ಪ್ರೀತಿಗೊಂದು ಅದರದ್ದೇ ಆದ ಭಾಷೆಯಿದೆ. ಪ್ರೀತಿಯಲ್ಲಿ ಬಿದ್ದವರಿಗೆ ಮಾತ್ರ ಆ ಭಾಷೆ ಯಾರೂ ಹೇಳಿಕೊಡದೆ ಸುಲಭವಾಗಿ ಬಂದುಬಿಡುತ್ತದೆ. ಮೀನಿಗೆ ಈಜು ಬಂದ ಹಾಗೆ, ಹಕ್ಕಿ ಆಗಸದಲ್ಲಿ ರೆಕ್ಕೆ ಬಡಿದು ಬಡಿದು ಹಾರಿದ ಹಾಗೆ. ಅಲ್ಲಿ ಆಗಸದಲ್ಲಿ ಹಾರುವಾತನ ಸುಖವನ್ನು ಕೆಳಗೆ ನಿಂತು ನೋಡುವವನಿಗೆ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಮೀನಿನ ಈಜಿನ ಸುಖ ತನಗೆ ಗೊತ್ತು ಎಂದು ದಡದಲ್ಲಿದ್ದವನು ಹೇಳಿದರೂ ಅದು ಖಂಡಿತಾ ನೀರಿಗೆ ಬೀಳದ ಹೊರತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಪ್ರೀತಿಯೂ ಹಾಗೆಯೇ. ಪ್ರೀತಿಯಲ್ಲಿ ಬೀಳದ ಹೊರತು ಅದರ ಸುಖವನ್ನು ಅರಿತವರಿಲ್ಲ. ಹಾಗಾದರೆ, ಈ ಪ್ರೀತಿಯಲ್ಲಿರುವ ಸುಖ ಒಬ್ಬರೇ ಅನುಭವಿಸುವುದಕ್ಕೋ? ಖಂಡಿತಾ ಅಲ್ಲ. ಪ್ರೀತಿಯ ಭಾಷೆ ಅರ್ಥೈಸಿಕೊಂಡಷ್ಟೇ ಬಳಸಲೂ ಗೊತ್ತಿರಬೇಕು. ಪಡೆದುಕೊಂಡಷ್ಟೇ ನೀಡುವ ಬಗ್ಗೆಯೂ ಅರಿವಿರಬೇಕು. ಆಗಷ್ಟೇ ಇಬ್ಬರ ಪ್ರೀತಿಯ ಪಯಣ ಆನಂದಮಯವಾಗುವುದು. ಹಾಗೆ ಪ್ರೀತಿಸುವವರಿಗಾಗಿ ಇಲ್ಲಿದೆ ಪ್ರೀತಿಯ ಭಾಷೆಯನ್ನು ಬಳಸಿಕೊಳ್ಳಬಹುದಾದ ಐದು ವಿಧಾನಗಳು!
೧. ಸಮಯ ಕೊಡಿ: ಎಷ್ಟೇ ಬ್ಯುಸಿಯಾಗಿದ್ದರೂ ಆಗಾಗ ಸಂಗಾತಿಗೆ, ಪ್ರೀತಿಸುವವರಿಗೆ ಸಮಯ ಕೊಡುವುದು ಬಹಳ ಮುಖ್ಯ. ಪ್ರೀತಿಸುವವರು ಪರಸ್ಪರ ಎಷ್ಟೇ ಅರ್ಥ ಮಾಡಿಕೊಂಡಿರಲಿ, ಪರಸ್ಪರ ಸಮಯ ಕೊಡುಕೊಳ್ಳುವಿಕೆಯಿಂದಲೇ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಪ್ರೀತಿ ಬೆಳೆಯುವುದು. ಆ ಪ್ರೀತಿ ಸದಾ ಜಾರಿಯಲ್ಲಿರಬೇಕೆಂದರೆ, ಅದು ಹಳತಾಗದಂತೆ ಕಾಪಾಡುವುದೂ ಇಬ್ಬರ ಜವಾಬ್ದಾರಿ. ಹಾಗಾಗಿ ಆಗಾಗ ಇಬ್ಬರಲ್ಲೊಂದು ನವಿರು ಭಾವನೆ ಮೂಡಲು, ರಾತ್ರಿಯ ಡಿನ್ನರ್‌ಗೆ ಜೊತೆಗೇ ಹೋಗುವುದು, ಸಣ್ಣದೊಂದು ಸಂಜೆಯ ವಾಕ್ ಮಾಡಿ ಚಾಟ್ ತಿಂದು ಬರುವುದು, ಸಿನೆಮಾ ಜೊತೆಯಾಗಿ ನೋಡುವುದು, ಆಗಾಗ ಸಣ್ಣಪುಟ್ಟ ಸರ್‌ಪ್ರೈಸ್ ನೀಡುವುದು ಇತ್ಯಾದಿ ಭಾವುಕ ಗಳಿಗೆಗಳು ಬೇಕಾಗುತ್ತವೆ. ನಮ್ಮ ಸಂಬಂಧ ಗಟ್ಟಿಯಿದೆ ಎಂದು ಹೇಳುತ್ತಾ ಇದಾವುದರ ಅಗತ್ಯ ಇಲ್ಲ ಎಂದುಕೊಳ್ಳುವುದು ಮೂರ್ಖತನ. ಪ್ರೀತಿಯ ದೀಪ ಹಚ್ಚಲು ಸದಾ ಎಣ್ಣೆ ಹಾಕುತ್ತಲೇ ಇರಬೇಕು.
೨. ದೈಹಿಕ ಸಾಂಗತ್ಯವಿರಲಿ: ಪ್ರೀತಿಯಲ್ಲಿ ದೈಹಿಕ ಸಾಂಗತ್ಯವೂ ಅತ್ಯಂತ ಅಗತ್ಯ. ಎಷ್ಟೇ ದೈಹಿಕವಾಗಿ ಹತ್ತಿರವಾಗಿದ್ದರೂ ಎದ್ದ ಕೂಡಲೇ ಕೊಡುವ ಹಗ್, ಕೆನ್ನೆಯ ಮೇಲೊಂದು ಸಣ್ಣ ಮುತ್ತು ಕೊಡುವ ಸ್ಪರ್ಶಸುಖವೂ ಪ್ರೀತಿಯ ಭಾಷೆಗಳಲ್ಲಿ ಒಂದು. ಮಾತಿನ ನಡುವೆ ಸಂಗಾತಿಯ ಕೈ ಹಿಡಿಯುವುದು, ಬಾಯ್ ಹೇಳುವಾಗ ಒಂದು ಹಗ್, ತುಂಟತನದಿಂದ ಕೆನ್ನೆ ಚಿವುಟುವುದು, ತಲೆಯ ಮೇಲೆ ಮೊಟಕುವುದು, ಕಿವಿ ಹಿಂಡುವುದು ಎಲ್ಲವೂ ಪ್ರೀತಿಯ ಭಾಷೆಯೇ. ಎಲ್ಲವೂ ಒಂದು ಚೌಕಟ್ಟಿನಲ್ಲಿ ನಡೆಯುತ್ತಾ ನಿಧಾನವಾಗಿ ಪ್ರೀತಿಯ ಒಂದೊಂದೇ ಮೆಟ್ಟಿಲು ಹತ್ತುವುದರಲ್ಲೇ ಸುಖವಿರುವುದು.
೩. ಲವ್ಯೂ ಹೇಳಿ: ನಾನು ನಿನ್ನನ್ನು ಪ್ರೀತಿಸುವೆ ಎಂದು ಹೇಳುವುದು ಕಷ್ಟ ಅಂತನಿಸಬಹುದು. ಎಲ್ಲವೂ ಗೊತ್ತಿದ್ದ ಮೇಲೆ ಹೇಳುವ ಅಗತ್ಯವೇನಿದೆ ಅನಿಸಬಹುದು. ಆದರೆ, ಕೆಲವೊಮ್ಮೆ ಈ ವಾಕ್ಯಕ್ಕೆ ಇರುವ ಶಕ್ತಿ ಬೇರೆಯೇ! ಪ್ರೀತಿಯನ್ನು ವಾಕ್ಯದಲ್ಲಿ ಹಿಡಿದು ಅದನ್ನು ಕೃತಕವಾಗಿ ಹೇಳುವುದು ಕಷ್ಟ ಅಂತ ಅನಿಸಿದರೂ, ಶಬ್ದಗಳಲ್ಲಿ ಪ್ರೀತಿಯ ಭಾವ ಹೇಗೆ ಬಿಚ್ಚಿಡುವುದು ಅಂತ ಅನಿಸಿದರೂ ಆಗಾಗ ಲವ್ಯೂ ಅಂತ ಹೇಳುತ್ತಿರುವುದೂ ಕೂಡ ಪ್ರೀತಿಸುವವರ ಹೃದಯ ತುಂಬಿ ಬರಲು ಸಾಕಾಗುತ್ತದೆ. ಮನೆ ಲಾಕ್ ಮಾಡುವ ಮೊದಲು ಫ್ರಿಡ್ಜ್ ಮೇಲೆ ಅಂಟಿಸಿಟ್ಟ ಪುಟ್ಟದೊಂದು ಚೀಟಿ ಕೂಡಾ ಮನೆಗೆ ಬಂದು ಬಾಗಿಲು ತೆಗೆದ ಸಂಗಾತಿಯ ಮುಖದಲ್ಲಿ ನಗು ಜಿನುಗಿಸಬಹುದು. ಇಂಥ ನವಿರು ಪ್ರೀತಿಗಳು ಸಂಬಂಧವನ್ನು ಸದಾ ಹಸಿಯಾಗಿಟ್ಟಿರುತ್ತದೆ. ಇವೆಲ್ಲವೂ ಪ್ರೀತಿ ಭಾಷೆಗಳೇ.
ಇದನ್ನೂ ಓದಿ | ಸುಖಿ ದಾಂಪತ್ಯ | ಪ್ರೀತಿಯೇ ಉಸಿರಾಗಿರುವ ಪರ್ಫೆಕ್ಟ್ ಫ್ಯಾಮಿಲಿಗೆ 10 ಗುಟ್ಟುಗಳು!
೪. ಸಣ್ಣಪುಟ್ಟ ಸಹಾಯ ಮಾಡಿ: ಪ್ರೀತಿ ಹೆಚ್ಚಾಗುವುದು ಪುಟ್ಟ ಪುಟ್ಟ ವಿಷಯಗಳಲ್ಲೇ. ಬದುಕಿನಲ್ಲಿ ನಿತ್ಯ ಜೀವನದಲ್ಲಿ ಬಂದು ಹೋಗುವ ಸಣ್ಣಪುಟ್ಟ ಸಂಗತಿಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದೇ ನಿಮ್ಮ ಪ್ರೀತಿಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬಲ್ಲದು. ಸಂಗಾತಿಗೆ ಇಷ್ಟದ ತಿನಿಸನ್ನು ಮಾಡುವುದು, ತಲೆನೋವಿನ ಸಂದರ್ಭ ತಲೆಒತ್ತುವುದು, ಬ್ಯುಸಿಯಾಗಿ ಕೆಲಸ ಮಾಡುತ್ತಿರುವಾಗ ಕಾಫಿ ಮಾಡಿ ಕೈಗಿಡುವುದು, ಸಂಗಾತಿ ಗಡಿಬಿಡಿಯಲ್ಲಿ ವಾರ್ಡ್‌ರೋಬಿನಲ್ಲಿ ಚಲ್ಲಾಪಿಲ್ಲಿ ಮಾಡಿಟ್ಟುಹೋದ ಬಟ್ಟೆಗಳನ್ನು ಮಡಚಿಟ್ಟು ಒಪ್ಪ ಮಾಡುವುದು ಹೀಗೆ ಸಣ್ಣ ಪುಟ್ಟ ಸಹಾಯಗಳು ಪ್ರೀತಿಯನ್ನು ಇನ್ನಷ್ಟು ಚಂದ ಮಾಡುತ್ತವೆ. ಇದು ಒಬ್ಬರೇ ಇನ್ನೊಬ್ಬರಿಗೆ ಮಾಡುತ್ತಾ ಬಂದಲ್ಲಿ ಅಲ್ಲೊಂದು ಏಕತಾನತೆ ಸೃಷ್ಠಿಯಾಗುತ್ತದೆ. ಎಂತಹ ಪ್ರೀತಿಯಲ್ಲೂ ಸಣ್ಣದೊಂದು ನಿಟ್ಟುಸಿರು ಕೇಳಬಹುದು. ಪರಸ್ಪರ ಇಂತಹ ಪುಟ್ಟಪುಟ್ಟ ಸಹಾಯಗಳು, ಪ್ರೀತಿಯ ತೋರ್ಪಡಿಸುವಿಕೆಗಳು ಮುಖ್ಯ.
೫. ಗಿಫ್ಟ್ ಕೊಡಿ: ಉಡುಗೊರೆಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರೀತಿಯಲ್ಲಿ ಆಗಾಗ ಉಡುಗೊರೆಗಳೂ ಮುಖ್ಯವೆನಿಸುತ್ತದೆ. ಇಬ್ಬರ ಖುಷಿಯ ಘಳಿಗೆಗಳನ್ನು ಇನ್ನಷ್ಟು ಸಂತಸಮಯವನ್ನಾಗಿಸಲು ಪ್ರೀತಿಯ ಭಾಷೆಗೆ ವಸ್ತುರೂಪದ ಕಾಣಿಕೆ ನಿಮ್ಮ ಉಡುಗೊರೆಯಾಗಬಹುದು. ಕ್ರಿಯಾಶೀಲ ಉಡುಗೊರೆಗಳು ನಿಮ್ಮ ಮಧುರ ಘಳಿಗೆಗಳನ್ನು ಇನ್ನಷ್ಟು ಮೃದುವಾಗಿಸುತ್ತವೆ.
ಇದನ್ನೂ ಓದಿ | Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!