ಚಳಿಗಾಲ ಬಂದರೆ ಮನಸ್ಸು ಆಹಾ ಎಂದರೆ, ಕೂದಲು ಮಾತ್ರ ಅಯ್ಯೋ ಅನ್ನುತ್ತದೆ. ಹೌದು. ಚಳಿಗಾಲವೆಂದರೆ ಮನಸ್ಸಿಗೆ ಹಿತವಾದ ಕಾಲ. ಬೆಚ್ಚಗೆ ಕೂತು ಏನಾರೊಂದು ತಿನ್ನುತ್ತಾ ಸುಖವಾಗಿರಲು ಹೇಳಿ ಮಾಡಿಸಿದ ಕಾಲ. ಆದರೆ, ಚಳಿಗಾಲದಲ್ಲಿ ಚರ್ಮ ಹಾಗೂ ಕೂದಲು ಮಾತ್ರ ಬಹಳ ಕಷ್ಟ ಪಡುತ್ತವೆ. ಮೊದಲೇ ಒಣ ಚರ್ಮದ ಸಮಸ್ಯೆಯಿದ್ದವರಿಗಂತೂ ಚಳಿಗಾಲದಷ್ಟು ದೊಡ್ಡ ಕಷ್ಟ (Winter skin Care) ಇನ್ನೊಂದಿರದು. ಕೂದಲ ಬುಡವೂ ಒಣಗಿ ಹೊಟ್ಟು ಉದುರುತ್ತಾ, ಏನೇ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹಾಗಾದರೆ ಬನ್ನಿ, ಚಳಿಗಾಲ ಬರುವ ಮೊದಲು ಕೂದಲ ಪೋಷಣೆ ಹಾಗೂ ರಕ್ಷಣೆಯನ್ನು (Winter Hair Care) ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ.
1. ಚಳಿಗಾಲ ಬಂದ ತಕ್ಷಣ ಎಲ್ಲರಿಗೂ ಬಿಸಿಬಿಸಿಯಾಗಿ ಹಬೆಯಾಡುವ ನೀರಿನಲ್ಲಿ ಗಂಟೆಗಟ್ಟಲೆ ಸ್ನಾನ ಮಾಡುವ ಬಯಕೆ. ಹಾಗಾಗಿ, ಈ ಕಾಲದಲ್ಲಿ ಸಹಜವಾಗಿಯೇ ಬೇಸಿಗೆಗಿಂತ ಹೆಚ್ಚು ಉಷ್ಣತೆಯಿರುವ ನೀರನ್ನು ಸ್ನಾನಕ್ಕೆ ಬಳಸುತ್ತೇವೆ. ತಲೆ ಸ್ನಾನಕ್ಕೂ ಅಷ್ಟೇ ಬಿಸಿಬಿಸಿಯ ನೀರನ್ನು ಹುಯ್ದುಕೊಂಡು ಆಃಆ ಎನ್ನುತ್ತೇವೆ. ಆದರೆ, ಮುಖ್ಯವಾಗಿ ಇಲ್ಲಿ ಇದನ್ನು ಗಮನದಲ್ಲಿಡಬೇಕು. ಚಳಿ ಎಷ್ಟೇ ಇರಲಿ ಸ್ನಾನಕ್ಕೆ ಅತಿ ಬಿಸಿ ನೀರನ್ನು ಬಳಸುವುದನ್ನು ನಿಲ್ಲಿಸಿ. ಇದರಿಂದ ಚರ್ಮಕ್ಕೂ, ಕೂದಲಿಗೂ ಹಾನಿಯಾಗುತ್ತದೆ. ಕೂದಲುದುರುವಿಕೆ, ಹೊಟ್ಟಿನ ಸಮಸ್ಯೆ, ಕೂದಲು ತುಂಡಾಗುವುದು, ಸೀಳುಕೂದಲು, ಸೇರಿದಂತೆ ಅನೇಕ ಕೂದಲ ಸಮಸ್ಯೆ ಶುರುವಾಗುವುದು ಇಲ್ಲಿಂದಲೇ. ಹಾಗಾಗಿ ಚಳಿ ಎಷ್ಟೇ ಇದ್ದರೂ ಉಗುರು ಬೆಚ್ಚಗಿನ ನೀರಿನಲ್ಲೇ ಸ್ನಾನ ಮಾಡಿ.
2. ಸ್ನಾನವನ್ನೂ ಬಿಸಿನೀರಿನಲ್ಲೇ ಮಾಡಿ, ಕೂದಲ ಸ್ಟೈಲಿಂಗ್‌ಗೂ ಪದೇ ಪದೇ ಉಪಕರಣಗಳನ್ನು ಬಳಸುವ ಮೂಲಕ ಕೂದಲನ್ನು ಮತ್ತೆ ಉಷ್ಣತೆಗೆ ಒಡ್ಡುತ್ತೀರಾದರೆ ಕಥೆ ಮುಗಿದಂತೆಯೇ. ಕೂದಲು ಆಗ ಒಂದೆರಡು ದಿನಕ್ಕೆ ಚಂದ ಕಂಡೀತಾದರೂ ಆಮೇಲೆ, ಕಳಾಹೀನವಾಗಿ ಕಾಣಿಸುತ್ತದೆ. ಹೊಳಪನ್ನೂ ಕಳೆದುಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೇರ್ ಸ್ಟೈಲಿಂಗ್ ಉಪಕರಣ ಬಳಸುವುದನ್ನು ಕಡಿಮೆ ಮಾಡಿ.
3. ಒದ್ದೆಕೂದಲಲ್ಲೇ ಮನೆಯಿಂದ ಹೊರಗೆ ಕಾಲಿಡಬೇಡಿ. ಮೊದಲೇ ಚಳಿಗಾಲ, ಇನ್ನು ಒದ್ದೆಕೂದಲಲ್ಲಿ ಹಾಗೆಯೇ ಹೊರಗೆ ಕಾಲಿಟ್ಟರೆ ವಾತಾವರಣದ ಚಳಿಯೂ ಸೇರಿಕೊಂಡು ನಿಮ್ಮ ಕೂದಲನ್ನು ಇನ್ನಷ್ಟು ಹಾನಿಗೊಳಿಸುತ್ತದೆ.
4. ಕೂದಲಿಗೆ ಎಣ್ಣೆ ಹಾಕುವುದೆಂದರೆ ಬಹುತೇಕರಿಗೆ ಅಲರ್ಜಿ. ಆದರೆ, ಚಳಿಗಾಲದಲ್ಲಾದರೂ ಕನಿಷ್ಟ ಎಣ್ಣೆ ಹಾಕುವ ಅಭ್ಯಾಸ ಬೆಳೆಸಿಕೊಳ್ಳಿ. ಚಳಿಗಾಲದ ಶುಷ್ಕ ವಾತಾವರಣಕ್ಕೆ ತೆರೆದುಕೊಂಡು ಕೂದಲು ಇನ್ನಷ್ಟು ಒಣಕಲಾಗುತ್ತದೆ. ಎಣ್ಣೆ ಕೂದಲಿಗೆ ಹೊಳಪು ನೀಡುವ ಜೊತೆಗೆ ಬೇರಿನಿಂದ ಪೋಷಣೆಯನ್ನು ನೀಡಿ, ಒಣಗುವುದನ್ನು ತಪ್ಪಿಸುತ್ತದೆ. ಹೀಗಾಗಿ, ಕೂದಲುದುರುವಿಕೆಯಂತ ಸಮಸ್ಯೆ ಬಾರದು.
5. ವಾರದಲ್ಲಿ ಒಮ್ಮೆಯಾದರೂ ಕೂದಲಿಗೆ ಡೀಪ್ ಕಂಡೀಷನ್ ಮಾಡಿ. ಲಿವ್ ಇನ್ ಕಂಡೀಷನ್ ಮಾಡಿದರಾದರೂ ಓಕೆ. ಇವೆಲ್ಲಾ ಸಾಧ್ಯವಾಗದಿದ್ದರೆ, ಕೂದಲಿಗೆ ಉಗುರು ಬೆಚ್ಚಗಿನ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ, ಒಂದೆರಡು ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಇದನ್ನೂ ಓದಿ: Hair Care Tips: ಹರಳೆಣ್ಣೆಯನ್ನು ಹೇಗೆ ಬಳಸುವ ಮೂಲಕ ಉದ್ದವಾದ ಕಪ್ಪುಗೂದಲು ಪಡೆಯಬಹುದು ಗೊತ್ತೇ?
6. ಕೂದಲ ಹೆಚ್ಚಿನ ಪೋಷಣೆಗೆ ಚಳಿಗಾಲಕ್ಕೆ ಹೊಂದುವ ಯಾವುದಾದರೂ ಹೇರ್ ಮಾಸ್ಕ್ ಅನ್ನು ತಿಂಗಳಿಗೊಮ್ಮೆಯಾದರೂ ಬಳಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಹೇರ್ ಮಾಸ್ಕ್‌ಗಳನ್ನು ಬಳಸುವ ಮುನ್ನ, ಅವು ನಿಮ್ಮ ಕೂದಲಿಗೆ ಸೂಕ್ತವೇ ಎಂದು ನೋಡಿ. ಮನೆಯಲ್ಲೇ ಮಾಸ್ಕ್‌ಗಳನ್ನು ಮಾಡಿಯೂ ಬಳಸಿಕೊಳ್ಳಬಹುದು.
7. ಪದೇ ಪದೇ ತಲೆಗೆ ಸ್ನಾನ ಮಾಡಬೇಡಿ. ಶಾಂಪೂವಿನಿಂದ ತಿಕ್ಕಿ ತಿಕ್ಕಿ ತೊಳೆಯಬೇಡಿ. ಮೆದುವಾದ ಶಾಂಪೂನಿಂದ ತೊಳೆಯಿರಿ.
8. ಹಿಮ ಬೀಳುವ, ಮಂಜು ಬೀಳುವ ಹೊತ್ತಿನಲ್ಲಿ ವಾಕಿಂಗ್, ಜಾಗಿಂಗ್ ಮಾಡಲು ಹೊರಗೆ ಹೋಗುತ್ತೀರಿ ಎಂದಾದಲ್ಲಿ, ತಲೆಯನ್ನು ಟೋಪಿಯಿಂದ ಕವರ್ ಮಾಡಿಕೊಳ್ಳಿ. ಹುಡ್ ಇರುವ ಜಾಕೆಟ್ ಬಳಸಿ.
9. ಆರರಿಂದ ಎಂಟು ವಾರಗಳಿಗೊಮ್ಮೆಯಾದರೂ ಹೇರ್ ಕಟ್ ಮಾಡಿಸಿಕೊಳ್ಳಿ. ತುದಿಯನ್ನು ಟ್ರಿಮ್ ಮಾಡಿಸಿ. ಆಗ ಸೀಳುಕೂದಲ ಸಮಸ್ಯೆಯನ್ನು ತಡೆಯಬಹುದು.
ಇದನ್ನೂ ಓದಿ: Life Goals: ಗುರಿಯೆಡೆಗೆ ಸ್ಪಷ್ಟ ನಡೆಗೆ ಇವಿಷ್ಟಾದರೂ ಶಿಸ್ತು ಬೇಕು!