Site icon Vistara News

Good sleep | ಪ್ರತಿ ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರಾಗೋದು ಯಾಕೆ?!

sleep

ರಾತ್ರಿಯಾದರೆ ಒಂದು ನಿರ್ದಿಷ್ಟ ಸಮಯಕ್ಕೆ ನಮಗೆ ಕಣ್ಣು ತೂಕಡಿಸಲಾರಂಭಿಸುತ್ತದೆ. ಮನೆಯ ಲೈಟ್‌ ಆರಿಸಿ, ಫೋನ್‌ ಕೆಳಗಿಟ್ಟು ಎಲ್ಲರೂ ಒಂದು ಸಮಯಕ್ಕೆ ನಿದ್ದೆಗೆ ಶರಣಾಗುತ್ತೇವೆ. ಹಾಗೂ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳಬೇಕು ಎಂದುಕೊಂಡು ಒಳ್ಳೆಯ ನಿದ್ದೆ ಬರುತ್ತದೆ ಎಂಬ ಯೋಚನೆಯಲ್ಲಿ ಮಲಗುತ್ತೇವೆ. ಆದರೆ, ಒಂದು ಸಮಯದಲ್ಲಿ ಇದ್ದಕ್ಕಿದ್ದಂತೆ ನಡುರಾತ್ರಿ ಎಚ್ಚರಾಗಿಬಿಡುತ್ತದೆ. ನಿದ್ದೆಯೆಲ್ಲ ಮುಗಿದಂತೆ, ಇನ್ನೇನು ಬೆಳಗೇ ಆಗಿಬಿಟ್ಟಂತೆ ಅನಿಸಿ, ಎಚ್ಚರವಾಗಿ ಗಂಟೆ ನೋಡುತ್ತೇವೆ. ಹೀಗೆ ಒಮ್ಮೆ ಎಚ್ಚರಾದ ಮೇಲೆ, ಪ್ರತಿ ಮಧ್ಯರಾತ್ರಿಯೂ ಅಂಥದ್ದೇ ಒಂದು ನಿರ್ಧಿಷ್ಟ ಸಮಯದಲ್ಲಿ ಎಚ್ಚರವಾಗುವುದು ಅಭ್ಯಾಸವಾಗಿಬಿಡುತ್ತದೆ!

ಬಹಳಷ್ಟು ಮಂದಿಗೆ ಇಂಥ ಪ್ರಶ್ನೆ ಏಳುವುದುಂಟು. ಪ್ರತಿ ಮಧ್ಯರಾತ್ರಿ ಒಂದೇ ಸಮಯಕ್ಕೆ ಯಾಕೆ ಎಚ್ಚರವಾಗುತ್ತದೆ? ನಾವು ಗಂಟೆ ನೋಡದಿದ್ದರೂ, ದೇಹಕ್ಕೆ ಪ್ರತಿನಿತ್ಯ ಸಿಗಬೇಕಾದ ನಿದ್ದೆಯ ಪ್ರಮಾಣ ಪೂರ್ತಿಯಾಗದಿದ್ದರೂ, ಠಣ್‌ ಎಂದು ಗಂಟೆ ಬಾರಿಸಿದ ಹಾಗೆ ಎಚ್ಚರವಾಗುವುದು ಯಾಕೆ ಎಂಬುದು ಹಲವರ ಜಿಜ್ಞಾಸೆಯಾಗಿರುತ್ತದೆ ಕೂಡಾ. ಇದಕ್ಕೆ ಏನೇನೋ ಅತೀಂದ್ರೀಯ ಕಲ್ಪನೆಗಳನ್ನು ಮಾಡಿಕೊಂಡು ಭಯಪಡುವವರೂ ಇದ್ದಾರೆ!

ಶುಭ ಸುದ್ದಿಯೆಂದರೆ, ಹೀಗೆ ನಿಮಗೊಬ್ಬರಿಗೇ ಆಗುವುದಿಲ್ಲ. ಬಹುತೇಕ ಹಲವರಿಗೆ ಜೀವನದಲ್ಲಿ ಹಲವು ಬಾರಿ ಇಂತಹ ಅನುಭವಗಳಾಗುತ್ತವೆ. ಎಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಇಂತಹ ಅನುಭವಕ್ಕೆ ಸಿಕ್ಕಿ, ವಿಸ್ಮಯ ಪಡುವುದೂ ಇದೆ. ಬಹುತೇಕ ಮಂದಿ ಯಾಕೆ ಹೀಗೆ ಎಂದು ಇಲ್ಲದ ಯೋಚನೆಗಳನ್ನು ತಲೆಯಲ್ಲಿ ತುಂಬಿ ಭಯಪಡುವುದೂ ಇದೆ. ಆದರೆ, ಮನಃಶಾಸ್ತ್ರಜ್ಞರ ಪ್ರಕಾರ ಇದು ಗಾಬರಿಕೊಳ್ಳುವಂತಹ ತೊಂದರೆಯೇನಲ್ಲ. ಜೊತೆಗೆ ಎಚ್ಚರವಾಗುವ ನಿರ್ಧಿಷ್ಟ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕಾದ ಅಗತ್ಯವೂ ಇಲ್ಲ ಎಂಬುದನ್ನು ನೆನಪಿಡಿ.

ತಜ್ಞರ ವಿವರಣೆಯಂತೆ, ಇದನ್ನು ಇನ್ಸೋಮ್ನಿಯಾ ಕಾಯಿಲೆಯ ಲಕ್ಷಣ ಎಂದು ಭಯಪಡುವ ಅಗತ್ಯವಿಲ್ಲ. ಇನ್ನು ಮುಂದೆ ನಿದ್ದೆ ಕಷ್ಟ, ನಿದ್ದೆಗೆಡುವುದು ಹಣೆಬರಹ ಎಂಬು ಕಳವಳ ಪಡಬೇಕಾಗಿಯೂ ಇಲ್ಲ. ನಮ್ಮ ದೇಹ ಯಾವುದೋ ಒಂದು ಪ್ರತಿಕ್ರಿಯೆ ಕೊಟ್ಟಿದೆ ಹಾಗೂ ಕೊಡಲು ಅಭ್ಯಾಸ ಮಾಡಿಕೊಂಡಿದೆ ಎಂದಷ್ಟೇ ಅರ್ಥ. ಇದನ್ನು ಸ್ವಲ್ಪ ಯೋಚಿಸಿ, ನಿದ್ದೆಯಲ್ಲಿ ಬದಲಾವಣೆ ತಂದುಕೊಂಡರೆ ಸರಿಪಡಿಸಲೂ ಸಾಧ್ಯವಿದೆ.

ಹಾಗೆ ನೋಡಿದರೆ ಇದು ಸಮಸ್ಯೆಯೇ ಅಲ್ಲ. ಒಮ್ಮೆ ಒಂದೇ ಸಮಯಕ್ಕೆ ಎಚ್ಚರಾಗಿ ತಕ್ಷಣ ಮಲಗಿ ನಿದ್ದೆ ಮಾಡಿದರೆ ಅದು ದೊಡ್ಡ ತೊಂದರೆಯೇನಲ್ಲ. ಸಮಸ್ಯೆ ಅಂತ ಅನಿಸೋದು, ಒಮ್ಮೆ ಎಚ್ಚರಾದ ಮೇಲೆ ನಿದ್ದೆ ಬರದೇ ಇರುವುದು ಮಾತ್ರ! ಏನೋ ಯೋಚನೆ, ಚಿಂತೆ, ಒತ್ತಡಗಳು ಕೆಲವೊಮ್ಮೆ ರಾತ್ರಿಯ ನಿದ್ದೆಯಿಂದ ಇದ್ದಕ್ಕಿದ್ದಂತೆ ನಮ್ಮನ್ನು ಆಕ್ಟಿವೇಟ್‌ ಮಾಡಿಬಿಡುತ್ತದೆ. ಎದ್ದ ತಕ್ಷಣ ನಮ್ಮ ಎಲ್ಲ ಅಂಗಗಳೂ ತಮ್ಮ ದಿನಚರಿ ಶುಮಾಡಿಬಿಡುತ್ತವೆ, ರಕ್ತದ ಒತ್ತಡ, ಹೃದಯ ಬಡಿತ ಎಲ್ಲವೂ ಬೆಳಗಿನ ಹೊತ್ತಿನ ಆಕ್ಟಿವ್‌ ಸ್ಥಿತಿಗೆ ಬಂದು ಬಿಡುತ್ತದೆ. ಹೀಗಾದಾಗ ಮತ್ತೆ ನಿದ್ದೆಗೆ ಜಾರುವುದು ಕಷ್ಟವಾಗುತ್ತದೆ. ಇಂಥದ್ದಷ್ಟೆ ಇನ್ಸೋಮ್ನಿಯಾಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!

ಕೆಲವೊಮ್ಮೆ ಇದಕ್ಕೆ ಕಾರಣ ಸ್ಲೀಪ್‌ ಅಪ್ನೀಯ ಕೂಡಾ ಆಗಿರಹುದು. ಅಂದರೆ, ನಿದ್ದೆಯಲ್ಲಿರುವಾಗ ಇದ್ದಕ್ಕಿದ್ದಂತೆ ಉಸಿರಾಡುವ ಪ್ರಕ್ರಿಯೆ ಒಮ್ಮೆ ನಿಂತಂತಾಗಿ, ಇದರಿಂದ ಶ್ವಾಸಕೋಶಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆ ಆಗದೆ, ಹೃದಯಬಡಿತದಲ್ಲಿ ಏರುಪೇರಾಗಿ ಎಚ್ಚರವಾಗಿಬಿಡುತ್ತದೆ. ಇದು ಅತಿಯಾದ ಗೊರಕೆ, ಹಗಲಿನಲ್ಲಿ ಅತಿಯಾದ ಕೆಲಸದಿಂದ ಉಂಟಾದ ಸುಸ್ತು ಅಥವಾ ಗಾಳಿಯಾಡದಂತ ಕೋಣೆಯಿಂದಲೂ ಆಗಿರಬಹುದು. ಹೀಗೆ ಪದೇ ಪದೇ ಆದರೆ, ವೈದ್ಯರನ್ನು ಸಂಪರ್ಕಿಸಬೇಕು. ಯಾಕೆಂದರೆ ಸ್ಲೀಪ್‌ ಅಪ್ನೀಯ ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ, ಬೊಜ್ಜು ಹಾಗೂ ಇತರ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಹಾಗಾದರೆ, ಹೀಗೆ ಇದ್ದಕ್ಕಿದ್ದಂತೆ ಒಂದೇ ಸಮಯಕ್ಕೆ ಎಚ್ಚರಾದಾಗ ಏನು ಮಾಡಬಹುದು ಎಂಬುದನ್ನು ನೋಡೋಣ. ಎಚ್ಚರಾದಾಗ, ಮತ್ತೆ ನಿದ್ದೆ ಮಾಡಲು ೧೫-೨೦ ನಿಮಿಷಗಳಾದರೆ, ಅದು ಸಹಜ. ಅದಕ್ಕಾಗಿ ಗಾಬರಿ ಬೀಳಬೇಕಾಗಿಲ್ಲ. ೨೦ ನಿಮಿಷಗಳೊಳಗಾಗಿ ನಿದ್ದೆ ಹತ್ತದಿದ್ದರೆ, ಆಕ್ಟಿವ್‌ ಆಗಿಯೇ ಇದ್ದಿರೆಂದಾದಲ್ಲಿ, ಬೆಡ್‌ನಿಂದ ಏಳಬಹುದು. ಈ ಸಮಯದಲ್ಲಿ ಆಗಲೇ ನಿಮ್ಮ ಮಿದುಳು, ಎಚ್ಚರವಾಗಿದ್ದಾಗ ಮಾಡುವ ಎಲ್ಲ ಕೆಲಸಗಳನ್ನು ಮಾಡಲು ಆರಂಭಿಸಿಯಾಗಿದೆ ಎಂದರ್ಥ. ಅಂದರೆ, ವಿಧವಿಧವಾದ ಯೋಚನೆಗಳು, ಚಿಂತನೆ, ಯೋಜನೆ ರೂಪಿಸುವುದು ಇತ್ಯಾದಿ. ಹಾಗಾಗಿ, ನಿದ್ದೆ ಬರುವುದೇ ಇಲ್ಲ ಎನಿಸಿದರೆ, ಎದ್ದು ಹೆಚ್ಚು ಚಿಂತೆ ಮಾಡದೆ, ನಿಮಗೆ ಖುಷಿ ಕೊಡುವ ಓದು ಇತ್ಯಾದಿ ಮಾಡಬಹುದು. ಅಥವಾ ಮಲಗಲೇಬೇಕು ಎಂದೆನಿಸಿದೆಯಾದರೆ, ಕೆಲವು ರಿಲ್ಯಾಕ್ಸಿಂಗ್‌ ವ್ಯಾಯಾಮಗಳನ್ನು ಬೆಡ್‌ನಲ್ಲಿಯೇ ಮಾಡಿದರೆ ನಿಧಾನವಾಗಿ ನಿದ್ದೆ ಆವರಿಸುತ್ತದೆ. ಇವೆಲ್ಲವಕ್ಕಿಂತಲೂ ನಿಮ್ಮ ಸಮಸ್ಯೆ ಭಿನ್ನವಾಗಿದೆ ಅಥವಾ ನಿಜಾವಗಿಯೂ ಇದು ಸಮಸ್ಯೆಯಾಗಿಯೇ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

Exit mobile version