Site icon Vistara News

World vision day | ನಿಮ್ಮ ಕಣ್ಣಿನ ದೃಷ್ಟಿಯ ಬಗೆಗೆ ಇರಲಿ ದೂರದೃಷ್ಟಿ!

vision

ದೃಷ್ಟಿ ಸಂರಕ್ಷಣೆಯ ಬಗ್ಗೆ ಅರಿವು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್‌ ತಿಂಗಳ ಎರಡನೇ ಗುರುವಾರವನ್ನು ವಿಶ್ವ ದೃಷ್ಟಿ ದಿನ ಎಂದು ಗುರುತಿಸಲಾಗುತ್ತದೆ. ಕಣ್ಣಿನ ಆರೋಗ್ಯದ ಬಗೆಗಿನ ಅರಿವು ಹೆಚ್ಚಿಸಿ, ರೆಟಿನಾ ಸಂರಕ್ಷಿಸಿಕೊಂಡು, ಬರಬಹುದಾದ ದೃಷ್ಟಿದೋಷವನ್ನು ನಿವಾರಿಸಿಕೊಳ್ಳುವ ಮುಂದಾಲೋಚನೆ ಈ ದಿನಾಚರಣೆಯ ಹಿಂದಿದೆ.

“ನಿಮ್ಮ ಕಣ್ಣುಗಳನ್ನು ಪ್ರೀತಿಸಿ” (Love Your Eyes) ಎಂಬುದು ಈ ವರ್ಷದ ಘೋಷವಾಕ್ಯ. ಪಂಚೇಂದ್ರಿಯಗಳ ಪೈಕಿ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಣ್ಣುಗಳು, ಎಲ್ಲಕ್ಕಿಂತ ಸೂಕ್ಷ್ಮ ಅಂಗವೂ ಹೌದು. ಹೆಚ್ಚುತ್ತಿರುವ ಪ್ರಾಯ, ಜೀವನಶೈಲಿಯ ದೋಷ, ಅತಿಯಾದ ಗೆಜೆಟ್‌ ಬಳಕೆ, ಧೂಮಪಾನದಂಥ ಚಟ, ಆನುವಂಶಿಕ ಕಾರಣ ಅಥವಾ ಮಧುಮೇಹದಂಥ ರೋಗ- ಇಂಥ ಎಲ್ಲಾ ಕಾರಣಗಳಿಂದಲೂ ನಮ್ಮ ದೃಷ್ಟಿ ಹಾನಿಗೆ ಈಡಾಗಬಲ್ಲದು. ಪ್ರಾಯ ಸಂದಿದಂತೆ ಉಂಟಾಗುವ ದೃಷ್ಟಿ ಮಾಂದ್ಯತೆ, ಕ್ಯಾಟೆರಾಕ್ಟ್‌ ಅಥವಾ ಗ್ಲೂಕೋಮದಂಥ ರೋಗಗಳ ಬಗ್ಗೆ ಆರಂಭದಲ್ಲೇ ಅರಿವು ಹೆಚ್ಚಿಸುವ ಅಗತ್ಯವಿದೆ. ಗ್ಲೂಕೋಮದಂಥ ರೋಗಗಳಲ್ಲಿ ಶಾಶ್ವತವಾಗಿ ಕುರುಡಾಗುವ ಸಾಧ್ಯತೆಗಳು ಹೆಚ್ಚು. ಉದ್ಭವಾವಸ್ಥೆಯಲ್ಲಿ ರೋಗಗಳ ನಿಯಂತ್ರಣ ಸುಲಭ. ಉಲ್ಭಣಗೊಂಡರೆ ರೋಗ ಹತೋಟಿ ಕಷ್ಟ. ಈ ಸೂತ್ರಗಳು ನಮ್ಮ ದೃಷ್ಟಿ ಸಂರಕ್ಷಣೆಯಲ್ಲಿ ಸಹಕಾರಿ.

ನಿಯಮಿತ ತಪಾಸಣೆ: ಸಮಸ್ಯೆ ಇಲ್ಲದಿದ್ದರೆ ವೈದ್ಯರ ಬಳಿ ಯಾರೂ ಹೋಗುವುದಿಲ್ಲ. ಆದರೆ ನಿಯಮಿತ ತಪಾಸಣೆಗಳಿಂದ ಪದೇಪದೆ ವೈದ್ಯರಲ್ಲಿ ಹೋಗುವುದನ್ನು ತಪ್ಪಿಸಲು ಸಾಧ್ಯವಿದೆ. ಮುಂದಾಗುವ ಸಮಸ್ಯೆಗಳನ್ನು ತಡೆಗಟ್ಟಲು, ಗುಣವಾಗದಂಥ ಅವಸ್ಥೆಗೆ ನಮ್ಮನ್ನು ತಳ್ಳದಂತೆ ಕಾಪಾಡಲು ಇದು ಸಹಕಾರಿ.

ಅರಿವಿರಲಿ: ಅರಿವೇ ಇರವಿನ ಗುರು. ಕಣ್ಣಿಗಾಗುವ ತೊಂದರೆಗಳ ಬಗ್ಗೆ ಮಾಹಿತಿ ಇರಿಸಿಕೊಳ್ಳುವುದು ಒಳಿತು. ಹಾಗೆಂದು ಅರ್ಧ ತಿಳುವಳಿಕೆಯಿಂದ ನಿಮ್ಮಷ್ಟಕ್ಕೇ ಔಷಧಿ ಮಾಡಿಕೊಂಡು, ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆಯಬೇಕೆಂದು ಅರ್ಥವಲ್ಲ. ಮೂಲಭೂತ ತಿಳುವಳಿಕೆ ಯಾವತ್ತೂ ಸಹಕಾರಿ.

ಗುಣಮಟ್ಟದ್ದಾಗಿರಲಿ: ಅಗ್ಗವಾಗಿ ದೊರೆಯುವ ಬಣ್ಣಬಣ್ಣದ ಗಾಜುಗಳನ್ನು ಕಣ್ಣಿಗೆ ಸಿಕ್ಕಿಸಿಕೊಳ್ಳಬೇಡಿ. ಬಿಸಿಲಿಗೆ ಬಳಸುವ ಕನ್ನಡಕ ಸಿಕ್ಕಾಪಟ್ಟೆ ದುಬಾರಿ ಆಗಬೇಕೆಂದಿಲ್ಲ, ಆದರೆ ಗುಣಮಟ್ಟದ್ದಾಗಿರಲಿ. ಅತಿಯಾದ ಬಿಸಿಲಿಗೆ ಒಡ್ಡಿಕೊಳ್ಳುವಾಗ, ತಂಪು ಕನ್ನಡಕಗಳು ಕಣ್ಣುಗಳ ರಕ್ಷಣೆಗೆ ಅಗತ್ಯವಾಗುತ್ತವೆ.

ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!

ಸ್ಕ್ರೀನ್‌ ಮುಚ್ಚಿ: ಕಿಟಕಿಯದ್ದಲ್ಲ, ಗೆಜೆಟ್‌ಗಳ ಸ್ಕೀನ್‌. ಸೂಕ್ಷ್ಮ ಅಂಗವಾದ ಕಣ್ಣುಗಳು ಅಷ್ಟೊಂದು ಪ್ರಮಾಣದ ನೀಲಿ ಬೆಳಕನ್ನು ತಡೆದುಕೊಳ್ಳಲು ಕಷ್ಟಪಡುತ್ತವೆ. ಆಗಾಗ ಈ ಪರದೆಗಳಿಂದ ಬ್ರೇಕ್‌ ತೆಗೆದುಕೊಳ್ಳಿ. ಇದಕ್ಕಾಗಿ ೨೦-೨೦-೨೦ ನೀತಿಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಅಂದರೆ ಪ್ರತಿ ೨೦ ನಿಮಷಗಳಿಗೆ ಒಮ್ಮೆ, ೨೦ ಸೆಕೆಂಡ್‌ಗಳ ಕಾಲ, ೨೦ ಅಡಿಗಿಂತ ದೂರ ದೃಷ್ಟಿಯನ್ನು ತೊಡಗಿಸುವುದು.

ನಿಯಂತ್ರಣ ಅಗತ್ಯ: ಮಧುಮೇಹ ಮತ್ತು ರಕ್ತದೊತ್ತಡಗಳು ನಿಯಂತ್ರಣದಲ್ಲಿರುವುದು ಕಣ್ಣುಗಳ ಹಿತದೃಷ್ಟಿಯಿಂದ ಅತ್ಯಗತ್ಯ. ರಕ್ತದೊತ್ತಡ ಅತಿಯಾದರೆ ದೇಹದ ನಾನಾ ಅಂಗಗಳ ಮೇಲೂ ಒತ್ತಡ ಹೆಚ್ಚುತ್ತದೆ. ಮಧುಮೇಹ ಹೆಚ್ಚಾದರೆ ಶಾಶ್ವತ ಕುರುಡು ಉಂಟಾಗುವ ಅಪಾಯವೂ ಇದೆ.

ಜೀವನಶೈಲಿ: ಅರೋಗ್ಯಕರ ಆಹಾರ, ಕಣ್ತುಂಬಾ ನಿದ್ದೆ ಮತ್ತು ನಿಯಮಿತವಾದ ವ್ಯಾಯಾಮ- ಇವಿಷ್ಟು ಎಲ್ಲರಿಗೂ ಅಗತ್ಯವಾಗಿ ಬೇಕಾದ್ದು. ಇದಲ್ಲದೆ, ಚಟಗಳಿಂದ ಮುಕ್ತರಾಗಿ ಜೀವನ ನಡೆಸುವುದು ಮತ್ತೊಂದು ಪ್ರಮುಖ ಘಟ್ಟ. ನಮ್ಮ ರೆಟಿನಾ ಹಾನಿಗೊಳಗಾದರೆ ಅದನ್ನು ಸರಿಪಡಿಸುವುದು ಸಾ‍ಧ್ಯವಿಲ್ಲ. ಹಾಗಾಗಿ ಕಣ್ಣುಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ಇದನ್ನೂ ಓದಿ | ಕಣ್ಣಿನ ಸುತ್ತ ಕಪ್ಪು ರಿಂಗ್‌ ರೋಡು! ತೊಲಗಿಸುವ ಉಪಾಯ ಇಲ್ಲಿದೆ ನೋಡು!!

Exit mobile version