Site icon Vistara News

Walnut Health Benefits: ದುಬಾರಿಯಾದರೂ ವಾಲ್‌ನಟ್‌ನ ಆರೋಗ್ಯ ಪ್ರಯೋಜನ ಅಪಾರ

walnut benefits

ವಾಲ್‌ನಟ್ಸ್ (Walnuts) ಕೊಂಚ ದುಬಾರಿ ಒಣಹಣ್ಣು (dry fruit). ಇದನ್ನು ಅಖ್ರೋಟ್‌ ಅಂತಲೂ ಕರೆಯುತ್ತಾರೆ. ಆದರೆ ರುಚಿ ಬಹಳ. ಸ್ವಲ್ಪ ನಮ್ಮ ಗೋಡಂಬಿಯಂಥದೇ ರುಚಿ. ಆದರೆ ಆರೋಗ್ಯಕ್ಕೆ (Walnut Benefits) ಅತ್ಯಂತ ಒಳ್ಳೆಯದು. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ವಾಲ್ನಟ್ಸ್ ಅನ್ನು ಸೇರಿಸಿಕೊಂಡು ಅದನ್ನು ನಿಯಮಿತವಾಗಿ ಸೇವಿಸುವುದನ್ನು ರೂಢಿಸಿಕೊಂಡರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಮೆದುಳಿನ ಆರೋಗ್ಯ ಸುಧಾರಿಸುವುದರಿಂದ ಹಿಡಿದು ಸರಿಯಾದ ಜೀರ್ಣಕ್ರಿಯೆ ವರೆಗೆ ಇದು ಸಹಾಯ ಮಾಡುತ್ತದೆ. ವಾಲ್ನಟ್ಸ್‌ನ ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳನ್ನು (Walnut Health Benefits) ಇಲ್ಲಿ ನೀಡಲಾಗಿದೆ.

ಸ್ಮರಣಶಕ್ತಿಯ ವೃದ್ಧಿಗಾಗಿ

ನಿಮ್ಮ ಸ್ಮರಣಾಶಕ್ತಿಯನ್ನು ಸುಧಾರಿಸಲು ವಾಲ್ನಟ್ಸ್ ಸಹಕಾರಿ. ಕೊಲೆಸ್ಟ್ರಾಲ್ ಮುಕ್ತವಾಗಿರುವ ವಾಲ್ನಟ್ಸ್ ಉತ್ತಮ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದೆ. ಇದು ಮೆದುಳಿನ ಆರೋಗ್ಯ ಮತ್ತು ಕಾರ್ಯ ಎರಡಕ್ಕೂ ಒಳ್ಳೆಯದು. ವಿಟಮಿನ್ ಇ, ಫೋಲೇಟ್ ಮತ್ತು ಎಲಾಜಿಕ್ ಆಸಿಡ್‌ನಂತಹ ಪೋಷಕಾಂಶಗಳು ವಾಲ್ನಟ್ಸ್‌ನಲ್ಲಿವೆ. ಹೀಗಾಗಿ ನಿಮ್ಮ ನೆನಪಿನ ಶಕ್ತಿ ವೃದ್ಧಿಸಲು ನಿಯಮಿತವಾಗಿ ವಾಲ್ನಟ್ಸ್ ಸೇವಿಸಿ.

ಕರುಳಿನ ಆರೋಗ್ಯದ ಪೋಷಕ

ನಮ್ಮ ಆಹಾರದಲ್ಲಿ ವಾಲ್ನಟ್ಸ್ ಸೇರಿಸುವುದರಿಂದ ಬ್ಯೂಟೈರೇಟ್ ಅನ್ನು ಉತ್ಪಾದಿಸುವ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಇದು ನಿಮ್ಮ ಕರುಳನ್ನು ಪೋಷಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಉತ್ತಮ ಕೊಲೆಸ್ಟ್ರಾಲ್‌

ವಾಲ್ನಟ್ಸ್ ಉತ್ತಮ ಕೊಬ್ಬಿನಿಂದ ಸಮೃದ್ಧವಾಗಿದೆ. ವಾಲ್ನಟ್‌ನಲ್ಲಿ ಕಂಡುಬರುವ ಆಲ್ಫಾ-ಲಿನೋಲೆನಿಕ್ ಆಸಿಡ್ ಮತ್ತು ಲಿನೋಲೆನಿಕ್ ಆಸಿಡ್‌ನಂತಹ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಆರೋಗ್ಯಕರ ಲಿಪಿಡ್ ಪೂರೈಕೆಯನ್ನು ಉತ್ತೇಜಿಸುತ್ತವೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಚರ್ಮದ ಸೊಗಸಿಗೆ ಪೂರಕ

ವಾಲ್ನಟ್ಸ್‌ನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ವಾಲ್ನಟ್ಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸುತ್ತವೆ. ಶುಷ್ಕ ಮತ್ತು ತುರಿಕೆ ಚರ್ಮ, ಮೊಡವೆ ಮತ್ತು ಒಡೆಯುವಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.

ಲೈಂಗಿಕ ಸಾಮರ್ಥ್ಯ ವೃದ್ಧಿ

ಪುರುಷರು ನಿಯಮಿತವಾಗಿ ವಾಲ್ನಟ್ಸ್ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳ ಜೊತೆಗೆ ಧಾತುಲಾಭವನ್ನು ಪಡೆದುಕೊಳ್ಳಬಹುದು. ವಾಲ್ನಟ್ಸ್ ಸೇವನೆಯಿಂದ ಪುರುಷರ ಲೈಂಗಿಕ ಬಯಕೆ ಹಾಗೂ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಳವಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

Exit mobile version