Site icon Vistara News

Winter Tips |ಚಳಿಗಾಲದಲ್ಲಿ ಮೊಸರು ಮಾಡುವುದು ಕಷ್ಟವೇ? ಇಲ್ಲಿವೆ ಸಪ್ತಸೂತ್ರಗಳು!

winter tips

ಬೆಂಗಳೂರು: ಭಾರತೀಯರಿಗೆ ಮೊಸರಿಲ್ಲದೆ ಊಟವಿಲ್ಲ. ಏನೇ ಅಡುಗೆಯಿದ್ದರೂ ಪಕ್ಕದಲ್ಲೊಂದು ಕಪ್‌ನಲ್ಲಿ ಮೊಸರು ಇರಲೇಬೇಕು. ಮೊಸರು, ಊಟದ ಜೊತೆಗೊಂದು ತಾಜಾತನದ ಅನುಭೂತಿಯನ್ನು, ಒಂದು ಸಂತೃಪ್ತ ಭಾವನೆಯನ್ನೂ, ಊಟಕ್ಕೆ ಇನ್ನಷ್ಟು ರುಚಿಯನ್ನೂ ಕೊಡುವದರಲ್ಲಿ ಯಾವ ಅನುಮಾನವೂ ಇಲ್ಲ. ಜೊತೆಗೆ, ದೇಹಕ್ಕೆ ಅಗತ್ಯ ಬೇಕಾಗುವ ಕ್ಯಾಲ್ಶಿಯಂ ಸೇರಿದಂತೆ ಇತರ ಪೋಷಕಾಂಶಗಳನ್ನೂ ನೀಡುವುದರಲ್ಲಿ ಎತ್ತಿದ ಕೈ. ಊಟದ ಜೊತೆಗೆ ಖಾಲಿ ಮೊಸರು ಸೇವಿಸುವುದಷ್ಟೇ ಅಲ್ಲ, ದಿನನಿತ್ಯ ಮೊಸರಿನಿಂದ ಲಸ್ಸಿ, ಮಜ್ಜಿಗೆ, ಸ್ಮೂದಿಗಳು, ರೈತಾ, ಕಡಿ, ಹುಳಿ ಹೀಗೆ ಅನೇಕ ಬಗೆಯ ಅಡುಗೆಗಳನ್ನೂ ತಯಾರಿಸಿ ಉಣ್ಣುತ್ತೇವೆ. ಮೊಸರೂ ಹಾಲಿನಂತೆ ಪ್ಯಾಕ್‌ ಆಗಿ ಬಂದರೂ ಮನೆಯಲ್ಲೇ ಮೊಸರು ಮಾಡಿಕೊಳ್ಳುವುದು ಯಾವಾಗಲೂ ಆರೋಗ್ಯಕರ. ಆದರೆ, ಬಹಳಷ್ಟು ಮಂದಿಗೆ ಚಳಿಗಾಲ ಬರುತ್ತಿದ್ದ (Winter Tips) ಹಾಗೆ ಇಂಥದ್ದೊಂದು ಸಮಸ್ಯೆ ಶುರುವಾಗುತ್ತದೆ.

ಮನೆಯಲ್ಲಿ ಹಾಲಿಗೆ ಹೆಪ್ಪು ಹಾಕಿಟ್ಟರೂ ಮೊಸರು ಸಿದ್ಧವಾಗುವುದಿಲ್ಲ ಎಂಬುದು ಹಲವರ ದೂರು. ಚಳಿಗಾಲದಲ್ಲಿ ವಾತಾವರಣದ ಉಷ್ಣತೆ ಕಡಿಮೆಯಾಗುವುದರಿಂದ ತೇವಾಂಶವೂ ಕಡಿಮೆಯಾಗುತ್ತದೆ. ಆಗ ಮೊಸರಾಗಲು ಅಗತ್ಯ ಬೇಕಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯೂ ಕಡಿಮೆಯಾಗುವುದರಿಂದ ಸಹಜವಾಗಿಯೇ ಹಾಲು ಮೊಸರಾಗಲು ಸಮಯ ಹೆಚ್ಚು ಬೇಕಾಗುತ್ತದೆ. ಅಥವಾ ಸರಿಯಾಗಿ ಆಗುವುದಿಲ್ಲ. ಈ ಬಗ್ಗೆ ಮನೆಯಲ್ಲಿ ತಾವೇ ಸಾಕಷ್ಟು ಅನ್ವೇಷಣೆ, ಸಂಶೋಧನೆ, ಪ್ರಯೋಗಗಳನ್ನು ಮಾಡಿಕೊಂಡು ನೋಡಿದರೂ, ಅಂತಹ ದೊಡ್ಡ ಪ್ರಯೋಜನ ಕಾಣದೆ, ಚಳಿಗಾಲವನ್ನು ಶಪಿಸುತ್ತಾ, ಅಂಗಡಿಯಿಂದ ಮೊಸರು ಕೊಳ್ಳಬೇಕಾಗುತ್ತದೆ. ಇಂತಹ ಅನುಭವ ನಿಮ್ಮದಾಗಿದ್ದರೆ, ಚಳಿಗಾಲದಲ್ಲಿ ಅಂಗಡಿಯ ಮೊಸರೇ ಗತಿ ಎಂದು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಇದಕ್ಕೆ ಸಾಕಷ್ಟು ಸರಳೋಪಾಯಗಳೂ ಇವೆ. ಅವುಗಳ ಬಗೆಗಿನ ಮಾಹಿತಿಗಳು ಇಲ್ಲಿವೆ.

ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

Winter Tips

ಬಿಸಿ ಹಾಲನ್ನು ಬಳಸಿ
ಹಾಲಿಗೆ ಹೆಪ್ಪು ಹಾಕುವ ಮೊದಲು ಹಾಲನ್ನು ಸ್ವಲ್ಪ ಬಿಸಿ ಮಾಡಿ. ಬೇಸಿಗೆಯಲ್ಲಿ ಉಗುರು ಬೆಚ್ಚಗಿನ ಹಾಲು ಸಾಕಾಗುತ್ತದೆ. ಆದರೆ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚೇ ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ, ತೀರಾ ಕುದಿಯುವ ಮಟ್ಟದ ಬಿಸಿಯೂ ಮಾಡಬೇಡಿ.

ಕ್ಯಾಸೆರೋಲ್‌ ಬಳಸಿ
ಬೇಸಿಗೆಯಲ್ಲಿ ಸ್ಟೀಲ್‌, ಗಾಜು, ಪಿಂಗಾಣಿ ಅಥವಾ ಯಾವುದೇ ಬಗೆಯ ಪಾತ್ರೆಯಲ್ಲಿ ಮೊಸರು ಮಾಡಲು ಹೆಪ್ಪು ಹಾಕಿದರೆ ನಡೆಯುತ್ತದೆ. ಆದರೆ, ಚಳಿಗಾಲದಲ್ಲಿ ಕ್ಯಾಸೆರೋಲ್‌ ಬಳಸಿ. ಇದರಲ್ಲಿ ನಿಮಗೆ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಕಾಣುತ್ತದೆ. ಈ ಪಾತ್ರೆ ಬೆಚ್ಚಗೇ ಇಡುವುದರಿಂದ ಇದರಲ್ಲಿ ಮೊಸರು ಸುಲಭವಾಗಿ ಆಗುತ್ತದೆ.

ಹೆಚ್ಚು ಹೆಪ್ಪು ಹಾಕಿ
ಚಳಿಗಾಲದಲ್ಲಿ ಹಾಲಿಗೆ ಹಾಕುವ ಹೆಪ್ಪು ಬೇಸಗೆಯ ಪ್ರಮಾಣಕ್ಕಿಂತ ಹೆಚ್ಚಿರಲಿ. ಉದಾಹರನೆಗೆ ಬೇಸಿಗೆಯಲ್ಲಿ ಒಂದು ಚಮಚ ಹೆಪ್ಪು ಹಾಕಿದರೆ, ಚಳಿಗಾಲದಲ್ಲಿ ಅದೇ ಅಳತೆಯ ಹಾಲಿಗೆ ಎರಡು ಚಮಚ ಹೆಪ್ಪು ಹಾಕಿ.

ಮೈಕ್ರೋವೇವ್‌ ಒಳಗಿಡಿ
ಹಾಲಿಗೆ ಹೆಪ್ಪು ಹಾಕಿದ ಮೇಲೆ ಆ ಪಾತ್ರೆಯನ್ನು ಮುಚ್ಚಿದ ಪ್ರದೇಶದೊಳಗಿಡಿ. ಉದಾಹರಣೆಗೆ ಮೈಕ್ರೋವೇವ್‌ ಅವನ್‌ ಒಳಗೆ ಇಟ್ಟು ಬಾಗಿಲು ಮುಚ್ಚಬಹುದು. ಅದು ಅಲ್ಲಾಡದೆ ಹಾಗೆಯೇ ಅಲ್ಲಿರಲಿ.

Winter Tips

ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿಡಿ
ಇನ್ನೊಂದು ಬಹಳ ಇಂಟರೆಸ್ಟಿಂಗ್‌ ಐಡಿಯಾ ಎಂದರೆ ಹಾಲಿಗೆ ಹೆಪ್ಪು ಹಾಕಿದ ಮೇಲೆ ಆ ಪಾತ್ರೆಯನ್ನು ಒಂದು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿಡಿ. ನಿಮ್ಮ ಹಳೆಯ ಸ್ವೆಟರ್‌ ಕೂಡಾ ಸರಿಯೇ. ಇದು ತಣ್ಣಗಿನ ಗಾಳಿ ಅದನ್ನು ಸ್ಪರ್ಶಿಸದಂತೆ ತಡೆದು, ಮೊಸರಾಗುವ ಕೆಲಸಕ್ಕೆ ಸಹಾಯ ಮಾಡುತ್ತದೆ.

ಬೆಳಗ್ಗೆ ಮಾಡಿ
ರಾತ್ರಿಯ ಸಮಯ ಹೆಚ್ಚು ಚಳಿ ಇರುವುದರಿಂದ, ರಾತ್ರಿ ಮಲಗುವ ಮೊದಲು ಹೆಪ್ಪು ಹಾಕಿಡುವ ಅಭ್ಯಾಸವನ್ನು ಬೆಳಗ್ಗೆ ಮಾಡಿ. ಬೆಳಗಿನ ಗೊತ್ತು ರಾತ್ರಿಗಿಂತ ಉಷ್ಣತೆ ಹೆಚ್ಚಿರುತ್ತದೆ.

ಬಿಸಿ ನೀರು ಹಾಕಿಡಿ
ಒಂದು ದೊಡ್ಡ ಕ್ಯಾಸೆರೋಲ್‌ ಒಳಗೆ ಬಿಸಿ ನೀರು ಹಾಕಿ, ಅದರೊಳಗೆ ಹೆಪ್ಪು ಹಾಕಿದ ಪಾತ್ರೆಯನ್ನಿಟ್ಟು ಮುಚ್ಚಳ ಮುಚ್ಚಿ. ಕ್ಯಾಸರೋಲ್‌ ಒಳಗಿನ ನೀರು ಬೆಚ್ಚಗೇ ಉಳಿಯುವುದರಿಂದ ಇದು ಇನ್ನೊಂದು ಪಾತ್ರೆಯನ್ನೂ ಬೆಚ್ಚಗಿಟ್ಟಿರುತ್ತದೆ ಹಾಗೂ ಮೊಸರಾಗುವಂತೆ ಮಾಡುತ್ತದೆ.

ಇದನ್ನೂ ಓದಿ | 108 ambulance | ಚಾಲಕರಿಗೆ ಸಿಗದ 3 ತಿಂಗಳ ಸಂಬಳ; ಜಿವಿಕೆಗೆ ಕೊನೇ ಡೆಡ್‌ಲೈನ್ ನೀಡಿದ ಆರೋಗ್ಯ ಇಲಾಖೆ

Exit mobile version