Site icon Vistara News

Yoga for Fertility: ಈ 6 ಆಸನಗಳಿಂದ ಸಂತಾನ ಭಾಗ್ಯ ಸಾಧ್ಯ!

Yoga for Fertility

ಹಲವು ರೀತಿಯ ಆರೋಗ್ಯ (Yoga for Fertility) ಸಮಸ್ಯೆಗಳಿಗೆ ಯೋಗ ಉತ್ತರ ನೀಡಬಲ್ಲದು. ಉಳಿದೆಲ್ಲ ವ್ಯಾಯಾಮಗಳಂತೆ ಕೇವಲ ದೈಹಿಕ ವಿಷಯಗಳತ್ತ ಗಮನ ನೀಡದ ಯೋಗ, ಮಾನಸಿಕ ಸ್ತರದಿಂದಲೇ ಅಂದರೆ ಮೂಲದಿಂದಲೇ ವಿಷಯಗಳನ್ನು ಉದ್ದೇಶಿಸುತ್ತಾ ಬರುತ್ತದೆ. ಈ ಮೂಲಕ ದೇಹದ ಹಲವಾರು ಗ್ರಂಥಿಗಳು, ಚೋದಕಗಳು, ಅಂಗಗಳು ಸರಿಯಾಗಿ ಕೆಲಸ ಮಾಡಲು ನೆರವು ನೀಡುತ್ತದೆ. ಹೀಗೆ ಸಮತೋಲನಕ್ಕೆ ತರಬಹುದಾದ ಹಲವು ತೊಂದರೆಗಳ ಪೈಕಿ ಫಲವಂತಿಕೆಯ ಸಮಸ್ಯೆಯೂ ಒಂದು.
ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೂ ಫಲವಂತಿಕೆಗೂ ನಿಟಕ ಸಂಬಂಧವಿದೆ. ಅದರಲ್ಲೂ ಒತ್ತಡ, ಆತಂಕ ಮುಂತಾದ ಚಿತ್ತ ವಿಕಾರಗಳು ಹೆಚ್ಚಿದಂತೆ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಹಿಳೆ ಮತ್ತು ಪುರುಷರಿಬ್ಬರ ವಿಷಯದಲ್ಲೂ ಸತ್ಯ. ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಯೋಗ ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೊತೆಗೆ ಹಾರ್ಮೋನುಗಳ ಸಮತೋಲನಕ್ಕೆ ಮತ್ತು ತೂಕ ಇಳಿಸಿ ಬೊಜ್ಜು ಕಡಿಮೆ ಮಾಡುವಲ್ಲೂ ಯೋಗ ಅನುಕೂಲ ಕಲ್ಪಿಸುತ್ತದೆ. ಹೀಗೆ ಫಲವಂತಿಕೆಯ ಹೆಚ್ಚಳಕ್ಕೆ ಯೋಗಾಭ್ಯಾಸ ನೆರವು ನೀಡಬಲ್ಲದು. ಇದಕ್ಕೆ ಯಾವೆಲ್ಲ ಆಸನಗಳು ಸೂಕ್ತ?

ಸೇತುಬಂಧಾಸನ

ಇದು ಎದೆ, ಕುತ್ತಿಗೆ, ಬೆನ್ನುಹುರಿ, ಸೊಂಟ, ಕಿಬ್ಬೊಟ್ಟೆಯ ಭಾಗಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಹೊಟ್ಟೆಯ ಎಲ್ಲ ಅಂಗಗಳಿಗೂ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಫಲವಂತಿಕೆಯ ಸಾಧ್ಯತೆಯನ್ನು ದಟ್ಟವಾಗಿಸುತ್ತದೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತಿ 5-10 ಬಾರಿ ಉಸಿರಾಡಬಹುದು. ಇದನ್ನು ಹಲವು ಬಾರಿ ಪುನರಾವರ್ತಿಸಬಹುದು.

ವಿಪರೀತ ಕರಣಿ

ಕಿಬ್ಬೊಟ್ಟೆಯ ಭಾಗಕ್ಕೆಲ್ಲ ರಕ್ತ ಪರಿಚಲನೆಯನ್ನು ಸುಧಾರಿಸುವ ಆಸನವಿದು. ಜೊತೆಗೆ ಹೊಟ್ಟೆಯ ಭಾಗವನ್ನೆಲ್ಲ ಸಶಕ್ತಗೊಳಿಸುತ್ತದೆ. ಗೋಡೆಯ ಪಕ್ಕದಲ್ಲಿ ನೇರ ಮಲಗಿ, ನಿಧಾನಕ್ಕೆ ಕಾಲನ್ನು ಮೇಲ್ಮುಖವಾಗಿ ಗೋಡೆಗೆ ಆನಿಸಿ ನೇರವಾಗಿ ಚಾಚಿ. ಇದೀಗ ಶರೀರ ʻಎಲ್‌ʼ ಆಕೃತಿಯಲ್ಲಿ ಕಾಣಬೇಕು. ಈ ಭಂಗಿಯಲ್ಲಿ 5-10 ನಿಮಿಷಗಳವರೆಗೂ ಹಿಡಿಯಬಹುದು.

ವೀರಭದ್ರಾಸನ

ಈ ಆಸನವನ್ನು ಒಂದಕ್ಕಿಂತ ಹೆಚ್ಚಿನ ಕ್ರಮದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಈ ಎಲ್ಲಾ ಆಸನಗಳು ಕಾಲು, ತೋಳು ಮತ್ತು ಹೊಟ್ಟೆ, ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವಂಥವು. ನಿಯಮಿತವಾಗಿ ಈ ಆಸನ ಅಭ್ಯಾಸ ಮಾಡುವುದರಿಂದ ಬಹಳಷ್ಟು ಕ್ಯಾಲರಿಗಳನ್ನು ಕರಗಿಸಿ, ದೇಹದ ಅದಷ್ಟೂ ಭಾಗಗಳ ಕೊಬ್ಬು ಇಳಿಸಬಹುದು. ತೂಕ ಹೆಚ್ಚಳದಿಂದ ಫಲವಂತಿಕೆಯ ಸಮಸ್ಯೆಯಿದ್ದರೆ ಇಂಥ ಆನಸಗಳು ಸೂಕ್ತ.

ಧನುರಾಸನ

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೂ ಇದು ಸಹಾಯಕ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು.

ಸುಪ್ತ ಬದ್ಧಕೋನಾಸನ

ಮೊದಲು ನೇರವಾಗಿ ಮಲಗಿ. ನಂತರ, ಮಂಡಿಗಳನ್ನು ಮಡಿಸಿ, ಪಾದಗಳನ್ನು ಒಂದಕ್ಕೊಂದು ಸೇರಿಸಿ ʻನಮಸ್ತೆʼ ಮಾಡುವಂತೆ ಹಿಡಿಯಿರಿ. ಇದರಿಂದ ತೊಡೆ, ಪೃಷ್ಠ ಮತ್ತು ಕಿಬ್ಬೊಟ್ಟೆಯ ಕೆಳಭಾಗದವರೆಗೂ ಸ್ನಾಯುಗಳು ಚುರುಕಾಗುತ್ತದೆ. ಇದನ್ನು ಮೂರ್ನಾಲ್ಕು ನಿಮಿಷಗಳವರೆಗೂ ಹಿಡಿಯಬಹುದು.

ಇದನ್ನೂ ಓದಿ: International Yoga day 2024: ಎಚ್ಚರವಾಗಿದ್ದೇ ನಿದ್ದೆ ಮಾಡಬಹುದೆ? ಯೋಗನಿದ್ರೆ ತಂತ್ರ ಕಲಿಯಿರಿ!

ಭುಜಂಗಾಸನ

ಹೊಟ್ಟೆ ಮತ್ತು ಬೆನ್ನುಹುರಿಯ ಅಕ್ಕಪಕ್ಕದ ಸ್ನಾಯುಗಳು ಇದರಿಂದ ಬಲಗೊಳ್ಳುತ್ತವೆ. ಜೊತೆಗೆ, ಸೊಂಟ, ಕಿಬ್ಬೊಟ್ಟೆ, ಎದೆ, ಭುಜ ಮತ್ತು ತೋಳುಗಳ ಸ್ನಾಯುಗಳ ಮೇಲೂ ಇದು ಕೆಲಸ ಮಾಡುತ್ತದೆ. ಹೆಡೆ ಎತ್ತಿದ ಹಾವಿನಂತೆ ಕಾಣುವ ಭಂಗಿಯಿದು. ಮೊದಲಿಗೆ ಮುಖ ಅಡಿ ಮಾಡಿ ಮಲಗಿ. ಹಸ್ತಗಳನ್ನು ಎದೆಯ ಪಕ್ಕದಲ್ಲಿ ಊರಿ, ಕಟಿಯಿಂದ ಮೇಲೆ ಭಾಗವನ್ನು ನಿಧಾನಕ್ಕೆ ಮೇಲೆತ್ತಿ ನಿಲ್ಲಿಸಿ. ಇದರಿಂದ ಗರ್ಭಾಶಯದ ಭಾಗಕ್ಕೆಲ್ಲ ರಕ್ತ ಪರಿಚಲನೆ ಹೆಚ್ಚುತ್ತದೆ.

Exit mobile version