Site icon Vistara News

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

World Breastfeeding Week

ಹಾಲುಣಿಸುವ ಲಾಭಗಳು ಕೂಸಿಗೆ (World Breastfeeding Week) ಮಾತ್ರವಲ್ಲ, ತಾಯಿಗೂ ಇದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿಸಿಕೊಂಡ ತೂಕವನ್ನು ಇಳಿಸುವ ಶ್ರಮವಿಲ್ಲದ ವಿಧಾನವಿದು. ಮಾತ್ರವಲ್ಲ, ಹಿಗ್ಗಿ ಚೀಲದಂತಾಗಿದ್ದ ಗರ್ಭಾಶಯ ಸಂಕುಚಿತಗೊಂಡು ಹೊಟ್ಟೆ ಕಡಿಮೆಯಾಗುವಂಥ ಸರಳ ವಿಧಾನವೂ ಹೌದಿದು. ಹಾಗಾಗಿ ಸ್ತನ್ಯಪಾನದಿಂದ ತಾಯಿಯ ಶರೀರ ಮೊದಲಿನಂತೆ ಬಳುಕುವ ಬಳ್ಳಿಯಾಗಲು ಸಾಧ್ಯವಿದೆ. ಹೆರಿಗೆಯ ನಂತರ ಕಾಡುವ ಖಿನ್ನತೆಯನ್ನು ದೂರ ಮಾಡುವ ಸಮರ್ಥ ಉಪಾಯವಿದು. ಜೊತೆಗೆ, ರಕ್ತದ ಏರೊತ್ತಡ, ಆರ್ಥರೈಟಿಸ್‌, ಮಧುಮೇಹ ಮತ್ತು ಕೊಬ್ಬನ್ನು ದೂರ ಇರಿಸಲು ಶಿಶುವಿಗೆ ಹಾಲುಣಿಸುವುದು ನೆರವಾಗುತ್ತದೆ. ಶಿಶುವು ಹಾಲುಣ್ಣುವಷ್ಟು ದಿನಗಳು ತಾಯಿಯ ಮುಟ್ಟು ಮುಂದೂಡುವುದು ಸಾಮಾನ್ಯ. ಹಾಗಾಗಿ ನಿಸರ್ಗವೇ ಕೊಟ್ಟ ಈ ಫಾರ್ಮುಲಾಗೆ ಶರಣಾಗಿ, ಶಿಶುಗಳಿಗೆ ಹಾಲೂಡಿಸಿ ಎನ್ನುವುದನ್ನು ಜಗತ್ತಿಗೆ ಸಾರಲು ಆಗಸ್ಟ್‌ ತಿಂಗಳ ಮೊದಲ ವಾರವನ್ನು (1-8 ತಾರೀಕು) ಜಾಗೃತಿ ಸಪ್ತಾಹವನ್ನಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.

ನೈಸರ್ಗಿಕ ಆಹಾರ

ಮೊದಲ ಆರು ತಿಂಗಳು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುವ ಪ್ರಾಕೃತಿಕ ಆಹಾರವೆಂದರೆ ತಾಯಿಯ ಹಾಲು. ಹಾಲಿನ ಉಷ್ಣತೆ ಮತ್ತು ರುಚಿಯಿಂದ ಹಿಡಿದು ಪೋಷಕಾಂಶದವರೆಗೆ ಯಾವುದಕ್ಕೂ ಯೋಚಿಸುವ ಅಗತ್ಯವಿಲ್ಲದಂಥ ಸಿದ್ಧ ಆಹಾರವಿದು. ಮೊದಲ ಹಾಲು ಅಥವಾ ಕೊಲಾಸ್ಟ್ರಮ್‌ನಿಂದ ತೊಡಗಿ ಕಾಲಕಾಲಕ್ಕೆ ಬೆಳೆಯುತ್ತಾ ಬರುವ ಶಿಶುವಿನ ಜಠರದ ಸಾಮರ್ಥ್ಯಕ್ಕೆ ಹೊಂದುವಂತೆ ತಾಯಿಯ ಹಾಲೂ ಒದಗಿ ಬರುತ್ತದೆ.

ಪ್ರತಿರೋಧಕತೆ

ಶಿಶುವಿನ ಆರಂಭಿಕ ದಿನಗಳಲ್ಲಿ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ನೀಡುವುದು ತಾಯಿಯ ಹಾಲೇ ಹೊರತು ಬೇರೆ ಯಾವುದೂ ಅಲ್ಲ. ಅದರಲ್ಲೂ ಮೊದಲೆರೆಡು ದಿನಗಳು ಮಗುವಿಗೆ ಸಿಗುವ ಕೊಲಾಸ್ಟ್ರಮ್‌ನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಮಗುವಿನ ಮೂಗು, ಗಂಟಲು ಮತ್ತು ಜೀರ್ಣಾಂಗಗಳಲ್ಲಿ ರಕ್ಷಾಕವಚವನ್ನು ಕೊಲಾಸ್ಟ್ರಮ್‌ನಲ್ಲಿರುವ ಇಮ್ಯುನೊಗ್ಲೋಬುಲಿನ್‌ಗಳು ನಿರ್ಮಿಸುತ್ತವೆ. ಜೊತೆಗೆ, ತಾಯಿಯ ದೇಹದಲ್ಲಿ ಉತ್ಪಾದನೆಯಾಗುವ ಪ್ರತಿಕಾಯಗಳು ಸುಲಭವಾಗಿ ಮಗುವಿನ ದೇಹಕ್ಕೆ ಹಾಲಿನ ಮೂಲಕ ವರ್ಗಾವಣೆಯಾಗುತ್ತವೆ.

ಅಪಾಯವಿಲ್ಲ

ಮೇಲಿಂದ ಹಾಕುವ ಹಾಲು, ಫಾರ್ಮುಲಾ ಮುಂತಾದ ಆಹಾರಗಳಿಂದ ಮಗುವಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಆದರೆ ತಾಯಿಯ ಹಾಲಿನಿಂದ ಕಿವಿ ಸೋಂಕು, ಶ್ವಾಸನಾಳದ ಸೋಂಕು, ಜೀರ್ಣಾಂಗದ ಸಮಸ್ಯೆಗಳು, ಅಲರ್ಜಿಗಳು, ಬಾಲ್ಯದ ಮಧುಮೇಹ ಮುಂತಾದ ಹತ್ತು-ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಯಾವುದೇ ಅಪಾಯವಿಲ್ಲದಂತಹ ಸುರಕ್ಷಿತವಾದ ಆಹಾರವಿದು

ಆರೋಗ್ಯಕರ ತೂಕ

ಪುಟ್ಟ ಮಕ್ಕಳ ತೂಕ ಹೆಚ್ಚಿದ್ದರೂ ಸಮಸ್ಯೆ, ಕಡಿಮೆ ಇದ್ದರೂ ಸಮಸ್ಯೆ. ಆದರೆ ಕೂಸು ಮೊದಲೊಂದು ವರ್ಷ ತಾಯಿಯ ಹಾಲುಣ್ಣುವುದರಿಂದ ತೂಕ ಹೆಚ್ಚಳ ಸಮರ್ಪಕವಾಗಿರುತ್ತದೆ. ಮೊದಲಾರು ತಿಂಗಳ ನಂತರ ಕ್ರಮೇಣ ಘನ ಆಹಾರಗಳನ್ನು ಶಿಶುವಿಗೆ ನೀಡಬಹುದು. ಆದರೆ ತಾಯಿಯ ಹಾಲನ್ನು ಕೂಸಿಗೆ ನಿಲ್ಲಿಸುವಂತಿಲ್ಲ. ಸ್ತನ್ಯಪಾನ ಮಾಡುವ ಶಿಶುಗಳು ತಮಗೆ ಹೊಟ್ಟೆ ತುಂಬಿದ ತಕ್ಷಣ ಕುಡಿಯುವುದನ್ನು ತಾವೇ ನಿಲ್ಲಿಸಿಬಿಡುತ್ತದೆ. ಬಾಟಲಿಯಲ್ಲಿ ಮಿಕ್ಕಿದೆಯೋ ಇಲ್ಲವೋ ಎಂಬಂತೆ ನೋಡುವ ಪ್ರಮೇಯವೇ ಇಲ್ಲ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಜಾಣರು!

ಸುಮ್ಮನೆ ಹೇಳುವುದಕ್ಕಲ್ಲ, ಫಾರ್ಮುಲಾ ಕುಡಿದ ಮಕ್ಕಳಿಗಿಂತ ತಾಯಿಯ ಹಾಲು ಕುಡಿದ ಮಕ್ಕಳ ಮೆದುಳಿನ ಬೆಳವಣಿಗೆ ಚೆನ್ನಾಗಿರುತ್ತದೆ ಎನ್ನುತ್ತವೆ ಅಧ್ಯಯನಗಳು. ಹಾಲುಣ್ಣುವ ಸಂದರ್ಭದಲ್ಲಿ ಶಿಶುಗಳಿಗೆ ಒದಗುವ ತಾಯಿಯ ಸಾಮೀಪ್ಯ ಮತ್ತು ಸ್ಪರ್ಶವೂ ಇದಕ್ಕೆ ಬಹು ಮುಖ್ಯ ಕಾರಣ. ಇದೊಂದು ವರ್ಷದಲ್ಲಿ ಮಕ್ಕಳಿಗೆ ದೊರೆಯುವ ಈ ಅಮೂಲ್ಯ ಪೋಷಕಾಂಶದಿಂದ ದೀರ್ಘಕಾಲೀನ ಬೆಳವಣಿಗೆಗೆ ಸಹಾಯ ಒದಗುತ್ತದೆ.

ಯಾವ ಆಹಾರಗಳು?

ಇಷ್ಟೆಲ್ಲ ಅನುಕೂಲಗಳಿರುವಾಗ ಎಳೆಗೂಸುಗಳಿಗೆ ಹಾಲುಣಿಸುವುದು ಅಮ್ಮಂದಿರ ಆಯ್ಕೆಯೂ ಆಗಿರಬೇಕು. ಆದರೆ ಸಾಕಷ್ಟು ಹಾಲಿಲ್ಲದಿದ್ದರೆ ನಿರಾಸೆಯಾಗುವುದು ಖಚಿತ. ಸಾಮಾನ್ಯವಾಗಿ ಸಮತೋಲನೆಯಿಂದ ಕೂಡಿದ ಸತ್ವಯುತ ಆಹಾರವನ್ನು ಸೇವಿಸುವುದು, ಚೆನ್ನಾಗಿ ನೀರು ಕುಡಿಯುವುದು ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದು- ಇವಿಷ್ಟಿದ್ದರೆ ತಾಯಿಯ ಹಾಲಿಗೆ ಕೊರತೆಯಾಗುವುದಿಲ್ಲ. ಆದರೂ, ತಾಯಿಯು ಕೆಲವು ಆಹಾರಗಳನ್ನು ಹೆಚ್ಚುವರಿಯಾಗಿ ತಿನ್ನುವುದು ನೆರವಾಗಬಹುದು. ಯಾವುದೇ ಸೊಪ್ಪುಗಳು, ಮುಖ್ಯವಾಗಿ ಮೆಂತೆ, ಸಬ್ಬಸಿಗೆ, ಗಣಕೆ ಸೊಪ್ಪಿನಂಥವು, ಹಾಲು ಹೆಚ್ಚಿಸುವುದಕ್ಕೆ ಪೂರಕ. ಎಳ್ಳು, ಬಾದಾಮಿ, ಮೆಂತೆ ಬೀಜಗಳನ್ನೂ ಇದಕ್ಕಾಗಿ ಉಪಯೋಗಿಸಬಹುದು. ಶುಂಠಿ, ಬೆಳ್ಳುಳ್ಳಿಯಂಥವು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಕಾಳುಗಳಿಂದ ತಾಯಿ-ಮಗುವಿನ ಹೊಟ್ಟೆಗೆ ತೊಂದರೆಯಾಗುತ್ತಿಲ್ಲ ಎಂದಾದರೆ ಮೊಳಕೆ ಬರಿಸಿ, ಚೆನ್ನಾಗಿ ಬೇಯಿಸಿದ ಕಡಲೆ ಕಾಳುಗಳೂ ನೆರವಾದಾವು. ತಾಯಿಯ ಹೊಟ್ಟೆಗೆ ದಿನಕ್ಕೆ ಮೂರು ದೊಡ್ಡ ಗ್ಲಾಸ್‌ನಷ್ಟು ಹಾಲು ಹೋಗುವುದು ಸಹ ಅಗತ್ಯ.

Exit mobile version