ನಮ್ಮ ಮನಸ್ಸೇ ವಿಚಿತ್ರ. ಚಿಕ್ಕ ಮಕ್ಕಳಿಗೆ ಬೇಗ ದೊಡ್ಡವರಾಗುವ ಆಸೆ; ದೊಡ್ಡವರಿಗೆ ಇನ್ನೂ ಚಿಕ್ಕವರಂತೆಯೇ ಕಾಣುವ ಆಸೆ! ನಮ್ಮನಮ್ಮ ಆಸೆಗಳು ಏನೇ ಇದ್ದರೂ, ಅವುಗಳನ್ನು ಪೂರೈಸಿಕೊಳ್ಳಲು ನಮ್ಮ ಪ್ರಯತ್ನವಂತೂ ಬೇಕಲ್ಲವೇ. ಮಕ್ಕಳಿಗಾದರೂ ದೊಡ್ಡವರಾಗುವುದಕ್ಕೆ ಏನೇನು ಮಾಡಬೇಕು ಎಂದು ಪುಸಲಾಯಿಸಬಹುದು. ಅದೇ ಹಿರಿಯರಿಗೆ? ಏನು ಮಾಡಿದರೂ ಮತ್ತೆ ಕಳೆದ ದಿನಗಳು ಮರಳುವುದಿಲ್ಲವಲ್ಲ. ಆದರೂ ಕೆಲವು ಪ್ರಯತ್ನಗಳಿಂದ ಬದುಕಿನಲ್ಲಿ ಉತ್ಸಾಹ ಮಾಸದಂತೆ ಇರಬಹುದು ಎನ್ನುವುದೂ ಸುಳ್ಳಲ್ಲ. ಉದಾ, ಯೋಗ ಮಾಡುವುದು. ಎಂಟರಿಂದ ಎಂಭತ್ತರ ವಯಸ್ಸಿನವರು ಯೋಗ ಮಾಡಬಹುದು ಎನ್ನುವುದು ಜನಪ್ರಿಯ ಹೇಳಿಕೆ. ಅಂದ್ರೆ, ವಯಸ್ಸು ಅರವತ್ತರ ಮೇಲಾಗುತ್ತಿದ್ದಂತೆ `ಇನ್ನು ಕೈಲಾಗದು’ ಎನ್ನುವುದು ಸರಿಯಲ್ಲ. ಆದಷ್ಟಾದರೂ ಮಾಡಬಹುದಲ್ಲ ಎನ್ನುತ್ತಾರೆ ಯೋಗಾಭ್ಯಾಸಿಗಳು. ಹಾಗಾದರೆ ವಯಸ್ಸಿನಲ್ಲಿ ಹಿರಿತನ (Yoga For Senior Citizens) ಬಂದ ಮೇಲೂ ಯೋಗ ಮಾಡಬಹುದೇ? ಯಾವೆಲ್ಲಾ ಆಸನಗಳನ್ನು ಮಾಡಬಹುದು? ಹೇಗೆ ಮಾಡಬಹುದು ಎನ್ನುವುದಕ್ಕಿಂತ ಎಷ್ಟು ಮಾಡಬಹುದು? ಯಾವ್ಯಾವ ಆಸನಗಳಿಂದ ಏನೇನು ಪ್ರಯೋಜನ? ಯೋಗ ಮಾಡುವಾಗ ಮುನ್ನೆಚ್ಚರಿಕೆ ಅಗತ್ಯವೇ- ಇಂಥ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವಿದು.
ನಿಯಮಿತವಾಗಿ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ನಾವು ಚಿಕ್ಕವರೆಂತನಿಸುವುದು ಸುಳ್ಳಲ್ಲ! ಅಂದರೆ ದೇಹ ಮತ್ತು ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ, ಆರೋಗ್ಯವೂ ಸುಧಾರಿಸುತ್ತದೆ. ಪ್ರಾಯ ಮಾಗಿದ ಮೇಲೆ (yoga for seniors) ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇರುವುದಾದರೂ ಏನು? ಯಾವುದೇ ಔಷಧ ಅಥವಾ ಚಿಕಿತ್ಸೆಗಳಿಗೆ ಯೋಗ ಖಂಡಿತಕ್ಕೂ ಪರ್ಯಾಯವಲ್ಲ. ಆದರೆ ಶಾಂತವಾದ ದೇಹ ಮತ್ತು ಮನಸ್ಸುಗಳು ಬರಬಹುದಾದ ಒಂದಿಷ್ಟು ಸಮಸ್ಯೆಗಳನ್ನು ಮುಂದೂಡುವುದು ನಿಜ. ಅದರಲ್ಲೂ ವಯಸ್ಸಾದಂತೆ ಕಾಡುವ ಅಜೀರ್ಣದ ತೊಂದರೆಗಳು, ಕೀಲಿನ ಸಮಸ್ಯೆಗಳು, ರಕ್ತದೊತ್ತಡ ಹಾಗೂ ಮಧುಮೇಹದಂಥ ರೋಗಗಳನ್ನು ನಿರ್ವಹಿಸಲು ಯೋಗ ನಿಶ್ಚಿತವಾಗಿ ನೆರವಾಗುತ್ತದೆ.
ಹಿರಿಯರು ಯಾವೆಲ್ಲ ಆಸನಗಳನ್ನು ಮಾಡಬಹುದು?
ನಿಂತು, ಕುಳಿತು, ಮಲಗಿ ಅಥವಾ ಕುರ್ಚಿಯಲ್ಲಿ ಕುಳಿತು ಮಾಡುವಂಥ ಹಲವು ಆಸನಗಳು ಹಿರಿಯರಿಗೆ ಸೂಕ್ತ.
ನಿಂತು ಮಾಡುವಂಥವು: ತ್ರಿಕೋಣಾಸನ
ಬೆನ್ನಿನ ಕೆಳಭಾಗ ಮತ್ತು ಪೃಷ್ಠದ ಭಾಗಗಳಲ್ಲಿ ನೋವು, ಅಸ್ಥಿರತೆ ವಯಸ್ಸು ಹೆಚ್ಚಿದಂತೆ ಸಾಮಾನ್ಯ. ತ್ರಿಕೋಣಾಸನದಿಂದ ದೇಹದ ಈ ಭಾಗಗಳನ್ನು ಸುದೃಢ ಮಾಡಬಹುದು. ರಕ್ತಸಂಚಾರವನ್ನೂ ಸರಾಗ ಮಾಡಿ, ಬಿಪಿ ನಿಯಂತ್ರಣಕ್ಕೆ ಈ ಆಸನ ನೆರವಾಗುತ್ತದೆ.
ಕಟಿಚಕ್ರಾಸನ
ಬೆನ್ನುಹುರಿಯನ್ನು ನೇರ ಮತ್ತು ಸಬಲವಾಗಿ ಇರಿಸಿಕೊಳ್ಳಲು ಈ ಆಸನ ಸಹಾಯ ಮಾಡುತ್ತದೆ. ಮಾತ್ರವಲ್ಲ, ತೋಳು ಮತ್ತು ಕಾಲಿನ ಮೂಳೆಗಳನ್ನು ದೃಢಗೊಳಿಸಿ, ತಮ್ಮ ಕಾಲಿನ ಮೇಲೆ ನಿಲ್ಲುವುದಕ್ಕೆ ಬಲ ನೀಡುತ್ತದೆ.
ಕುಳಿತ ಭಂಗಿಗಳು: ಬದ್ಧಕೋನಾಸನ: (ಚಿಟ್ಟೆಯ ಭಂಗಿ)
ಪಚನ ಕ್ರಿಯೆಯನ್ನು ಸರಾಗ ಮಾಡಿ, ಹೊಟ್ಟೆ ಖಾಲಿ ಮಾಡುವುದನ್ನು ಸುಲಭ ಮಾಡುವ ಆಸನವಿದು. ತೊಡೆ ಮತ್ತು ಮಂಡಿಯ ಕೀಲುಗಳನ್ನು ಸಡಿಲ ಮಾಡಿ, ಈ ಭಾಗಗಳ ನೋವು ಕಡಿಮೆ ಮಾಡುತ್ತದೆ.
ಶಿಶುವಾಸನ
ನರಮಂಡಲದಿಂದ ಆಯಾಸ ಶಮನ ಮಾಡುತ್ತದೆ. ಬೆನ್ನಿನ ಭಾಗಗಳಲ್ಲಿ ಇರಬಹುದಾದ ನೋವುಗಳ ಶಮನಕ್ಕೆ ಇದು ಸಹಕಾರಿ.
ಮಾರ್ಜರಿಯಾಸನ
ಬೆಕ್ಕಿನಂತೆ ಬೆನ್ನುಹುರಿಯನ್ನು ಹೊರಳಿಸುವ ಆಸನವಿದು. ಇದನ್ನು ಮಾಡುವುದರಿಂದ ಬೆನ್ನು ನೋವಿಗೆ ಉಪಶಮನವಾಗುತ್ತದೆ. ಜೀರ್ಣಾಂಗಗಳಿಗೆ ವ್ಯಾಯಾಮ ನೀಡಿ, ಪಚನ ಕ್ರಿಯೆಯನ್ನು ಸುಸೂತ್ರ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ
ಹೊಟ್ಟೆ/ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು
ಭುಜಂಗಾಸನ
ದೇಹದ ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಬೆನ್ನು, ಭುಜದ ಸ್ನಾಯುಗಳನ್ನು ಸಶಕ್ತಗೊಳಿಸಿ ವೃದ್ಧರಿಗೆ ಅಗತ್ಯವಾದ ಅನ್ಯರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಶಲಭಾಸನ
ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳಿಗೆ ಸೂಕ್ತ ಬಲ ತುಂಬುವ ಆಸನವಿದು. ಶರೀರದ ಈ ಭಾಗಗಳನ್ನು ಸಡಿಲವಾಗಿಡುತ್ತದೆ. ಕಿಬ್ಬೊಟ್ಟೆ ಮತ್ತು ತೊಡೆಯ ಸ್ನಾಯುಗಳಿಗೆ ಬಲ ನೀಡುತ್ತದೆ.
ಪವನಮುಕ್ತಾಸನ
ಹೆಸರೇ ಸೂಚಿಸುವಂತೆ ಶರೀರವನ್ನು ವಾಯು ಮುಕ್ತ ಮಾಡುವ ಆಸನವಿದು. ಪೃಷ್ಠದ ಕೀಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಒತ್ತಡ ನಿವಾರಿಸುತ್ತದೆ
ಕುರ್ಚಿಯ ಮೇಲೆ ಕುಳಿತು ಮಾಡುವ ಆಸನಗಳು
ಕುತ್ತಿಗೆ, ಕೈ, ಮಂಡಿ ಮುಂತಾದ ಭಾಗಗಳಿಗೆ ಸೂಕ್ತವಾಗುವಂಥ, ಆದರೆ ಬೆನ್ನು ಮತ್ತು ಸೊಂಟದ ತೊಂದರೆ ಇರುವವರಿಗೆ ಕಷ್ಟವಾಗದೆ ಮಾಡುವಂಥ ಭಂಗಿಗಳಿವು. ಕುರ್ಚಿಯ ಮೇಲೆ ಕುಳಿತು ಮಾಡುವ ಸೂರ್ಯನಮಸ್ಕಾರದ ಭಂಗಿಗಳೂ ಈಗ ಜನಪ್ರಿಯ.
ಕುತ್ತಿಗೆ ಮತ್ತು ಬೆನ್ನಿನ ಮೇಲಿರುವ ಒತ್ತಡವನ್ನು ಈ ಮೂಲಕ ನಿವಾರಿಸಲು ಸಾಧ್ಯವಿದೆ. ಹಾಗಾಗಿ ಈ ಭಂಗಿಗಳು ವಯಸ್ಸಾದವರಿಗೆ ಮಾತ್ರವಲ್ಲ, ದೀರ್ಘ ಸಮಯ ಕುಳಿತು ಕೆಲಸ ಮಾಡುವವರಿಗೂ ಅನುಕೂಲಕರ. ಜೊತೆಗೆ, ಈ ಭಂಗಿಗಳು ದೇಹದ ಒಟ್ಟಾರೆ ಬಲವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ವೃದ್ಧಾಪ್ಯದಲ್ಲಿ ಕಾಡುವ ಬಲಹೀನತೆ ಮತ್ತು ಅಂಗಗಳ ನಡುವಿನ ಸಮನ್ವಯದ ಕೊರತೆಯನ್ನು ಸರಿದೂಗಿಸಬಹುದು.
ಹಿರಿಯರು ಯೋಗ ಮಾಡುವುದರಿಂದ ಲಾಭವಿದೆಯೇ?
ಖಂಡಿತ ಇದೆ! ನಿಯಮಿತವಾಗಿ ವ್ಯಾಯಾಮ ಮಾಡುವ ಲಾಭಗಳು ವೈಜ್ಞಾನಿಕವಾಗಿ ಸಾಬೀತಾಗಿವೆ, ಪ್ರಾಯ ಯಾವುದೇ ಇರಲಿ. ಅದರಲ್ಲೂ ವಯಸ್ಸಾಗುತ್ತಿದ್ದಂತೆ ರೋಗನಿರೋಧಕ ಶಕ್ತಿ ಸಹಜವಾಗಿ ಕುಂದುತ್ತದೆ. ಯೋಗದಿಂದ ದೇಹ ಮತ್ತು ಮನಸ್ಸನ್ನು ಸುದೃಢಗೊಳಿಸಿ, ಈ ಮೂಲಕ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸಬಹುದು. ಮನಸ್ಸು, ದೇಹಗಳನ್ನು ಉಲ್ಲಾಸ ಮತ್ತು ಉತ್ಸಾಹದಿಂದ ಇರಿಸಿಕೊಳ್ಳಬಹುದು.
ಆದರೆ ಒಂದು ಎಚ್ಚರಿಕೆ ಬೇಕು. ಹಿರಿಯರು ದೀರ್ಘ ಸಮಯದಿಂದ ಯೋಗ ಮಾಡುತ್ತಿರುವವರಾದರೆ ಮುಂದುವರಿಸುವಲ್ಲಿ ಸಮಸ್ಯೆಯಿಲ್ಲ. ಆದರೆ ಹೊಸದಾಗಿ ಪ್ರಾರಂಭಿಸುವವರು ಅಥವಾ ಕೆಲಕಾಲದಿಂದ ನಿಲ್ಲಿಸಿದ್ದವರು, ಆರೋಗ್ಯ ಸಮಸ್ಯೆ ಇರುವವರು ಪರಿಣತ ಗುರುಗಳ ಮುಖೇನವೇ ಯೋಗ ಕಲಿಯಬೇಕು. ಒಂದಿರುವ ಸಮಸ್ಯೆ ಹನ್ನೊಂದಾಗಬಾರದಲ್ಲ!
ಇದನ್ನೂ ಓದಿ: Bone Health: ಮೂಳೆಗಳನ್ನು ದುರ್ಬಲಗೊಳಿಸುವ ಈ ಅಭ್ಯಾಸ ಬಿಡಿ!