Site icon Vistara News

How To Care For Nonstick Pan: ನಾನ್‌ಸ್ಟಿಕ್‌ ಪಾತ್ರೆ ಹೆಚ್ಚು ಕಾಲ ಬಾಳ್ವಿಕೆ ಬರಬೇಕಾ? ಹಾಗಿದ್ದರೆ ಇಲ್ಲಿವೆ ಟಿಪ್ಸ್!

How To Care For Nonstick Pan

ಉತ್ತಮ ಬೆಲೆ ಕೊಟ್ಟು ಕೊಂಡು ತಂದ ಗುಣಮಟ್ಟದ ವಸ್ತುಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಅಡುಗೆ ಸಂಬಂಧಿ ಪಾತ್ರೆ ಪಗಡಿಗಳ ವಿಚಾರದಲ್ಲಂತೂ ಇದು ಅಕ್ಷರಶಃ ಸತ್ಯ. ಇಲ್ಲಿ ನಾವು ಗುಣಮಟ್ಟಕ್ಕೆ ಬೆಲೆ ತೆತ್ತು, ಉತ್ತಮ ಪಾತ್ರೆಗಳನ್ನೂ ಮಾರುಕಟ್ಟೆಯಿಂದ ಹೊತ್ತು ತಂದರೂ ಕೆಲವೊಮ್ಮೆ ನಮ್ಮದೇ ಬೇಜವಾಬ್ದಾರಿಗಳಿಂದಲೋ, ಆ ವಸ್ತುವನ್ನು ಸರಿಯಾಗಿ ಹೇಗೆ ಬಳಸಬೇಕೆಂದು ತಿಳಿಯದೆಯೋ ಅಥವಾ ಅದನ್ನು ಸರಿಯಾಗಿ ಇಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿಗಳ ಕೊರತೆಯಿಂದಲೋ, ಕೆಲವೊಮ್ಮೆ ವಸ್ತುಗಳು ಎಷ್ಟೇ ಬೆಲೆಯದ್ದಾದರೂ ಬಹುಬೇಗನೆ ಹಾಳಾಗಿಬಿಡುತ್ತದೆ. ಈ ಪೈಕಿ ಮೊದಲು ನಾವು ದೂರುವುದು ನಾನ್‌ಸ್ಟಿಕ್‌ ಪಾತ್ರೆಗಳನ್ನು. ಯಾಕೆಂದರೆ ನಾನ್‌ಸ್ಟಿಕ್‌ ಪಾತ್ರೆಗಳನ್ನು ಬದಲಾಯಿಸಿದಷ್ಟು ನಾವು ಯಾವ ಪಾತ್ರೆಯನ್ನೂ ಬದಲಿಸಲಿಕ್ಕಿಲ್ಲ. ಬಹುಬೇಗನೆ ಅದರ ಮೇಲ್ಪದರ ಹರಿಯಿತೆಂದೋ, ಅಲ್ಲಲ್ಲಿ, ಪದರ ಎದ್ದು ಹೋಗುತ್ತಿದೆಯೆಂದೋ, ಪದರ ಎದ್ದರೆ ಆರೋಗ್ಯಕ್ಕೆ ಹಾನಿಯೆಂದೋ ನಾವು ಬೇಗನೆ ನಾನ್‌ಸ್ಟಿಕ್‌ ತವಾ/ಪ್ಯಾನನ್ನು ರದ್ದಿಗೆ ಹಾಕುತ್ತೇವೆ. ನಾನ್‌ಸ್ಟಿಕ್‌ ಪಾತ್ರೆಯ ಬಳಕೆಯೇ ಆರೋಗ್ಯಕ್ಕೆ ಹಾನಿಯೆಂಬುದು ನಮಗೆ ತಿಳಿದಿದ್ದರೂ, ಆಗೀಗ ಕೆಲವೊಂದು ಫಟಾಫಟ್‌ ಅಡುಗೆಗಳಿಗೆ, ಅಥವಾ ದೋಸೆ ಮಾಡಲು ಇತ್ಯಾದಿ ಕಾರಣಗಳಿಗೆ ಒಂದೆರಡು ನಾನ್‌ಸ್ಟಿಕ್‌ ತವಾ/ಪ್ಯಾನ್‌ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಹಾಗಾಗಿ, ನಾನ್‌ಸ್ಟಿಕ್ ಪಾತ್ರೆಯನ್ನೂ ಹೆಚ್ಚು ಕಾಲ ಬಾಳ್ವಿಕೆ ಬರುವಂತೆ, ಹಾಗೂ ಪದರ ಎದ್ದು ಹೋಗದಂತೆ ಜತನದಿಂದ ಕಾಪಾಡಿಕೊಂಡು ಬಳಸುವುದು ಹೇಗೆ (how to care for nonstick pan) ಎಂಬುದನ್ನು ತಿಳಿಯೋಣ ಬನ್ನಿ.

ಬಹುತೇಕ ನಾನ್‌ಸ್ಟಿಕ್‌ ಪಾತ್ರೆಗಳು ಟೆಫ್ಲಾನ್‌ ಎಂಬ ರಾಸಾಯನಿಕದಿಂದ ಮಾಡಲ್ಪಟ್ಟ ಮೇಲ್ಪದರವನ್ನು ಹೊಂದಿರುತ್ತವೆ. ಈ ಟೆಫ್ಲಾನ್‌ನಲ್ಲಿ ಪರ್‌ಫ್ಲೂರೋಆಕ್ಟಾನಿಕ್‌ ಆಸಿಡ್‌ (ಪಿಎಫ್‌ಒಎ) ಎಂಬ ರಾಸಾಯನಿಕ ಇರುವುದರಿಂದ ಅದು ಕಡಿಮೆ ಎಣ್ಣೆ ಅಥವಾ ತುಪ್ಪದೊಂದಿಗೆ ಪಾತ್ರೆಯ ತಳಕ್ಕೆ ಅಂಟದಂತೆ ಅಡುಗೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಕೆಲವು ನಾನ್‌ಸ್ಟಿಕ್‌ ಬ್ರಾಂಡ್‌ಗಳು ಸೆರಾಮಿಕ್‌ ಮೇಲ್ಪದರವನ್ನೂ ಬಳಸುತ್ತವೆ. ನಿತ್ಯವೂ ಈ ಪಾತ್ರೆಗಳನ್ನು ಬಳಸುತ್ತಿದ್ದರೆ ಈ ಮೇಲ್ಪದರ ಎದ್ದು ಹೋಗುತ್ತದೆ ಅಥವಾ ಗೀರುಗಳು ಬೀಳುತ್ತವೆ. ಹೀಗೆ ಅರ್ಧಂಬರ್ಧ ಎದ್ದು ಹೋದ ಅಥವಾ ಗೀರು ಬಿದ್ದ ಮೇಲ್ಪದರದ ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಪಾತ್ರೆಗಳ ಮೇಲ್ಪದರ ಹೀಗೆ ಎದ್ದು ಹೋಗಿದ್ದು ಕಂಡ ತಕ್ಷಣ ಅಂಥ ಪಾತ್ರಗಳಲ್ಲಿ ಅಡುಗೆ ಮಾಡುವುದು ದೋಸೆ ಹುಯ್ಯುವುದು ಬಿಟ್ಟು, ಪಾತ್ರೆಯನ್ನು ಬದಲಾಯಿಸಿ ಹೊಸ ಪಾತ್ರೆ, ಕಾವಲಿ ತನ್ನಿ. ಪಾತ್ರೆ ಬಳಸಿ ಬಳಸಿ ಕೊನೆಗೆ ಅದು ಹಳೆಯದಾಗಿದ್ದರೆ, ಅದರ ಮೇಲ್ಪದರಕ್ಕೆ ಯಾವುದೇ ಹೆಚ್ಚು ಗಾಯಗಳಾಗದಿದ್ದರೂ, ಇವನ್ನು ಬದಲಾಯಿಸಿ. ಯಾಕೆಂದರೆ, 2015ಕ್ಕಿಂತ ಮೊದಲು ಮಾಡಲ್ಪಟ್ಟ ಇಂತಹ ಪಾತ್ರೆಗಳಲ್ಲಿ ಪಿಎಫ್‌ಒಎ ಎಂಬ ರಾಸಾಯನಿಕ ಇರುತ್ತದೆ. ಹಾಗಾಗಿ ಹಳೆಯ ನಾನ್‌ಸ್ಟಿಕ್‌ ಪಾತ್ರೆಗಳು ಸರಿಯಿದ್ದರೂ ಬಳಸುವುದನ್ನು ಬಿಡಿ.

ಇದನ್ನೂ ಓದಿ: Lifestyle Tips: ನಲ್ವತ್ತರ ನಂತರವೂ ಕಳೆಕಳೆಯಾಗಿ ಕಂಗೊಳಿಸಬೇಕಾದರೆ ಈ 8 ಸೂತ್ರಗಳು ನೆನಪಿರಲಿ!

Exit mobile version