ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎನ್ನುತ್ತದೆ ಗಾದೆ. ಅಂದರೆ ಸೋಮಾರಿತನದಿಂದ ಕೂತಿದ್ದರೆ ದುಡಿಮೆ ಕಡಿಮೆಯಾಗಿ ಕೊನೆಗೆ ಏನೂ ಇಲ್ಲವಾಗುತ್ತದೆ ಎನ್ನುವ ಗಾದೆ ಮಾತು ಸತ್ಯವೇ. ಆದರೆ ಸದಾ ವ್ಯಸ್ತವಾಗಿರುವ ಬದುಕಿನಲ್ಲಿ ಎಂದಾದರೂ ಒಂದು ದಿನ ಸೋಮಾರಿಯಾಗಿರುವುದು ಅಗತ್ಯ ಎನ್ನುತ್ತವೆ ಅಧ್ಯಯನಗಳು. ಕೆಲಸವಿಲ್ಲದೆ ಸೋಮಾರಿಯಾಗಿ ಇರಕೂಡದು ಎನ್ನುವಂಥ ಎಚ್ಚರಿಕೆಗಳ ನಡುವೆ ʻಸೋಮಾರಿ ದಿನʼದಂಥ ಆಲಸಿತನದ ಉಪದೇಶ ಮಾಡುತ್ತಿರುವುದಕ್ಕೆ ನಗು ಬಂದರೂ ಆಕ್ಷೇಪವಿಲ್ಲ. ಆದರೂ, ಅಪರೂಪಕ್ಕೊಮ್ಮೆ ಆಲಸಿಯಾಗಿರುವುದು ಅಗತ್ಯವಂತೆ. ಅದಕ್ಕೆ ಕಾರಣಗಳೂ ಉಂಟು! ನಾಗಾಲೋಟದ ಬದುಕಿನಲ್ಲಿ ಸೋಮಾರಿತನವನ್ನು ಬಿಡುವಿನ ವೇಳೆ ಎಂದೇ ಇತ್ತೀಚೆಗೆ ಗ್ರಹಿಸಲಾಗುತ್ತಿದೆ. ಆದರೆ ಇದಕ್ಕೆ ಚೌಕಟ್ಟಿದೆ. ವಾರವಿಡೀ ಬಿಡುವಿಲ್ಲದ ದುಡಿತ, ವಾರಾಂತ್ಯದಲ್ಲಿ ಬಿಡುವಿಗಾಗಿ ಕುಡಿತ, ಕುಣಿತ… ಇಂಥವಕ್ಕೆಲ್ಲ ಇಲ್ಲಿ ಅವಕಾಶವಿಲ್ಲ. ಬದಲಿಗೆ, ಟಾಪ್ ಗೇರಿನಲ್ಲಿ ಓಡುತ್ತಿರುವ ವಾಹನವನ್ನು ಮೊದಲ ಗೇರಿಗೆ ಹಾಕಿದಂತೆ ಎಂದಿಟ್ಟುಕೊಳ್ಳಬಹುದು. ಅಂದರೆ ಟಿವಿ ನೋಡುತ್ತಾ ಬಿದ್ದುಕೊಂಡು ಜಂಕ್ ಮೆಲ್ಲುವ ಆಸೆಯಿದ್ದರೆ… ನಿರಾಸೆಯಾಗುವುದು ಖಂಡಿತ. ಸೋಮಾರಿತನದ ವ್ಯಾಖ್ಯೆಯಲ್ಲಿ ಇದೂ ಬರುವುದಿಲ್ಲ! (Lazy Day) ಹಾಗಾದರೆ ಏನು?
ಅಂದರೆ ಏನು ಮಾಡಬೇಕು?
ಫೋನಿನ ನೋಟಿಫಿಕೇಶನ್ ನಿಶಬ್ದವಾಗಿಸಿ, ನಿಮ್ಮಿಷ್ಟದ ಯಾವುದೇ ಸೃಜನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ಇಡೀ ದಿನ ನಿದ್ದೆ ಮಾಡಬಹುದು, ಪುಸ್ತಕ ಓದಬಹುದು, ಗಿಡದ ಬುಡ ಕೆದಕಬಹುದು, ಪೆಟ್‌ಗಳೊಂದಿಗೆ ಆಟವಾಡಬಹುದು, ಅಡುಗೆ ಮಾಡುವುದು, ಸಂಗೀತ ಕೇಳುವುದು, ತಾಸುಗಟ್ಟಲೆ ಸೈಕಲ್ ಹೊಡೆಯುವುದು, ಗುಡ್ಡ-ಬೆಟ್ಟಗಳ ಮೌನದಲ್ಲಿ ಕಳೆದುಹೋಗುವುದು, ಪ್ರೀತಿಪಾತ್ರರೊಂದಿಗೆ ಹರಟೆ ಹೊಡೆಯುವುದು, ಶಾಪಿಂಗ್ ಮಾಡುವುದು… ಅಥವಾ ನಿಮ್ಮಿಷ್ಟದ ಯಾವುದೇ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇದಕ್ಕೆ ಯಾವುದೇ ಸಮಯವನ್ನು ನಿಗದಿ ಮಾಡುವಂತಿಲ್ಲ. ಅಂದರೆ, ಬೆಳಗಿನ ಅರ್ಧ ಗಂಟೆ ಇದು, ಇನ್ನರ್ಧ ಗಂಟೆ ಅದು… ಹೀಗೆಲ್ಲ ಸಮಯದ ಒತ್ತಡವೂ ಇರಕೂಡದು. ನಿರಾಳವಾಗಿ ದಿನ ಕಳೆಯುವುದು ಮುಖ್ಯ.
ಮಾನಸಿಕ ನೆಮ್ಮದಿ
ಸದಾ ಫ್ಲೈಟ್-ಫೈಟ್ ಅನ್ನುವಂತೆಯೇ ಇರುವಂಥ ಬದುಕನ್ನು ರೆಸ್ಟ್-ಡೈಜೆಸ್ಟ್ ಎನ್ನುವತ್ತ ತಿರುಗಿಸುವುದು ʻಸೋಮಾರಿ ದಿನʼದ ಲಾಭಗಳಲ್ಲಿ ಒಂದು. ಇದು ಮನಸ್ಸಿಗೆ ನೆಮ್ಮದಿ ನೀಡುವುದೇ ಅಲ್ಲ, ನಮ್ಮ ಜೀರ್ಣಾಂಗಗಳ ಕಾರ್ಯ ಕ್ಷಮತೆಯನ್ನೂ ಸುಧಾರಿಸಬಲ್ಲದು. ಪರಿಣಾಮವಾಗಿ, ಮೂಡ್ ಸುಧಾರಣೆಯಾಗುತ್ತದೆ; ಪಚನಕ್ರಿಯೆಯೂ ವೃದ್ಧಿಸುತ್ತದೆ.
ನಿರ್ಧಾರಗಳು ಸ್ಪಷ್ಟ
ಆಗೀಗ ಇಂಥ ವಿಶ್ರಾಂತಿಗಳು ದೊರೆಯುತ್ತಿದ್ದರೆ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಗೊಂದಲಗೊಂಡ ಮತ್ತು ಸುಸ್ತಾದ ಮೆದುಳು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗೆ ನಡುವಿನ ವಿರಾಮಗಳು ಮುಂದೆ ಮಾಡಲಿರುವ ಕೆಲಸಗಳ ಗುಣಮಟ್ಟವನ್ನು ವೃದ್ಧಿಸುತ್ತವೆ; ತೆಗೆದುಕೊಳ್ಳುವ ನಿರ್ಧಾರಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ.
ಕೃತಜ್ಞತೆ
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಗಳಲ್ಲೂ ಮಾಯವಾಗಿರುವ ಸದ್ಗುಣವಿದು. ಪ್ರತಿ ಸಣ್ಣ ವಿಷಯಗಳಿಗೂ ಸಿಟ್ಟು, ಸಿಡಿಮಿಡಿ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ, ನಮಗಿರುವ ಅವಕಾಶ, ಅನುಕೂಲಗಳ ಬಗೆಗಿನ ಕೃತಜ್ಞತೆಯೇ ಹೊರಟುಹೋಗಿದೆ. ಇರುವ ವಿಷಯಗಳ ಬೆಲೆ ತಿಳಿಯಬೇಕೆಂದರೆ ಇಂಥ ಬಿಡುವುಗಳು ಬೇಕು. ಆಗಲೇ ನಮ್ಮೊಳಗೆ ಹೊಕ್ಕುವುದಕ್ಕೆ ಅವಕಾಶ ದೊರೆಯುವುದು. ಇದರಿಂದ ಒಟ್ಟಾರೆಯಾಗಿ ಜೀವನದ ಸ್ವಾಸ್ಥ್ಯ ಹೆಚ್ಚಾದೀತು.
ಕಣ್ತುಂಬಾ ನಿದ್ದೆ
ಬದುಕಿನಲ್ಲಿ ನಿಜಕ್ಕೂ ನಿದ್ದೆಗೆಡುವಂಥ ಕಾರಣಗಳೇನೂ ಇಲ್ಲದಿದ್ದರೂ, ನಿದ್ದೆ ಮಾತ್ರ ಬರುವುದಿಲ್ಲ ನಮಗೆ! ನಡುರಾತ್ರಿಯವರೆಗೆ ಸ್ಕ್ರೀನ್ ನೋಡುವುದರಿಂದ
ಹಿಡಿದು, ಏನೇನೊ ಕಾರಣಗಳು ನಿದ್ದೆ ಹಾಳು ಮಾಡಿಕೊಳ್ಳುವುದಕ್ಕೆ. ಇಂಥ ಬಿಡುವುಗಳು ಅನಗತ್ಯ ಚಿಂತೆಗಳನ್ನು ದೂರ ಮಾಡಲು ನೆರವಾಗುತ್ತವೆ, ಈ ಮೂಲಕ ಕಣ್ತುಂಬಾ ನಿದ್ದೆ ಮಾಡಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!