Site icon Vistara News

Working Parents | ಪಾಲಕರಾಗಿ ನಾವು ಮಾಡಬೇಕಾದ್ದೇನು? ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ನುಡಿಗಳು

parenting tips

ಕೆಲಸ ಮಾಡುವುದೆಂದರೆ ಸುಮ್ಮನಲ್ಲ. ಅದಕ್ಕೊಂದು ಮನಸ್ಥಿತಿ, ಸಿದ್ಧತೆ, ಬದ್ಧತೆ ಎಲ್ಲವೂ ಬೇಕು. ಹೀಗಿರುವಾಗ ಉದ್ಯೋಗದ ಜೊತೆಗೆ ಅಪ್ಪ-ಅಮ್ಮ ಅನಿಸಿಕೊಳ್ಳುವುದೆಂದರೆ…ಎರಡು ಪಾಳಿಗಳಲ್ಲಿ ಹಗಲಿರುಳು ಕೆಲಸ ಮಾಡಿದಂತೆ. ಉದ್ಯೋಗದಲ್ಲಿ ಎಲ್ಲರಿಂದ ಮೆಚ್ಚುಗೆ ಗಳಿಸುವುದಕ್ಕೆ ನಾವು ಪಡುವ ಕಷ್ಟ ಒಂದೆರಡೇ ಅಲ್ಲ. ಆದರೆ ಇಲ್ಲೊಂದು ಬಡ್ತಿ, ಸಂಬಳ ಹೆಚ್ಚಳದಂಥದ್ದು ನಮ್ಮ ಪಾಲಿಗೆ ಬರಬಹುದು. ಅದೇ ಪಾಲಕರಾಗಿ ಮಾಡುವ ಕೆಲಸಗಳ ಯಾವುದೇ ಲಾಭಗಳು ತಕ್ಷಣದ ನಮ್ಮೆದುರು ಬರುವುದಿಲ್ಲ. ಹಾಗಂತ ನಮ್ಮ ಹೊಣೆ ಈ ವಿಷಯದಲ್ಲಿ ʼಪ್ರಯಾರಿಟಿ ೧ʼ ಎಂಬ ಹಾಗಿರುತ್ತದೆ. ಈ ಎರಡೂ ಗುರುತರ ಹೊಣೆಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಹೇಗೆ? ʻಇದಮಿತ್ಥಂ’ ಎನ್ನುವಂಥ ಮಂತ್ರವೇನೂ ಇದಕ್ಕಿಲ್ಲ. ಆದರೆ ಒಂದಿಷ್ಟು ಸಲಹೆಗಳು ಈ ನಿಟ್ಟಿನಲ್ಲಿ ಖಂಡಿತ ನಮ್ಮ ನೆರವಿಗೆ ಬರಬಹುದು. ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರ ಈ ಕುರಿತ ಅನುಭವದ ನುಡಿಗಳು ನಮಗೆ ಸಹಾಯಕವಾಗಬಹುದು.

ಮಕ್ಕಳ ಪಾಲನೆ ಕಠಿಣವಾದ ಕೆಲಸ. ಈ ದೇಶದ ಭವಿತವ್ಯದ ಪ್ರಜೆಗಳನ್ನು ಮಾತ್ರವೇ ನಾವು ಬೆಳೆಸುತ್ತಿರುವುದಲ್ಲ, ಈ ಎಳೆ ಮನಸ್ಸುಗಳು ಸರಿದಾರಿಯಲ್ಲೂ ಇರುವಂತೆ ಮಾಡಬೇಕಾದ ಹೊಣೆ ನಮ್ಮದು. ಪರ್ಫೆಕ್ಟ್ ಅಪ್ಪ-ಅಮ್ಮ ಎನಿಸುವುದಕ್ಕೆ ಯಾವುದೇ ಮಂತ್ರವಿಲ್ಲ, ನಿಜ. ಆದರೆ ಧನಾತ್ಮಕ ಪಾಲನೆಯನ್ನು ಖಂಡಿತ ಅಳವಡಿಸಿಕೊಳ್ಳಬಹುದು. ದಿವ್ಯಾ ಮಿತ್ತಲ್ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿ. ಅವರು ತಮ್ಮ ತಾಯಿಯಿಂದ ಕಲಿತಿದ್ದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ತಮ್ಮ ಮೂವರು ಮಕ್ಕಳನ್ನು ಐಐಟಿ, ಐಐಎಂಗಳ ಮೆಟ್ಟಿಲು ಹತ್ತಿಸುವಲ್ಲಿ ಯಶಸ್ವಿಯಾದವರು ದಿವ್ಯಾ ಅವರ ತಾಯಿ. ʻʻನೀನು ಏನನ್ನೂ ಮಾಡಬಲ್ಲೆ ಎಂಬುದನ್ನು ಮಕ್ಕಳಿಗೆ ಮತ್ತೆ ಮತ್ತೆ ಹೇಳಿ. ನಿಮ್ಮ ಮಾತಿನಲ್ಲಿ ಅವರೆಷ್ಟು ನಂಬಿಕೆ ಇರಿಸಬೇಕೆಂದರೆ, ಅದು ಅವರ ಭವಿಷ್ಯವನ್ನೇ ಬದಲಾಯಿಸಬೇಕು.’ʼ

ದಿವ್ಯಾ ಅವರ ಇನ್ನೊಂದು ಅತಿಮುಖ್ಯವಾದ ಮಾತೆಂದರೆ, ಮಕ್ಕಳನ್ನು ಸೋಲಲು ಬಿಡಬೇಕು ಎಂಬುದು. ಮಕ್ಕಳನ್ನು ಹಾರಲು ಬಿಡಿ. ಒಂದೊಮ್ಮೆ ಅವರು ಬಿದ್ದರೆ ಬೇಸರವಿಲ್ಲ. ತಮ್ಮ ಸೋಲಿನಿಂದಲೇ ಅವರು ಕಲಿಯಬೇಕು. ಬಿದ್ದಾಗ ಮೈಕೊಡವಿ ಏಳುವುದನ್ನು ಅವರು ಮೈಗೂಡಿಸಿಕೊಳ್ಳಬೇಕು. ಮಾತ್ರವಲ್ಲ, ಮಕ್ಕಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಗೆಲ್ಲಲೆಂದೇ ಅಲ್ಲ, ಪಾಲ್ಗೊಳ್ಳುವಿಕೆಯಲ್ಲಿ ಅವರು ನಿಸ್ಸೀಮರಾಗಬೇಕು. ಈ ಬಗೆಗಿನ ಹೆದರಿಕೆಯನ್ನು ಮೆಟ್ಟಿ ನಿಲ್ಲಬೇಕು. ಗೆಲ್ಲುವುದಕ್ಕಿಂತ ಕಷ್ಟದ ಕೆಲಸವೆಂದರೆ ಸೋಲಿನ ಹೆದರಿಕೆಯನ್ನು ದಾಟುವುದು.

ಒಂದಿಷ್ಟು ರಿಸ್ಕ್ ತೆಗೆದುಕೊಳ್ಳಲು ಮಕ್ಕಳಿಗೆ ಅವಕಾಶ ನೀಡಲೇಬೇಕು ಹೆತ್ತವರು. ಅದು ಸಾಹಸ ಚಟುವಟಿಕೆಗಳೇ ಆಗಲಿ, ಬದುಕಿನ ಸಣ್ಣ ನಿರ್ಧಾರಗಳೇ ಆಗಲಿ. ಮರ ಹತ್ತುವಾಗ ಬೀಳುವ ಅಪಾಯವಿದೆ ಎಂಬುದು ಮಕ್ಕಳಿಗೆ ತಿಳಿದರೆ, ಅವರು ಎಚ್ಚರಿಕೆಯಿಂದಲೇ ಆ ಕೆಲಸ ಮಾಡುತ್ತಾರೆ.

ಬದುಕಿನಲ್ಲಿ ಎದುರಾಗುವ ಹೊಸ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಕ್ಕೆ ಪಾಲಕರ ಸಹಕಾರ ಮುಖ್ಯ. ಹೆತ್ತವರಿಗೆ ತಮ್ಮ ಬದುಕಿನಲ್ಲಿ ದೊರೆಯದೆ ಇದ್ದಿದ್ದು ಮಕ್ಕಳಿಗೆ ದೊರೆತರೆ, ಅದನ್ನು ಬಳಸಿಕೊಳ್ಳುವುದಕ್ಕೆ ಹಿಂದೇಟು ಹಾಕಲೇಕೂಡದು ಎಂಬುದು ದಿವ್ಯಾ ಅವರ ಸ್ಪಷ್ಟ ನುಡಿ.

ಮಕ್ಕಳು ನಾವು ಹೇಳಿದ್ದನ್ನು ಕೇಳಿ ಕಲಿಯುವುದಕ್ಕಿಂತ, ನಾವು ಮಾಡಿದ್ದನ್ನು ನೋಡಿ ಕಲಿಯುವುದೇ ಹೆಚ್ಚು. ಹಾಗಾಗಿ ಮಕ್ಕಳಿಗೆ ಒಳ್ಳೆಯ ಆದರ್ಶವನ್ನು ನೀವು ಕಲ್ಪಿಸಿಕೊಡಿ. ಅಂದರೆ, ಮಕ್ಕಳು ಹೇಗಿರಬೇಕೆಂದು ನೀವು ಬಯಸುತ್ತೀರೊ, ನೀವು ಮೊದಲು ಹಾಗಿರಿ. ತಪ್ಪು ಮಾಡಿದಾಗ ಮಕ್ಕಳನ್ನು ತಿದ್ದುವುದು ಸೂಕ್ತವೇ. ಆದರೆ ತಿದ್ದುವಾಗ ಸರಿ ಯಾವುದು ಎಂಬ ಬಗ್ಗೆ ನಿಮ್ಮಲ್ಲಿ ಗೊಂದಲಗಳು ಇರಕೂಡದು.

ಮಕ್ಕಳ ವಿಶ್ವಾಸ ಗೆಲ್ಲುವುದು ಅತಿಮುಖ್ಯ. ಮಕ್ಕಳೂ ಸಹ ಎಲ್ಲರಿಗಿಂತ ಹೆಚ್ಚಿನ ವಿಶ್ವಾಸವನ್ನು ತಮ್ಮ ಹೆತ್ತವರ ಮೇಲಿರಿಸುವುದು ಮಹತ್ವದ್ದು. ಅವರಿಷ್ಟದ ಸ್ಥಳಗಳಿಗೆ ಜೊತೆಗೆ ಹೋಗಿ, ಅವರೊಂದಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿ. ಮಾತ್ರವಲ್ಲ, ನಿಮ್ಮಷ್ಟಕ್ಕೇ ವ್ಯಸ್ತರಾಗಿದ್ದರೆ, ಬದುಕಿನ ಕೆಲವು ಅಮೂಲ್ಯ ಅನುಭವಗಳನ್ನು ಅವರು ಕಳೆದುಕೊಳ್ಳಬಹುದು. ಉದಾ, ಅನಾಥಾಲಯಗಳು, ವಸ್ತು ಸಂಗ್ರಹಾಲಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳಿಗೆ ಒಟ್ಟಾಗಿ ಹೋಗಿ.

ಇದನ್ನೂ ಓದಿ| Teachers Day | ನಿರ್ಗತಿಕ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ ಗುರು ಹುದ್ದೆಗೆ ಗೌರವ ತಂದ ಗುರವ!

ಹೊಲಿಸುವುದು ಎಂದಿಗೂ ಸಲ್ಲದು. ಎಲ್ಲರ ಕಣ್ಮಣಿ ಎನಿಸಿಕೊಂಡ ಮಗುವಿಗೆ ಆಘಾತಗಳನ್ನು ಎದುರಿಸುವುದು ಕಷ್ಟವಾದರೆ, ಸದಾ ಟೀಕೆಗೆ ಗುರಿಯಾಗುವ ಮಗು ಪ್ರೀತಿಗಾಗಿ ಹಂಬಲಿಸುವಂತಾಗುತ್ತದೆ. ಯಾವುದೇ ಸಂದರ್ಭದಲ್ಲೂ ಅವರ ಮೇಲಿನ ಭರವಸೆ ಕಳೆದಕೊಳ್ಳಬೇಡಿ. ನೀವೇ ಅವರಲ್ಲಿ ಭರವಸೆ ಇಡದಿದ್ದರೆ, ಅವರ ವಿಶ್ವಾಸ ಉಡುಗಿ ಹೋಗುತ್ತದೆ.

ಇವೆಲ್ಲವುಗಳ ಜೊತೆಗೆ, ಹೆತ್ತವರು ಎಂದೆಂದಿಗೂ ಅವರ ಮಕ್ಕಳ ಸುರಕ್ಷಿತ ಆವರಣ. ಏನಿಲ್ಲದಿದ್ದರೂ ಭರಪೂರ ಪ್ರೀತಿ ದೊರೆಯುವ ಏಕೈಕ ಜಾಗವೆಂದರೆ ಪಾಲಕರ ಮಡಿಲು. ಅವರನ್ನು ಯಾವತ್ತಿಗೂ, ಎಂಥ ಸಂದರ್ಭದಲ್ಲೂ ಪ್ರೀತಿಸುವುದಾಗಿ ಅವರಿಗೆ ಮತ್ತೆಮತ್ತೆ ಹೇಳಿ. ನಿಮ್ಮ ಕೋಪ-ಶಿಕ್ಷೆಗಳೂ ಪ್ರೀತಿಯ ಭಾಗವೇ ಎಂಬುದನ್ನು ಮನವರಿಕೆ ಮಾಡಿಕೊಡಿ.

ದಿವ್ಯಾ ಅವರ ಈ ಮಾತುಗಳು ಬಹಳಷ್ಟು ಪಾಲಕರಿಗೆ ಮಾರ್ಗದರ್ಶಿಯಾಗಬಹುದು. ಮಕ್ಕಳ ಜನನದೊಂದಿಗೆ ಪಾಲಕರದ್ದೂ ಜನನವಾಗುತ್ತದೆ. ಹಾಗಾಗಿ ಈ ಹಾದಿಯಲ್ಲಿ ಮಕ್ಕಳೊಂದಿಗೆ ಹೆತ್ತವರದ್ದೂ ಹೊಸ ಪಯಣವೇ ಎಂಬುದು ನೆನಪಿರಲಿ.

ಇದನ್ನೂ ಓದಿ | ಪ್ರತಿ ಹೆತ್ತವರೂ ತಮ್ಮ ಹೆಣ್ಣುಮಕ್ಕಳಿಗೆ ಕಲಿಸಲೇಬೇಕಾದ 10 ಸಂಗತಿ!

Exit mobile version