ಬೆಂಗಳೂರು: ಇರುವೆ (Ant) ಕಾಟದಿಂದ ಯಾರು ಬೇಸತ್ತಿಲ್ಲ ಹೇಳಿ? ಮನೆಯೊಳಗೆ ನುಗ್ಗುವ ಈ ಚಿಕ್ಕ ಜೀವಿ ನಡೆಸುವ ಅವಾಂತರ ಮಾತ್ರ ಅಷ್ಟಿಷ್ಟಲ್ಲ. ಗೋಡೆಯ ಮೇಲೆ, ನೆಲದ ಮೇಲೆ ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ಸಾಗುವ ಇರುವೆ ಗುಂಪು ಒಮ್ಮೆ ದಾಳಿ ಮಾಡಿತೆಂದರೆ ಮುಗಿಯಿತು. ಅಡುಗೆ ಕೋಣೆ ಮಾತ್ರವಲ್ಲ ಇತರ ಎಲ್ಲಾ ಕಡೆ ದಾಳಿ ಇಟ್ಟು ಕಿರಿಕಿರಿ ಉಂಟು ಮಾಡುತ್ತವೆ. ಪ್ರಪಂಚದಲ್ಲಿ 12,000ಕ್ಕಿಂತಲೂ ಅಧಿಕ ಪ್ರಭೇದಗಳ ಇರುವೆಗಳನ್ನು ಗುರುತಿಸಲಾಗಿದೆ. ಚಿಂತೆ ಬೇಡ, ಇರುವೆಗಳನ್ನು ಮನೆಯಿಂದ ಓಡಿಸಲು ಸುಲಭವಾಗಿ ಮಾಡಬಹುದಾದ ಮನೆ ಮದ್ದುಗಳ (Home Remedies) ಪರಿಚಯ ಇಲ್ಲಿದೆ.
ಚಾಕ್
ಮಕ್ಕಳು ಬರೆಯಲು ಬಳಸುವ ಚಾಕ್ ಪೀಸ್‌ನಿಂದ ಇರುವೆಯನ್ನು ಓಡಿಸಬಹುದು ಎನ್ನುವುದು ನಿಮಗೆ ಗೊತ್ತೆ? ಇಲ್ಲ ಎಂದರೆ ಈ ಬಗ್ಗೆ ವಿವರಿಸುತ್ತೇವೆ. ಚಾಕ್ ಕ್ಯಾಲ್ಶಿಯಂ ಕಾರ್ಬೋನೇಟ್ ಅಂಶವನ್ನು ಒಳಗೊಂಡಿದ್ದು, ಇದು ಇರುವೆಗಳನ್ನು ದೂರ ಓಡಿಸುತ್ತದೆ. ಇರುವೆ ಕಾಣಿಸಿಕೊಳ್ಳುವ ಜಾಗಗಳಲ್ಲಿ ಚಾಕ್ ಪುಡಿಯನ್ನು ಉದುರಿಸಿ. ಅಲ್ಲದೆ ಇರುವೆ ಸಂಚರಿಸುವ ಸ್ಥಳದಲ್ಲಿ ಚಾಕ್‌ನಿಂದ ಉದ್ದಕ್ಕೆ ಗೆರೆ ಎಳೆಯಿರಿ. ಇದು ಲಕ್ಷ್ಮಣ ರೇಖೆಯಂತೆ ಕೆಲಸ ಮಾಡುತ್ತದೆ. ಈ ಗೆರೆಯನ್ನು ದಾಟಿ ಬರುವ ಸಾಹಸವನ್ನು ಇರುವೆ ಮಾಡುವುದಿಲ್ಲ. ಈ ಚಾಕ್ ಮಕ್ಕಳ ಕೈಗೆ ಸಿಗದಂತೆ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
ಲಿಂಬೆ
ಲಿಂಬೆಯ ವಾಸನೆಗೂ ಇರುವೆಗೂ ಆಗಿ ಬರುವುದಿಲ್ಲ. ಆದ್ದರಿಂದ ಇರುವೆ ಓಡಾಡುವ ಜಾಗಗಳಲ್ಲಿ ಲಿಂಬೆಯನ್ನು ಹಿಂಡಿ ಅಥವಾ ಅದರ ಸಿಪ್ಪೆಗಳನ್ನು ಇರಿಸಿ. ನೆಲ ಒರೆಸುವ ನೀರಿಗೆ ಲಿಂಬೆ ರಸವನ್ನು ಸೇರಿಸಿದರೂ ಆಗಹುದು. ಸಿಹಿ ಬಿಟ್ಟು ಹುಳಿ ಅಥವಾ ಕಹಿ ಎಂದರೆ ಇರುವೆಗೆ ಅಲರ್ಜಿ. ಹೀಗಾಗಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಲಿಂಬೆ ಸಿಪ್ಪೆಯನ್ನು ಅಲ್ಲಲ್ಲಿ ಇರಿಸಿ.
ಕಿತ್ತಳೆ ಹಣ್ಣು
ಲಿಂಬೆ ಹಣ್ಣಿನ ವರ್ಗಕ್ಕೆ ಸೇರಿದ ಕಿತ್ತಳೆ ಹಣ್ಣು ಕೂಡ ಇರುವೆ ಕಾಟದಿಂದ ನಿಮಗೆ ಮುಕ್ತಿ ನೀಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಕಪ್ ಬೆಚ್ಚಗಿನ ನೀರು ಮತ್ತು ಕೆಲವು ಕಿತ್ತಳೆ ಸಿಪ್ಪೆಗಳನ್ನು ಪೇಸ್ಟ್ ಮಾಡಿ ಇರುವೆಗಳು ಓಡಾಡುವ ಸ್ಥಳಗಳ ಸುತ್ತಲೂ ಚೆಲ್ಲಿ ನಂತರ ಅದನ್ನು ಒರೆಸಿ ತೆಗೆಯಬಹುದು. ಮಾತ್ರವಲ್ಲ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಅಡುಗೆಮನೆಯ ಸ್ಲ್ಯಾಬ್ ಮೇಲೆ ಅಥವಾ ಇರುವೆಗಳು ಪ್ರವೇಶಿಸುವ ಸ್ಥಳದಲ್ಲಿ ಇಡಬಹುದು.
ಕರಿಮೆಣಸು
ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಮನೆಮದ್ದು ಎಂದೇ ಕರೆಯಿಸಿಕೊಳ್ಳುವ ಕರಿಮೆಣಸಿನಿಂದ ಇರುವೆಯನ್ನು ಓಡಿಸಬಹುದು ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಕರಿಮೆಣಸು ಎಂದರೆ ಇರುವೆಗಳು ಮಾರು ದೂರು ಓಡಿ ಹೋಗುತ್ತವೆ. ಹೀಗಾಗಿ ಇವು ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಕರಿಮೆಣಸನ್ನು ಹರಡಿ. ಅಲ್ಲದೆ ನೀವು ಕರಿಮೆಣಸನ್ನು ಪುಡಿ ಮಾಡಿ ಅದರ ಜೊತೆಗೆ ಸ್ವಲ್ಪ ನೀರು ಸೇರಿಸಿ ಸ್ಪ್ರೇಯನ್ನೂ ಮಾಡಬಹುದು. ಕರಿಮೆಣಸು ಇರುವೆಯನ್ನು ಕೊಲ್ಲುವುದಿಲ್ಲ. ಆದರೆ ಬಾರದಂತೆ ತಡೆಯುತ್ತದೆ.
ಪುಡಿ ಉಪ್ಪು
ಇರುವೆ ಕಾಟದಿಂದ ಮುಕ್ತಿ ಹೊಂದಲಿರುವ ಕಡಿಮೆ ವೆಚ್ಚದ ಮತ್ತು ಸುಲಭದ ಮಾರ್ಗ ಎಂದರೆ ಪುಡಿ ಉಪ್ಪಿನ ಬಳಕೆ. ಮನೆಯ ಮೂಲೆ ಮೂಲೆಗಳಿಗೆ, ಇರುವ ಕಾಣಿಸುವ ಸ್ಥಳಗಳಲ್ಲಿ ಪುಡಿ ಉಪ್ಪನ್ನು ಉದುರಿಸಿ. ಇದಕ್ಕಾಗಿ ಸಾಮಾನ್ಯ ಉಪ್ಪನ್ನೇ ಬಳಸಿ. ಕುದಿಯುವ ನೀರಿಗೆ ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ. ತಣಿದ ಬಳಿಕ ಅದನ್ನು ಇರುವೆ ಕಂಡುಬರುವ ಸ್ಥಳಗಳಿಗೆ ಚಿಮುಕಿಸಿ.
ವೈಟ್ ವಿನೇಗರ್
ಇರುವೆಗಳು ವೈಟ್ ವಿನೇಗರ್ ವಾಸನೆಯನ್ನೂ ಇಷ್ಟಪಡುವುದಿಲ್ಲ. ಸಮಪ್ರಮಾಣದ ವೈಟ್ ವಿನೇಗರ್ ಮತ್ತು ನೀರನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಕೆಲವು ಹನಿ ಎಸೆನ್ಶೆಲ್ ಆಯಿಲ್ ಹಾಕಿ ಮತ್ತೊಮ್ಮೆ ಸರಿಯಾಗಿ ಮಿಶ್ರ ಮಾಡಿ. ಇದನ್ನು ದಿನಕ್ಕೆ ಒಂದೆರಡು ಬಾರಿ ಸ್ಪ್ರೇ ಮಾಡಿ. ಇವು ಕೂಡ ಇರುವೆಯನ್ನು ಕೊಲ್ಲದೆ ದೂರ ಓಡಿಸುತ್ತವೆ.
ದಾಲ್ಚಿನಿ
ದಾಲ್ಚಿನಿ ಅಡುಗೆಗೆ ಮಾತ್ರ ಬಳಸಲಾಗುತ್ತದೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇದರ ಸಹಾಯದಿಂದ ಇರುವೆಯನ್ನೂ ಓಡಿಸಬಹುದು. ದಾಲ್ಚಿನ್ನಿ ಮತ್ತು ಲವಂಗವನ್ನು ಇರುವೆಗಳು ಕಂಡು ಬರುವ ಸ್ಥಳಗಳಲ್ಲಿ ಇರಿಸಿ. ದಾಲ್ಚಿನಿಯಲ್ಲಿರುವ ಗಾಢವಾದ ವಾಸನೆಯನ್ನು ಇರುವೆಗಳು ತಡೆದುಕೊಳ್ಳುವುದಿಲ್ಲ. ಅಲ್ಲದೆ ಮನೆ ತುಂಬಾ ತಾಜಾ ಸುವಾಸನೆಯನ್ನೂ ಇದು ಬೀರುತ್ತದೆ.
ಇದನ್ನೂ ಓದಿ: Mixer Grinder Tips: ಇವೆಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬುವ ಸಾಹಸ ಮಾಡಬೇಡಿ!
ಪುದೀನಾ
ಪುದೀನಾದಲ್ಲಿ ಕೀಟ ನಿವಾರಕ ಗುಣವಿದೆ. ಇದು ಕೂಡ ಗಾಢವಾದ ವಾಸನೆಯನ್ನು ಹೊಂದಿರುವುದರಿಂದ ಇರುವೆಗಳು ದೂರ ಹೊರಟು ಹೋಗುತ್ತವೆ. 10 ಹನಿ ಪುದೀನಾ ರಸಕ್ಕೆ ಸ್ವಲ್ಪ ಎಸೆನ್ಶೆಲ್ ಆಯಿಲ್, ನೀರು ಮಿಕ್ಸ್ ಮಾಡಿ ಅದನ್ನು ಗೋಡೆಯ ಸಂದಿಗಳಲ್ಲಿ, ಮನೆಯ ಮೂಲೆ ಮೂಲೆಗಳಲ್ಲಿ ಚಿಮುಕಿಸಿ. ದಿನಕ್ಕೆ ಒಂದೆರಡು ಬಾರಿ ಹೀಗೆ ಮಾಡಿ. ದ್ರವದ ಬದಲು ಒಣಗಿದ ಪುದೀನಾವನ್ನೂ ಬಳಸಬಹುದು.