Site icon Vistara News

Yoga Day 2023 : ಭ್ರಾಂತ ಮನಸ್ಸನ್ನು ಶಾಂತ ಸ್ಥಿತಿಗೆ ತರುವ ಪ್ರಾಣಾಯಾಮ, ನೀವೂ ಮಾಡಿ…

Yoga Day 2023 Pranayama

ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ?- ಇಂಥ ಬಹಳಷ್ಟು ಪ್ರಶ್ನೆಗಳಿಗೆ ಉತ್ತರವಾಗಿದೆ ಪ್ರಾಣಾಯಾಮ (Yoga Day 2023).

ಉಸಿರಿನ ಮಹತ್ವ ಉಸುರಿದಷ್ಟೂ ಕಡಿಮೆಯೇ! ಹುಟ್ಟಿದ ಮಗು ಜೋರಾಗಿ ಅತ್ತಾಗ ಅದರ ಉಸಿರಾಟ ಸುಸೂತ್ರವಾಗಿದೆ ಎಂಬುದನ್ನು ವೈದ್ಯರು ಖಾತ್ರಿಪಡಿಸುತ್ತಾರೆ. ಹಾಗೆಯೇ ಜೀವವೊಂದು ನಿರ್ಗಮಿಸಿದೆ ಎಂಬುದು ತಿಳಿಯುವುದೂ ಉಸಿರಾಟ ನಿಂತಾಗಲೇ. ಹುಟ್ಟು-ಸಾವುಗಳ ಈ ನಡುವಿನ ಅವಧಿಯಲ್ಲಿ ನಮ್ಮನ್ನು ಪೊರೆಯುವ ಉಸಿರಿನ ಶಕ್ತಿಯನ್ನು ನಾವೇಕೆ ಪ್ರಾಣ ಶಕ್ತಿ ಎನ್ನುತ್ತೇವೆ? ಅದಕ್ಕೇಕೆ ಅಷ್ಟೊಂದು ಮಹತ್ವ ಕೊಡುತ್ತೇವೆ? ಉಸಿರಾಡುವ ವ್ಯಾಯಾಮ ಎಂಬಂತೆ ಕಾಣುವ ಕ್ರಿಯೆಯನ್ನು ಪ್ರಾಣಾಯಾಮ ಎಂದೇಕೆ ಕರೆಯುತ್ತೇವೆ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಬಹಳಷ್ಟು ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.

ಯೋಗದ ನಾಲ್ಕನೇ ಅಂಗ ಎನಿಸಿಕೊಂಡಿರುವ ಪ್ರಾಣಾಯಾಮ ಎಂಬ ಶಬ್ದದಲ್ಲಿ ಎರಡು ಪದಗಳಿವೆ- ಪ್ರಾಣ ಮತ್ತು ಆಯಾಮ. ಈ ಎರಡೂ ಪದಗಳು ಒಂದಾಗಿ, ಉಸಿರಾಟವನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು ಎಂಬ ಅರ್ಥವನ್ನು ನೀಡುತ್ತವೆ. ವಾಸ್ತವದಲ್ಲಿ ಪ್ರಾಣಾಯಾಮದ ಅಭ್ಯಾಸಿಗಳು ಮಾಡುವುದೂ ಅದನ್ನೇ. ಉಸಿರಾಟವನ್ನು ಅಥವಾ ಪ್ರಾಣಶಕ್ತಿಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವ ಮೂಲಕ ಮನಶ್ಶಕ್ತಿಯನ್ನೂ, ತನ್ಮೂಲಕ ದೇಹವನ್ನೂ ನಿಯಂತ್ರಿಸುವ ಕ್ರಮವಿದು. ಇವುಗಳನ್ನು ಕೇವಲ ಅಂಕೆಯಲ್ಲಿರುವ ಕ್ರಮವೆಂದು ಭಾವಿಸಬೇಕಿಲ್ಲ. ಬೇಡದ ದಿಸೆಯಲ್ಲಿ ನಮ್ಮ ಚೈತನ್ಯದ ಹರಿವನ್ನು ನಿಯಂತ್ರಿಸುವ ಮೂಲಕ ಬದುಕಿನ ಒಟ್ಟಾರೆ ಸ್ವಾಸ್ಥ್ಯವನ್ನು ಹೆಚ್ಚಿಸುವ ರೀತಿಯಿದು.

ದೀರ್ಘ ಉಸಿರಾಟದ ಕ್ರಮವಾಗಿ ಗುರುತಿಸಿಕೊಂಡಿರುವ ಪ್ರಾಣಾಯಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಉಸಿರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ʻಪ್ರಾಣʼ ಎಂಬುದು ಉಸಿರು ಮಾತ್ರವೇ ಅಲ್ಲ. ದೇಹದ ಅಸಂಖ್ಯ ಶಕ್ತಿವಾಹಿನಿಗಳಾದ ನಾಡಿಗಳಲ್ಲಿ ಮತ್ತು ಶಕ್ತಿ ಕೇಂದ್ರಗಳಾದ ಚಕ್ರಗಳ ಮೂಲಕ ಪ್ರವಹಿಸುವ ಚೈತನ್ಯವನ್ನು ಪ್ರಾಣ ಎನ್ನಬಹುದು. ಇವೆಲ್ಲಾ ಒಂದಾಗಿ ಶರೀರದ ಸುತ್ತಲೂ ತೇಜೋವಲಯವನ್ನು ಸೃಷ್ಟಿಸುತ್ತವೆ. ನಾಡಿ ಮತ್ತು ಚಕ್ರಗಳಲ್ಲಿ ಪ್ರವಹಿಸುವ ಚೈತನ್ಯವೆಷ್ಟು ಎನ್ನುವುದನ್ನು ಆಧರಿಸಿ ಆಯಾ ವ್ಯಕ್ತಿಯ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯದ ಬಗ್ಗೆ ನಿಖರವಾಗಿ ಹೇಳಬಹುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ.

Yoga Day 2023

ಏಕೆ ಮಾಡಬೇಕು?

ದೇಹದಲ್ಲಿ ಪ್ರಾಣಶಕ್ತಿಯ ಹರಿವು ತಡೆಯಿಲ್ಲದಂತೆ ನಿರಂತರವಾಗಿದ್ದರೆ ಮನಸ್ಸು ಶಾಂತವಾಗಿ, ಧನಾತ್ಮಕವಾಗಿ ಮತ್ತು ಉಲ್ಲಸಿತವಾಗಿರುತ್ತದೆ. ಆದರೆ ಪ್ರಾಣಶಕ್ತಿಯ ಇರುವಿನ ಅರಿವಿಲ್ಲದಿದ್ದರೆ ನಾಡಿಗಳು ಮತ್ತು ಚಕ್ರಗಳಲ್ಲಿ ತಡೆಯುಂಟಾಗುತ್ತದೆ. ಇದರಿಂದ ಪ್ರಾಣಶಕ್ತಿಯ ಸಂಚಾರ ಅಸ್ಖಲಿತವಾಗಿ ಇರುವುದಿಲ್ಲ. ಇದರಿಂದ ಆತಂಕ, ಒತ್ತಡ, ಭೀತಿ, ಸಂಘರ್ಷದಂಥ ಋಣಾತ್ಮಕ ಭಾವಗಳು ಹೆಚ್ಚಾಗುತ್ತವೆ. ಮೊದಲಿಗೆ ಮಾನಸಿಕ ಸ್ಥರದಲ್ಲೇ ಇರುವಂಥ ಸಮಸ್ಯೆಗಳು, ಕ್ರಮೇಣ ಶಾರೀರಿಕ ವಲಯಕ್ಕೆ ಹರಡುತ್ತವೆ. ಹಲವು ರೀತಿಯ ರೋಗಬಾಧೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಶರೀರದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಎಷ್ಟೋ ಮೊದಲು ಪ್ರಾಣಶಕ್ತಿಯಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ಈ ವ್ಯತ್ಯಾಸವನ್ನು ಸರಿಪಡಿಸಿಕೊಂಡು, ರೋಗಗಳಿಂದ ದೂರ ಇರುವುದಕ್ಕೆ ಪ್ರಾಣಾಯಾಮ ಅಗತ್ಯ.

ಹೇಗೆ ಮಾಡಬೇಕು?

ಉಸಿರನ್ನು ನಾನಾ ಅವಧಿಗಳು, ಆವರ್ತನಗಳು ಮತ್ತು ಪ್ರಮಾಣಗಳಲ್ಲಿ ಹಿಡಿಯುವ ಮತ್ತು ಬಿಡುವ ಮೂಲಕ ಮನಸ್ಸು ಮತ್ತು ದೇಹವನ್ನು ಏಕತ್ರಗೊಳಿಸುವ ಕ್ರಮವಿದು. ಬೇಡದ ವಸ್ತು ಮತ್ತು ಶಕ್ತಿಗಳಿಂದ ದೇಹ-ಮನಸ್ಸುಗಳನ್ನು ಮುಕ್ತಗೊಳಿಸುವುದರ ಜೊತೆಗೆ, ದೇಹಕ್ಕೆ ಆಮ್ಲಜನಕದ ಹರಿವನ್ನು ಹೆಚ್ಚಿಸಿ ಗುಣಪಡಿಸುವಂಥ ಗುಣವನ್ನಿದು ಹೊಂದಿದೆ. ಪ್ರಾಣಾಯಾಮದಲ್ಲಿ ಪ್ರಮುಖವಾಗಿ ಮೂರು ಹಂತಗಳಿವೆ-

  1. ಪೂರಕ- ಉಸಿರನ್ನು ಒಳಗೆಳೆದುಕೊಳ್ಳುವುದು
  2. ಕುಂಭಕ- ಉಸಿರನ್ನು ಹಿಡಿದಿಟ್ಟುಕೊಳ್ಳುವುದು
  3. ರೇಚಕ- ಉಸಿರನ್ನು ಹೊರಗೆ ಬಿಡುವುದು

ಯಾವುದೇ ಪ್ರಾಣಾಯಾಮ ಈ ಮೂರು ಹಂತಗಳ ಮೂಲಕವೇ ಸಾಗಬೇಕು. ಇದರಲ್ಲೂ ಹಲವಾರು ವಿಧಗಳಿವೆ. ಪ್ರಾಣಾಯಾಮದ ಕೆಲವು ವಿಧಗಳು ಮತ್ತು ಅವುಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

ಇದನ್ನೂ ಓದಿ: Yoga Day 2023 : ಶುಗರ್‌ ನಿಯಂತ್ರಣಕ್ಕೆ ಯೋಗವೇ ಮದ್ದು! ಈ ಆಸನಗಳನ್ನು ಮಾಡಿ, ಮಧುಮೇಹ ನಿಯಂತ್ರಿಸಿ

ಭ್ರಾಮರಿ: ಹೊರಗಿನ ಶಬ್ದಗಳು ಅತಿಯಾದಾಗ ಒಳಗಿನ ಧ್ವನಿ ಕೇಳುವುದಿಲ್ಲ. ಆಗ ಹೊರಗದ್ದಲವನ್ನು ಲಯ ಮಾಡುವ ಇನ್ನೊಂದು ಧ್ವನಿ ಒಳಗಿನಿಂದ ಬೇಕಾಗುತ್ತದೆ. ಇದಕ್ಕೆ ಭ್ರಾಮರಿ ಪ್ರಾಣಾಯಾಮವನ್ನು ಉದಾಹರಿಸಬಹುದು. ಅಂದರೆ, ದುಂಬಿ ಝೇಂಕಾರದಂಥ ದನಿಯನ್ನು ಮಾಡುವ ಉಸಿರಾಟದ ಕ್ರಮವಿದು. ಹೊರಗಿನ ಗಲಾಟೆಯನ್ನು ಕೇಳದಂತೆ ಮಾಡಿ, ನಮ್ಮ ಆಂತರ್ಯದ ದನಿಗೆ ಕಿವಿಯಾಗಿಸುವ ತಂತ್ರವಿದು.

ಕಪಾಲಭಾತಿ: ಈ ಶಬ್ದದ ಅರ್ಥ ತಲೆಬುರುಡೆಯ ಬೆಳಕು ಎಂಬುದಾಗಿ! ಆದರೆ ಸಶಕ್ತವಾಗಿ ಉಸಿರನ್ನು ಒಳಗೆಳೆದುಕೊಳ್ಳುವ ಈ ತಂತ್ರದಿಂದ ದೇಹದ ಯಾವುದೇ ನಾಡಿ ಮತ್ತು ಚಕ್ರಗಳಲ್ಲಿ ಇರಬಹುದಾದ ತಡೆಯನ್ನು ನಿವಾರಿಸುವ ವಿಧಾನವಾಗಿ ಇದು ಬಳಕೆಯಾಗುತ್ತದೆ. ಮಾತ್ರವಲ್ಲ, ಶರೀರವನ್ನು ಡಿಟಾಕ್ಸ್‌ ಮಾಡಿ, ನರ, ಪರಿಚಲನೆ, ಎದೆ ಮತ್ತು ಕಿಬ್ಬೊಟ್ಟೆಗಳನ್ನು ಸಶಕ್ತ ಮಾಡುವಂಥ ಕ್ಲಿಷ್ಟ ಎನ್ನಬಹುದಾದ ಪ್ರಾಣಾಯಾಮವಿದು.

ಭಸ್ತ್ರಿಕಾ: ಕಿಡಿಗೆ ತಿದಿಯೂದಿದಂತೆ ಉಸಿರಾಡುವ ಕ್ರಮವೆಂದು ಇದನ್ನು ಬಣ್ಣಿಸಬಹುದು. ಏಕೋ ಬೆಳಗ್ಗೆ ಎದ್ದಾಗಿನಿಂದ ಸುಸ್ತು, ಶಕ್ತಿಯೇ ಇಲ್ಲ ಎಂಬಂಥ ಸಮಯದಲ್ಲಿ ಮೂರು ಆವರ್ತ ಭಸ್ತ್ರಿಕಾ ಮಾಡುವುದು ನೆರವಾಗಬಹುದು. ದೀರ್ಘವಾಗಿ ಮತ್ತು ಸಶಕ್ತವಾಗಿ ಉಸಿರನ್ನು ಎಳೆದುಕೊಳ್ಳುವುದು ಮತ್ತು ಬಿಡುವುದು ಇದರ ವೈಶಿಷ್ಟ್ಯ. ದೇಹ ಮತ್ತು ಮನಸ್ಸುಗಳ ಅಗ್ನಿಯನ್ನು ಪ್ರಖರವಾಗಿ ಜ್ವಲಿಸುವಂತೆ ಮಾಡಿ, ಅಜೀರ್ಣದಂಥ ತೊಂದರೆಯನ್ನು ನಿವಾರಣೆ ಮಾಡುತ್ತದೆ.

Yoga Day 2023

ನಾಡಿಶೋಧನ: ನಿಮ್ಮ ಕೆಲಸದಲ್ಲಿ ಶ್ರದ್ಧೆ, ಗಮನವನ್ನು ಕೇಂದ್ರೀಕರಿಸಲಾಗುತ್ತಿಲ್ಲವೇ? ಒಂಬತ್ತು ಸುತ್ತುಗಳ ನಾಡಿಶೋಧನ ಪ್ರಾಣಾಯಾಮ ಇದಕ್ಕೆ ಉಪಶಮನ ನೀಡಬಲ್ಲದು. ನಾಡಿಗಳಲ್ಲಿರುವ ತಡೆಗಳನ್ನು ನಿವಾರಿಸಿ, ಪ್ರಾಣಶಕ್ತಿಯ ಸಂಚಾರವನ್ನು ಸುಸೂತ್ರ ಮಾಡುವ ಅರ್ಥದಲ್ಲೇ ಈ ಪ್ರಾಣಾಯಾಮಕ್ಕೆ ಹೆಸರಿಡಲಾಗಿದೆ. ಮೂಗಿನ ಹೊಳ್ಳೆಗಳಲ್ಲಿ ಒಂದನ್ನು ಮುಚ್ಚಿಕೊಂಡು ಇನ್ನೊಂದರಲ್ಲಿ ಉಸಿರೆಳೆದುಕೊಂಡು, ಉಸಿರು ಬಿಡುವಾಗ ಮುಚ್ಚಿದ ಹೊಳ್ಳೆಯನ್ನು ತೆರೆದು, ತೆರೆದಿದ್ದನ್ನು ಮುಚ್ಚಿಕೊಳ್ಳುವುದು. ದೇಹದ ತ್ರಿದೋಷಗಳನ್ನು ಸಮತೋಲನಕ್ಕೆ ತರುವ ಸಾಧ್ಯತೆ ಈ ರೀತಿಯ ಉಸಿರಾಟಕ್ಕಿದೆ.

ಇದನ್ನೂ ಓದಿ: Yoga Day 2023: ಯೋಗ ದಿನಾಚರಣೆ; ವಿದೇಶಗಳಿಂದಲೂ ಸಿಕ್ಕಿದೆ ಅದ್ಭುತ ಸ್ಪಂದನೆ

ಇವೆಲ್ಲವನ್ನೂ ಸರಳವಾಗಿ ಹೇಳುವುದಾದರೆ:

ಈ ಯಾವುದೇ ರೀತಿಯ ಪ್ರಾಣಾಯಾಮಗಳು ಶರೀರದಲ್ಲಿ ಪ್ರಾಣಶಕ್ತಿಯನ್ನು ಸಂಚಯಿಸಿ, ಬದುಕಿನ ಸ್ವಾಸ್ಥ್ಯ ಹೆಚ್ಚಿಸಬಲ್ಲವು.

ನಾಡಿ ಮತ್ತು ಚಕ್ರಗಳಲ್ಲಿ ಇರಬಹುದಾದ ತಡೆಗಳನ್ನು ನಿವಾರಿಸಿ, ದೇಹ-ಮನಸ್ಸುಗಳ ಚೈತನ್ಯ ಹೆಚ್ಚಿಸಿ, ಪ್ರಭಾವಲಯವನ್ನು ವಿಸ್ತರಿಸಬಲ್ಲವು.

ಮಾನಸಿಕ ಸ್ಥಿತಿಯನ್ನು ಧನಾತ್ಮಕ, ಶಾಂತ ಮತ್ತು ಉಲ್ಲಸಿತವನ್ನಾಗಿ ಮಾಡಬಲ್ಲವು. ಇದರಿಂದಾಗಿ ಬದುಕಿನಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡು ಉನ್ನತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ದೇಹ, ಮನಸ್ಸು ಮತ್ತು ಆತ್ಮಗಳ ಸಾಂಗತ್ಯಕ್ಕೆ ನೆರವಾಗುವ ಕ್ರಿಯೆಯಿದು. ಇದರಿಂದ ದೈಹಿಕ, ಮಾನಸಿಕ ಮತ್ತು ಪಾರಮಾರ್ಥಿಕ ನೆಲೆಯಲ್ಲಿ ಉನ್ನತಿಗೇರಲು ಅವಕಾಶವಾಗುತ್ತದೆ.

Exit mobile version