Site icon Vistara News

Winter care | ಚಳಿಗಾಲದಲ್ಲಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುವ ಆಹಾರಗಳಿವು!

Winter care

ಬಿಸಿ ಬಿಸಿಯಾಗಿ ಹಬೆಯಾಡುವ ಸೂಪ್‌, ಚಹಾ, ಕಾಫಿ, ಬಜ್ಜಿ ಬೋಂಡಾ ಪಕೋಡಾಗಳು ಒಮ್ಮೆ ಬೆಚ್ಚಗಾಗಿಸುವುದು ನಿಜ. ಆದರೆ, ಒಟ್ಟಾರೆ ಆರೋಗ್ಯದ ಬಗ್ಗೆ ಯೋಚಿಸುವವರಿಗೆ ಇದು ಪರಿಹಾರ ಮಾರ್ಗವಾಗಿ ಕಾಣದು. ಒಳಗಿನಿಂದ ದೇಹವನ್ನು ಬೆಚ್ಚಗಿಡುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ ಚಳಿಗಾಲದಲ್ಲಿ ಬಹುಮುಖ್ಯ. ಹಾಗಾದರೆ, ಚಳಿಗಾಲದಲ್ಲಿ ಮೈ ನಡುಗಿಸುವ ಚಳಿಯನ್ನು ನಿಜವಾಗಿಯೂ ಹೋಗಲಾಡಿಸುವ ನೈಸರ್ಗಿಕ ವಿಧಾನಗಳಿವೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಬಹುದು. ಇದೆ. ನಮ್ಮ ಪ್ರಕೃತಿಯೇ ಚಳಿಗಾಲಕ್ಕೆ ಬೇಕಾದ ಆಹಾರವನ್ನು ಅದೇ ಸಮಯಕ್ಕೆ ಸರಿಯಾಗಿ ನಮ್ಮ ಮುಂದಿಡುತ್ತದೆ. ಆಯಾ ಕಾಲಕ್ಕೆ ತಕ್ಕ ಆಹಾರಗಳನ್ನು ನೈಸರ್ಗಿಕ ಕ್ರಮಗಳಿಂದಲೇ ನಮ್ಮ ಮುಂದಿಡುವ ಪ್ರಕೃತಿಯ ಈ ಅಚ್ಚರಿಯನ್ನು ನಾವು ಗಮನಿಸುತ್ತಿಲ್ಲ ಅಷ್ಟೇ.

ಹಾಗೆ ನೋಡಿದರೆ, ಚಳಿಗಾಲದಲ್ಲಿ ಸರಿಯಾದ ಆಹಾರಕ್ರಮವನ್ನು ಪಾಲಿಸುತ್ತಾ ಬಂದಲ್ಲಿ, ನಿಜವಾಗಿಯೂ ನಮಗೆ ಚಳಿ ಸಮಸ್ಯೆಯೇ ಅಲ್ಲ. ಚಳಿಗಾಲದಲ್ಲಿ ಮುಖ್ಯವಾಗಿ ಬೇಕಾಗಿರುವ ನಮ್ಮನ್ನು ಒಳಗಿನಿಂದ ಬೆಚ್ಚಗಿಡುವ ಆಹಾರಗಳನ್ನು ನಾವು ಸೇವಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಅವುಗಳ ಬಳಕೆಯಿಂದ ನಾವು ಚಳಿಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದಷ್ಟೇ ಅಲ್ಲ, ಚಳಿಗಾಲದ ಅನೇಕ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು. ಹಾಗಾದರೆ ಅಂಥ ಆಹಾರಗಳು ಯಾವುವು ಎಂಬುದನ್ನು ನೋಡೋಣ.

೧. ತುಪ್ಪ: ಹೌದು. ನಮ್ಮ ಮನೆಗಳಲ್ಲಿ ನಿತ್ಯ ಬಳಸುವ ತುಪ್ಪ ಒಳ್ಳೆಯದು, ಚಳಿಗಾಲದಲ್ಲಿ ಇನ್ನೂ ಒಳ್ಳೆಯದು. ಇದು ಜೀರ್ಣಕ್ರಿಯೆ ಆಗುವಂತೆ ನೋಡಿಕೊಂಡು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿತ್ಯ ಉಣ್ಣುವ ದಾಲ್‌, ರಸಂ, ಪರಾಠಾ, ಚಪಾತಿಯ ಮೇಲೆ ತುಪ್ಪ ಹಾಕಿಕೊಂಡು ಚಳಿಗಾಲದಲ್ಲಿ ತಿಂದರೆ ಒಳ್ಳೆಯದು. ಹಾಗಂತ ಬಳಸುವಾಗ ಹಿತಮಿತ ಪ್ರಮಾಣದ ಬಗ್ಗೆ ಅರಿವಿರಲಿ.

೨. ಬೆಲ್ಲ: ಬೆಲ್ಲ ಚಳಿಗಾಲಕ್ಕೆ ಹೇಳಿ ಮಾಡಿಸಿದ ನಿಸರ್ಗದತ್ತ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಬೆಲ್ಲದಲ್ಲಿ ಸಾಕಷ್ಟು ಇತರ ಖನಿಜಾಂಶಗಳೂ ಇವೆ. ಚಳಿಗಾಲದಲ್ಲಿ ದೇಹವನ್ನು ಇವು ಬೆಚ್ಚಗಿಡುವುದಲ್ಲದೆ ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ. ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸುತ್ತಾ ಬೆಲ್ಲದ ಉಪಯೋಗವನ್ನು ಮಾಡಬಹುದು ಹಾಗೂ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ | Winter Care | ಚಳಿಗಾಲದಲ್ಲಿ ಆರೋಗ್ಯ ಕಾಪಾಡುವುದು ಕಷ್ಟವೇ? ಹಾಗೇನಿಲ್ಲ!

೩. ಸಾಸಿವೆ ಎಣ್ಣೆ: ಉತ್ತರ ಭಾರತದಲ್ಲಿ ಅಡುಗೆ ಎಣ್ಣೆಯಾಗಿ ಬಳಸುವ ಸಾಸಿವೆ ಎಣ್ಣೆ ದೇಹವನ್ನು ಬೆಚ್ಚಗಿಡುವ ಇನ್ನೊಂದು ಆಹಾರ. ಇದಕ್ಕೆ ದೇಹದಲ್ಲಿ ಬಿಸಿಯನ್ನು ಉತ್ಪತ್ತಿ ಮಾಡುವ ಗುಣವಿದ್ದು, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ. ಅತಿಯಾದ ಚಳಿಯಿದ್ದಾಗ ಪಾದದ ಅಡಿಭಾಗದಲ್ಲಿ ಸಾಸಿವೆ ಎಣ್ಣೆಯಿಂದ ಮಸಾಜ್‌ ಮಾಡಿಕೊಂಡು ಮಲಗುವುದರಿಂದ ದೇಹ ಬೆಚ್ಚಗಾಗುವುದಲ್ಲದೆ, ಶೀತ, ನೆಗಡಿಯಂಥ ತೊಂದರೆಗಳೂ ಬರುವುದಿಲ್ಲ.

೪. ಎಳ್ಳು: ಎಳ್ಳಿನಲ್ಲಿ ಅತ್ಯಧಿಕ ಪೋಷಕಾಂಶಗಳಿದ್ದು, ಚಳಿಗಾಲಕ್ಕೆ ಅಗತ್ಯವಾಗಿ ತಿನ್ನಬೇಕಾದ ಆಹಾರಗಳಲ್ಲಿ ಇದೂ ಒಂದು. ಇದು ದೇಹವನ್ನು ಬೆಚ್ಚಗಾಗಿಸುವುದಲ್ಲದೆ, ಪಚನಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಒಟ್ಟು ದೇಹಾರೋಗ್ಯವನ್ನು ಉತ್ತಮಗೊಳಿಸುತ್ತದೆ. ಎಳ್ಳಿನ ಚಿಕ್ಕಿ, ಉಂಡೆಗಳ ರೂಪದಲ್ಲಿ ಇದನ್ನು ಚಳಿಗಾಲದಲ್ಲಿ ತಿನ್ನಬಹುದು.

೫. ಶುಂಠಿ: ಶೀತ, ನೆಗಡಿ, ಕೆಮ್ಮು ಮತ್ತಿತರ ತೊಂದರೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಆಹಾರ ಶುಂಠಿ. ಇದರಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವ ಗುಣವಿದ್ದು, ದೇಹವನ್ನು ಬೆಚ್ಚಗಿಡುವಲ್ಲಿ ಸಹಕಾರ ಮಾಡುತ್ತದೆ. ದೇಹದಲ್ಲಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

೬. ನೆಲಗಡಲೆ: ಚಳಿಗಾಲದ ಸಮಯಕ್ಕೆ ಕರೆಕ್ಟಾಗಿ ಹಾಜರಾಗುವ ನೆಲಗಡಲೆ ಪ್ರೊಟೀನಿನಿಂದ ಸಮೃದ್ಧವಾಗಿರುವ ಆಹಾರ. ಹಾಗಂತ ಅತಿಯಾದರೆ ಅಂತವೂ ವಿಸವೇ ಎಂಬುದನ್ನು ಗಮನದಲ್ಲಿಡುವುದು ಮುಖ್ಯ. ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ನಮ್ಮ ದೇಹವನ್ನು ಬೆಚ್ಚಗಿಟ್ಟುಕೊಳ್ಳಬಹುದು.

ಇದನ್ನೂ ಓದಿ | Winter Care | ಚಳಿಗಾಲದಲ್ಲಿ ಕಫದ ಸಮಸ್ಯೆಯೇ? ಸರಳ ಮದ್ದುಗಳಿವು

Exit mobile version