು, ಕೂದಲು ಉದುರುವುದು, ಖಿನ್ನತೆ, ಸ್ನಾಯುಗಳ ದುರ್ಬಲತೆ, ಹಸಿವಿಲ್ಲದಿರುವುದು, ಸೋಂಕುಗಳ ಕಾಟ.

ಸೂರ್ಯನಿಂದ ವಿಟಮಿನ್‌ ಡಿ ಪಡೆಯಬೇಕೆಂದರೆ ಎಷ್ಟೊತ್ತು ಬಿಸಿಲಲ್ಲಿ ಇರಬೇಕು?

ಅದಕ್ಕೇನು ದಿನವಿಡೀ ಬಿಸಿಲಲ್ಲಿ ಒಣಗಬೇಕೆಂದಿಲ್ಲ. ಏರುಬಿಸಿಲು ಅಥವಾ ಇಳಿಬಿಸಿಲಿನಲ್ಲಿ ದಿನಕ್ಕೆ ಅರ್ಧ ತಾಸು ಇದ್ದರೂ ಸಾಕು. ಈ ಅವಧಿಯಲ್ಲಿ ಚರ್ಮದ ಮೇಲೆ ಬಿಸಿಲು ಬೀಳಬೇಕು.

Exit mobile version