ನೀವು ಹಲ್ವಾ ಪ್ರಿಯರೇ? ಹಾಗಿದ್ದಲ್ಲಿ ಇನ್ನು ಸ್ವಲ್ಪ ದಿನದಲ್ಲಿ ಮುಗಿದೇ ಹೋಗುವ ಚಳಿಗಾಲದಲ್ಲಿ ಒಂದಿಷ್ಟು ಹಲ್ವಾಗಳ ರುಚಿ ಸವಿಯದಿದ್ದರೆ ಹೇಗೆ ಹೇಳಿ?
ಹೌದು. ಹಲ್ವಾಕ್ಕೂ ಚಳಿಗಾಲಕ್ಕೂ ಬಹಳ ನಂಟು. ಸಾಕಷ್ಟು ಬಗೆಯ ಆಹಾರ ಇದ್ದರಷ್ಟೇ ಚಳಿಗಾಲಕ್ಕೊಂದು ರಂಗು ಬರುವುದು. ಇಲ್ಲದಿದ್ದರೆ, ಚಳಿಗಾಲವು ನೀರಸವಾಗಿ, ಬೆಚ್ಚಗಿನ ಹೊದಿಕೆಗಳಡಿಯಲ್ಲೇ ಮುಗಿದು ಹೋಗುತ್ತದೆ. ಬಿಸಿಬಿಸಿಯಾಗಿ ಹಬೆಯಾಡುವ ಹಲ್ವಾಗಳನ್ನು ತಿನ್ನುತ್ತಿದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ಯಾರೂ ಬೇಕಿಲ್ಲ. ಅಷ್ಟು ಅದ್ಭುತ ಜಗತ್ತು ನಿಮ್ಮ ಬಾಯಲ್ಲಿ ಸೃಷ್ಟಿಯಾದೀತು.
ಹಾಗಾದರೆ, ಚಳಿಗಾಲಕ್ಕೆಂದೇ ಹೇಳಿ ಮಾಡಿಸಿರುವ ಒಂದಷ್ಟು ಹಲ್ವಾಗಳಿವೆ. ಯಾವ ರೆಸ್ಟೋರೆಂಟಿನ ಬಾಗಿಲು ತಟ್ಟಿದರೂ, ವಿಶೇಷವಾಗಿ ಚಳಿಪ್ರದೇಶಗಳಲ್ಲಿ ಒಂದಿಷ್ಟು ಬಿಸಿಬಿಸಿ ಬಿಸಿ ಹಲ್ವಾಗಳು ಇದ್ದೇ ಇರುತ್ತದೆ. ಆದರೆ, ನಾವೇ ಮನೆಯಲ್ಲಿ ಕೈಯಾರೆ ಮಾಡಿದ ಹಲ್ವಾಕ್ಕೆ ಒಂದು ಹಿಡಿ ರುಚಿ ಹೆಚ್ಚೇ. ನೆನಪಿಡಿ. ಚಳಿಗಾಲವಷ್ಟೇ, ಮನಸೋ ಇಚ್ಛೆ ತುಪ್ಪ ಸುರಿದುಕೊಂಡು ಮಾಡಿದ ಹಲ್ವಾಗಳನ್ನು ತಿನ್ನಲು ವೇದಿಕೆ ಸಿದ್ಧ ಮಾಡಿಕೊಡುವುದು. ಹೆಚ್ಚು ಕ್ಯಾಲರಿಗಳು ದೇಹಕ್ಕೆ ಅಗತ್ಯವಾಗಿ ಬೇಕಿರುವ ಚಳಿಗಾಲ ಹಲ್ವಾ ಸವಿಯಲು ಸುಸಮಯ. ಹಾಗಾದರೆ ಚಳಿಗಾಲದಲ್ಲಿ ಮಾಡಲೇಬೇಕಾದ, ಹಲ್ವಾಗಳು ಯಾವುವು ಎಂಬುದನ್ನು ನೋಡೋಣ.
೧. ಬಾದಾಮ್ ಹಲ್ವಾ: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಹೇಳಿ ಮಾಡಿಸಿದಂತ ಸ್ವರ್ಗಸದೃಶ ಹಲ್ವಾವಿದು. ನೆನೆಹಾಕಿದ ಬಾದಾಮಿ ಬೀಜಗಳ ಸಿಪ್ಪೆ ಬಿಡಿಸಿ ರುಬ್ಬಿ ಅದಕ್ಕೆ ತುಪ್ಪ, ಹಾಲು ಹಾಗೂ ಸಕ್ಕರೆಯನ್ನು ಮುಖ್ಯವಾದ ಸಾಮಾಗ್ರಿಗಳಾಗಿ ಹೊಂದಿರುವ ಹಲ್ವವಿದು. ಬಾದಾಮಿ ಆರೋಗ್ಯಕ್ಕೂ ಬೇಕೇ ಬೇಕಾದ ಬೀಜಗಳಲ್ಲಿ ಒಂದಾಗಿರುವುದರಿಂದ ಮಕ್ಕಳ ಬೆಳವಣಿಗೆಗೆ ಇದು ಪೂರಕ.
೨. ಕ್ಯಾರೆಟ್ ಹಲ್ವಾ: ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗೆ ಲಗ್ಗೆಯಿಡುವ ಕ್ಯಾರೆಟ್ ಎಂಬ ವಿಟಮಿನ್ ಎ ಸುಂದರಿ ಎಲ್ಲರ ಮನೆಗಳಲ್ಲಿ ಹಲ್ವಾ ಆಗಿ ಪರಿವರ್ತನೆ ಹೊಂದುವುದೇ ಹೆಚ್ಚು. ತುರಿದ ಕ್ಯಾರೆಟ್, ತುಪ್ಪ, ಚಿಟಿಕೆ ಏಲಕ್ಕಿ, ಬೇಕಾದರೆ ಖೋವಾ, ಸಕ್ಕರೆ ಇಷ್ಟಿದ್ದರೆ ಸಾಕು ಕ್ಯಾರೆಟ್ ಹಲ್ವಾ ಹದಿನೈದೇ ನಿಮಿಷದಲ್ಲಿ ಸಿದ್ಧವಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗಿ ಬಿಡುತ್ತದೆ. ದೆಹಲಿ ಬದಿಯ ಕೆಂಪು ಕ್ಯಾರೆಟ್ ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಸಿಗುವುದರಿಂದ ಇದು ಹಲ್ವಾಕ್ಕೆ ಸೂಕ್ತವಾಗಿ ಕೂಡಿ ಬರುತ್ತದೆ.
೩. ಸೋಹನ್ ಹಲ್ವಾ: ಇದೇನು ಹೊಸ ಹೆಸರು ಎಂದು ಬಹುತೇಕರಿಗೆ ಅನಿಸಬಹುದುದ. ಆದರೆ, ಸೋಹನ್ ಹಲ್ವಾ ಮೊಳಕೆ ಬಂದ ಗೋಧಿಯಿಂದ ತಯಾರು ಮಾಡುವ ಹಲ್ವಾ. ತುಪ್ಪ, ಸಕ್ಕರೆ, ಒಣಬೀಜಗಳು ಇತ್ಯಾದಿಗಳಿದ್ದರೆ ಸೋಹನ್ ಹಲ್ವಾ ಮಾಡಬಹುದು. ಮಾಡಲು ತಿಳಿಯದಿದ್ದರೆ ಇದು ಮಾರುಕಟ್ಟೆಯಲ್ಲೂ ಚಳಿಗಾಲದಲ್ಲಿ ಹಲವು ಊರುಗಳಲ್ಲಿ ಲಭ್ಯವಿರುತ್ತದೆ.
೪. ಕರಿ ಕ್ಯಾರೆಟ್ ಹಲ್ವಾ: ಕೇಸರಿ, ಪಿಂಕ್ ಕ್ಯಾರೆಟ್ ಸಾಮಾನ್ಯವಾಗಿ ಕಾಣಲು ಸಿಕ್ಕರೂ ಕಪ್ಪು ಕ್ಯಾರೆಟ್ ನೋಡಲು ಸಿಗುವುದು ವಿರಳ. ಚಳಿಗಾಲದಲ್ಲಿ ಮಾರುಕಟ್ಟೆಗೆ ಕೆಲವೆಡೆ ಬರುವ ಈ ಕಪ್ಪು ಕ್ಯಾರೆಟ್ ತನ್ನಲ್ಲಿ ಅಧಿಕವಾದ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಇದರ ಹಲ್ವಾ ಕೂಡಾ. ಸಾದಾ ಕ್ಯಾರೆಟ್ ಹಲ್ವಾ ಮಾಡುವ ವಿಧಾನದಲ್ಲೇ ಇದನ್ನು ಮಾಡಿದರೂ ಇದು ತಿನ್ನಲು ಕೊಂಚ ಭಿನ್ನ ರುಚಿ. ನೋಡಲು ಬೀಟ್‌ರೂಟ್ ಹಲ್ವಾದಂತೆಯೇ ಕಾಣುತ್ತದೆ.
ಇದನ್ನೂ ಓದಿ | Winter Care | ಚಳಿಗಾಲದಲ್ಲಿ ಆರೋಗ್ಯ ಕಾಪಾಡುವುದು ಕಷ್ಟವೇ? ಹಾಗೇನಿಲ್ಲ!
೫. ಗೋಂದು ಹಲ್ವಾ: ಸಿಹಿತಿನಿಸುಗಳಲ್ಲಿ ಬಳಸುವ ತಿನ್ನಬಹುದಾದ ಅಂಟು ಗೋಂದನ್ನೂ ಹಲ್ವಾ ಮಾಡಬಹುದು! ಗೋಂದು, ಹಾಲು, ಏಲಕ್ಕಿ, ಗೋಧಿ, ಗೋಡಂಬಿ, ದ್ರಾಕ್ಷಿ ಸೇರಿಸಿ ಈ ಹಲ್ವಾ ಮಾಡಬಹುದು. ಇದು ನರಮಂಡಲಕ್ಕೆ ಒಳ್ಳೆಯದು ಕೂಡಾ. ಒತ್ತಡ ಹಾಗೂ ಖಿನ್ನತೆಗಳಂತಹ ಮಾನಸಿಕ ಸಮಸ್ಯೆಗಳಿಗೂ ಇದು ಒಳ್ಳೆಯದು.
೬. ಹೆಸರು ಬೇಳೆ ಹಲ್ವಾ: ಬಿಸಿಬಿಸಿಯಾದ ಮಿಳ್ಳೆ ತುಪ್ಪ ಸುರಿದ ಹೆಸರುಬೇಳೆ ಹಲ್ವಾವನ್ನು ಸವಿಯಲು ಚಳಿಗಾಲವಲ್ಲದೆ ಬೇರೆ ಬೇಕಿಲ್ಲ. ನೆನೆಸಿ ರುಬ್ಬಿದ ಹೆಸರುಬೇಳೆ, ಬೆಲ್ಲ ಅಥವಾ ಸಕ್ಕೆ, ತುಪ್ಪ ಸೇರಿಸಿ ಮಾಡುವ ಈ ಹಲ್ವಾ ಚಳಿಯೂರುಗಳಲ್ಲಿ ಚಳಿಗಾಲದ ಗೆಳೆಯ. ಈ ಹಲ್ವಾವಿಲ್ಲದೆ ಚಳಿಗಾಲವಿಲ್ಲ. ಚಳಿಗಾಲವಿಲ್ಲದೆ ಈ ಹಲ್ವಾವಿಲ್ಲ, ಅಷ್ಟೇ!
ಇದನ್ನೂ ಓದಿ | Winter care | ಚಳಿಗಾಲದಲ್ಲಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುವ ಆಹಾರಗಳಿವು!