Site icon Vistara News

World No Tobacco Day: ತಂಬಾಕಿನ ಚಟ ಎಷ್ಟೊಂದು ರೋಗಗಗಳಿಗೆ ಕಾರಣ ಆಗುತ್ತದೆ ನೋಡಿ!

World No Tobacco Day

ಮೇ 31 ವಿಶ್ವ ತಂಬಾಕು ದಿನ (World No Tobacco Day). ವಿಶ್ವದೆಲ್ಲೆಡೆ ತಂಬಾಕು ಮುಕ್ತ ಸಮಾಜಕ್ಕಾಗಿ ದನಿ ಎತ್ತುವ, ಜಾಗೃತಿ ಮೂಡಿಸುವ ದಿನವಾಗಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪ್ರತೀ ವರ್ಷ ಹಮ್ಮಿಕೊಳ್ಳುತ್ತದೆ. ಈ ವರ್ಷ ಮಕ್ಕಳಿಂದ ತಂಬಾಕನ್ನು ದೂರವಿಡಿ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಸಣ್ಣ ಮಕ್ಕಳು ನೇರವಾಗಿ ತಂಬಾಕು ಬಳಸದಿದ್ದರೂ, ತಮ್ಮ ಹೆತ್ತವರಿಂದ, ಸುತ್ತಮುತ್ತಲ ಪರಿಸರದಿಂದ ಹಾಗೂ ತಂಬಾಕು ಮಾರುಕಟ್ಟೆಯ ಜಗತ್ತಿನಿಂದಾಗಿ ಇದರ ವರ್ತಲದೊಳಕ್ಕೆ ಬೀಳುವ ಸಂಭವ, ಅನಿವಾರ್ಯತೆ ಹೆಚ್ಚು. ಈ ಅನಿವಾರ್ಯತೆಗೆ ಬಿದ್ದ ಮಕ್ಕಳನ್ನು ತಂಬಾಕಿನ ಜಗತ್ತಿನಿಂದ ಮೇಲೆತ್ತುವ ಹಾಗೂ ತಾವು ಇದಕ್ಕೆ ಬಲಿ ಬೀಳದಿರುವ ಬಗ್ಗೆ ಅವರಲ್ಲಿ ಎಚ್ಚರಿಕೆಯ ಬೀಜ ಬಿತ್ತುವ ಚಿಂತನೆ, ಉದ್ದೇಶ ವಿಶ್ವ ಆರೋಗ್ಯ ಸಂಸ್ಥೆಯದ್ದು. ಮಕ್ಕಳು ತಂಬಾಕಿನ ಚಟಕ್ಕೆ ಎಳವೆಯಲ್ಲಿಯೇ ಬೀಳದಂತೆ ರಕ್ಷಿಸುವುದು ಹಾಗೂ ತಂಬಾಕು ಮುಕ್ತ ಸ್ವಸ್ಥ ಸಮಾಜದ ಕನಸು ಈ ಘೋಷವಾಕ್ಯದ ಹಿಂದಿರುವ ಉದ್ದೇಶ. ಜಗತ್ತಿನಲ್ಲಿ ಇಂದು ತಂಬಾಕಿನ ಚಟ ಯುವ ವಯಸ್ಸಿನವರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ನಿತ್ಯವೂ ತಂಬಾಕಿನ ಸೇವನೆಯಿಂದಾಗಿ ದೇಹಾರೋಗ್ಯವನ್ನು ಕೆಡಿಸಿಕೊಂಡು, ಅನೇಕ ಮಾರಕ ಕಾಯಿಲೆಗಳಿಗೆ ಬಲಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಜಗತ್ತಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಯುವ ಮಂದಿಯ ಮುಖ್ಯ ಅನಾರೋಗ್ಯದ ಕಾರಣ ಈ ತಂಬಾಕೇ ಆಗಿದೆ. ಹಾಗಾಗಿ ಧೂಮಪಾನ ಸೇರದಂತೆ ತಂಬಾಕಿನ ಚಟ ಯಾವ ರೀತಿಯಲ್ಲಿ ದೇಹಾರೋಗ್ಯವನ್ನು ಹಾಳು ಮಾಡಬಹುದು, ಯಾವೆಲ್ಲ ಕಾಯಿಲೆಗಳಿಗೆ ಇದು ನೇರವಾದ ಆಹ್ವಾನ ಎಂಬುದನ್ನು ನೋಡೋಣ.

Food Beneficial For Eye Health

ಹೃದಯಾಘಾತಕ್ಕೂ ಮೂಲ

ತಂಬಾಕು ಎಂದ ತಕ್ಷಣ ಕೇವಲ ಶ್ವಾಸಕೋಶಕ್ಕೆ ಮಾತ್ರ ಸಂಬಂಧಿಸಿದ್ದು ಅಂದುಕೊಂಡರೆ ತಪ್ಪಾದೀತು. ಕಾರಣ, ಈ ಚಟ ದೇಹದ ಒಟ್ಟು ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹೃದ್ರೋಗ, ಹೃದಯಾಘಾತದಂತಹ ಸಮಸ್ಯೆಗಳೂ ತಂಬಾಕಿನ ಚಟದಿಂದ ಬರಬಹುದು. ರಕ್ತನಾಳಗಳು ತೆಳ್ಳಗಾಗಿ, ರಕ್ತ ಹರಿಯಲು ಸರಿಯಾದ ಜಾಗವಿಲ್ಲದೆ, ಬ್ಲಾಕ್‌ ಆಗುವುದರಿಂದ ಹೃದಯಾಘಾತದಂತಹ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

ಕ್ಯಾನ್ಸರ್‌ಗೆ ಕಾರಣ

ಪಿತ್ತಕೋಶ, ಜಠರ, ಕರುಳಿನ ಕ್ಯಾನ್ಸರ್‌ ಬರುವ ಸಾಧ್ಯತೆಗಳು ಜಾಸ್ತಿ. ಕರುಳು ಜಠರದಲ್ಲಿ ಹುಣ್ಣು, ಅನ್ನನಾಳದಲ್ಲಿ ಅಲ್ಸರ್‌ನಂತಹ ಸಮಸ್ಯೆಗಳು ತಲೆದೋರಬಹುದು. ನುಂಗಲು ಕಷ್ಟವಾಗುವುದು, ಹೊಟ್ಟೆ ನೋವು ಇತ್ಯಾದಿ ಆರಂಭಿಕ ಲಕ್ಷಣಗಳಿಂದ ಸಮಸ್ಯೆ ಶುರುವಾಗಬಹುದು.

ಸಂತಾನೋತ್ಪತ್ತಿಯ ಶಕ್ತಿ ಕುಂಠಿತ

ತಂಬಾಕಿನ ಚಟವು ಸಂತಾನೋತ್ಪತ್ತಿಯ ಶಕ್ತಿಯ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು. ಮಹಿಳೆಯರಿಗಾದರೆ ಗರ್ಭ ನಿಲ್ಲದಿರುವುದು, ಗರ್ಭಸ್ರಾವ, ಮಕ್ಕಳಾಗದಿರುವ ಸಮಸ್ಯೆ, ಪುರುಷರಿಗೆ ವೀರ್ಯದ ಸಂಖ್ಯೆಯಲ್ಲಿ ಕುಸಿತ ಇತ್ಯಾದಿಗಳಿಂದ ಲೈಂಗಿಕ ಬಯಕೆಗಳಾಗದೇ ಇರುವುದು ಇತ್ಯಾದಿ ಸಮಸ್ಯೆಗಳೂ ಉದ್ಭವಿಸಬಹುದು.

ಬಾಯಿ ಆರೋಗ್ಯಕ್ಕೂ ಮಾರಕ

ಬಾಯಿಯ ಆರೋಗ್ಯ ಬಹಳ ಬೇಗನೆ ಹಾಳಾಗುತ್ತದೆ. ಬಾಯಿಯಲ್ಲಿ ಅಲ್ಸರ್‌, ಹುಣ್ಣುಗಳು, ಕೆಟ್ಟ ವಾಸನೆ, ಹಲ್ಲು ನೋವು ಇತ್ಯಾದಿ ಸಮಸ್ಯೆಗಳಾಗಬಹುದು.

ಚರ್ಮ ಕಳೆಗುಂದುತ್ತದೆ

ಚರ್ಮಕ್ಕೆ ಬಹುಬೇಗನೆ ವಯಸ್ಸಾದಂತೆ ಕಾಣಬಹುದು. ತುಟಿ, ಚರ್ಮ ಕಪ್ಪಾಗುವುದು, ಚರ್ಮದಲ್ಲಿ ನಿರಿಗೆಗಳ ಸಮಸ್ಯೆ, ಚರ್ಮ ಜೋತು ಬೀಳುವುದು ಇತ್ಯಾದಿ ಸಾಮಾನ್ಯ.

ದೃಷ್ಟಿ ಮಂದ

ಕಣಿನ ದೃಷ್ಟಿಯ ಮೇಲೆಯೂ ಇದು ಪರಿಣಾಮ ಬೀರುತ್ತದೆ. ದೃಷ್ಟಿ ಮಂಜಾಗುವುದು, ಕಣ್ಣಿನ ಸಮಸ್ಯೆಗಳು ಕೂಡಾ ಸಾಮಾನ್ಯ.

ರೋಗನಿರೋಧಕ ಶಕ್ತಿ ಕುಂಠಿತ

ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಬಹುಬೇಗನೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಕಾಯಿಲೆಗೆ ಬೀಳುವುದೂ ಕೂಡಾ ಸಹಜವೇ ಆಗುತ್ತದೆ.

ಇದನ್ನೂ ಓದಿ : World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

ಖಿನ್ನತೆ ಕಾರಣ

ಮಾನಸಿಕ ಆರೋಗ್ಯದಲ್ಲಿ ಏರುಪೇರು, ಖಿನ್ನತೆ, ಒತ್ತಡ, ಉದ್ವೇಗದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ.

Exit mobile version