Site icon Vistara News

Yadgiri News: ಡೆಂಗ್ಯೂ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ: ಡಿಸಿ ಡಾ. ಸುಶೀಲ

Anti dengue month and larval survey programme in yadgiri

ಯಾದಗಿರಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸಾರ್ವಜನಿಕರು ಕೈ ಜೋಡಿಸಿ ಡೆಂಗ್ಯೂ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. (Yadgiri News) ಕೋರಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ನಗರದ ಗಾಂಧಿವೃತ್ತದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಹಾಗೂ ಪ್ರತಿ ಶುಕ್ರವಾರ ಲಾರ್ವ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾಗೂ ಗಾಂಧಿ ವೃತ್ತದಲ್ಲಿ ಇರುವ ಮನೆಗಳಿಗೆ ತೆರಳಿ ಡ್ರಮ್, ಬ್ಯಾರೆಲ್ ಮತ್ತು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

ಮಳೆಗಾಲ ಪ್ರಾರಂಭವಾದ ನಂತರ ಡೆಂಗ್ಯೂ ರೋಗವು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಂಭವ ಇದೆ, ಆದ ಕಾರಣ ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಕಡ್ಡಾಯವಾಗಿ ಬಳಸಬೇಕು ಅಥವಾ ಸೊಳ್ಳೆ ಬತ್ತಿ, ಮುಲಾಮು, ಇತ್ಯಾದಿ ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು ಉತ್ತಮ, ಈಡಿಸ್ ಲಾರ್ವಾ ಸಮೀಕ್ಷೆಗಾಗಿ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾರ್ವಜನಿಕರು ಸಹಕರಿಸುವುದರೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ನೀಡುವ ಸಲಹೆಗಳನ್ನು ಪಾಲಿಸಬೇಕು, ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು ಎಂದು ಸಲಹೆ ನೀಡಿದರು.

ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿ, ಮೈಮೇಲೆ ಚಿಕ್ಕ ಚಿಕ್ಕ ಗುಳ್ಳೆಯ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

ಇದನ್ನೂ ಓದಿ: Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಡೆಂಗ್ಯೂ ನಿಯಂತ್ರಣ ಜಿಲ್ಲಾ ಸಮನ್ವಯ ಸಮಿತಿ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸಾಜಿದ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಯೋತಿ ಕಟ್ಟಿಮನಿ, ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಸಂಜೀವ್ ಕುಮಾರ ರಾಯಚೂರಕರ್, ತಾಲೂಕ ಆರೋಗ್ಯ ಅಧಿಕಾರಿ ಡಾ. ಹನುಮಂತರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ತುಳಸಿರಾಮ್ ಚೌಹಾಣ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಇತರರು ಪಾಲ್ಗೊಂಡಿದ್ದರು.

Exit mobile version