ಬೆಳಗಿನ ತಿಂಡಿಗೆ ಬೇಳೆ ನೆನೆಸಿಡಲು ಮರೆತು ಹೋಯಿತು ಎಂದು ಮಧ್ಯರಾತ್ರಿಯ ನಿದ್ದೆಯಿಂದ ಎದ್ದಾಗ ನೆನಪಾಗಿ ಕಣ್ಣುಜ್ಜಿಕೊಳ್ಳುತ್ತಾ ಹೋಗಿ ಕಿಚನ್ನ ಲೈಟ್ ಆನ್ ಮಾಡುತ್ತೀರಿ. ನಾಲ್ಕೈದು ದೊಡ್ಡ ಜಿರಳೆಗಳು ನಿಮ್ಮ ಲೈಟ್ನ ಬೆಳಕಿಗೆ ದಬದಬನೆ ಮೂಲೆ ಸೇರುತ್ತವೆ. ಇದು ನಿಮ್ಮ ಅರೆನಿದ್ದೆಯನ್ನು ಅಲ್ಲಾಡಿಸಿಬಿಡುವುದಷ್ಟೇ ಅಲ್ಲ, ಮತ್ತೆ ಬರಬೇಕಾದ ನಿದ್ದೆಗೂ ಸಂಚಕಾರ ತರುತ್ತದೆ. ಯಾವೆಲ್ಲ ಪಾತ್ರೆಗಳ ಮೇಲೆ ಹರಿದಾಡಿಯೋ, ಯಾವೆಲ್ಲ ವಸ್ತುಗಳನ್ನು ತಿಂದು ಹಾಕಿದೆಯೋ ಎಂಬ ಯೋಚನೆಯಲ್ಲಿ ನಿಮಗೆ ನಿದ್ದೆಯೂ ಹತ್ತಿರ ಸುಳಿಯದು. ಜಿರಳೆಯ ಸಮಸ್ಯೆ ಮಾತ್ರ ಅತ್ಯಂತ ಅಸಹ್ಯ ತರಿಸುವ. ಕಿಚನ್ನಲ್ಲಿ ಅತ್ಯಂತ ಕಾಟ ಕೊಡಬಹುದಾದ ಸಮಸ್ಯೆ. ಬನ್ನಿ, ಜಿರಳೆಯ ಸಮಸ್ಯೆಯನ್ನು ನೀವು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಡೆದೋಡಿಸಬಹುದು (how to get rid of cockroaches) ಎಂಬುದನ್ನು ನೋಡೋಣ.
- ನಿಮ್ಮ ಕಿಚನ್ ಅನ್ನು ಸದಾ ಕ್ಲೀನಾಗಿ ಇಟ್ಟುಕೊಳ್ಳಿ. ಶುಚಿತ್ವ ಇದ್ದಲ್ಲಿ ಜಿರಳೆ ಸುಳಿಯದು. ಅಲ್ಲಲ್ಲಿ ತೇವವಾಗಿದ್ದಲ್ಲಿ, ಆಹಾರಗಳು ಚೆಲ್ಲಿಕೊಂಡಿದ್ದರೆ ಅಥವಾ ಯಾವುದಾದರೂ ಆಹಾರ ಪದಾರ್ಥಗಳು ತೆರೆದಿದ್ದರೆ ಅವೆಲ್ಲ ಜಿರಳೆಯನ್ನು ಆಹ್ವಾನಿಸುತ್ತವೆ. ಪ್ರತಿದಿನವೂ ರಾತ್ರಿ ನಿಮ್ಮ ಕಿಚನ್ನ ಕೆಲಸ ಮುಗಿದ ತಕ್ಷಣ ನೀಟಾಗಿ ಸ್ವಚ್ಛಗೊಳಿಸಿ, ಒರೆಸಿ, ಒಣಗಿಸಿದ ಮೇಲೆ ಕಿಚನ್ ಲೈಟ್ ಆಫ್ ಮಾಡಿ. ಆಗ ಜಿರಳೆಗಳ ಓಡಾಟ ಕಡಿಮೆಯಾಗುತ್ತದೆ.
- ಆಹಾರಗಳನ್ನು ಸರಿಯಾಗಿ ಸಂರಕ್ಷಿಸಿಡಿ. ಆಹಾರದ ಪ್ಯಾಕೆಟ್ಟುಗಳನ್ನು ಬಂದ್ ಮಾಡಿಡಿ. ಆಹಾರದ ಪ್ಯಾಕೆಟ್ಟುಗಳಿಂದ ಆಹಾರಗಳನ್ನು ಡಬ್ಬಕ್ಕೆ ಸುರಿದಿದ್ದರೆ ಉಳಿದವನ್ನು ಪ್ಯಾಕೆಟ್ಟುಗಳಲ್ಲಿ ಭದ್ರವಾಗಿ ರಬ್ಬರ್ ಬ್ಯಾಂಡ್ ಹಾಕಿ, ಡಬ್ಬಗಳಲ್ಲಿ ಮುಚ್ಚಿಡಿ. ಆಹಾರವನ್ನು ಡಬ್ಬಗಳಲ್ಲಿ ಸ್ಟೋರ್ ಮಾಡಿ ಇಡಲು ಗಾಳಿಯಾಡದ, ಭದ್ರವಾದ ಮುಚ್ಚಳಗಳಿರುವ ಡಬ್ಬಗಳನ್ನೇ ಬಳಸಿ. ಪೈಪ್ಗಳು, ನಳ್ಳಿಗಳು ಶೊರುತ್ತಿದ್ದರೆ ಅವನ್ನು ಸರಿಮಾಡಿಸಿ. ಹೆಚ್ಚು ಕಾಲ ಸೋರುತ್ತಲೆ ಇರಲು ಬಿಡಬೇಡಿ. ತೇವವಾಗಿರುವ ಮೇಲ್ಮೈಗಳನ್ನು ಒರೆಸಿ ಒಣಗಿಸಿಡಿ.
- ಕಿಚನ್ನಲ್ಲಿ, ಅಥವಾ ಮನೆಯ ಎಲ್ಲ ಜಾಗಗಳಲ್ಲೂ ಸಣ್ಣ ಪುಟ್ಟ ರಂಧ್ರಗಳು, ತೂತುಗಳು ಕಾಣಿಸಿದರೆ ಅವನ್ನು ಸೀಲ್ ಮಾಡಿಸಿ. ರಾತ್ರಿ ಮಲಗುವ ಸಂದರ್ಭ ಬಾತ್ರೂಂ, ಟಾಯ್ಲೆಟ್ಗಳ ಬಾಗಿಲು ಭದ್ರ ಪಡಿಸಿ. ಬಾಲ್ಕನಿ, ಸ್ಟೋರ್ ರೂಂ, ಯುಟಿಲಿಟಿ ಏರಿಯಾಗಳಿಂದ ಜಿರಳೆಗಳು ಬರುವ ಸಂಭವ ಹೆಚ್ಚು. ಹೀಗಾಗಿ, ಇವೆಲ್ಲ ಜಾಗಗಳನ್ನು ಚೆನ್ನಾಗಿ ಭದ್ರಪಡಿಸಿ, ಆ ಜಾಗಗಳ ಮೂಲಕ ಕಿಚನ್ಗೆ ಬರದಂತೆ ಮೊದಲೇ ಕ್ರಮ ಕೈಗೊಳ್ಳಿ.
- ಅನಗತ್ಯ ವಸ್ತುಗಳನ್ನು ಕಿಚನ್ನಲ್ಲಿ ಸ್ಟೋರ್ ಮಾಡುವುದನ್ನು ಕಡಿಮೆ ಮಾಡಿ. ಬೇಕಾದಷ್ಟೇ ವಸ್ತುಗಳನ್ನು ಇಡಿ. ಹಳೆಯ ವಸ್ತುಗಳನ್ನು ತೆಗೆಯಿರಿ. ಕಪ್ಬೋರ್ಡ್, ಶೆಲ್ಫ್ಗಳನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸುತ್ತಿರಿ. ಆಗ ಜಿರಳೆಗಳ ಬೆಳವಣಿಗೆಗೆ ಆಸ್ಪದವಿರುವುದಿಲ್ಲ.
- ನೈಸರ್ಗಿಕ ಕ್ರಿಮಿನಾಶಕಗಳನ್ನು ಆಗಾಗ ಬಳಸಬಹುದು. ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ಕೀಟನಾಶಕಗಳು ಸಿಕ್ಕರೂ, ಅವುಗಳಿಂದ ಆರೋಗ್ಯಕ್ಕೆ ಹಾನಿ ಹೆಚ್ಚು. ಹೀಗಾಗಿ ಸೊಳ್ಳೆ, ಜಿರಳೆಗಳಿಗೆ ಆಗದಂತ ಕೆಲವು ನೈಸರ್ಗಿಕ ವಸ್ತುಗಳನ್ನು ಅಲ್ಲಿಲ್ಲಿ ಸ್ಪ್ರೇ ಮಾಡಿ. ಟೀ ಟ್ರೀ ಆಯಿಲ್, ಪೆಪ್ಪರ್ ಮಿಂಟ್ ಇತ್ಯಾದಿಗಳನ್ನು ಬಳಸಿ ರಿಪಲೆಂಟ್ ಮಾಡಿ ಸ್ಪ್ರೇ ಮಾಡಿ. ಜಿರಳೆಗಳು ಎಂಟ್ರಿ ಕೊಡುವಂಥ ಜಾಗಗಳನ್ನು ಗುರುತಿಸಿ ಅಂತಹ ಜಾಗಕ್ಕೆ ಆಗಾಗ ಇಂತಹ ಸ್ಪ್ರೇಗಳನ್ನು ಮಾಡುತ್ತಿರಿ. ಉದಾಹರಣೆಗೆ ಸಿಂಕ್ನ ನೀರು ಹರಿದು ಹೋಗುವ ಕ್ಯಾಬಿನ್ ಒಳಗೆ ಅಲ್ಲಿರುವ ತೂತುಗಳ ಮುಖಾಂತರ ಜಿರಣೆಗಳು ನುಸುಳುತ್ತವೆ. ಅಂತಹ ಸ್ಥಳದಲ್ಲಿ ಲೀಕೇಜ್ ಇದ್ದರೆ ಸರಿಪಡಿಇಸಿ, ಒರೆಸಿ ಒಣಗಿಸಿ ಅಲ್ಲಿಗೆ ಸ್ಪ್ರೇ ಮಾಡಿ. ಆಗ ಜಿರಳೆಗಳಿಗೆ ಆಹ್ವಾನ ಸಿಗುವುದಿಲ್ಲ.
ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!