Site icon Vistara News

World Leprosy Day : ಕುಷ್ಠರೋಗದ ಭಯ ಬೇಡ, ಅರಿವಿರಲಿ

World Leprosy Day

World Leprosy Day

ಇಂದು (ಜ.30) ಕುಷ್ಠರೋಗ ನಿರ್ಮೂಲನೆ ಮತ್ತು ಜಾಗೃತಿಯನ್ನು ಆಚರಿಸುವ ದಿನ. ಹ್ಯಾನ್ಸೆನ್‌ ರೋಗವೆಂದು ಕರೆಯಲಾಗುವ ಕುಷ್ಠರೋಗ ಜಾಗೃತಿ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಲವಾರು ಶತಮಾನಗಳ ಕಾಲ ವಿಶ್ವವನ್ನು ಕಾಡಿದ ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅದಕ್ಕಾಗಿ ರೋಗವನ್ನು ಬೇಗ ಪತ್ತೆ ಮಾಡಿ, ರೋಗಿಗೆ ಚಿಕಿತ್ಸೆ ನೀಡುವುದು ಮಹತ್ವದ್ದೆನಿಸುತ್ತದೆ.

ನಾರ್ವೆ ದೇಶದ ವೈದ್ಯ ಗೆರ್ಹಾರ್ಡ್‌ ಆರ್ಮವರ್‌ ಹ್ಯಾನ್ಸೆನ್‌ ‌1873ರಲ್ಲೇ ಕುಷ್ಠರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದರೂ, ಇಪ್ಪತ್ತನೇ ಶತಮಾನದ ಮಧ್ಯಭಾಗದವರೆಗೂ ಅದಕ್ಕೆ ಸರಿಯಾದ ಔಷಧಿಯನ್ನು ಕಂಡುಹಿಡಿಯಲಾಗಿರಲಿಲ್ಲ. ಇಂದಿಗೆ ಇದಕ್ಕೆ ಸಮರ್ಪಕ ಔಷಧಿ ಇದ್ದರೂ ಸಹ, ವಿಶ್ವದಲ್ಲಿ ಅತಿಹೆಚ್ಚು ಕುಷ್ಠರೋಗ ಪ್ರಕರಣಗಳು ವರದಿಯಾಗುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಹಾಗಾಗಿ ಈ ರೋಗದ ಕುರಿತಾದ ಜಾಗೃತಿಯ ನಿಟ್ಟಿನಲ್ಲಿ ಕೆಲವು ಮಾಹಿತಿಗಳನ್ನು ಪ್ರಸರಣ ಮಾಡುವ ಅಗತ್ಯ ಖಂಡಿತವಾಗಿ ಇದೆ.

World Leprosy Day

ಗುಣವಾಗದ ರೋಗವೇ?
ಈ ಬಗ್ಗೆ ಅನುಮಾನವೇ ಬೇಡ; ಕುಷ್ಠ ರೋಗದಿಂದ ಗುಣಮುಖರಾಗಬಹುದು. ಮಾತ್ರವಲ್ಲ, ಚಿಕಿತ್ಸೆಯ ನಂತರ ರೋಗಿಗಳು ಸಾಮಾನ್ಯರಂತೆ ಬದುಕು ನಡೆಸಬಹುದು. ಆದರೆ ಶೀಘ್ರವಾಗಿ ರೋಗವನ್ನು ಪತ್ತೆ ಹಚ್ಚಿ, ಚಿಕಿತ್ಸೆ ಆರಂಭಿಸುವುದು ಮುಖ್ಯವಾಗುತ್ತದೆ.

ಸಾಂಕ್ರಾಮಿಕವೇ?
ದೀರ್ಘಕಾಲ ರೋಗಿಯ ಸಂಸರ್ಗದಲ್ಲಿ ಇದ್ದವರಿಗೆ ಮಾತ್ರವೇ ಇದು ಹರಡಬಹುದು, ಎಲ್ಲರಿಗೂ ಅಲ್ಲ. ಅದಕ್ಕೆ ಬಾಯಿ ಮತ್ತು ಮೂಗಿನ ದ್ರವಗಳೊಂದಿಗೆ ನೇರ ಸಂಪರ್ಕ ಹೊಂದಬೇಕಾಗುತ್ತದೆ. ಕೈ ಕುಲುಕುವುದರಿಂದ, ಅಪ್ಪುಗೆಯಿಂದ ಅಥವಾ ಲೈಂಗಿಕ ಸಂಪರ್ಕದಿಂದಲೂ ಈ ರೋಗ ಒಬ್ಬರಿಂದೊಬ್ಬರಿಗೆ ಹರಡುವುದಿಲ್ಲ. ಹೊಟ್ಟೆಯಲ್ಲಿರುವ ಮಗುವಿಗೆ ತಾಯಿಯಿಂದಲೂ ಈ ರೋಗ ಹರಡಲಾರದು.

ವಯಸ್ಸಿನ ಹಂಗಿದೆಯೇ?
ಹಾಗೇನಿಲ್ಲ, ಯಾವ ವಯೋಮಾನದವರಿಗೂ ಇದು ಬರಬಹುದು. ಆದರೆ ಆಯಾ ವಯೋಮಾನಕ್ಕೆ ತಕ್ಕಂತೆ ರೋಗ ಪತ್ತೆ ಮತ್ತು ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ.

ರೋಗಿ ಸಾಮಾನ್ಯರಂತೆ ಇರಬಹುದೆ?
ಒಮ್ಮೆ ಚಿಕಿತ್ಸೆ ಆರಂಭವಾಗಿ ಒಂದು ಹಂತಕ್ಕೆ ಬಂದ ಮೇಲೆ ರೋಗಿಗಳು ಸಾಮಾನ್ಯರಂತೆ ಜೀವಿಸಬಹುದು. ಶಾಲೆ, ಕಾಲೇಜು, ಆಫೀಸಿಗೆ ಹೋಗುವುದಕ್ಕೆ ಸಮಸ್ಯೆಯಿಲ್ಲ. ಆದರೆ ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಒಂದರಿಂದ ಎರಡು ವರ್ಷಗಳು ಬೇಕು. ಮಾತ್ರವಲ್ಲ, ಈ ಸೋಂಕು ಮರುಕಳಿಸುವುದಿಲ್ಲ ಎಂಬುದನ್ನೂ ವೈದ್ಯರು ಖಾತ್ರಿ ಪಡಿಸಿಕೊಳ್ಳುವುದು ಮುಖ್ಯ

World Leprosy Day

ತಿಳಿಯುವುದು ಹೇಗೆ?
ಚರ್ಮದ ಮೇಲೆ ಕಾಣಿಸಿಕೊಂಡ ಮಚ್ಚೆಯಂಥವು ಸಂಶಯಾಸ್ಪದವಾಗಿದ್ದರೆ ವೈದ್ಯರನ್ನು ಕೂಡಲೇ ಕಾಣುವುದು ಸೂಕ್ತ. ತಪಾಸಣೆಯಲ್ಲಿ ರೋಗ ದೃಢಪಟ್ಟರೆ, ಹಲವು ರೀತಿಯ ಪ್ರತಿಜೈವಿಕ ಔಷಧಿಗಳನ್ನು ವೈದ್ಯರು ಚಿಕಿತ್ಸೆಗೆಂದು ನೀಡಬೇಕಾಗುತ್ತದೆ. ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಎರಡು ವರ್ಷಗಳವರೆಗೂ ಬೇಕಾಗಬಹುದು. ಶಿಶುಗಳಿಗೆ ಟಿಬಿಗೆಂದು ನೀಡುತ್ತಿರುವ ಲಸಿಕೆಯಲ್ಲೇ ಕುಷ್ಠರೋಗದ ವಿರುದ್ಧ ಹೋರಾಡುವ ಶಕ್ತಿ ಶೇ೫೦ ರಷ್ಟು ಪ್ರಾಪ್ತವಾಗುತ್ತದೆ. ಮಾತ್ರವಲ್ಲ, ಕಳೆದೆರಡು ದಶಕಗಳಲ್ಲಿ ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಜನ ಈ ರೋಗದಿಂದ ಸಂಪೂರ್ಣ ಗುಣ ಹೊಂದಿದ್ದಾರೆ. ಹಾಗಾಗಿ ಕುಷ್ಠರೋಗದ ಬಗ್ಗೆ ಬೇಕಿರುವುದು ಜಾಗೃತಿಯಷ್ಟೇ, ಭಯವಲ್ಲ.

ಇದನ್ನೂ ಓದಿ:Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು!

Exit mobile version