Site icon Vistara News

Winter skin care: ಚಳಿಗಾಲದ ಒಣ ತ್ವಚೆಯ ಮಂದಿಗೆ ಇಲ್ಲಿವೆ ಸುಲಭ ಪರಿಹಾರ!

winter skin care

winter skin care

ಚಳಿಗಾಲ ಬಂತೆಂದರೆ ಕೆಲವರ ಸಮಸ್ಯೆಯೇ ಬೇರೆ. ಚಳೆಯೆಂದರೆ ಖುಷಿಯೇ ಇದ್ದರೂ ಹೆಚ್ಚು ತಲೆಬಿಸಿಯಾಗುವುದು ಚರ್ಮದ ಬಗ್ಗೆ. ಚಳಿಗಾಲ ಬಂದ ತಕ್ಷಣ ಚರ್ಮವೆಲ್ಲ ಬಿರುಕು ಬಿರುಕಾಗಿ, ತುಟಿ ಒಡೆದು, ಹಿಮ್ಮಡಿ ಬಿರುಕುಬಿಟ್ಟು ರಕ್ತ ಸೋರುವವರೆಗೆ ಈ ಸಮಸ್ಯೆ ಯಾತನಾಮಯವಾಗಬಹುದು. ಇದು ಮೇಲ್ನೋಟಕ್ಕೆ ಸಣ್ಣ ಸಮಸ್ಯೆಯೆಂದು ಕಾಣಬಹುದು. ಆದರೆ ಅನುಭವಿಸುವವರಿಗಷ್ಟೇ ಇದರ ತೀವ್ರತೆ ಅರಿವಿಗೆ ಬರುವುದು.

ಬಹಳ ಸಾರಿ ನಮ್ಮ ಸಣ್ಣ ಸಣ್ಣ ನಿತ್ಯದ ಅಭ್ಯಾಸಗಳೂ ಕೂಡಾ ನಮ್ಮ ಮೈಯ ಚರ್ಮದಿಂದ ನೀರಿನಂಶವನ್ನು ಪೂರ್ತಿಯಾಗಿ ತೆಗೆದು ಹಾಕಿಬಿಡುತ್ತದೆ. ಚಳಿಗಾಲವೆಂದು ಬಿಸಿಬಿಸಿ ಹಬೆಯಾಡುವ ನೀರಿನಲ್ಲಿ ಗಂಟೆಗಟ್ಟಲೆ ಹಂಡೆ ಸ್ನಾನ ಮಾಡುವುದು, ನಾವು ಬಳಸುವ ಸೋಪು, ಶಾಂಪು, ಮುಖ ತೊಳೆಯುವ ಫೇಸ್‌ವಾಶ್‌, ಆಗಾಗ ಬಳಸುವ ಫೇಸ್‌ ಪ್ಯಾಕ್‌ ಅಥವಾ ಇನ್ಯಾವುದೋ ಬ್ಯೂಟಿ ಪ್ರಾಡಕ್ಟ್‌ ಕೂಡಾ ಹೀಗೆ ಚರ್ಮವನ್ನು ಸಾಧಾರಣಕ್ಕಿಂತ ಹೆಚ್ಚು ಶುಷ್ಕವಾಗಿಸಬಹುದು. ಹಾಗಾದರೆ, ನಾವು ಈ ಎಲ್ಲ ಸಣ್ಣಪುಟ್ಟ ನಿತ್ಯದ ವಿಚಾರಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿ ಕೆಲವು ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಕೊಂಡರೆ, ಖಂಡಿತವಾಗಿಯೂ ಸಮಸ್ಯೆ ಉಲ್ಬಣಿಸದಂತೆ ಕಾಪಾಡಬಹುದು.

೧. ಎಣ್ಣೆಗಳು: ಸಸ್ಯಜನ್ಯ ಎಣ್ಣೆಗಳು ಚರ್ಮದ ಶುಷ್ಕತೆಯ ತೊಂದರೆ ಇರುವ ಮಂದಿಗೆ ಅತ್ಯುತ್ತಮ. ತೆಂಗಿನೆಣ್ಣೆ, ಎಳ್ಳೆಣ್ಣೆ, ಸೂರ್ಯಕಾಂತಿ ಎಣ್ಣೆ, ಬಾದಾಮಿ ಎಣ್ಣೆ ಇತ್ಯಾದಿಗಳನ್ನು ದಿನವೂ ಹಚ್ಚುವ ಮೂಲಕ ಚರ್ಮದ ಶುಷ್ಕತೆಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಬಹುದು.

೨. ಆಲಿವ್‌ ಎಣ್ಣೆ ಹಾಗೂ ಸಕ್ಕರೆ ಸ್ಕ್ರಬ್‌: ಚಳಿಗಾಲದಲ್ಲಿ ಚರ್ಮಕ್ಕೆ ಸೂಕ್ತವೆನಿಸುವ ಸ್ಕ್ರಬ್‌ ಮಾಡಿ. ಒಣ ಚರ್ಮಕ್ಕೆ ಅತಿಯಾದ ಸ್ಕ್ರಬ್‌ ಒಳ್ಳೆಯದಲ್ಲ. ಅದಕ್ಕಾಗಿ ವಾರದಲ್ಲೊಮ್ಮೆ ಆಲಿವ್‌ ಎಣ್ಣೆ ಹಾಗೂ ಸಕ್ಕರೆಯ ಸ್ಕ್ರಬ್ಬನ್ನು ಬಳಸಬಹುದು. ಅರ್ಧ ಕಪ್‌ ಸಕ್ಕರೆ, ೨ ಚಮಚ ಆಲಿವ್‌ ಎಣ್ಣೆಯ ಜೊತೆಗೆ ಮಿಕ್ಸ್‌ ಮಾಡಿ. ಇದಕ್ಕೆ ನಿಮಗೆ ಪರಿಮಳವೂ ಬೇಕೆಂದರೆ, ಲ್ಯಾವೆಂಡರ್‌ ಎಣ್ಣೆಯಂತಹ ಎಸೆನ್ಶಿಯಲ್‌ ಎಣ್ಣೆಯನ್ನು ಚಿಟಿಕೆಯಷ್ಟು ಸೇರಿಸಿಕೊಳ್ಳಬಹುದು. ಹೀಗೆ ರೆಡಿ ಮಾಡಿದ ಸ್ಕ್ರಬ್‌ನಿಂದ ಮುಖಕ್ಕೆ ಮೆತ್ತಗೆ ಹೆಚ್ಚು ಒತ್ತಡ ಹಾಕದೆ ನೀವೇ ಮನೆಯಲ್ಲಿ ಸ್ಕ್ರಬ್‌ ಮಾಡಿಕೊಳ್ಳುವುದರಿಂದ ಚರ್ಮ ನುಣುಪಾಗುತ್ತದೆ. ಒಣ ತ್ವಚೆಗೆ ಕಳೆ ಬರುತ್ತದೆ.

೩. ಮಸಾಜ್‌: ಮಲಗುವ ಮೊದಲು ಪ್ರತಿನಿತ್ಯ ಎಣ್ಣೆ ಮಸಾಜ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ತೆಂಗಿನೆಣ್ಣೆಯಿಂದ ಮಲಗುವ ಮೊದಲು, ಮುಖ ಕೈಕಾಲು, ಹಿಮ್ಮಡಿಗೆ ಮಸಾಜ್‌ ಮಾಡಿಕೊಡು ಸಾಕ್ಸ್‌ ಹಾಕಿ ಮಲಗುವುದರಿಂದ ಚರ್ಮ ಚಳಿಗೆ ಬಿರುಕು ಬಿಡುವುದಿಲ್ಲ. ತೆಂಗಿನೆಣ್ಣೆ ಯಾವ ಮಾಯ್‌ಶ್ಚರೈಸರ್‌ಗೂ ಕಡಿಮೆಯಿಲ್ಲ.

ಇದನ್ನೂ ಓದಿ : Winter dry skin | ಒಡೆಯುವ ಚರ್ಮ: ಚಳಿಗಾಲದಲ್ಲಿ ಮಾಡುವ ಐದು ತಪ್ಪುಗಳು!

೪. ಬಾಳೆಹಣ್ಣು ಮತ್ತು ಜೇನುತುಪ್ಪದ ಮಾಸ್ಕ್‌: ಮಾಸ್ಕ್‌ ಆಯ್ಕೆಯಲ್ಲಿ ಎಚ್ಚರಿಕೆಯಿರಲಿ. ಒಣ ತ್ವಚೆಗೆ ಸೂಕ್ತವೆನಿಸುವ ಮಾಸ್ಕ್‌ ಮುಖ್ಯ ಎಂಬುದುದ ತಿಳಿದಿರಲಿ. ಮುಖದ ಎಲ್ಲ ಎಣ್ಣೆಯಂಶ ಹಾಗೂ ನೀರಿನಂಶವನ್ನು ಹೀರಿ ತೆಗೆದು ಬಿಡುವ ಮಾಸ್ಕ್‌ ಬಳಸಿದರೆ ಮುಖ ಇನ್ನೂ ಒಣಗುತ್ತದೆ. ಹಾಗಾಗಿ ಬಾಳೆಹಣ್ಣಿನ ಈ ಮಾಸ್ಕ್‌ ಉತ್ತಮ. ಯಾಕೆಂದರೆ, ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಪೈಟೋ ಕೆಮಿಕಲ್ಸ್‌ಗಳೂ ನೀರಿನಂಶವೂ ಅತಿ ಹೆಚ್ಚು ಇರುವುದರಿಂದ ಚರ್ಮವನ್ನು ನಯವಾಗಿ ಇರಿಸುವ ಗುಣ ಇದೆ. ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣು, ಒಂದು ಚಮಚ ಅಕ್ಕಿಹುಡಿ, ಚಿಟಿಕೆ ಅರಿಶಿನ ಪುಡಿ, ಎರಡು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಮಾಸ್ಕ್‌ನಂತೆ ಹಚ್ಚಿ ೧೫ರಿಮದ ೨೦ ನಿಮಿಷ ಬಿಟ್ಟು ತೊಳೆಯಬಹುದು. ಇದು ಚರ್ಮವನ್ನು ನಯವಾಗಿಸಿ, ಬಿರುಕು ಬಿಡದಂತೆ, ಮುಖಕ್ಕೆ ಬೇಕಾದ ನೀರಿನಂಶವನ್ನು ಸಮತೂಕದಲ್ಲಿ ನೀಡುವುದರಿಂದ ಚಳಿಗಾಲಕ್ಕೆ ಹೇಳಿ ಮಾಡಿಸಿದಂತ ಮಾಸ್ಕ್‌ ಆಗಿದೆ.

೫. ಲೋಳೆಸರ: ಸದಾ ಒಣ ಚರ್ಮದ ತೊಂದರೆ ಇರುವ ಮಂದಿ ಅಲೋವೆರಾ ಅಥವಾ ಲೋಳೆಸರ ಬಹಳ ಉತ್ತಮ ನೈಸರ್ಗಿಕ ಪರಿಹಾರ. ತಾಜಾ ಲೋಳೆಸರ ಸಿಗದಿದ್ದರೆ, ಅಲೊವೆರಾ ಜೆಲ್‌ ಮಾರುಕಟ್ಟೆಯಲ್ಲೂ ವಿವಿಧ ಬ್ರ್ಯಾಂಡ್‌ಗಳಲ್ಲಿ ಲಭ್ಯವಿದೆ. ಅವುಗಳನ್ನು ದಿನವೂ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ, ಕೇವಲ ಒಣ ಚರ್ಮ ಮಾತ್ರವಲ್ಲ, ಚರ್ಮದ ಹಲವು ಸಮಸ್ಯೆಗಳಿಗೆ ಅಲೋವೆರಾ ಉತ್ತಮ ಔಷಧಿ. ಚರ್ಮಕ್ಕೆ ಹೊಳಪೂ ನೀಡಿ ಕಲೆಗಳಿಂದ ಮುಕ್ತವಾಗಿಸುವ ತಾಕತ್ತೂ ಲೋಳೆಸರದಲ್ಲಿದೆ.

ಇದನ್ನೂ ಓದಿ: Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

Exit mobile version