Site icon Vistara News

World Milk Day : ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ! ಹೇಗೆ ಗೊತ್ತೆ?

world milk day

ಹಾಲನ್ನು ಜಾಗತಿಕ ಆಹಾರವೆಂದು ಗುರುತಿಸಲು ಮತ್ತು ಡೇರಿ ಉದ್ಯಮವನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 1ರಂದು ‘ವಿಶ್ವ ಕ್ಷೀರ ದಿನ’ World Milk Day ಆಚರಿಸಲಾಗುತ್ತದೆ. ಈ ದಿನದ ಮಹತ್ವ ತಿಳಿಯೋಣ.

ವಿಶ್ವ ಕ್ಷೀರ ದಿನವು (World Milk Day) ಹಾಲಿನ ಮಹತ್ವ ಮತ್ತು ಆರೋಗ್ಯಕರ ಆಹಾರದಲ್ಲಿ ಅದು ವಹಿಸುವ ಪಾತ್ರವನ್ನು ಎತ್ತಿ ತೋರಿಸುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಕ್ಷೀರ ದಿನವನ್ನು ಅಳವಡಿಸಿಕೊಂಡಿದೆ. ಅಂದಿನಿಂದ ವಿಶ್ವ ಕ್ಷೀರ ದಿನವನ್ನು ಹಾಲು ಮತ್ತು ಡೇರಿ ಉತ್ಪನ್ನಗಳ ಪ್ರಯೋಜನಗಳನ್ನು ಪ್ರಚಾರ ಮಾಡುವ ಕಾರ್ಯಕ್ರಮಗಳು ಮತ್ತು ಅಭಿಯಾನಗಳೊಂದಿಗೆ ಆಚರಿಸಲಾಗುತ್ತದೆ.

ವಿಶ್ವ ಹಾಲು ದಿನ 2022

ವಿಶ್ವ ಹಾಲು ದಿನ 2022 ಆಚರಣೆಯು ಮೇ 29ರಿಂದ ಮೇ 31 ರವರೆಗೆ ಡೈರಿ ರಾಲಿ ನಡೆಸುವ ಮೂಲಕ ಪ್ರಾರಂಭವಾಯಿತು. ಇದು ಜೂನ್ 1ರಂದು ಕ್ಷೀರ ದಿನದ ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಅದರ ಹೆಸರೇ ಸೂಚಿಸುವಂತೆ, ಹಾಲಿನ ಬಗ್ಗೆ ಜಾಗೃತಿಯನ್ನು ಪಸರಿಸುವ ಗುರಿ ಹೊಂದಿದೆ. ಬೆಳಗಿನ ಉಪಾಹಾರದಿಂದ ರಾತ್ರಿಯ ಊಟದವರೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಹಾರವನ್ನು ಹೇಗೆ ಸೇವಿಸಬಹುದು ಎಂಬುದನ್ನು ಮನದಟ್ಟು ಮಾಡುವ ಉದ್ದೇಶ ಈ ಆಚರಣೆಯದ್ದಾಗಿದೆ. ಭಾರತವು ಹಾಲಿನ ಅತಿದೊಡ್ಡ ಉತ್ಪಾದಕ ಆಗಿದ್ದು, ಅನಂತರದ ಸ್ಥಾನದಲ್ಲಿ ಅಮೆರಿಕ, ಪಾಕಿಸ್ತಾನ ಮತ್ತು ಚೀನಾಗಳಿವೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇ. 22ರಷ್ಟು ಪಾಲು ಭಾರತದ್ದಾಗಿದೆ.

2022ರ ವಿಶ್ವ ಕ್ಷೀರ ದಿನದ ತಿರುಳು ಏನೆಂದರೆ, ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಬಗ್ಗೆ ಗಮನ ಸೆಳೆಯುವುದು ಮತ್ತು ಡೇರಿ ಉದ್ಯಮವು ಅದರ ಪರಿಸರ ಪರಿಣಾಮವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದಾಗಿದೆ. ಮುಂದಿನ 30 ವರ್ಷಗಳಲ್ಲಿ ಹಸಿರುಮನೆ ಅನಿಲಗಳ ಪರಿಣಾಮವನ್ನು ಕಡಿಮೆ ಮಾಡುವ ಮೂಲಕ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವ ಮೂಲಕ ‘ಡೇರಿ ನೆಟ್ ಝೀರೋ’ ತಲುಪುವುದು ವಿಶ್ವ ಕ್ಷೀರ ದಿನದ ಗುರಿಯಾಗಿದೆ.

ಜೂನ್ 1ರಂದು ವಿಶ್ವ ಕ್ಷೀರ ದಿನವನ್ನು ಏಕೆ ಆಚರಿಸಲಾಗುತ್ತದೆ?

ಹಾಲಿನ ಮಹತ್ವವನ್ನು ಉತ್ತೇಜಿಸಲು ಮತ್ತು ನಮ್ಮ ದಿನನಿತ್ಯದ ಜೀವನದಲ್ಲಿ ಈ ಉತ್ಪನ್ನವನ್ನು ಸೇರಿಸುವುದು ಎಷ್ಟು ಮುಖ್ಯ ಎಂಬುದನ್ನು ಸಾರಲು ಹಾಲು ದಿನ ಆಚರಿಸಲಾಗುತ್ತದೆ.

ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಹಾಲು ಮತ್ತು ಡೇರಿ ಉತ್ಪನ್ನಗಳ ಪ್ರಯೋಜನಗಳನ್ನು ಪ್ರಪಂಚದಾದ್ಯಂತ ಸಕ್ರಿಯವಾಗಿ ಪ್ರಚಾರ ಮಾಡಲಾಗುತ್ತಿದೆ. ಡೇರಿ ಉತ್ಪನ್ನಗಳು ಮತ್ತು ಅವುಗಳ ಸೇವನೆಯು 100 ಕೋಟಿ ಜನರ ಜೀವನೋಪಾಯಕ್ಕೆ ದಾರಿಯಾಗಿದೆ.

ಆಹಾರ ಮತ್ತು ಕೃಷಿ ಸಂಸ್ಥೆಯ ದತ್ತಾಂಶವು ಪ್ರತಿದಿನ 600 ಕೋಟಿಗೂ ಹೆಚ್ಚು ಜನರು ಡೇರಿ ಉತ್ಪನ್ನಗಳನ್ನು ಸೇವಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ಆಗಿದ್ದು ಹೇಗೆ?

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ಆಗಿದ್ದು ಹೇಗೆ?
ಈ ಕುರಿತು 5 ಅಂಶಗಳು ಇಲ್ಲಿವೆ..

  1. ಭಾರತವು ಕೃಷಿ ಉತ್ಪಾದನೆಯ ಮೇಲೆ ಹೆಚ್ಚು ಅವಲಂಬಿತವಾದ ಆರ್ಥಿಕತೆಯನ್ನು ಹೊಂದಿದೆ. ವಿವಿಧ ಉತ್ಪನ್ನಗಳಲ್ಲಿ, ಧರ್ಮ, ಸಂಸ್ಕೃತಿ, ಪಾಕಪದ್ಧತಿ ಮತ್ತು ಆರ್ಥಿಕತೆ ಸೇರಿದಂತೆ ಭಾರತೀಯ ಸಮಾಜದ ಹಲವಾರು ಅಂಶಗಳಲ್ಲಿ ಡೇರಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.
  2. ಭಾರತವು 187 ಮಿಲಿಯನ್ ಟನ್‌ಗಳಷ್ಟು ಹಾಲನ್ನು ಉತ್ಪಾದಿಸುತ್ತಿದ್ದು, 30 ಕೋಟಿಗೂ ಹೆಚ್ಚು ಗೋವುಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪಶು ಸಂಪತ್ತಿನ ಘಟಕವಾಗಿದೆ.
  3. ಹಾಲಿನ ಉತ್ಪಾದನೆ ಮತ್ತು ಬಳಕೆ ಎರಡರಲ್ಲೂ ಭಾರತವು ಎಲ್ಲಾ ದೇಶಗಳಿಗಿಂತ ಮೊದಲ ಸ್ಥಾನದಲ್ಲಿದೆ.
  4. ಭಾರತದಲ್ಲಿನ ಹೆಚ್ಚಿನ ಹಾಲನ್ನು ದೇಶೀಯವಾಗಿ ಸೇವಿಸಲಾಗುತ್ತದೆ, ಆದರೂ ಉತ್ಪನ್ನದ ಒಂದು ಸಣ್ಣ ಭಾಗವನ್ನು ರಫ್ತು ಮಾಡಲಾಗುತ್ತದೆ.
  5. ಭಾರತದಲ್ಲಿ ಡೇರಿ ಉತ್ಪಾದನೆಯು 8,000 ವರ್ಷಗಳ ಹಿಂದಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ವೇದಗಳ ಕಾಲದಿಂದಲೂ ಭರತ ಖಂಡದಲ್ಲಿ ಕ್ಷೀರೋತ್ಪನ್ನಗಳು, ವಿಶೇಷವಾಗಿ ಹಾಲು, ಬೆಣ್ಣೆ, ತುಪ್ಪಗಳನ್ನು ಸೇವಿಸಲಾಗುತ್ತಿತ್ತು.

ಇದನ್ನೂ ಓದಿ| ವಿಟಮಿನ್‌ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ

Exit mobile version