Site icon Vistara News

Winter care | ಚಳಿಗಾಲದ ಶಿಸ್ತುಬದ್ಧ ಜೀವನಕ್ಕಿಲ್ಲಿದೆ ಏಳು ಸೂತ್ರಗಳು!

winter care

ಚಳಿಗಾಲದಲ್ಲಿ ʻಹೆಚ್ಚು ತಿನ್ನುʼ ಎಂದು ನಮ್ಮ ದೇಹ ಹೇಳಿದಂತೆ ಕೇಳಿ ನಾವು ಕೂತು ತಿನ್ನುತ್ತೇವೆ ನಿಜ, ಆದರೆ ಇದರ ಫಲವಾಗಿ ತೂಕವೂ ಸರ್ರೆಂದು ಏರುತ್ತದೆ ಎಂಬುದು ಕಟು ಸತ್ಯ. ಹಾಗಾದರೆ, ದೇಹ ಹೇಳುತ್ತದೆ, ಮನಸ್ಸು ಬಯಸುತ್ತದೆ ಎಂದು ಸಿಕ್ಕಿದ್ದೆಲ್ಲ ತಿಂದರೆ ಗತಿ ಏನು ಎಂಬ ಬಗ್ಗೆ ಕೂತು ಶಾಂತವಾಗಿ ಸ್ವಲ್ಪ ಹೊತ್ತು ಯೋಚಿಸಿದೆವೆಂದರೆ, ಬುದ್ಧಿವಂತಿಕೆಯಿಂದ ನಾವು ತಿನ್ನಬೇಕು ಎಂಬುದು ಅರ್ಥವಾಗುತ್ತದೆ. ಇಲ್ಲಿ ಹೃದಯ, ಮನಸಿನ ಮಾತು ಕೇಳುವುದಕ್ಕಿಂತ ಹೆಚ್ಚು ನಮ್ಮ ಬುದ್ಧಿಯ ಮಾತು ಕೇಳುವುದು ಅನಿವಾರ್ಯ ಎಂಬ ಸತ್ಯವನ್ನು ನಾವು ಮನಗಾಣಬೇಕಿದೆ. ಹಾಗಾದರೆ, ಚಳಿಗಾಲದಲ್ಲಿ ಹೆಚ್ಚುವ ಹಸಿವೆಗೆ ಏನು ತಿನ್ನಬಹುದು, ಆರೋಗ್ಯಕರ ಆಯ್ಕೆಗಳೇನು, ಏನು ಮಾಡಬಹುದು ಎಂಬುದನ್ನು ನೋಡೋಣ.

೧. ಚಳಿಕಾಲಕ್ಕೊಂದು ಪ್ಲಾನ್‌ ರೂಪಿಸಿ: ವ್ಯಾಯಾಮ ಕೇವಲ ಕ್ಯಾಲರಿಯನ್ನಷ್ಟೇ ಕರಗಿಸುವುದಿಲ್ಲ. ಇದು ನಮ್ಮ ಹಸಿವೆಗೆ ಸಂಬಂಧಿಸಿದಂಥ ಮಿದುಳಿನ ರಸಗ್ರಂಥಿಗಳನ್ನೂ ಉತ್ತೇಜಿಸುವ ಕೆಲಸ ಮಾಡುತ್ತದೆ. ಹಾಗಾಗಿ ಇದು ನಾವು ಎಷ್ಟು ತಿನ್ನಬೇಕು ಎಂಬುದನ್ನೂ ಕಂಟ್ರೋಲ್‌ ಮಾಡುತ್ತದೆ. ಅದಕ್ಕಾಗಿಯೇ, ಚಳಿಗಾಲವೆಂದು ಆಲಸ್ಯವಾದರೂ, ದಿನಕ್ಕೆ ಕಡೇಪಕ್ಷ ಬೆಳಗ್ಗೆ ಎದ್ದು ನಡೆಯುವುದು ಸಾಧ್ಯವಾಗದಿದ್ದರೂ, ಯಾವುದಾದರೂ ನಿಮಗೆ ಕಂಫರ್ಟ್‌ ಅನಿಸುವ ಹೊತ್ತಿನಲ್ಲೊಂದು ಮುಕ್ಕಾಲು ಗಂಟೆ ವಾಕ್‌ ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಚಳಿಗಾಲದ ಆಲಸ್ಯದಲ್ಲಿ ಇದನ್ನು ಮಾತ್ರ ಮರೆಯಬೇಡಿ!

೨. ಆರೋಗ್ಯಕರ ಸ್ನ್ಯಾಕ್ ತಿನ್ನಿ: ಊಟದ ಮಧ್ಯದ ಸಮಯದಲ್ಲಿ ತಿನ್ನಬೇಕೆನಿಸುವ ಸ್ನ್ಯಾಕ್‌ ಟೈಮ್‌ನಲ್ಲಿ ಪ್ರೊಟೀನ್‌ ಹೆಚ್ಚಿರುವ, ನಾರಿನಂಶ ಹೆಚ್ಚಿರುವ ಸ್ನ್ಯಾಕ್‌ಗಳನ್ನೇ ತಿನ್ನಿ. ಆರೋಗ್ಯಕರ ಸ್ನ್ಯಾಕ್‌ ದೇಹದಲ್ಲಿ ಉಷ್ಣತೆಗೆ ಇಂಧನ ಒದಗಿಸಿ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ.

೩. ಯಥೇಚ್ಛವಾಗಿ ತರಕಾರಿ ತಿನ್ನಿ: ಚಳಿಗಾಲದಲ್ಲಿ ತಾಜಾ ತರಕಾರಿಗಳು ಬೇಕಾದಷ್ಟು ಸಿಗುತ್ತವೆ. ಈ ಸಂದರ್ಭ ಹೆಚ್ಚು ಸಿಗುವ ಸೀಸನಲ್‌ ತರಕಾರಿ ಹಾಗೂ ಸೊಪ್ಪುಗಳನ್ನು ಹೆಚ್ಚು ಬಳಸಿ. ಇದರರ್ಥ ಹಸಿ ತರಕಾರಿಯನ್ನೇ ಒಂದು ಬೌಲ್‌ ತುಂಬಾ ರಾತ್ರಿ ತಿನ್ನಿ ಎಂದಲ್ಲ. ಬಗೆಬಗೆಯಲ್ಲಿ ಬಗೆಬಗೆಯ ಸೊಪ್ಪು ತರಕಾರಿಗಳನ್ನು ಪ್ರತಿದಿನದ ಆಹಾರಕ್ರಮದಲ್ಲಿ ಅಳವಡಿಸಿ.

೪. ಪ್ರೊಟೀನ್‌ ಹೆಚ್ಚಿಸಿ: ನೀವು ಸೇವಿಸುತ್ತಿರುವ ಆಹಾರಕ್ರಮವನ್ನು ಗಮನಿಸಿ. ತಟ್ಟೆಯಲ್ಲಿ ಎಲ್ಲ ಪೋಷಕಾಂಶಗಳೂ ಸಮ ಪ್ರಮಾಣದಲ್ಲಿರಲಿ. ಅಂದರೆ, ಪ್ರೊಟೀನ್‌, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು ಸಮತೋಲನದಲ್ಲಿರಲಿ. ಇದರಲ್ಲಿ ಪ್ರೊಟೀನ್‌ ಅಂಶವನ್ನು ಹೆಚ್ಚಿಸಿ. ದೊಡ್ಡ ಊಟದ ಮಧ್ಯೆ ಆರೋಗ್ಯಕರ ಸ್ನ್ಯಾಕ್‌ ತಿನ್ನುವ ಮೂಲಕ ಹಸಿವನ್ನು ಕಂಟ್ರೋಲ್‌ನಲ್ಲಿಡಿ.

೫. ನೀರು ಕುಡಿಯಿರಿ: ಚಳಿಗಾಲದ ದೊಡ್ಡ ಸಮಸ್ಯೆ ಎಂದರೆ ಬಾಯಾರಿಕೆಯಾಗದಿರುವುದು. ಹೀಗಾಗಿ ಸಹಜವಾಗಿಯೇ ನೀರು ಕಡಿಮೆ ಕುಡಿಯುವುದು. ಆದರೆ, ಚಳಿಗಾಲದಲ್ಲೂ ನೀರು ದೇಹಕ್ಕೆ ಬೇಕೇಬೇಕು. ನಾವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಹೆಚ್ಚು ಹಸಿವಾಗುತ್ತದೆ. ಅದಕ್ಕಾಗಿ ಹಸಿವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಆಗಾಗ ನೀರು ಕುಡಿಯಲೇಬೇಕು. ಜೊತೆಗೆ ಬಹಳಷ್ಟು ಸಾರಿ, ನಮ್ಮ ದೇಹಕ್ಕೆ ನಿಜವಾಗಿ ನೀರು ಬೇಕಾಗಿರುವ ಸೂಚನೆಯನ್ನು ನಾವು ತಪ್ಪಾಗಿ ಅರ್ಥೈಸಿಕೊಂಡು ಹಸಿವೆಂದು ಭಾವಿಸಿ ತಿನ್ನುವ ಬಗ್ಗೆ ಗಮನ ಕೊಡುತ್ತೇವೆ. ಅದಕ್ಕಾಗಿ ಆಗಾಗ ನೀರು ಕುಡಿಯುವುದು ಬಹಳ ಮುಖ್ಯ.

ಇದನ್ನೂ ಓದಿ | Winter care | ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು…

೬. ಉಣ್ಣುವ ಊಟವನ್ನು ಎಂಜಾಯ್‌ ಮಾಡಿ: ʻಮೈಂಡ್‌ಫುಲ್‌ ಈಟಿಂಗ್‌ʼ ಅಭ್ಯಾಸ ಮಾಡಿ. ಪ್ರತಿಯೊಂದು ತುತ್ತನ್ನೂ ಖುಷಿಯಿಂದ ತಿನ್ನಿ. ರುಚಿಯನ್ನು ಆನಂದ ಪಡಿ. ಊಟ ಮಾಡುವಾಗ ಮೊಬೈಲ್‌ ನೋಡುವುದು ಅಥವಾ ಇನ್ಯಾವುದೋ ಕೆಲಸ ಮಾಡುವುದರಿಂದ ಮನಸ್ಸು ಉಣ್ಣುವ ಊಟದತ್ತ ಗಮನ ಹರಿಯುವುದಿಲ್ಲ. ಇದಕ್ಕಾಗಿ ಊಟದ ಸಮಯವನ್ನು ಕೇವಲ ಊಟಕ್ಕಾಗಿಯಷ್ಟೇ ಮೀಸಲಿಡಿ.

೭. ಆರೋಗ್ಯಕರ ಪರ್ಯಾಯಗಳನ್ನು ಹುಡುಕಿ: ಜಂಕ್‌ಗಳನ್ನು ಪೂರ್ತಿಯಾಗಿ ಬಿಡುವುದು ಕಷ್ಟವಾಗುತ್ತದೆ ನಿಜ. ಕ್ರೀಮೀಯಾಗಿರುವ ಪಾಸ್ತಾ, ಚಾಕೋಲೇಟ್‌, ಬಿಸಿ ಬಿಸಿ ಕರಿದ ತಿಂಡಿಗಳನ್ನು ನೋಡಿದರೆ ಖಂಡಿತ ಬಾಯಲ್ಲಿ ನೀರೂರುತ್ತದೆ ಎಂಬುದೂ ನಿಜವೇ. ಆದರೆ, ಇಂಥ ಆಸೆಗಳ ಸಂದರ್ಭ ಬುದ್ಧಿ ಉಪಯೋಗಿಸಿ. ಬೇಕೆನಿಸಿದರೆ, ಮನೆಯಲ್ಲೇ ಮಾಡಿ ತಿನ್ನಬಹುದು, ಅಥವಾ ಅಪರೂಪಕ್ಕೆ ನಿಮ್ಮ ನಿಯಮಗಳನ್ನು ಮುರಿದು ಇಂಥದ್ದನ್ನು ಹೊರಗೆ ತಿನ್ನಬಹುದು. ಆದರೆ, ಪ್ರತಿ ಬಾರಿಯೂ ಹಿತಮಿತವಾಗಿ ತಿನ್ನಿ. ಜೊತೆಗೆ ಆರೋಗ್ಯಕರ ಪರ್ಯಾಯ ಆಯ್ಕೆಗಳನ್ನು ಮಾಡಿಕೊಳ್ಳಿ. ಹೀಗೆ ತಿಂದಾಗ, ವಾರದ ಏಳೂ ದಿನಗಳಲ್ಲಿ ವಾಕ್‌ ಮಾಡುವುದನ್ನು ಬಿಡಬೇಡಿ.

ಇಂತಹ ಸಪ್ತಸೂತ್ರಗಳನ್ನು ಚಳಿಗಾಲದಲ್ಲಿ ನಿಮಗೆ ನೀವೇ ಹಾಕಿಕೊಂಡು ಶೇಕಡಾ ೮೦ರಷ್ಟು ಪಾಲನೆಯಾದರೂ ಸರಿಯೇ. ನಿಮ್ಮ ಬಗ್ಗೆ ನಿಮಗೇ ಹೆಮ್ಮೆಯಾಗುತ್ತದೆ. ಆರೋಗ್ಯಕರ ಜೀವನಶೈಲಿಯ ಆತ್ಮತೃಪ್ತಿ ಸಿಗದೆ ಇದ್ದರೆ ಹೇಳಿ!

ಇದನ್ನೂ ಓದಿ | Winter Tips |ಚಳಿಗಾಲದಲ್ಲಿ ಮೊಸರು ಮಾಡುವುದು ಕಷ್ಟವೇ? ಇಲ್ಲಿವೆ ಸಪ್ತಸೂತ್ರಗಳು!

Exit mobile version