ಆಹಾರದಲ್ಲಿ ಕಲಬೆರಕೆ ಎಂಬುದು ಇತ್ತೀಚೆಗೆ ಸರ್ವೇ ಸಾಮಾನ್ಯ. ಯಾವುದೇ ಆಹಾರವನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಿದರೂ ಒಂದಲ್ಲ ಒಂದು ವಿಧದಲ್ಲಿ ಕಲಬೆರಕೆಯ ಅಪಾಯ ಇದ್ದೇ ಇದೆ. ಹಾಲು, ಪನೀರ್, ತುಪ್ಪ, ಚೀಸ್ ಸೇರಿದಂತೆ ಹಲವು ನಿತ್ಯ ಬಳಕೆಯ ಆಹಾರಗಳಲ್ಲಿ ಕಲಬೆರಕೆ ಕಂಡು ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಇದೀಗ ಸರದಿ ಬೆಳ್ಳುಳ್ಳಿಯದು. ಬೆಳ್ಳುಳ್ಳಿಯಲ್ಲಿ ಹೇಗೆ ಕಲಬೆರಕೆ ಸಾಧ್ಯ ಎಂದು ಹೌಹಾರಬೇಡಿ. ನಕಲಿ ಬೆಳ್ಳುಳ್ಳಿಯೂ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ಇಂಥ ಆಹಾರಗಳೂ ಕೂಡ ನಕಲಿ ಸಿಗುತ್ತಿವೆ ಎಂಬುದು ಸಾಬೀತಾಗಿದೆ. ಆ ಮೂಲಕ ಯಾವುದನ್ನೂ ನಂಬುವಂತಿಲ್ಲ ಎಂಬ ಎಚ್ಚರಿಕೆಯನ್ನೂ ಇದು ನೀಡಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ನಕಲಿ ಬೆಳ್ಳುಳ್ಳಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗುತ್ತಿದೆ. ಇದರ ವಿಡಿಯೋಗಳೂ ವೈರಲ್ ಆಗುತ್ತಿವೆ. ವಿಡಿಯೋನಲ್ಲಿ ಒಬ್ಬಾತ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುತ್ತಿದ್ದು, ಒಳಗೆ ನಿಜವಾದ ಬೆಳ್ಳುಳಿಯ ಎಸಳಿನ ಬದಲಾಗಿ ಸಿಮೆಂಟ್‌ನಿಂದ ಮಾಡಲ್ಪಟ್ಟ ಗಟ್ಟಿಯಾದ ಬೆಳ್ಳುಳ್ಳಿ ಎಸಳುಗಳು ದೊರೆತುದು ಗ್ರಾಹಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಹೀಗೂ ನಕಲಿ ಸೃಷ್ಟಿಯಾಗುತ್ತದೆಯೇ ಎಂಬ ಆತಂಕವನ್ನೂ ಇದು ಸೃಷ್ಟಿ ಮಾಡಿದೆ. ಬನ್ನಿ, ನೀವೂ ಬೆಳ್ಳುಳ್ಳಿ ಕೊಳ್ಳುವ ಮೊದಲು ಕೆಲವು ಸಾಮಾನ್ಯ ಪರೀಕ್ಷೆಗಳನ್ನು ಮಾಡಿಯೇ ಖರೀದಿಸಿಕೊಳ್ಳಿ. ಇಲ್ಲಿವೆ (How to Buy Fresh Garlic) ಸರಿಯಾದ ಬೆಳ್ಳುಳ್ಳಿಯ ಆಯ್ಕೆಯ ಟಿಪ್ಸ್:
ಬೆಳ್ಳುಳ್ಳಿಯನ್ನು ಕೊಳ್ಳುವಾಗ ಗಡಿಬಿಡಿ ಮಾಡಬೇಡಿ. ಸಮಾಧಾನದಿಂದ ಅದರ ಆಕಾರ ಹಾಗೂ ಗಾತ್ರವನ್ನು ಪರಿಶೀಲಿಸಿ. ಸಣ್ಣ ಎಸಳುಗಳ ಬೆಳ್ಳುಳ್ಳಿ ಕಾಣಿಸಿದರೆ ಕೊಂಚ ಎಚ್ಚರಿಕೆ ವಹಿಸಿ. ಇಂಥದ್ದರಲ್ಲಿ ನಕಲಿ ಇರುವ ಸಂಭವ ಹೆಚ್ಚು.
ಬೆಳ್ಳುಳ್ಳಿಯ ಬಣ್ಣವನ್ನು ಗಮನಿಸಿ. ಸಾಮಾನ್ಯವಾಗಿ ಬೆಳ್ಳುಳ್ಳಿ ಬೆಳ್ಳಗೆ ಇದ್ದರೂ ಅದರ ಸಿಪ್ಪೆಯಲ್ಲಿ ಅಲ್ಲಲ್ಲಿ, ಪಿಂಕ್ ಹಾಗೂ ನೇರಳೆ ಬಣ್ಣದ ರೇಖೆಗಳು, ಕುರುಹುಗಳು ಇರುತ್ತವೆ. ನಿಮ್ಮ ಬೆಳ್ಳುಳ್ಳಿ ಬಹಳ ಬಿಳಿಯಿದ್ದರೆ ಹಾಗೂ ಹಳದಿ ಬಣ್ಣದ ಛಾಯೆಗಳು ಅಲ್ಲಲ್ಲಿ ಕಾಣಿಸಿದರೆ ಅದು ನಕಲಿಯಾಗಿರುವ ಸಾಧ್ಯತೆ ಹೆಚ್ಚು.
ಅತ್ಯಂತ ಒಳ್ಳೆಯ ಉಪಾಯ ಎಂದರೆ ನೀವೇ ಮುಟ್ಟಿ ನೋಡಿ ಖರೀದಿಸುವುದು. ಬೆಳ್ಳುಳ್ಳಿಯನ್ನು ಕೈಯಲ್ಲಿ ಹಿಡಿದು, ಅದರ ಎಸಳೊಂದನ್ನು ಸ್ವಲ್ಪ ಹಿಸುಕಿ ನೋಡಿ. ಅದು ಅತಿಯಾಗಿ ಮೆದುವಾಗಿದ್ದರೆ, ಅದು ಕಲಬೆರಕೆಯಾಗಿರಲೂಬಹುದು. ಇಂಜೆಕ್ಷನ್ ನೀಡಿದ ಬೆಳ್ಳುಳ್ಳಿಗಳೂ ಮಾರುಕಟ್ಟೆಗೆ ಬರುತ್ತವೆ. ಹಾಗಾಗಿ ಈ ಬಗ್ಗೆಯೂ ಎಚ್ಚರಿಕೆ ವಹಿಸಿ.
ಬೆಳ್ಳುಳ್ಳಿಯ ಪರೀಕ್ಷೆಯನ್ನೂ ನೀವು ಮಾಡಬಹುದು. ಬೆಳ್ಳುಳ್ಳಿ ತನ್ನ ವಾಸನೆಯ ಮೂಲಕವೇ ಪ್ರಸಿದ್ಧವಾದ್ದರಿಂದ ಇದರ ಗಾಢತೆಯ ಅರಿವು ಪ್ರತಿಯೊಬ್ಬರಿಗೂ ಇದ್ದೇ ಇದೆ. ಹಾಗಾಗಿ, ಒಮ್ಮೆ ಸ್ವಲ್ಪ ಹಿಸುಕಿ ಮೂಸಿ ನೋಡಿ. ಸ್ವಲ್ಪ ಕೆಮಿಕಲ್ ಯುಕ್ತ ವಾಸನೆ ಬಂದರೂ ಅದು ನಕಲಿಯೋ, ಕಲಬೆರಕೆಯದ್ದೋ ಆಗಿರಬಹುದು.
ಇವ್ಯಾವುವೂ ಗೊತ್ತಾಗದಿದ್ದರೆ ನೀರಿನಲ್ಲಿ ಹಾಕುವ ಪರೀಕ್ಷೆಯನ್ನೂ ಮಾಡಬಹುದು. ನಿಜವಾದ ಬೆಳ್ಳುಳ್ಳಿ ನೀರಿನಲ್ಲಿ ಮುಳುಗುತ್ತದೆ. ನಕಲಿಯಾಗಿದ್ದರೆ ತೇಲುವ ಸಂಭವ ಹೆಚ್ಚು.
ಇದನ್ನೂ ಓದಿ: Home Remedies: ಮಕ್ಕಳನ್ನು ಕಾಡುವ ಶೀತ-ಕೆಮ್ಮಿಗೆ ಮನೆಯಲ್ಲೇ ಇದೆ ಉಪಶಮನ
ದರದ ಬಗ್ಗೆ ಗಮನ ಕೊಡಿ. ಬೆಳ್ಳುಳ್ಳಿಗೆ ದರ ಹೆಚ್ಚಿರುವ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಕೊಡುವ ವ್ಯಾಪಾರಿಯ ಬೆಳ್ಳುಳ್ಳಿಗಳಲ್ಲಿ ನಕಲಿಯೂ ಮಿಕ್ಸ್ ಆಗಿರಬಹುದು. ನಿಮಗೆ ಕಾಣುವ, ನಿಮ್ಮ ಕೈಗೆ ಸಿಗುವ ಬೆಳ್ಳುಳ್ಳಿ ನಿಜವಾದೇ ನೀಡಿ, ನಿಮಗೆ ಪ್ಯಾಕ್ ಮಾಡುವ ಬೆಳ್ಳುಳ್ಳಿಯಲ್ಲಿ ನಕಲಿ ಮಿಕ್ಸ್ ಆಗಿರುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಾಗಿ ಅತಿ ಕಡಿಮೆ ಬೆಲೆಗೆ ಸಿಗುವ ಬೆಳ್ಳುಳ್ಳಿಯ ಆಸೆಗೆ ಕೆಟ್ಟ ಬೆಳ್ಳುಳ್ಳಿ ಖರೀದಿಸಿ ಮೋಸ ಹೋಗಬೇಡಿ.