Site icon Vistara News

New parents | ಹೊಸ ಅಪ್ಪ ಅಮ್ಮಂದಿರಿಗೆ ನಿದ್ದೆಯ ಆರು ಅಮೂಲ್ಯ ಸಲಹೆಗಳು!

new parents

ಅಪ್ಪ ಅಮ್ಮನಾಗಿ ಹೊಸದಾಗಿ ಬಡ್ತಿ ಹೊಂದಿದ ಜೋಡಿಗೆ ಮಗುವಿನ ಲೋಕ ಹೊಸದು. ಮಗುವಿನ ಹಾಗೆ ಅವರೂ ಮಕ್ಕಳ ಲೋಕವನ್ನು ಪಿಳಿಪಿಳಿ ಕಣ್ಣು ಬಿಟ್ಟು ನೋಡಲು ಶುರು ಮಾಡುತ್ತಾರಷ್ಟೆ. ಮಗು ಬಂದ ಮೇಲಿನ ಲೋಕದ ಬಗ್ಗೆ ಊಹನೆ ಮಾಡುತ್ತಾ ಮಾಡುತ್ತಾ ಕನಸು ಕಂಡಿದ್ದ ಜೋಡಿಗಳಿಗೆ ಮಗುವಿನ ಲೋಕದ ಬಗ್ಗೆ ಕಂಡಿದ್ದ ಕನಸುಗಳೆಲ್ಲವೂ ವಾಸ್ತವದಿಂದ ದೂರ ಇದೆ ಅನಿಸಬಹುದು. ಮುಖ್ಯವಾಗಿ ಹೆರಿಗೆಯಾಗಿ ಮಗುವಿನ ಜೊತೆಗೆ ಬಂದ ಹೊಸ ಅಮ್ಮನಿಗೆ ನಿದ್ದೆಯ ಕೊರತೆಯೇ ಬಹಳವಾಗಿ ಕಾಡಬಹುದು. ತನಗೆ ಬೇಕಾದ ನಿದ್ದೆಯನ್ನು ಎಷ್ಟು ಹೊತ್ತಿನಲ್ಲಿ ಪಡೆಯುವುದು ಎಂಬುದು ಹೊಸ ತಾಯಿಯ ಬಹುಮುಖ್ಯ ಸವಾಲುಗಳಲ್ಲಿ ಒಂದು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆ ಅಷ್ಟಾಗಿ ಬರಲಿಕ್ಕಿಲ್ಲ. ಆದರೆ, ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು.

ಹಾಗಾದರೆ ಮನೆಯಲ್ಲಿ ಮಗುವನ್ನು ಇಟ್ಟುಕೊಂಡು ನಿದ್ದೆ ಮಾಡುವುದು ಹೇಗೆ? ಇದಕ್ಕೆ ಯಾವೆಲ್ಲ ಪೂರಕ ತಯಾರಿಗಳು ಬೇಕು, ಅಥವಾ ಇದಕ್ಕೆ ಬದಲಾದ ಜೀವನ ಕ್ರಮದಲ್ಲಿ ಮಾಡಬೇಕಾದ ಬದಲಾವಣೆಗಳು ಯಾವುವು ಎಂಬುದನ್ನು ನೋಡಣ ಬನ್ನಿ.

೧. ಗಂಡ ಹೆಂಡತಿ ಹೊಂದಾಣಿಕೆ: ಮಗುವಿನ ಆಗಮನವಾದಾಗ ಗಂಡ ಹೆಂಡತಿಯೊಂದಿಗೆ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಲೇ ಬೇಕಾಗುತ್ತದೆ. ಗಂಡನಾದವನು ತನ್ನ ಹೆಂಡತಿಯ ಹೊಸ ಬದಲಾದ ಪ್ರಪಂಚವನ್ನು ಪೂರ್ಣ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು. ಹೆರಿಗೆಯಾದ ನಂತರದ ನೋವುಗಳು ಇರುವಾಗಲೇ ಹೊಸ ಜೀವದ ಪಾಲನೆ ಪೋಷಣೆ ಕಷ್ಟವೂ ಹೌದು. ಅದಕ್ಕಾಗಿ, ಹೆಂಡತಿ ನಿದ್ದೆಗೆ ಅವಕಾಶ ಮಾಡಿಕೊಡಬೇಕು. ಸಮಯ ಮಾಡಿಕೊಂಡು, ಕೆಲ ಗಂಟೆಗಳ ಕಾಲ ತಾನು ಮಗುವನ್ನು ನೋಡಿಕೊಳ್ಳುವುದು, ಆ ಸಮಯದಲ್ಲಿ ಹೆಂಡತಿ ಮಲಗುವುದು ಮಾಡಿದರೆ ಆಕೆಗೂ ವಿಶ್ರಾಂತಿ ಸಿಗುತ್ತದೆ. ರಾತ್ರಿಯಲ್ಲಿ ನಾಲ್ಕಾರು ಬಾರಿ ಎದ್ದು ಮಗುವಿಗೆ ಹಾಲುಣಿಸುವ ಸಂದರ್ಭ ಮಗುವಿನ ಅಮ್ಮನಿಗೆ ನಿದ್ದೆ ಸರಿಯಾಗಿ ಆಗಿರುವುದಿಲ್ಲ.

ಇದನ್ನೂ ಓದಿ | Single mother: ನಿಮಗೆ ಗೊತ್ತಾ, ಇವು ಅಪ್ಪನೂ ಆಗಬೇಕಾದ ಅಮ್ಮನ ಚಾಲೆಂಜ್‌ಗಳು

೨. ಜತೆಗೇ ನಿದ್ರೆ: ಮಗು ಮಲಗುವಾಗ ತಾಯಿಯೂ ಕಡ್ಡಾಯವಾಗಿ ಮಲಗಬೇಕು ಎಂಬುದು ಹಿರಿಯರಿಂದ ಬಂದಿರುವ ಬೆಸ್ಟ್‌ ಸಲಹೆ. ಮಗುವಿಗೆ ಒಂದು ನಿಗದಿತ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಅದೇ ಸಮಯದಲ್ಲಿ ಬೇರೆ ಕೆಲಸಗಳಿಗೆ ಕೈ ಹಾಕದೆ, ನಿದ್ದೆಯ ಮೇಳೆ ಗಮನ ಕೊಡುವುದು ಹೊಸ ತಾಯಂದಿರಿಗೆ ಅತ್ಯತ ಸೂಕ್ತ. ಇಲ್ಲದಿದ್ದರೆ, ನಿದ್ದೆಗೆ ಸಮಯವೇ ಸಿಗದು.

೩. ತೊಟ್ಟಿಲು ಬಳಸಿ: ಹಳೆಯ ಕಾಲದ ಮಾದರಿಯಲ್ಲಿ ತೂಗುವ ತೊಟ್ಟಿಲನ್ನು ಮಗುವಿಗೆ ಬಳಸಿ. ಮಗುವನ್ನು ತೂಗಿ ಮಲಗಿಸುವುದನ್ನು ಅಭ್ಯಾಸ ಮಾಡಿ. ಕೈಯಲ್ಲಿ ಹಿಡಿದೇ ಮಲಗಿಸುವುದನ್ನು ಅಭ್ಯಾಸ ಮಾಡಿಸಿ ಬಿಟ್ಟರೆ ಮಗು ಬೇಗನೆ ಅಮ್ಮನ ಬೆಚ್ಚನೆಯ ಸ್ಪರ್ಶಕ್ಕೇ ಹೊಂದಿಕೊಂಡು ಬಿಡುತ್ತದೆ. ಅಮ್ಮ ಇಲ್ಲದಿದ್ದರೆ, ಸ್ಪರ್ಶ ಸಿಗದಿದ್ದರೆ ನಿದ್ದೆ ಮಾಡುವುದೇ ಇಲ್ಲ. ಹೀಗಾದಾಗ ಪ್ರತಿನಿತ್ಯ ಅಮ್ಮನಿಲ್ಲದೆ ಆಗದು ಎಂಬ ಪರಿಸ್ಥಿತಿ ಬಂದುಬಿಡುತ್ತದೆ. ಅಮ್ಮನಿಗೆ ವಿಶ್ರಾಂತಿಯೇ ಇಲ್ಲದಂತಾಗುತ್ತದೆ.

೪. ಅಪ್ಪನ ಸಮಯ: ಒಂದಿಷ್ಟು ಹೊತ್ತು ಅಪ್ಪನ ಜೊತೆಗಿನ ಸಮಯ ಎಂದು ಫಿಕ್ಸ್‌ ಮಾಡಿಬಿಡಿ. ವೀಕೆಂಡಿನಲ್ಲಿ ಅಥವಾ ರಜಾ ದಿನಗಳಲ್ಲಿ ಅಪ್ಪನ ಜೊತೆಗಿನ ಸಮಯ ಎಂದು ನಿಗದಿ ಮಾಡಿದರೆ ಕೊಂಚ ಅಮ್ಮನಿಗೂ ಸಮಯ ಸಿಗುತ್ತದೆ.

ಇದನ್ನೂ ಓದಿ : ಗರ್ಭಿಣಿಯರೇ, ನಿಮ್ಮ ಸೌಂದರ್ಯ ಸಮಸ್ಯೆಗಳಿಗೆ ಇಲ್ಲಿದೆ ಉತ್ತರ

೫. ಬಾಟಲಿ ಹಾಲು: ಬಾಟಲ್‌ ಅಭ್ಯಾಸ ಮಾಡಿ. ಎದೆ ಹಾಲು ಕುಡಿಸುವುದು ಒಂದು ದಿವ್ಯ ಅನುಭವ ಹೌದಾದರೂ ಅದು ತ್ರಾಸದಾಯಕ. ಮಗು ದೊಡ್ಡದಾಗುತ್ತಾ ಆಗುತ್ತಾ ಉಣಿಸಬೇಕಾದ ಹೊತ್ತು, ಆಗಾಗ ಹಾಲು ಬೇಕೆನಿಸುವುದು ಹೆಚ್ಚಾಗುತ್ತದೆ. ಹಾಗಾಗಿ ಮಧ್ಯದಲ್ಲಿ ಬಾಟಲ್‌ ಅಭ್ಯಾಸವನ್ನೂ ಮಾಡಿಸಿ. ಎದೆಹಾಲಿನಲ್ಲೇ ಪಂಪ್‌ ಮೂಲಕ ತೆಗೆದೂ ಬಾಟಲಿಯಲ್ಲಿ ಶೇಖರಿಸಿ ಕೊಡಬಹುದು. ಇದರಿಂದ ಅಮ್ಮನಿಲ್ಲದ ಸಂದರ್ಭ ಅಪ್ಪನೂ ಕೊಡಬಹುದು. ಇಬ್ಬರಲ್ಲಿ ಕೆಲಸ ಹಂಚಿ ಹೋಗುವುದರಿಂದ ಕೆಲಸ ಸುಲಭವೂ ಆಗುತ್ತದೆ.

೬. ಆರೋಗ್ಯಕರ ಆಹಾರ: ಮಗುವಿಗೆ ಹಾಲುಣಿಸುವ ಸಂದರ್ಭ ಆಗಾಗ ಏಳುವ ಹಾಗೂ ಹಾಲುಣಿಸುವ ಕಾರಣದಿಂದ ಅಮ್ಮಂದಿರಿಗೆ ಹಸಿವಾಗುವುದೂ ಇದೆ. ಇಂತಹ ಸಂದರ್ಭ ಒಂದಿಷ್ಟು ಆರೋಗ್ಯಕರ ಹಣ್ಣು, ಒಣಹಣ್ಣು- ಬೀಜಗಳು ಇತ್ಯಾದಿಗಳನ್ನು ಜೊತೆಗಿಡಿ. ಅಥವಾ ಸರಿಯಾದ ಊಟವನ್ನೇ ಮಾಡಬಹುದು. ಇದರಿಂದ ಹಸಿವಿನಲ್ಲೇ, ನಿಶ್ಶಕ್ತಿಯಾದಂತಾಗಿ ಮಲಗುವುದು ತಪ್ಪುತ್ತದೆ. ಜೊತೆಗೆ ಹೊಟ್ಟೆ ತುಂಬುವ ಕಾರಣ ನಿದ್ದೆಗೂ ಬೇಗನೆ ಜಾರಬಹುದು.

Exit mobile version