Site icon Vistara News

Vitamin E foods: ಚರ್ಮ ಹಾಗೂ ಕೂದಲ ಆರೋಗ್ಯದ ಗುಟ್ಟು ʻವಿಟಮಿನ್‌ ಇʼ ಎಲ್ಲಿಂದ ಬರುತ್ತದೆ?

Vitamin E foods

ದೇಹದ ಆರೋಗ್ಯದ ವಿಚಾರ ಬಂದಾಗ ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ವಿಟಮಿನ್‌ಗಳು, ಪೋಷಕಾಂಶಗಳು, ಖನಿಜಾಂಶಗಳು ದಕ್ಕಬೇಕು. ಯಾವುದಾದರೊಂದು ಪೋಷಕಾಂಶದ ಕೊರತೆ ಕಂಡರೂ ಅದು ನಮ್ಮ ದೇಹಾರೋಗ್ಯದ ವ್ಯತ್ಯಾಸದ ಮೂಲಕ ತಿಳಿಯುತ್ತದೆ. ಪ್ರತಿಯೊಂದು ವಿಟಮಿನ್ನಿಗೂ ಅದರದೇ ಆದ ಸ್ಥಾನವಿದ್ದು, ಒಂದೊಂದು ರೋಗವೂ ಬರದಂತೆ ನಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತದೆ. ಉದಾಹರಣೆಗೆ ವಿಟಮಿನ್‌ ಎ ದೇಹಕ್ಕೆ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವಲ್ಲಿ ಮುಖ್ಯಪಾತ್ರವನ್ನು ವಹಿಸಿದರೆ, ವಿಟಮಿನ್‌ ಬಿ ದೇಹದ ಅಂಗಾಂಶಗಳೆಲ್ಲವೂ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

ಹೀಗೆಯೇ ವಿಟಮಿನ್‌ ಇ ಕೂಡಾ ದೇಹದ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದ್ದು, ನಮ್ಮ ಚರ್ಮದ ಹೊಳಪಿನಲ್ಲಿ, ಕೂದಲ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ವಿಟಮಿನ್ನಿನ ಕೊರತೆಯಿಂದ ಚರ್ಮದ ಸಮಸ್ಯೆಗಳು ಬರಬಹುದು. ಮಾಂಸಖಂಡಗಳು ದುರ್ಬಲವಾಗಬಹುದು. ಹಾಗಾಗಿ ಬಹಳಷ್ಟು ಸಾರಿ, ಚರ್ಮ ಹಾಗೂ ಕೂದಲ ಸಮಸ್ಯೆ ಇರುವ ಮಂದಿಗೆ ಹೆಚ್ಚುವರಿ ವಿಟಮಿನ್‌ ಇ ಮಾತ್ರೆಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ನಮ್ಮ ನಿತ್ಯ ಸೇವನೆಯ ಆಹಾರದಲ್ಲೇ ನಾವು ವಿಟಮಿನ್‌ ಇ ಹೇರಳವಾಗಿರುವ ಆಹಾರವನ್ನು ಪತ್ತೆಹಚ್ಚಿ, ನೈಸರ್ಗಿಕವಾಗಿ ವಿಟಮಿನ್‌ ಇ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುವಂತೆ ನೋಡಿಕೊಳ್ಳಬಹುದು. ಹಾಗಾದರೆ, ವಿಟಮಿನ್‌ ಇ ಹೆಚ್ಚಿರುವ ಆಹಾರಗಳು ಯಾವುವು ಎಂಬುದನ್ನು ನೋಡೋಣ.

೧. ಬಾದಾಮಿ: ಕೇವಲ ೨೮ ಗ್ರಾಂ ಬಾದಾಮಿ ತಿಂದರೆ ಶೇ.೭.೩ ಮಿಲಿಗ್ರಾಂನಷ್ಟು ವಿಟಮಿನ್‌ ಇ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಪ್ರತಿ ದಿನ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್‌ ಇ ಯ ಶೇ.೪೯ರಷ್ಟು ಪೂರೈಕೆಯನ್ನು ಈ ಬಾದಾಮಿ ಒಂದೇ ಮಾಡುತ್ತದೆ. ಅದಕ್ಕಾಗಿಯೇ ಪ್ರತಿನಿತ್ಯ ಬಾದಾಮಿ ತಿನ್ನುವುದಕ್ಕೆ ವೈದ್ಯರು ಸಲಹೆ ಮಾಡುತ್ತಾರೆ. ಬಾದಾಮಿಯಲ್ಲಿರುವ ದೇಹಕ್ಕೆ ಅಗತ್ಯವಾಗ ಕೊಬ್ಬು, ಪ್ರೊಟೀನ್‌, ಮೆಗ್ನೀಶಿಯಂ ಹಾಗೂ ನಾರಿನಂಶ ಎಲ್ಲವೂ ಲಭ್ಯವಾಗುತ್ತದೆ.

೨. ಸೂರ್ಯಕಾಂತಿ ಬೀಜ: ಬಾದಾಮಿ ಬಿಟ್ಟರೆ, ಸೂರ್ಯಕಾಂತಿ ಬೀಜ ಕೂಡಾ ಅತ್ಯುತ್ತಮ ವಿಟಮಿನ್‌ ಇ ಮೂಲ. ೩೦ ಗ್ರಾಂನಷ್ಟು ಸೂರ್ಯಕಾಂತಿ ಬೀಜದಲ್ಲಿ ಸುಮಾರು ೪.೨ ಮಿಲಿಗ್ರಾಂ ವಿಟಮಿನ್‌ ಇ ಇದೆಯಂತೆ. ಪ್ರತಿನಿತ್ಯ ಸೂರ್ಯಕಾಂತಿ ಬೀಜವನ್ನು ತಿನ್ನುವುದರಿಂದ ವಿಟಮಿನ್‌ ಇ ಮಾತ್ರವಲ್ಲ, ದೇಹಕ್ಕೆ ಬೇಕಾದ ಮೆಗ್ನೀಶಿಯಂ, ಸೆಲೆನಿಯಂ, ಫಾಸ್ಪರಸ್‌, ವಿಟಮಿನ್‌ ಬಿ೬ ಮತ್ತಿತರ ಪೋಷಕಾಂಶಗಳೂ ಲಭ್ಯವಾಗುತ್ತವೆ.

ಇದನ್ನೂ ಓದಿ | Vitamin D | ನಮಗೇಕೆ ಅಗತ್ಯ ವಿಟಮಿನ್‌ ಡಿ?

೩. ಬೆಣ್ಣೆಹಣ್ಣು: ವಿಟಮಿನ್‌ ಇ ಹಾಗೂ ಖನಿಜಾಂಶಗಳು ಹೇರಳವಾಗಿರುವ ಬೆಣ್ಣೆಹಣ್ಣನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಬಹಳ ಉತ್ತಮ. ಸಲಾಡ್‌, ಜ್ಯೂಸ್‌, ಸ್ಯಾಂಡ್‌ವಿಚ್‌ನಂತಹ ಕೆಲವು ಬಗೆಯ ಆಹಾರವನ್ನು ನಿತ್ಯ ಜೀವನದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಬೇಕಾದ ವಿಟಮಿನ್‌ ಇಯನ್ನು ಪಡೆಯಬಹುದು.

೪. ಬಸಳೆ: ಕಬ್ಬಿಣಾಂಶ ಹೆಚ್ಚಿರುವ ಬಸಳೆ ಸೊಪ್ಪು ವಿಟಮಿನ್‌ ಇಯನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಈ ಹಸಿರು ಸೊಪ್ಪಿನ ಸೇವನೆಯಿಂದ ಅತ್ಯಂತ ಚಂದದ ಚರ್ಮ, ಹಾಗೂ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಒಂದು ಕಪ್‌ ಬೇಯಿಸಿದ ಬಸಳೆ ಅಥವಾ ಬಾಲಕ್‌ ಸೊಪ್ಪಿನಲ್ಲಿ ೧.೯ನಷ್ಟು ಮಿಲಿಗ್ರಾಂ ವಿಟಮಿನ್‌ ಇ ಸಿಗುತ್ತದಂತೆ. ಪಾಲಕ್‌ ಅಥವಾ ಬಸಳೆ ಸೊಪ್ಪು ನಿತ್ಯಾಹಾರಲ್ಲಿ ಸೇವಿಸಬೇಕೆಂದರೆ, ದಾಲ್‌ ಪಲಾಕ್‌, ಸಾಗ್‌, ಪಾಲಕ್‌ ಸೂಪ್‌ ಮತ್ತಿತರ ಆಹಾರಗಳನ್ನು ಸೇವಿಸಬಹುದು.

೫. ನೆಲಗಡಲೆ: ನೆಲಗಡಲೆ ಕೇವಲ ಪ್ರೊಟೀನಿನ ಮೂಲ ಮಾತ್ರ ಅಲ್ಲ. ಇದರಲ್ಲಿ ಹೇರಳವಾಗಿ ವಿಟಮಿನ್‌ ಕೂಡಾ ಇದೆ. ಹಸಿವಾದಾಗ ತಿನ್ನಬಹುದಾದ ಸುಲಭ ಹಾಗೂ ಎಲ್ಲರ ಕೈಗೆಟಕುವ ಸಾಮಾನ್ಯ ಸ್ನ್ಯಾಕ್‌ ಇದು. ಆದರೆ ತಿನ್ನುವುದು ಅತಿಯಾಗಬಾರದಷ್ಟೆ.

ಇದನ್ನೂ ಓದಿ | ವಿಟಮಿನ್‌ ಡಿ ಕೊರತೆಯೇ? ಸೂರ್ಯನ ಬಿಸಿಲಿನೊಂದಿಗೆ ಇವನ್ನೆಲ್ಲ ತಿನ್ನಿ!

Exit mobile version