ಇನ್ನೇನು ಚಳಿಗಾಲ (winter) ಬಂದೇ ಬಿಡ್ತು! ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಉಷ್ಣತಾಮಾಪಕದಲ್ಲಿ ಪಾದರಸ ಕೆಳಗಿಳಿಯುತ್ತಾ ಬರುತ್ತಿದ್ದರೆ, ನಾವು ಸ್ವೆಟರನ್ನು ಅಮುಕಿ ಹಿಡಿದು, ಪಾಕೆಟ್ಟಿನ ಒಳಗೆ ಕೈತೂರಿಸಿ ಕೂರುತ್ತೇವೆ. ಬಿಸಿಬಿಸಿ ಚಹಾ ಹೀರಿಕೊಂಡು, ಮೆತ್ತಗಿನ ಉಣ್ಣೆ ಬೆಡ್‌ಶೀಟುಗಳೊಳಗೆ ಮೈತೂರಿಸಿಕೊಂಡು ಕೆಲಸವಿಲ್ಲದೆ ಮಲಗುವ ಸುಖ ಎಂದರೆ ಆಹಾ! ಆದರೆ, ಸುಮ್ಮನೆ ಕೂರುವಷ್ಟು ಪುರುಸೊತ್ತು ಎಲ್ಲಿದೆ ಹೇಳಿ. ಹೀಗಾಗಿ ಕೆಲಸದ ಮಧ್ಯೆ ಅಲ್ಲಿಲ್ಲಿ ಸುತ್ತಾಟ ಸಾಮಾನ್ಯ. ಇಂಥ ಸಂದರ್ಭ ಆರೋಗ್ಯದ ಏರುಪೇರು (winter health problems) ಕೂಡಾ ಚಳಿಗಾಲದಲ್ಲಿ ಸಾಮಾನ್ಯ. ಕೇವಲ ಉಷ್ಣತೆಯಲ್ಲಿ ಬದಲಾವಣೆಯಿಂದ ಆರೋಗ್ಯ ಹದಗೆಡುವುದಿಲ್ಲ. ಇಲ್ಲಿ ಸಾಕಷ್ಟು ಬೇರೆ ವಿಚಾರಗಳೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಉಷ್ಣತೆಯಲ್ಲಿ ಬದಲಾವಣೆಯಾಗುವುದರಿಂದ ವಾತಾವರಣದಲ್ಲೂ ಬದಲಾವಣೆಯಾಗುತ್ತದೆ. ಅಂದರೆ, ಬೀಸುವ ಚಳಿಗಾಳಿ, ಒಣ ಹವೆ ಹಾಗೂ ಅವುಗಳಿಗೆ ನಾವು ನಮ್ಮನ್ನು ಒಡ್ಡಿಕೊಳ್ಳುವ ಸಂದರ್ಭಗಳು ನಮ್ಮ ಆರೋಗ್ಯ ಹದಗೆಡುವಂತೆ (winter health guide) ಮಾಡುತ್ತದೆ. ಹಾಗಾದರೆ ಬನ್ನಿ, ಆರೋಗ್ಯದ ವಿಚಾರದಲ್ಲಿ ಚಳಿಗಾಲದಲ್ಲಿ ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳೇನು (winter health tips) ಎಂಬುದನ್ನು ನೋಡೋಣ.
1. ಚಳಿಗಾಲ ಬರುವ ಸಂದರ್ಭದಲ್ಲಿ ಎಲ್ಲರೂ ಮಾಡುವ ಬಹುದೊಡ್ಡ ತಪ್ಪು ಎಂದರೆ ಸರಿಯಾಗಿ ನೀರು ಕುಡಿಯದೆ ಇರುವುದು. ಅಂದರೆ, ಚಳಿಗಾಲ ಬರುತ್ತಿರುವ ಹಾಗೆಯೇ, ಸೆಖೆ ಕಡಿಮೆಯಾದ್ದರಿಂದ ಸಹಜವಾಗಿಯೇ ಬಾಯಾರಿಕೆಯೂ ಕಡಿಮೆಯಾಗುತ್ತದೆ. ಹೀಗಾಗು ನೀರು ಕುಡಿಯಲು ಆಲಸ್ಯವೂ ಶುರುವಾಗುತ್ತದೆ. ಆದರೆ, ನಿಜವಾಗಿಯೂ ಸಂದರ್ಭದಲ್ಲಿ ದೇಹಕ್ಕೆ ನೀರಿನ ಅಗತ್ಯ ತುಂಬಾ ಇದೆ. ನಮ್ಮ ದೇಹ ಚಳಿಗಾಲದಲ್ಲಿ ಬೆಚ್ಚಗಿರಬೇಕಾದರೆ, ಅದಕ್ಕೆ ಸಾಕಷ್ಟು ಪೋಷಕಾಂಶಗಳುಳ್ಳ ಆಹಾರವೂ, ನೀರೂ ಬೇಕಾಗುತ್ತದೆ. ನೀರು ಕಡಿಮೆ ಕುಡಿದರೆ, ಇದ್ದಕ್ಕಿದ್ದಂತೆ ಬದಲಾಗುವ ಹವಾಮಾನದಿಂದಾಗಿ ಹೊಟ್ಟೆನೋವು, ತಲೆಸುತ್ತು ಸೇರಿದಂತೆ ನಾನಾ ಸಮಸ್ಯೆಗಳು ಬರುತ್ತವೆ. ಹಾಗಾಗಿ, ದೇಹಕ್ಕೆ ನೀರಿನ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಚಳಿಗಾಲದಲ್ಲೂ ಅತ್ಯಂತ ಅಗತ್ಯ.
2. ಚಳಿಗಾಲದಲ್ಲಿ ಸಾಮಾನ್ಯವಾಗಿಯೇ ಕಾಯಿಲೆಗಳು ಹೆಚ್ಚು ಹೀಗಾಗಿ ದೇಹವು ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಕಷ್ಟು ಪೋಷಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯ. ಮುಖ್ಯವಾಗಿ, ಚಳಿಗಾಲದಲ್ಲಿ ಮಾರುಕಟ್ಟೆ ಬರುವ ಆಯಾ ಋತುವಿನಲ್ಲಿ ಬೆಳೆಯುವ ಹಣ್ಣು ಹಂಪಲುಗಳ ಸೇವನೆ, ತರಕಾರಿಗಳ ಸೇವನೆ ಬಹಳ ಒಳ್ಳೆಯದು. ಇವು ಆಯಾ ಕಾಲಕ್ಕೆ ತಕ್ಕಂತೆ ಏನೇನು ನಮ್ಮ ದೇಹಕ್ಕೆ ಅಗತ್ಯವೋ ಅದನ್ನು ಪ್ರಕೃತಿ ಮಾತೆಯೇ ನಮಗೆ ಕೊಟ್ಟ ವರದಾನ.
3. ಚಳಿಗಾಲದಲ್ಲಿ ಸಹಜವಾಗಿಯೇ ನಮಗೆ ಮಸಾಲೆಯುಕ್ತ ಆಹಾರಗಳು, ಬಾಯಿಗೆ ರುಚಿಯೆನಿಸುವ ಎಣ್ಣೆಯಲ್ಲಿ ಕರಿದ ಖಾರವಾದ ತಿನಿಸುಗಳು, ಕುರುಕಲುಗಳು ಸೇರಿದಂತೆ, ಯಾವುದು ಅಷ್ಟೊಂದು ಆರೋಗ್ಯವಲ್ಲವೋ, ಅಂತಹ ಆಹಾರವೇ ಇಷ್ಟವಾಗುವುದು ಸಹಜ. ಆದರೆ, ಇಂತಹ ತಿನಿಸುಗಳನ್ನು ಹೆಚ್ಚು ತಿನ್ನುವುದು ನಿಜಕ್ಕೂ ಒಳ್ಳೆಯದಲ್ಲ. ಇವುಗಳಲ್ಲಿ ಭರಪೂರ ಸೋಡಿಯಂ ಹಾಗೂ ಕ್ಯಾಲರಿಗಳಿರುತ್ತವೆ. ಹಾಗಾಗಿ, ನಿಮ್ಮ ಆರೋಗ್ಯದ ವಿಚಾರದಲ್ಲಿ ಕೊಂಚ ನಿಮ್ಮ ಹತೋಟಿಯೂ ಇರಲಿ. ಯೋಚಸಿ ತಿನ್ನಿ. ಆದಷ್ಟೂ ಪದೇ ಪದೇ ಇಂತಹುಗಳ ಮೊರೆ ಹೋಗುವುದರಿಂದ ದೂರವಿರಿ.
4. ಆದಷ್ಟೂ ಬಿಸಿಬಿಸಿಯಾಗಿ ಉಣ್ಣಿ. ಆಗಷ್ಟೇ ಅಡುಗೆ ಮಾಡಿಕೊಂಡು ತಾಜಾ ಆಗಿ ತಿನ್ನಲು ಪ್ರಯತ್ನಿಸಿ. ಚಳಿಗಾಲದಲ್ಲಿ ಹೆಚ್ಚು ಹೊತ್ತು ಇಟ್ಟ ತಣ್ಣಗಾದ ಆಹಾರಗಳು ಆರೋಗ್ಯಕ್ಕೆ ಯೋಗ್ಯವಲ್ಲ. ಮನೆಯಲ್ಲೇ, ಅಡುಗೆ ಮಾಡಿ ಬಿಸಿಬಿಸಿಯಾಗಿ ಉಣ್ಣಿ. ಹೊರಗಡೆಯ ಬಿಸಿ ಆಹಾರಗಳು ಖಂಡಿತವಾಗಿಯೂ ತಾಜಾ ಅಲ್ಲ. ಹಾಗಾಗಿ, ಹೊರಗಿನ ಆಹಾರಗಳು ಎಷ್ಟೇ ಆಕರ್ಷಿಸಿದರೂ, ನಿಮ್ಮ ಮನೋನಿಗ್ರಹದಿಂದ ಸಾಧ್ಯವಾದಷ್ಟೂ ಮನೆಯ ಊಟವನ್ನೇ ಮುಖ್ಯ ಗುರಿಯನ್ನಾಗಿಸಿ. ಆಗ ಚಳಿಗಾಲ ಆರೋಗ್ಯಕರವಾಗಿ, ಸುಮಧುರವೂ ಆಗಿರುತ್ತದೆ.
ಇದನ್ನೂ ಓದಿ: Winter Tips |ಚಳಿಗಾಲದಲ್ಲಿ ಮೊಸರು ಮಾಡುವುದು ಕಷ್ಟವೇ? ಇಲ್ಲಿವೆ ಸಪ್ತಸೂತ್ರಗಳು!