ಸಂಬಂಧ ಅನ್ನುವುದು ಯಾವಾಗಲೂ ಜಟಿಲ. ಬಿಡಿಸಲು ಹೊರಟಷ್ಟೂ ಗಂಟುಗಳಲ್ಲೇ ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಗಂಡ ಹೆಂಡಿರ ಸಂಬಂಧವೂ ಹಾಗೆ. ಸ್ವಲ್ಪ ತಾಳ ತಪ್ಪಿದರೂ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಪ್ರೀತಿ ಇದ್ದರೂ, ಹಲವು ಬಾರಿ ಈ ಸೂಕ್ಷ್ಮಗಳನ್ನರಿತು ನಿಭಾಯಿಸುವುದು ಸರಿಯಾಗಿ ತಿಳಿಯದೆ, ಮಾಡುವ ಸಣ್ಣ ತಪ್ಪುಗಳು ಇಬ್ಬರ ನಡುವೆ ಕಂದಕವನ್ನೇ ಸೃಷ್ಟಿಸಬಹುದು. ಹಾಗಾದರೆ, ಈ ಸೂಕ್ಷ್ಮವನ್ನು ಚಂದಕ್ಕೆ ನಿಭಾಯಿಸುವುದಾದರೂ ಹೇಗೆ? ಮೆಚ್ಯೂರ್ ಆಗಿ ಸಂಬಂಧವೊಂದನ್ನು, ಅದರ ಮಧುರತೆಯನ್ನು ಸದಾಕಾಲ ಕಾಪಿಡುವುದು ಹೇಗೆ ಎಂಬುದು ನಿಜವಾಗಿಯೂ ಸರಳವಾಗಿ ವಿವರಿಸುವುದು ಕಷ್ಟ. ಹೇಳುವುದು ಸುಲಭವೆಂದು ಅನಿಸಿದರೂ ಪಾಲಿಸುವುದು ಕಷ್ಟ. ಆದರೂ, ಈ ಐದು ಗುಣಗಳು ಗಂಡ ಹೆಂಡಿರ ನಡುವಿದ್ದರೆ ಖಂಡಿತವಾಗಿಯೂ ಸಂಬಂಧ ಮಧುರತೆಯನ್ನು ಕಳೆದುಕೊಳ್ಳಲಾರದು.
೧. ಸ್ತ್ರೀ ಹಾಗೂ ಪುರುಷರಲ್ಲಿ ಇಬ್ಬರಲ್ಲೂ ಮಾನವ ಸಹಜ ಗುಣಗಳಿರುತ್ತದೆ. ಗಂಡಸು ಎಂದರೆ ಹೀಗೆ, ಮಹಿಳೆ ಎಂದರೆ ಹೀಗೆ ಎಂದು ಖಂಡತುಂಡವಾಗಿ ಹೇಳಲಾಗದು. ಮಹಿಳೆಯ ಗುಣಗಳು ಪುರುಷರಲ್ಲೂ, ಪುರುಷರ ಸಾಮಾನ್ಯ ಗುಣಗಳು ಮಹಿಳೆಯಲ್ಲೂ ಇರುವುದು ಸಹಜ. ಕೆಲವು ಮಹಿಳೆಯರಲ್ಲಿ ಪುರುಷರ ಗುಣಗಳು ಮೇಳೈಸಬಹುದು, ಕೆಲವು ಗಂಡಸರು, ಸ್ತ್ರೀ ಸಹಜ ಗುಣಗಳನ್ನು ತಮ್ಮಲ್ಲಿ ಹೆಚ್ಚು ಹೊಂದಿರಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಾಗಾಗಿ, ಹೆಂಡತಿ ಎಂದರೆ ಹೀಗೆಯೇ ಇರಬೇಕು, ಗಂಡನೆಂದರೆ ಹೀಗೆಯೇ ಎಂಬ ಮನಸ್ಥಿತಿಯನ್ನು ಮೊದಲು ಬಿಡಿ. ಇಬ್ಬರೂ ಸಮಾನವಾಗಿ ಒಬ್ಬರಿಗೊಬ್ಬರು ಹೆಗಲಾಗಿ.
೨. ಇಬ್ಬರ ನಡುವಿನ ಲೈಂಗಿಕ ಜೀವನ ಹೇಗಿದೆ ಅನ್ನುವುದರ ಮೇಲೆ ಸಂಬಂಧ ನಿಂತಿಲ್ಲ ಎನ್ನುವುದು ನೆನಪಿಡಿ. ಲೈಂಗಿಕ ಜೀವನವೂ ದಾಂಪತ್ಯದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ನಿಜವೇ ಆದರೂ, ಇಬ್ಬರ ನಡುವಿನ ಭಾವನಾತ್ಮಕ ಸಾಮರಸ್ಯ ಹೆಚ್ಚು ಕೆಲಸ ಮಾಡುತ್ತದೆ.
೩. ಒಬ್ಬರಿಗೆ ಇನ್ನೊಬ್ಬರು ಬೆಟರ್‌ಹಾಫ್ ಎಂಬುದು ನಿಜವೇ. ಆದರೆ, ಇಲ್ಲಿ ಗಣಿತದ ಲೆಕ್ಕಾಚಾರ ಖಂಡಿತ ವರ್ಕ್‌ಔಟ್ ಆಗದು. ಆತನ ಅರ್ಧ, ಆಕೆಯ ಅರ್ಧಗಳು ಸೇರಿ ಒಂದು ವೃತ್ತವಾಗದು. ಎರಡು ವೃತ್ತಗಳು ಸೇರಿ ಇಲ್ಲಿ ಮತ್ತೊಂದು ವೃತ್ತವಾಗುತ್ತದೆ. ಅಂದರೆ, ಇಬ್ಬರು ಕಂಪ್ಲೀಟ್ ವ್ಯಕ್ತಿಗಳಷ್ಟೆ ಒಬ್ಬರಿಗೊಬ್ಬರು ಕಂಪ್ಲೀಟ್ ಫೀಲ್ ಕೊಡಬಲ್ಲರು. ಇದಕ್ಕಾಗಿ, ವ್ಯಕ್ತಿತ್ವದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಸಂದರ್ಭ ಬಂದರೆ ಮನಸಾರೆ ಅದಕ್ಕಾಗಿ ಪ್ರಯತ್ನಿಸಬೇಕು. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಇಬ್ಬರೂ ಒಬ್ಬರಿಗೊಬ್ಬರು ಪ್ರಭಾವಿಸಬೇಕು. ಇಬ್ಬರೂ ಒಟ್ಟಾಗಿ ಬೆಳೆಯುವುದು ನಿಂತಾಗ ಸಂಬಂಧದ ಮಧುರತೆಯೂ ನಿಧಾನವಾಗಿ ಕಡಿಮೆಯಾಗುತ್ತದೆ. ಕಹಿಸತ್ಯವನ್ನು ಸಕ್ಕರೆಯಲ್ಲಿ ಅದ್ದಿ ತೆಗದರೂ ಒಳಗೆ ಕಹಿಯೇ ಎಂಬುದು ನೆನಪಿರಲಿ.
೪. ಗೌರವ ಯಾವುದೇ ಸಂಬಂಧದಲ್ಲಿ ಬಹಳ ಮುಖ್ಯ. ಪ್ರತಿಯೊಬ್ಬನೂ/ಳೂ ಸಹಜವಾಗಿ ಗೌರವಕ್ಕೆ ಅರ್ಹರು. ಇಬ್ಬರಿಗೂ ಇಬ್ಬರ ಪಾತ್ರಕ್ಕೂ ನಡುವೆ ಗೌರವವಿರಲಿ. ಸಂಬಂಧವೊಂದು ಎಷ್ಟೇ ಹತ್ತಿರವಿದ್ದರೂ ಇಬ್ಬರ ನಡುವೆ ಒಂದು ತೆಳುವಾದ ಗೆರೆ ಇದೆ ಎಂಬುದು ನೆನಪಿರಲಿ. ಪ್ರತಿಯೊಂದರಲ್ಲೂ ವಿನಾಕಾರಣ ಗಂಡನಾದ ಕಾರಣಕ್ಕೋ, ಹೆಂಡತಿಯ ಹಕ್ಕೆಂದೋ ಮೂಗು ತೂರಿಸುವುದು ಸಂಬಂಧವನ್ನು ಹಾಳು ಮಾಡಬಹುದು. ಒಂದು ಆರೋಗ್ಯಕರ ಅಂತರ ಇಬ್ಬರ ನಡುವೆಯೂ ಇರಲಿ. ಆ ಅಂತರ ಬಹಳ ಅಗತ್ಯವಾದುದು ಎಂಬುದೂ ಗೊತ್ತಿರಲಿ. ಅದರ ಬಗ್ಗೆ ಮನಃಪೂರ್ವಕವಾಗಿ ಗೌರವವೂ ಇರಲಿ.
೫. ಪವರ್ ಜೋಡಿ ಆಗುವುದು ಸುಲಭವಲ್ಲ. ಇಬ್ಬರೂ ತಮ್ಮ ವ್ಯಕ್ತಿತ್ವದಲ್ಲಿ, ಸಂಬಂಧದಲ್ಲಿ ಸಾಕಷ್ಟು ವರ್ಕ್‌ಔಟ್ ಮಾಡಬೇಕು. ಹೊಂದಾಣಿಕೆ ಸಹಜವಾಗಿ ಆದಾಗ ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತದೆ. ಇಬ್ಬರ ವ್ಯಕ್ತಿತ್ವದಲ್ಲೂ ಸಂಪೂರ್ಣತೆ ಇದ್ದಲ್ಲಿ ನೀವು ಪವರ್ ಜೋಡಿಯಾಗಿಯೇ ಲೋಕದೆದುರು ಕಾಣುತ್ತೀರಿ ಖಂಡಿತ.